ಕೊಡಗಿನಲ್ಲಿ ಮತ್ತೆ ಮಳೆ; ಮಡಿಕೇರಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭ

7

ಕೊಡಗಿನಲ್ಲಿ ಮತ್ತೆ ಮಳೆ; ಮಡಿಕೇರಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭ

Published:
Updated:
Deccan Herald

ಬೆಂಗಳೂರು: ಜೋರು ಮಳೆಯಿಂದಾಗಿ ಕೊಡಗು ಮತ್ತು ಕೇರಳದಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿ ಭಾನುವಾರವೂ ಮುಂದುವರಿದಿದೆ. ಕೇರಳದಲ್ಲಿ ನೌಕಾ ನೆಲೆಯಿಂದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ನಿರಂತರ ಕಾರ್ಯಾಚರಣೆಯಲ್ಲಿದ್ದರೆ, ಕೊಡಗಿನಲ್ಲಿ ಯೋಧರು, ಎನ್‌ಡಿಆರ್‌ಎಫ್‌ ಸಿಬ್ಬಂದಿ ಗುಡ್ಡಗಳಲ್ಲಿ ಸಿಲುಕಿದವರ ರಕ್ಷಣೆಗೆ ಶ್ರಮಿಸುತ್ತಿದ್ದಾರೆ.

ಭಾನುವಾರವೂ ಕೊಡಗಿನಲ್ಲಿ ಮಳೆ ಸುರಿಯುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ಬೆಟ್ಟದ ಮೇಲಿದ್ದ ಮಕ್ಕಂದೂರು, ಮುಕ್ಕೊಡ್ಲು ಸೇರಿ ಕೆಲ ಭಾಗಗಳಲ್ಲಿ ಇನ್ನೂ 175 ಜನರು ಸಿಲುಕಿರುವುದಾಗಿ ಶಂಕಿಸಲಾಗಿದೆ. 

 

ಶನಿವಾರ ರಾತ್ರಿಯಿಂದಲೇ ಮಡಿಕೇರಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭವಾಗಿದೆ. ಬೆಂಗಳೂರು ಹಾಗೂ ಮೈಸೂರಿನಿಂದ ಕುಶಾಲನಗರ ಮಾರ್ಗವಾಗಿ ಮಡಿಕೇರಿಗೆ, ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಬಸ್‌ಗಳು ಸಂಚರಿಸುತ್ತಿವೆ. ಆದರೆ, ಮಂಗಳೂರಿನಿಂದ ಮಡಿಕೇರಿಗೆ ತಲುಪಲು ಅಸಾಧ್ಯ ಸ್ಥಿತಿ ನಿರ್ಮಾಣವಾಗಿದೆ. ಈ ಮಾರ್ಗದಲ್ಲಿ ಸುಮಾರು 15 ಕಡೆ ಭೂಕುಸಿತ ಉಂಟಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಇಲ್ಲಿ ದ್ವಿಚಕ್ರ ವಾಹನ ಓಡಾಡುವಷ್ಟು ರಸ್ತೆ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ 1 ತಿಂಗಳ ಅವಧಿ ಅವಶ್ಯವೆನಿಸಿದೆ. 

(ರಕ್ಷಣಾ ಕಾರ್ಯಾಚರಣೆ)

ತಗ್ಗಿದ ಹಾರಂಗಿ ಹೊರ ಹರಿವು 

ಹತ್ತು ದಿನಗಳ ನಂತರ ಹಾರಂಗಿ ಜಲಾಶಯದ ಹೊರ ಹರಿವು ತಗ್ಗಿದೆ. ಸದ್ಯ ಹೊರ ಹರಿವು 23,313 ಕ್ಯುಸೆಕ್‌ಗೆ ಇಳಿಕೆಯಾಗಿದೆ. ಶನಿವಾರ ರಾತ್ರಿಯಿಂದಲೂ ಮಳೆ ಸುರಿಯುತ್ತಿರುವ ಕಾರಣ ಮತ್ತೆ ನೀರಿನ ಹರಿವು ಹೆಚ್ಚುವ ಸಾಧ್ಯತೆಯಿದೆ. ಮಡಿಕೇರಿಯಲ್ಲಿ ಕಳೆದ 22 ಗಂಟೆಗಳಲ್ಲಿ 76 ಮಿ.ಮೀ ಹಾಗೂ ವಿರಾಜಪೇಟೆಯಲ್ಲಿ 70 ಮಿ.ಮೀ. ಮಳೆಯಾಗಿರುವುದಾಗಿ ವರದಿಯಾಗಿದೆ. 

ರಾಜ್ಯದ ಶಾಸಕರು, ಸಂಸದರ ತಿಂಗಳ ವೇತನ 

ರಾಜ್ಯ ಮತ್ತು ದೇಶದ ಹಲವು ಭಾಗಗಳಿಂದ ಜನರು ಸ್ವಯಂ ಪ್ರೇರಣೆಯಿಂದ ನೆರವು ನೀಡುತ್ತಿದ್ದಾರೆ. ಸಂಗ್ರಹವಾಗುತ್ತಿರುವ ಬಟ್ಟೆ, ಆಹಾರ ಪದಾರ್ಥ, ಔಷಧಿಗಳನ್ನು ಸಂತ್ರಸ್ತರಿಗೆ ತಲುಪಿಸುವುದೇ ಸವಾಲಿನ ಕಾರ್ಯವಾಗಿದೆ. ಕೊಡಗು ಮತ್ತು ಕೇರಳದ ಜನರ ಪರಿಹಾರ ಕಾರ್ಯಕ್ಕಾಗಿ ಕರ್ನಾಟಕ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಸಂಸದರು ತಮ್ಮ ಒಂದು ತಿಂಗಳ ವೇತನವನ್ನು ನೀಡಲು ನಿರ್ಧರಿಸಿದ್ದಾರೆ. 

ಶನಿವಾರ ಕೊಡಗಿನಲ್ಲಿ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ, ವೈಮಾನಿಕ ಸಮೀಕ್ಷೆ ನಡೆಸಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಕೃತಿ ವಿಕೋಪದಲ್ಲಿ ಜೀವ ಕಳೆದುಕೊಂಡವರ ಕುಟುಂಬಗಳಿಗೆ ₹5 ಲಕ್ಷ ಮತ್ತು ಮನೆ ಕಳೆದುಕೊಂಡವರಿಗೆ ₹2 ಲಕ್ಷದಿಂದ ₹2.5 ಲಕ್ಷ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.  

(ಭಾರಿ ಮಳೆಯಿಂದ ಮಡಿಕೇರಿಯಲ್ಲಿ ಗುಡ್ಡ ಕುಸಿಯುತ್ತಿದ್ದು, ಮನೆ ಬೀಳುತ್ತಿರುವ ದೃಶ್ಯ)

 

 

ಮತ್ತೆ‌ ಇಂದು ಸಿ.ಎಂ. ಕೊಡಗಿನಲ್ಲಿ ವೈಮಾನಿಕ ಸಮೀಕ್ಷೆ

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭಾನುವಾರ ಕೊಡಗು ಜಿಲ್ಲೆಯಲ್ಲಿ ಮತ್ತೆ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಹವಾಮಾನ ಪರಿಸ್ಥಿತಿ ಅನುಕೂಲಕರವಾಗಿದ್ದಲ್ಲಿ, ಪಿರಿಯಾಪಟ್ಟಣ ಹೆಲಿಪ್ಯಾಡ್‌ನಲ್ಲಿ ಇಳಿದು ಕೊಡಗು ಜಿಲ್ಲೆಯ ಪರಿಹಾರ ಕಾಮಗಾರಿಗಳನ್ನು ಪುನರ್ ಪರಿಶೀಲನೆ ನಡೆಸಲಿದ್ದಾರೆ. 

ಶನಿವಾರ 317 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು ಭಾನುವಾರ ಮಕ್ಕಂದೂರು ಸುತ್ತಾಮುತ್ತಲ ಪ್ರದೇಶದ ಜನರನ್ನು ಸ್ಥಳಾಂತರಿಸಲಾಗುತ್ತಿದೆ. 31 ಗಂಜಿ ಕೇಂದ್ರಗಳಿಗೆ ಅಗತ್ಯವಾದ ಆಹಾರ‌ ವ್ಯವಸ್ಥೆಯನ್ನು ನಿರ್ವಹಿಸಲಾಗಿದೆ. ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಹಾಲು, ಅಕ್ಕಿ, ಬೇಳೆ ಇತರೆ ಧಾನ್ಯಗಳನ್ನು ಪೂರೈಸಲಾಗಿದ್ದು, ಲೋಕೋಪಯೋಗಿ ಸಚಿವರಾದ ಹೆಚ್.ಡಿ. ರೇವಣ್ಣ ಅವರು ಸ್ಥಳಕ್ಕೆ ಆಗಮಿಸಿ, ಪರಿಹಾರ ಕ್ರಮಗಳ ಪರಿಶೀಲನೆ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !