ಸೋಮವಾರ, ಮಾರ್ಚ್ 8, 2021
27 °C
ತರಗೆಲೆಗಳಂತೆ ಉರುಳಿವೆ ಗುಡ್ಡಗಳ ಭಾಗಗಳು ಸೃಷ್ಟಿಯಾಗಿವೆ ಕೆಂಬಣ್ಣದ ಪ್ರಪಾತಗಳು * ಅರಣ್ಯದೊಳಗೆ ‘ಶೂನ್ಯವಲಯ’ಗಳು ಸೃಷ್ಟಿ

ಕೊಡಗು: ಊರೇ ಮಾಯ, ರಸ್ತೆ ಮಾಯ, ಎಲ್ಲಾ ಮಾಯ!

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಮಕ್ಕಂದೂರು (ಕೊಡಗು ಜಿಲ್ಲೆ): ಕಲಾವಿದನೊಬ್ಬ ಕ್ಯಾನ್ವಾಸ್‌ ಮೇಲಿನ ಚಿತ್ರದಲ್ಲಿ ಏನನ್ನೋ ಅಳಿಸಿ, ಮತ್ತೆ ಹೊಸದೇನನ್ನೋ ಸೃಷ್ಟಿಸುವಂತೆ, ಮಳೆರಾಯ, ಇಲ್ಲಿ ಶತಮಾನಗಳಿಂದ ಮುಗಿಲೆತ್ತರದವರೆಗೆ ಬೆಳೆದು ನಿಂತಿದ್ದ ಹಸಿರ ಸಿರಿಯನ್ನೆಲ್ಲ ಒಂದೇ ಏಟಿಗೆ ಮಂಗಮಾಯ ಮಾಡಿ, ಕೆಂಬಣ್ಣದ ಪ್ರಪಾತವನ್ನೇ ನಿರ್ಮಾಣ ಮಾಡಿದ್ದಾನೆ.

ಜೀವವೈವಿಧ್ಯದ ಅರಣ್ಯದೊಳಗೆ ಬಟಾಬಯಲಿನ ‘ಶೂನ್ಯ ವಲಯ’ಗಳು ಸೃಷ್ಟಿಯಾಗಿದ್ದು, ಕೆಂಪು ಮಣ್ಣೊಂದನ್ನು ಬಿಟ್ಟು ಇಲ್ಲೀಗ ಬೇರೇನೂ ಉಳಿದಿಲ್ಲ. ಹಾಲೇರಿ ಗುಡ್ಡ ಕುಸಿದಿರುವ ಪರಿಗೆ ಮಡಿಕೇರಿ–ಸೋಮವಾರಪೇಟೆ ಹೆದ್ದಾರಿಯೇ ನಾಪತ್ತೆಯಾಗಿದೆ. ‘ಮಿಸ್ಸಿಂಗ್‌ ಲಿಂಕ್‌’ನ ಮರು ಜೋಡಣೆಗೆ ವರ್ಷಗಟ್ಟಲೆ ಕಾಲಾವಕಾಶ ಬೇಕು ಎನ್ನುತ್ತಾರೆ ಮಾತಿಗೆ ಸಿಕ್ಕ ಅಧಿಕಾರಿಗಳು. ಇದೇ ಗುಡ್ಡದ ಪಕ್ಕದಲ್ಲಿದ್ದ ಉದಯಗಿರಿ ಎಂಬ ಗ್ರಾಮ ಕುಸಿದ ಮಣ್ಣಿನೊಂದಿಗೆ ಕಣಿವೆವರೆಗೆ ಅಕ್ಷರಶಃ ತೇಲಿಕೊಂಡು ಹೋಗಿ ಸಂಪೂರ್ಣ ಮಾಯವಾಗಿದೆ.

ಅಪಾಯದ ಮುನ್ಸೂಚನೆ ಸಿಕ್ಕಾಗ ಮನೆಯಿಂದ ಹೊರಬರಲು ಸುತಾರಾಂ ಒಪ್ಪದೆ, ಛಲದಿಂದ ಅಲ್ಲಿಯೇ ಉಳಿದ ಬಾಬಣ್ಣನ ಗತಿ ಏನಾಯಿತೋ ಎಂದು ಕುಸಿತದ ಜಾಗದಿಂದ ಅನತಿ ದೂರದಲ್ಲಿ ಆಶ್ರಯ ಪಡೆದಿರುವ ಉದಯಗಿರಿಯ ಸುಧಾ ಕಣ್ಣೀರಾಗುತ್ತಾರೆ. ಕಣಿವೆಯಲ್ಲಿ ಜಲಾವೃತವಾಗಿರುವ ಆ ಮನೆಗೆ ಎತ್ತ ಕಡೆಯಿಂದ ಹೋಗಲೂ ಈಗ ದಾರಿ ಉಳಿದಿಲ್ಲ.

ಮಕ್ಕಳು ಜಾರುವ ಬಂಡಿಯಿಂದ ಸರ್‍ರನೇ ಜಾರುವಂತೆ ಮಕ್ಕಂದೂರು ಸರಹದ್ದಿನಲ್ಲಿ ಪುಟ್ಟ–ಪುಟ್ಟ ಮನೆಗಳೆಲ್ಲ ಗುಡ್ಡದ ಮೇಲಿನಿಂದ ಜಾರಿ ಕೆಂಬಣ್ಣದ ಮಣ್ಣಿನಲ್ಲಿ ಮಣ್ಣಾಗಿ ಹೋಗಿವೆ. ಉದಯಗಿರಿಯ ಗುಡ್ಡದ ತುದಿಯಲ್ಲಿ ಉಳಿದಿರುವ ಮತ್ತೊಂದು ಮನೆ ತನ್ನ ಅರ್ಧ ತಳಹದಿಯನ್ನೇ ಕಳೆದುಕೊಂಡು ಗಾಳಿಯಲ್ಲಿ ತೇಲಾಡುತ್ತಿದೆ.

ಸರ್ವಸ್ವವನ್ನೂ ಕಳೆದುಕೊಂಡು ಬೀದಿಪಾಲಾದವರನ್ನು ಎಡೆಬಿಡದೆ ಸುರಿಯುತ್ತಿರುವ ಮಳೆ ಇನ್ನಷ್ಟು–ಮತ್ತಷ್ಟು ಗೋಳು ಹೊಯ್ದುಕೊಳ್ಳುತ್ತಿದೆ. ನಿನ್ನೆ–ಮೊನ್ನೆಯವರೆಗೆ ಹಸಿದು ಬಂದವರಿಗೆ ಊಟ ಹಾಕಿದ ಕೈಗಳು, ಈಗ ಸ್ವಯಂಸೇವಾ ಸಂಸ್ಥೆಗಳು ಹಂಚುತ್ತಿರುವ ಸಿದ್ಧ ಆಹಾರಕ್ಕಾಗಿ ದೈನ್ಯದಿಂದ ಕೈಚಾಚುತ್ತಿವೆ. ಎಸ್ಟೇಟ್‌ಗಳ ಮಾಲೀಕರೇ ಬೀದಿ ಪಾಲಾಗಿರುವಾಗ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಕೇಳುವವರು ಯಾರಿದ್ದಾರೆ?

ಹಾಲೇರಿ ಗುಡ್ಡದ ಅಡಿಯಲ್ಲೇ ರಾಜಮನೆತನದ ಅರಮನೆ ಇದೆ. ಗುಡ್ಡ ಮತ್ತೊಂದು ಪಾರ್ಶ್ವದಲ್ಲಿ ಕುಸಿದಿದ್ದರಿಂದ ಅರಮನೆ ಹಾಗೂ ಅದರ ಸುತ್ತ ಹರಡಿಕೊಂಡಿರುವ ತೋಟಕ್ಕೆ ಯಾವುದೇ ಧಕ್ಕೆ ಆಗಿಲ್ಲ. ಆದರೆ, ಆವರಣದಲ್ಲಿ ಸಂಪೂರ್ಣವಾಗಿ ನೀರು ತುಂಬಿಕೊಂಡಿದೆ.

‘ಮೂರನೇ ಮೈಲಿ’ ಎಂಬಲ್ಲಿ ಸಂತ್ರಸ್ತರಿಗಾಗಿ ಗಂಜಿ ಕೇಂದ್ರ ತೆರೆಯಲಾಗಿದೆ. ಊಟಕ್ಕಾಗಿ ಕಾದು ಕುಳಿತಿದ್ದವರಿಗೆ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರು ಬಿಸ್ಕತ್ತು ವಿತರಿಸುತ್ತಿದ್ದರು. ಮಳೆಯಲ್ಲಿ ನೆನೆದಿದ್ದ ಪುಟ್ಟ ಮಕ್ಕಳ ಕೈಗೆ ಬಿಸ್ಕತ್ತು ಸಿಕ್ಕಿದ್ದೇ ತಡ, ಅವರಲ್ಲಿ ಅದೆಂತಹ ಸಂಭ್ರಮ. ತಾಯಂದಿರು ಕಣ್ಣೀರು ಒರೆಸಿಕೊಳ್ಳುತ್ತಾ ಮಕ್ಕಳಿಗೆ ಪ್ಯಾಕ್‌ ಬಿಡಿಸಿ ಕೊಡುತ್ತಿದ್ದರು.

ಮಡಿಕೇರಿಯಿಂದ ಯಾವ ದಿಕ್ಕಿನತ್ತ ಹೊರಟರೂ ರಸ್ತೆಯಲ್ಲಿ ಈಗ ‘ಬರೆ’ (ಗುಡ್ಡ ಕುಸಿಯುವ) ಬೀಳುವ ಭಯ. ರಚ್ಚೆ ಹಿಡಿದಿರುವ ಮಳೆ ಯಾವ ಅಪಾಯವನ್ನು ತರುವುದೋ ಎಂಬ ಆತಂಕ. ಬೇರು ಸಡಿಲಗೊಂಡಿರುವ ಮರಗಳು ರಸ್ತೆಯ ಮೇಲೆ ಉದ್ದಂಡವಾಗಿ ಬೀಳುವುದು ಮಾಮೂಲು.

ಪ್ರಮುಖ ರಸ್ತೆಗಳಲ್ಲಿ ಅರ್ಥ್‌ ಮೂವರ್‌ಗಳನ್ನು ನಿಯೋಜನೆ ಮಾಡಲಾಗಿದ್ದು, ರಸ್ತೆಯ ಮೇಲೆ ಬೀಳುವ ಮರ ಹಾಗೂ ಮಣ್ಣನ್ನು ತೆರವುಗೊಳಿಸುವ ಕಾರ್ಯಕ್ಕೆ ತೆರಪಿಲ್ಲ.

ಒಂದಿಷ್ಟು ಆಚೆ...: ಮಕ್ಕಂದೂರಿನ ವಿಕೋಪಪೀಡಿತ ಪ್ರದೇಶದಿಂದ ಸ್ವಲ್ಪ ದೂರದಲ್ಲಿ ಗದ್ದೆಗಳು ಕಿರು ಜಲಪಾತದಂತೆ ಗೋಚರಿಸುತ್ತಿದ್ದವು. ಅಲ್ಲಿ ಒಡ್ಡು ಒಡೆದು ನೀರು ತೆರವುಗೊಳಿಸುವ, ಕೃಷಿಗೆ ಗದ್ದೆ ಅಣಿಗೊಳಿಸುವ ಕೆಲಸ ಭರದಿಂದ ಸಾಗಿತ್ತು. ಮಳೆಯ ಆಟಾಟೋಪದ ನಡುವೆಯೂ ಬದುಕಿನ ಸಂಭ್ರಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಎದ್ದು ಕಾಣುತ್ತಿತ್ತು.


ಕೊಡಗು ಜಿಲ್ಲೆಯಲ್ಲಿ ಹಲವುದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಡಿಕೇರಿ ನಗರದ ಹಳೆ ಖಾಸಗಿ ಬಸ್‌ನಿಲ್ದಾಣದ ಹಿಂಭಾಗದ ಗುಡ್ಡ ಕುಸಿದು ಅಂಗಡಿಗಳು ಮಣ್ಣಿನಡಿಯಲ್ಲಿ ಮುಚ್ಚಿಹೋಗಿದೆ. ಅಂಗಡಿ ಮಾಲೀಕರುಗಳು ಅಳಿದುಳಿದ ಸಾಮಾನುಗಳನ್ನು ಹುಡುಕಿ ತೆಗೆದು ಸಾಗಿಸುತ್ತಿದ್ದ ದೃಶ್ಯ ಭಾನುವಾರ ಕಂಡು ಬಂತು -ಪ್ರಜಾವಾಣಿ ಚಿತ್ರ-ಕೃಷ್ಣಕುಮಾರ್‌ ಪಿ.ಎಸ್‌.

ಗುಡ್ಡ ಏಕೆ ಕುಸಿಯುತ್ತಿವೆ?

‘ನಾನು ಚಿಕ್ಕವನಿದ್ದಾಗ ಎಂತಹ ಮಳೆಗಳನ್ನು ನೋಡಿದ್ದೇನೆ ಗೊತ್ತಾ? ಅವುಗಳ ಮುಂದೆ ಈಗಿನ ಮಳೆ ಏನು ಮಹಾ? ಆದರೆ, ಹಿಂದೆಂದೂ ಗುಡ್ಡಗಳು ಕುಸಿದಿರಲಿಲ್ಲ. ಇಂತಹ ಅನಾಹುತ ಆಗಿರಲಿಲ್ಲ’ ಎನ್ನುತ್ತಾರೆ ಮಡಿಕೇರಿಯಲ್ಲಿ 50 ವರ್ಷಗಳಿಂದ ಟ್ಯಾಕ್ಸಿ ಓಡಿಸುವ ಕಮಾಲ್‌ ಖಾನ್‌.

‘ಗುಡ್ಡ ಕುಸಿಯಲು ಕಾರಣವೇನು’ ಎಂಬ ಪ್ರಶ್ನೆ ಹಾಕುವುದೇ ತಡ, ಅವುಗಳ ಮೇಲೆ ನಡೆದಿರುವ ಅತಿಕ್ರಮಣ ಹಾಗೂ ಮಿತಿಮೀರಿದ ನಿರ್ಮಾಣ ಚಟುವಟಿಕೆಗಳ ವಿರುದ್ಧ ತಮ್ಮ ಆಕ್ರೋಶವನ್ನೆಲ್ಲ ಅವರು ಹೊರಹಾಕುತ್ತಾರೆ.

‘ಗುಡ್ಡಗಳ ಅಡಿಯಲ್ಲಿನ ರೆಸಾರ್ಟ್‌ಗಳು, ಹೋಂ ಸ್ಟೇಗಳು ಸಾಕಷ್ಟು ದುಡ್ಡು ಮಾಡಲು ಆರಂಭಿಸಿದಾಗ, ಗುಡ್ಡಗಳನ್ನು ಮಧ್ಯದಲ್ಲೂ ಕೊರೆದು ಕಟ್ಟಡಗಳ ನಿರ್ಮಾಣದ ಹಪಾಹಪಿ ಹೆಚ್ಚಿತು. ಎತ್ತರಕ್ಕೆ ಹೋದಂತೆ ಅತಿಥ್ಯದ ಕೋಣೆಗಳ ಬಾಡಿಗೆ ಸಹ ಹೆಚ್ಚಾಗಿದ್ದರಿಂದ ನೆತ್ತಿಯ ಮೇಲೂ ರೆಸಾರ್ಟ್‌ಗಳು ತಲೆ ಎತ್ತಿದವು. ತಮ್ಮ ಮೇಲಿನ ಆಕ್ರಮಣವನ್ನು ಅವುಗಳು ತಾನೇ ಎಷ್ಟು ದಿನ ಸಹಿಸಲು ಸಾಧ್ಯ’ ಎಂದು ಕಮಾಲ್‌ ಪ್ರಶ್ನಿಸುತ್ತಾರೆ.

‘ನಮ್ಮ ಜಿಲ್ಲೆಯಲ್ಲಿ ನೋಂದಾಯಿತ ಹೋಂ ಸ್ಟೇಗಳ ಸಂಖ್ಯೆಯೇ ಮೂರು ಸಾವಿರದಷ್ಟಿದೆ. ಅಲ್ಲದೆ, ನೂರಾರು ಸಂಖ್ಯೆಯಲ್ಲಿ ದೊಡ್ಡ ರೆಸಾರ್ಟ್‌ಗಳಿವೆ. ಇನ್ನು ಅನಧಿಕೃತವಾಗಿ ನಡೆಯುತ್ತಿರುವ ಹೋಂಸ್ಟೇಗಳು ಬೇರೆ. ಎಲ್ಲವುಗಳಿಗೂ ಈ ಗುಡ್ಡಗಳೇ ಆಧಾರ’ ಎಂದು ವಿವರಿಸುತ್ತಾರೆ.

ಕಟ್ಟಡ ನಿರ್ಮಾಣಕ್ಕಾಗಿ, ರಸ್ತೆಗಾಗಿ ಸಿಕ್ಕಸಿಕ್ಕಲ್ಲಿ ಗುಡ್ಡಗಳನ್ನು ಕೊರೆದಿದ್ದರಿಂದ ಮರಗಳ ಬೇರುಗಳ ಜತೆಗೆ ಮಣ್ಣೂ ಸಡಿಲವಾಗಿದೆ. ಕುಸಿಯಲು ಅವುಗಳಿಗೊಂದು ಕಾರಣ ಬೇಕಿತ್ತು. ಈಗಿನ ಮಳೆ ಆ ಅವಕಾಶ ಒದಗಿಸಿಕೊಟ್ಟಿದೆ ಎಂದು ವಿಶ್ಲೇಷಿಸುತ್ತಾರೆ. ‘ದುಡ್ಡಿನ ಬೆನ್ನುಬಿದ್ದ ನಮಗೆಲ್ಲ ಪ್ರಕೃತಿ ಸರಿಯಾದ ಪಾಠವನ್ನೇ ಕಲಿಸಿದೆ’ ಎಂದು ಅವರು ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು