ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಪ್ರಕೃತಿ ವಿಕೋಪ: ರೈತರಿಗೆ ಬಿಡಿಗಾಸು ಪರಿಹಾರ

ಕಾಫಿ ತೋಟ, ಭತ್ತದ ಗದ್ದೆಯಲ್ಲಿ ಇನ್ನೂ ಮಣ್ಣಿನ ರಾಶಿ, ಪರಿಹಾರ ಸಿಕ್ಕಿದ್ದು ಕೇವಲ 1,277 ಮಂದಿ ರೈತರಿಗೆ
Last Updated 23 ಜನವರಿ 2019, 10:07 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಕೃತಿ ವಿಕೋಪದಿಂದ ಕೊಡಗಿನಲ್ಲಿ ಕಾಫಿ ತೋಟ, ಭತ್ತದ ಗದ್ದೆ ಕಳೆದುಕೊಂಡಿದ್ದ ರೈತರಿಗೆ ಅಪಾರ ನಷ್ಟವಾಗಿತ್ತು. ಕೃಷಿಕರಿಗೆ ಈಗ ಬಿಡಿಗಾಸಿನ ಪರಿಹಾರ ನೀಡಲಾಗುತ್ತಿದೆ. ಸಾಕಷ್ಟು ಮಂದಿಗೆ ಪರಿಹಾರದ ಹಣವೂ ಸಿಕ್ಕಿಲ್ಲ. ರೈತರ ಆಕ್ರೋಶದ ಕಟ್ಟೆ ಒಡೆದಿದ್ದು,‍ ಪ್ರತಿಭಟನೆಗೂ ಸಜ್ಜಾಗಿದ್ದಾರೆ.

ಕೇಂದ್ರ, ರಾಜ್ಯ ನೀಡುವ ಪರಿಹಾರದಿಂದ ಮತ್ತೆ ಹೊಸ ಬದುಕು ಕಟ್ಟಿಕೊಳ್ಳುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದೆ. ಜಮೀನಿನಲ್ಲಿ ಬಿದ್ದಿರುವ ಮಣ್ಣಿನ ರಾಶಿ ತೆರವು ಮಾಡಲೂ ಪರಿಹಾರದ ಹಣ ಸಾಲದಾಗಿದೆ.

‘ನಮ್ಮ ನಿರೀಕ್ಷೆಗಳು ದೊಡ್ಡದಾಗಿದ್ದವು. ಆದರೆ, ವಿತರಿಸುತ್ತಿರುವ ಪರಿಹಾರದ ಮೊತ್ತ ಸಾಸಿವೆಯಷ್ಟು’ ಎಂದು ಬೆಳೆಗಾರರು ನೋವು ತೋಡಿಕೊಳ್ಳುತ್ತಾರೆ.

ಜಿಲ್ಲೆಯಲ್ಲಿ 551 ಹೆಕ್ಟೇರ್‌ನಷ್ಟು ಕೃಷಿ ಜಮೀನು ಭೂಕುಸಿತಕ್ಕೆ ಒಳಗಾಗಿತ್ತು. ಆ ಪ್ರದೇಶದಲ್ಲಿ ಇನ್ನೂ ಹತ್ತು ವರ್ಷವಾದರೂ ಕೃಷಿ ಮಾಡಲು ಸಾಧ್ಯವಿಲ್ಲ. ಭೂಮಿಯೂ ಫಲವತ್ತತೆ ಕಳೆದುಕೊಂಡಿದೆ. ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವೂ ಉಳಿದಿಲ್ಲ. ಭೂಮಿಯ ಪುನಶ್ಚೇತನಕ್ಕೆ ಲಕ್ಷಾಂತರ ರೂಪಾಯಿ ಅಗತ್ಯವಿದೆ. ಆದರೆ, ಪರಿಹಾರದ ಹಣ ಮಾತ್ರ ಬಿಡಿಗಾಸು!

ಪ್ಯಾಕೇಜ್‌ ಹುಸಿ: ಕೊಡಗಿಗೆ ‍‍ಪ್ರತ್ಯೇಕ ‍ಪ್ಯಾಕೇಜ್‌ ನೀಡುವಂತೆ ಬೆಳೆಗಾರರ ಸಂಘವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಒಟ್ಟಾಗಿ ₹ 546 ಕೋಟಿ ನೆರವನ್ನು ಕೇಂದ್ರ ಬಿಡುಗಡೆ ಮಾಡಿದೆ. ಪ್ಯಾಕೇಜ್‌ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಕಂಗಾಲಾಗಿದ್ದಾರೆ.

ಎಷ್ಟು ಪರಿಹಾರ?: ‘ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ’ಯಿಂದ ಕಾಫಿ ತೋಟ ಕಳೆದುಕೊಂಡ ರೈತರಿಗೆ ಹೆಕ್ಟೇರ್‌ಗೆ ₹18,500, ಗದ್ದೆಯಲ್ಲಿ ಹೂಳು ತುಂಬಿದ್ದರೆ ಹೆಕ್ಟೇರ್‌ಗೆ ₹ 6,500 ಮಾತ್ರ ಪರಿಹಾರ ಲಭಿಸುತ್ತಿದೆ. ಅದೂ ಎರಡು ಹೆಕ್ಟೇರ್‌ಗೆ ಸೀಮಿತ. ಅದಕ್ಕಿಂತ ಹೆಚ್ಚು ಕೃಷಿ ಜಮೀನು ಹಾಳಾಗಿದ್ದರೆ ಪರಿಹಾರವೇ ಇಲ್ಲ.

‘ಜಿಲ್ಲೆಯಲ್ಲಿ 62,735 ಅರ್ಜಿಗಳನ್ನು ಪರಿಹಾರ ತಂತ್ರಾಂಶಕ್ಕೆ ಅಳವಡಿಸಲಾಗಿದೆ. ಇದುವರೆಗೂ 1,277 ರೈತರಿಗೆ ₹ 74 ಲಕ್ಷ ಪರಿಹಾರ ವಿತರಿಸಲಾಗಿದೆ. ಹಂತಹಂತವಾಗಿ ರೈತರ ಬ್ಯಾಂಕ್‌ ಖಾತೆಗೆ ಹಣ ಸಂದಾಯವಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ನೆಪಕ್ಕೆ ‘ಮರು ನಿರ್ಮಾಣ ಪ್ರಾಧಿಕಾರ’

‘ಕೊಡಗು ಮರು ನಿರ್ಮಾಣ ಪ್ರಾಧಿಕಾರ’ವನ್ನು ಸರ್ಕಾರ ಅಸ್ತಿತ್ವಕ್ಕೆ ತಂದಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಅದರ ಅಧ್ಯಕ್ಷರು. ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲೆಯ ಇಬ್ಬರು ಶಾಸಕರು, ಜಿ.ಪಂ ಅಧ್ಯಕ್ಷ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅದರ ಸದಸ್ಯರು. ಡಿ. 6ರಂದು ಚಾಲನೆ ಸಿಕ್ಕಿದ್ದು, ಇಷ್ಟು ದಿನವಾದರೂ ಪ್ರಾಧಿಕಾರದ ಸಭೆಯೇ ನಡೆದಿಲ್ಲ. ನೆಪ ಮಾತ್ರಕ್ಕೆ ಪ್ರಾಧಿಕಾರ ರಚಿಸಲಾಗಿದೆ ಎಂಬ ಆಕ್ರೋಶದ ನುಡಿಗಳು ಕೇಳಿಬರುತ್ತಿವೆ. ಡಿ.7ರಂದು ಜಂಬೂರಿನಲ್ಲಿ ನಡೆದಿದ್ದ ಮನೆ ನಿರ್ಮಾಣದ ಶಂಕುಸ್ಥಾಪನಾ ಸಮಾರಂಭದಲ್ಲಿ ಕುಮಾರಸ್ವಾಮಿ, ‘ಮುಖ್ಯಮಂತ್ರಿ ಪರಿಹಾರ ನಿಧಿ ಹಾಗೂ ಕೇಂದ್ರ ಸರ್ಕಾರದ ನೆರವು ಒಟ್ಟುಗೂಡಿಸಿ ಬೆಳೆಗಾರರಿಗೆ ದೊಡ್ಡ ಮೊತ್ತದ ಪರಿಹಾರ ವಿತರಿಸಲಾಗುವುದು’ ಎಂದು ಭರವಸೆ ನೀಡಿದ್ದರು. ಅದು ಕಾರ್ಯರೂಪಕ್ಕೆ ಬಂದಿಲ್ಲ.

ನಡೆಯದ ‘ಸೀಡ್‌ಬಾಲ್‌’ ಪ್ರಯೋಗ

ಕೊಡಗಿನ ನೆರೆ ಸಂತ್ರಸ್ತರಿಗೆ ಬರೀ ಮನೆ ನಿರ್ಮಿಸಿಕೊಟ್ಟರೆ ಸಾಲದು. ಕೃಷಿಕರ ಬದುಕನ್ನೂ ಪುನರ್‌ ರೂಪಿಸಬೇಕು. ಭೂಕುಸಿತವಾದ ಪ್ರದೇಶದಲ್ಲಿ ‘ಸೀಡ್‌ಬಾಲ್‌’ ಪ್ರಯೋಗದ ಮೂಲಕ ಹಸಿರು ಬೆಳೆಸಿ ಭೂಮಿ ಪುನಶ್ಚೇತನ ಮಾಡುವಂತೆ ವಿಜ್ಞಾನಿಗಳು ಸಲಹೆ ನೀಡಿದ್ದರು.

ಆದರೆ, 5 ತಿಂಗಳು ಕಳೆದರೂ ಜಿಲ್ಲಾಡಳಿತದಿಂದ ಯಾವ ಪ್ರಯೋಗವೂ ಆಗಿಲ್ಲ. ಹೀಗಾಗಿ, ಕೆಲವು ಭಾಗದಲ್ಲಿ ಕೃಷಿ ಭೂಮಿಯನ್ನು ತಾವೇ ಕಾಪಾಡಿಕೊಳ್ಳಲು ರೈತರು ಮುಂದಾಗಿದ್ದು, ಭೂಮಿ ಕುಸಿದ ಸ್ಥಳಗಳಲ್ಲಿ ಹಸಿರು ಬೆಳೆಸುತ್ತಿದ್ದಾರೆ. ಮಳೆಗಾಲಕ್ಕೂ ಮುನ್ನ ಹಸಿರು ಬೆಳೆಸದಿದ್ದರೆ ಮತ್ತೆ ಕುಸಿಯುವ ಆತಂಕವೂ ಕಾಡುತ್ತಿದೆ.

* ಕೃಷಿ ಜಮೀನು ಕಳೆದುಕೊಂಡ ರೈತರಿಗೆ ಮಾನವೀಯ ನೆಲೆಯಲ್ಲಿ ಪರಿಹಾರ ವಿತರಿಸಬೇಕು. ಹೆಕ್ಟೇರ್‌ಗೆ ₹ 18,500 ಸಾಲದು
- ಸತೀಶ್‌, ಹಾಲೇರಿ ಗ್ರಾಮ

* ಬರೀ ಫಸಲು ನಷ್ಟವಾಗಿದ್ದರೆ ಮುಂದಿನ ವರ್ಷವಾದರೂ ಬೆಳೆ ಸಿಗಲಿದೆ ಎಂದು ಭಾವಿಸಿ ಈ ಪರಿಹಾರಕ್ಕೆ ತೃಪ್ತಿ ಪಡಬಹುದಿತ್ತು. ಬೆಳೆ ಬೆಳೆಯುವ ಭೂಮಿಯೇ ಕುಸಿದಿದ್ದು ಪರಿಹಾರ ಹೆಚ್ಚಿಸಬೇಕು
- ಬೆಳ್ಯಪ್ಪ, ಮಾದಾಪುರ, ಸೋಮವಾರಪೇಟೆ ತಾಲ್ಲೂಕು

ನಷ್ಟದ ವಿವರ (ಹೆಕ್ಟೇರ್‌)
* 551 - ಭೂಕುಸಿತದ ಪ್ರದೇಶ

* 95000 - ಮಹಾಮಳೆಯಿಂದ ಕಾಫಿ ಬೆಳೆ ನಷ್ಟವಾದ ಪ್ರದೇಶ

* 6175 - ಏಲಕ್ಕಿ ಬೆಳೆ ನಾಶ

* 11800 -ಇತರ ತೋಟಗಾರಿಕೆ ಬೆಳೆಗಳು ನಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT