ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿ ಮೀಸಲಾತಿ ರದ್ದತಿ ತೀರ್ಪು ಜಾರಿ: ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧ

ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ
Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಬಡ್ತಿಯಲ್ಲಿ ಮೀಸಲಾತಿ ವಿಧಾನ ಅನುಸರಿಸುವ ರಾಜ್ಯ ಸರ್ಕಾರದ 2002ರ ಕಾಯ್ದೆಯನ್ನು ರದ್ದುಪಡಿಸಿ 2017ರ ಫೆಬ್ರುವರಿ 9ರಂದು ನೀಡಲಾದ ತೀರ್ಪನ್ನು ಜಾರಿಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಬಿ.ಕೆ. ಪವಿತ್ರಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾದ ತೀರ್ಪಿನಲ್ಲಿ ತಿಳಿಸಿರುವಂತೆ, ಪರಿಷ್ಕೃತ ಜ್ಯೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂಬ ಆದೇಶ ಪಾಲಿಸಲಾಗಿದೆ. ಎಲ್ಲ ಇಲಾಖೆ, ಮಂಡಳಿ, ನಿಗಮ ಮತ್ತು ಶಾಸನಬದ್ಧ ಸಂಸ್ಥೆಗಳಲ್ಲಿನ ಬಹುತೇಕ ಹುದ್ದೆಗಳ ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಿರುವ ಹಿರಿಯ ಅಧಿಕಾರಿಗಳು, ಮುಂಬಡ್ತಿ ಮತ್ತು ಹಿಂಬಡ್ತಿಯ ಆದೇಶ ನೀಡಿದ್ದಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಸಲ್ಲಿಸಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿರುವ ಅಧಿಕಾರಿಗಳಿಗೆ ಮೀಸಲಾತಿ ಅನ್ವಯ ನೀಡಲಾದ ಬಡ್ತಿಯನ್ನು ರದ್ದುಪಡಿಸಿರುವ ತೀರ್ಪನ್ನು ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವ ಮೂಲಕ ಮೂರು ತಿಂಗಳಲ್ಲಿ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನಲ್ಲಿ ಸೂಚಿಸಿತ್ತು.

ಆದರೆ, ಸರ್ಕಾರವು ಆದೇಶ ಜಾರಿಗೊಳಿಸದ್ದರಿಂದ ಮತ್ತೆರಡು ಬಾರಿ ಅವಧಿ ವಿಸ್ತರಿಸಿದ್ದ ನ್ಯಾಯಮೂರ್ತಿಗಳಾದ ಆದರ್ಶಕುಮಾರ್‌ ಗೋಯೆಲ್‌ ಹಾಗೂ ಯು.ಯು. ಲಲಿತ್‌ ಅವರನ್ನು ಒಳಗೊಂಡ ನ್ಯಾಯಪೀಠವು, ಒಂದು ತಿಂಗಳೊಳಗೆ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವಂತೆ ತಿಳಿಸಿತ್ತಲ್ಲದೆ, ಇದಕ್ಕೆ ತಪ್ಪಿದಲ್ಲಿ ಮುಖ್ಯ ಕಾರ್ಯದರ್ಶಿಯವರು ಸ್ವತಃ ವಿಚಾರಣೆಗೆ ಹಾಜರಾಗಬೇಕು ಎಂದು ಕಳೆದ ಮಾರ್ಚ್‌ 20ರಂದು ನಡೆದಿದ್ದ ವಿಚಾರಣೆ ವೇಳೆ ಸೂಚಿಸಿತ್ತು.

ತೀರ್ಪನ್ನು ಜಾರಿಗೊಳಿಸಲು ಹೆಚ್ಚುವರಿಯಾಗಿ ಆರು ತಿಂಗಳ ಕಾಲಾವಕಾಶ ನೀಡುವಂತೆ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದ ಪೀಠ, ತಿಂಗಳಲ್ಲಿ ತೀರ್ಪು ಜಾರಿಗೊಳಿಸಲೇಬೇಕು ಎಂದು ತಾಕೀತು ಮಾಡಿತ್ತು.

ತೀರ್ಪನ್ನು ಪಾಲಿಸಲಾಗಿಲ್ಲ ಎಂದು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ಬುಧವಾರ (ಏಪ್ರಿಲ್‌ 25) ನಡೆಯಲಿದೆ. ಲೋಕೋಪಯೋಗಿ ಮತ್ತಿತರ ಇಲಾಖೆಗಳು ಕೋರ್ಟ್‌ ಸೂಚನೆಯನ್ನು ಪಾಲಿಸಿಲ್ಲ ಎಂದು ವಿಚಾರಣೆಯ ವೇಳೆ ದೂರುವುದಾಗಿ ಅರ್ಜಿದಾರರ ಪರ ವಕೀಲ ಕುಮಾರ್‌ ಪರಿಮಳ್‌ ತಿಳಿಸಿದ್ದಾರೆ.

ಆದೇಶ ಪಾಲಿಸಿರುವ ಕಾರಣ ಬುಧವಾರದ ವಿಚಾರಣೆಯ ಸಂದರ್ಭ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ರತ್ನಪ್ರಭಾ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT