ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವಿಗೆ ಮಿಡಿದ ಮನಗಳು: ಸಿಎಂ ಪರಿಹಾರ ನಿಧಿಗೆ ಪೇಟಿಎಂ ಮೂಲಕ 35 ಸಾವಿರ ಮಂದಿ ಪಾವತಿ

ಪರಿಹಾರ ಕಾರ್ಯಾಚರಣೆ ಚುರುಕಾಗಬೇಕು:ಸಿದ್ದರಾಮಯ್ಯ
Last Updated 23 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಗಿನ ಪ್ರವಾಹಕ್ಕೆ ಸಿಲುಕಿದವರ ನೋವಿಗೆ ಮಿಡಿದ ಮನಸುಗಳಿಂದ ‘ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ರಾತ್ರಿ ಹಗಲೆನ್ನದೇ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. 35 ಸಾವಿರಕ್ಕೂ ಅಧಿಕ ಜನರು ಪೇಟಿಎಂ ಮೂಲಕವೇ ₹3 ಕೋಟಿ ಕೊಟ್ಟಿದ್ದಾರೆ.

ಆನ್‌ಲೈನ್ ಪಾವತಿ ಸಾಧ್ಯವಾಗುತ್ತಿಲ್ಲ ಎಂದು ಅನೇಕ ದಾನಿಗಳು ದೂರಿದ್ದರು. ಬಳಿಕ ರಾಜ್ಯ ಸರ್ಕಾರ ಆಗಸ್ಟ್ 20ರಂದು ‘ಮುಖ್ಯಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ– 2018’ ಹೆಸರಿನಲ್ಲಿ ಪ್ರತ್ಯೇಕ ಖಾತೆ ತೆರೆದು ಆನ್‌ಲೈನ್‌ ಪಾವತಿಗೂ ಅವಕಾಶ ಕಲ್ಪಿಸಿತ್ತು. ಮುಖ್ಯಮಂತ್ರಿ ಸಚಿವಾಲಯವೇ ಇದರ ನಿರ್ವಹಣೆ ಹೊಣೆ ವಹಿಸಿಕೊಂಡಿತು. ಬಡವ ಬಲ್ಲಿದ ಎಂಬ ಭೇದವಿಲ್ಲದೆ ಸರ್ವರೂ ತಮ್ಮಿಂದಾದಷ್ಟು ನೆರವನ್ನು ನೀಡುತ್ತಿದ್ದಾರೆ. ಮೊದಲ ದಿನವೇ ಈ ಖಾತೆಗೆ ₹76 ಲಕ್ಷ ಜಮೆಯಾಗಿತ್ತು.

ವಿವಿಧ ಇಲಾಖೆಗಳು, ನಿಗಮಗಳು, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ನಟರು ಸೇರಿದಂತೆ 100ಕ್ಕೂ ಅಧಿಕ ಮಂದಿ ಮುಖ್ಯಮಂತ್ರಿ ಅವರಿಗೆ ಚೆಕ್‌ ಹಾಗೂ ಡಿ.ಡಿ. ಹಸ್ತಾಂತರಿಸಿದ್ದಾರೆ. ಅವರು ₹10 ಲಕ್ಷದಿಂದ ₹1 ಕೋಟಿಯವರೆಗೂ ದೇಣಿಗೆ ನೀಡಿದ್ದಾರೆ.

ಮೂರೇ ದಿನಗಳಲ್ಲಿ ಆನ್‌ಲೈನ್‌ ಮೂಲಕ 3 ಸಾವಿರಕ್ಕೂ ಅಧಿಕ ಮಂದಿ ಪಾವತಿ ಮಾಡಿದ್ದಾರೆ. ಜನರು ₹5ರಿಂದ ₹50 ಸಾವಿರದವರೆಗೂ ಹಣ ನೀಡಿದ್ದಾರೆ. ಗುರುವಾರ ಮಧ್ಯಾಹ್ನದ ವರೆಗೆ ಆನ್‌ಲೈನ್ ಮೂಲಕ ಪಾವತಿಯಾದ ಮೊತ್ತ ₹2.50 ಕೋಟಿ ದಾಟಿದೆ.

‌‘ಆನ್‌ಮೂಲಕ ಪಾವತಿಗೆ ಅವಕಾಶ ಕಲ್ಪಿಸಿರುವುದು ದೇಣಿಗೆ ನೀಡುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಅನೇಕರು ರಾತ್ರಿ 10 ಗಂಟೆ ಬಳಿಕ ದೇಣಿಗೆ ನೀಡುತ್ತಿದ್ದಾರೆ. ರಾತ್ರಿ 10ರಿಂದ ಬೆಳಿಗ್ಗೆ 6ರ ನಡುವಿನ ಅವಧಿಯಲ್ಲೂ ಸರಾಸರಿ 150 ಮಂದಿ ಖಾತೆಗೆ ಹಣ ಹಾಕುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿ ತಿಳಿಸಿದರು.

‘ಈ ದುರಂತಕ್ಕೆ ಇಡೀ ನಾಡಿನ ಜನರು ಮಿಡಿಯುತ್ತಿದ್ದಾರೆ. ಖಾತೆಗೆ ಹರಿದು ಬರುತ್ತಿರುವ ಹಣವೇ ಇದಕ್ಕೆ ಸಾಕ್ಷಿ. ಅನಿವಾಸಿ ಭಾರತೀಯರಿಂದಲೂ ಆರ್ಥಿಕ ನೆರವು ಬರುತ್ತಿದೆ’ ಎಂದು ಹೇಳಿದರು.

‘ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಚಿವಾಲಯವೇ ವಿಕೋಪ ಪರಿಹಾರ ನಿಧಿಯ ಮೇಲ್ವಿಚಾರಣೆ ವಹಿಸಿಕೊಂಡಿದೆ. 2009ರಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸಂಭವಿಸಿದಾಗ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗಕ್ಕೆ ನಿಧಿ ಸಂಗ್ರಹದ ಜವಾಬ್ದಾರಿ ವಹಿಸಲಾಗಿತ್ತು. ವಿಶೇಷ ಪ್ರಕರಣವೆಂದು ಸಿ.ಎಂ ಪರಿಗಣಿಸಿದ್ದಾರೆ. ವಿಳಂಬ ಆಗದಂತೆ ನಿರ್ವಸಿತರಿಗೆ ನೆರವಾಗಲು ಸೂಚನೆ ನೀಡಿದ್ದಾರೆ’ ಎಂದರು.

* ನಿಧಿಗೆ ಹಣ ‍ಪಾವತಿ ಪ್ರಕ್ರಿಯೆ ಸರಳಗೊಳಿಸಲು ಪೇಟಿಎಂ ಜತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದರಿಂದ ನೆರವಿನ ಹರಿವು ಹೆಚ್ಚಾಗಿದೆ.
–ಎಸ್‌.ಸೆಲ್ವಕುಮಾರ್, ಮುಖ್ಯಮಂತ್ರಿ ಕಾರ್ಯದರ್ಶಿ

ಸಿಎಂ ಪರಿಹಾರ ನಿಧಿಗೆ ಪಾವತಿ ಹೇಗೆ
‘ಮುಖ್ಯಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ– 2018’, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಿಧಾನಸೌಧ ಶಾಖೆ, ಖಾತೆ ಸಂಖ್ಯೆ– 37887098605, ಐಎಫ್ಎಸ್‌ಸಿ ಕೋಡ್ –ಎಸ್‌ಬಿಐಎನ್0040277, ಎಂಐಸಿಆರ್ ಸಂಖ್ಯೆ– 560002419 ಖಾತೆ.

ಪರಿಹಾರ ಕಾರ್ಯಾಚರಣೆ ಚುರುಕಾಗಬೇಕು:ಸಿದ್ದರಾಮಯ್ಯ

‘ಕೊಡಗಿನಲ್ಲಿ ಪರಿಹಾರ ಕಾರ್ಯಾಚರಣೆ ವೇಗ ಇನ್ನೂ ಚುರುಕಾಗಬೇಕು’ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟ್ವೀಟ್‌ ಮಾಡುವ ಮೂಲಕ ಮೈತ್ರಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ಹಾನಿಗೊಳಗಾದ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದ ಸಿದ್ದರಾಮಯ್ಯ ಅಲ್ಲಿನ ಕಾಮಗಾರಿಗಳನ್ನು ಪರಿಶೀಲಿಸಿದರು. ಅದರ ಬೆನ್ನಲ್ಲೇ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

61 ಶಾಲೆಗಳ ಮಕ್ಕಳು ಬೇರೆ ಶಾಲೆಗೆ: ಮಹೇಶ್‌

ಮಡಿಕೇರಿ: ‘ಮಳೆ ಹಾಗೂ ಭೂಕುಸಿತದಿಂದ ಸಂಕಷ್ಟಕ್ಕೆ ಒಳಗಾಗಿರುವ 61 ಶಾಲೆಗಳ ವಿದ್ಯಾರ್ಥಿಗಳನ್ನು ಸಮೀಪದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಸ್ಥಳಾಂತರ ಮಾಡಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌. ಮಹೇಶ್ ಇಲ್ಲಿ ತಿಳಿಸಿದರು.

‘9 ಶಾಲೆಯ ಕಟ್ಟಡಗಳು ಪೂರ್ಣ ಕುಸಿದಿವೆ. 163 ಕೊಠಡಿಗಳು ಹಾನಿಗೀಡಾಗಿದ್ದು ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಅಂದಾಜು ₹ 4 ಕೋಟಿ ಅನುದಾನದ ಅಗತ್ಯವಿದೆ’ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT