ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿನಿಂದ ಹೊರಬರಲು ಹಲವರು ಸಿದ್ಧ?

ತೋಟಗಳ ಮರು ನಿರ್ಮಾಣಕ್ಕೆ ದಶಕಗಳೇ ಬೇಕು l ಮೊದಲು ಮಕ್ಕಳ ವಿದ್ಯಾಭ್ಯಾಸ ಮುಗಿಯಬೇಕು
Last Updated 23 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಮುಕ್ಕೋಡ್ಲು (ಕೊಡಗು ಜಿಲ್ಲೆ): ಕುಸಿದ ಗುಡ್ಡಗಳು ಹಾಗೂ ಉಕ್ಕಿ ಹರಿದ ಹೊಳೆಗಳು ಈ ಭಾಗದ ಬಹುತೇಕ ಜನರಲ್ಲೀಗ ಎಂತಹ ಜಿಗುಪ್ಸೆಯನ್ನು ಮೂಡಿಸಿವೆ ಎಂದರೆ ಸಮತಟ್ಟು ಪ್ರದೇಶದಲ್ಲಿ ಹೊಸ ನಗರವೊಂದನ್ನು ಸೃಷ್ಟಿಸುವ ಜತೆಗೆ ತಕ್ಕ ಪರಿಹಾರವನ್ನೂ ಕೊಟ್ಟರೆ ಕಾಡಿನಲ್ಲಿರುವ ಆಸ್ತಿ ಬಿಟ್ಟುಬರಲು ಸಿದ್ಧ ಎನ್ನುತ್ತಿದ್ದಾರೆ.

‘ಕಾಡಿನಲ್ಲಿರುವ ತೋಟಗಳನ್ನು ಬಿಟ್ಟು ಹೋಗಲು ನೂರಾರು ಮಂದಿ ಸಿದ್ಧರಿದ್ದಾರೆ. ತುರ್ತು ಪರಿಹಾರದ ಕಾರ್ಯಗಳು ಮುಗಿದ ಬಳಿಕ ಎಲ್ಲ ತೋಟಗಾರರ ಸಭೆ ಕರೆದು ಅಭಿಪ್ರಾಯ ಪಡೆಯುತ್ತೇವೆ’ ಎಂದು ಹೇಳುತ್ತಾರೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌.

‘ಗುಡ್ಡ ಕುಸಿತದಿಂದ ನೋವು ಉಂಡವರು ಇಲ್ಲಿಂದ ಹೊರಹೋಗಲು ಮನಸ್ಸು ಮಾಡಿದ್ದಾರೆ. ಎಸ್ಟೇಟ್‌ಗಳ ಮೌಲ್ಯಕ್ಕೆ ತಕ್ಕಂತೆ ರಾಜ್ಯ ಸರ್ಕಾರ ದೊಡ್ಡ ಮೊತ್ತದ ಪರಿಹಾರ ನೀಡಿ, ಎಲ್ಲರನ್ನೂ ಸ್ಥಳಾಂತರ ಮಾಡಬೇಕು’ ಎಂದು ಹೇಳುತ್ತಾರೆ ಮಾದಾಪುರದಲ್ಲಿ ತೋಟವನ್ನೂ ಹೊಂದಿರುವ ಕೊಡಗು ಡಿಸಿಸಿ ಬ್ಯಾಂಕ್‌ನ ಹಿಂದಿನ ಅಧ್ಯಕ್ಷ ಬಿ.ಡಿ. ಮಂಜುನಾಥ್‌.

‘ಪಶ್ಚಿಮಘಟ್ಟದ ಶ್ರೇಣಿಯಲ್ಲಿರುವ ಕೊಡಗಿನಲ್ಲಿ ಕಾಡಿನ ಹನನ ಎಗ್ಗಿಲ್ಲದೆ ನಡೆದಿದೆ ಎಂಬ ದೂರು ಲಾಗಾಯ್ತಿನಿಂದಲೂ ಇದೆ. ಇಲ್ಲಿನ ಜನವಸತಿಯನ್ನು ಸ್ಥಳಾಂತರಿಸುವ ನಿರ್ಣಯ ಕೈಗೊಂಡರೆ ಒಂದೆಡೆ ಕಾಡು ಉಳಿಸಿದಂತಾಗುತ್ತದೆ. ಇನ್ನೊಂದೆಡೆ ನೊಂದವರ ಬವಣೆಯನ್ನೂ ನೀಗಿಸಿದಂತಾಗುತ್ತದೆ’ ಎಂದು ಅವರು ವಿಶ್ಲೇಷಿಸುತ್ತಾರೆ.

ಮಂಜುನಾಥ್‌ ಅವರ ಅಭಿಪ್ರಾಯಕ್ಕೆ ಮುಕ್ಕೋಡ್ಲು ಗ್ರಾಮದ ಗಣೇಶ್ ಸಹ ದನಿಗೂಡಿಸುತ್ತಾರೆ. ‘ಗುಡ್ಡ ಕುಸಿತ ಹಾಗೂ ಹಟ್ಟಿಹೊಳೆ ಪ್ರವಾಹದಿಂದ ಇಡೀ ಬದುಕನ್ನೇ ಕಳೆದುಕೊಂಡಿದ್ದೇವೆ. ಬೇರೆಡೆ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾದರೆ ಇದೊಂದು ಒಳ್ಳೆಯ ಯೋಚನೆಯೇ’ ಎಂದು ಹೇಳುತ್ತಾರೆ.

ಕಾಫಿ ಹಾಗೂ ಮೆಣಸಿನ ಬೆಳೆಗಾರರು ಏಕೆ ಇಂತಹ ಅಭಿಪ್ರಾಯಕ್ಕೆ ಬರುತ್ತಿದ್ದಾರೆ ಎಂಬುದು ಅರಿವಾಗಬೇಕಾದರೆ ಹಟ್ಟಿಹೊಳೆಯ ಹಂದಿಗುತ್ತಿ ಎಸ್ಟೇಟ್‌ನ ಭಗ್ನಾವಶೇಷಗಳನ್ನೊಮ್ಮೆ ನೋಡಬೇಕು. ರಸ್ತೆಯ ಬಲಬದಿಯಲ್ಲಿರುವ ಗುಡ್ಡದ ಮೇಲಿದ್ದ ಈ ಎಸ್ಟೇಟ್‌, ತನ್ನೊಡಲಲ್ಲಿದ್ದ ಭವ್ಯ ಬಂಗಲೆ ಮತ್ತು ಅದರ ಸುತ್ತಲಿನ ನಾಲ್ಕು ಮನೆಗಳ ಸಹಿತ ಸರ್‍ರೆಂದು ಜಾರಿ, ರಸ್ತೆಯನ್ನೂ ದಾಟಿಕೊಂಡು ಎಡಬದಿಯಲ್ಲಿರುವ ಹೊಳೆಯಲ್ಲಿ ಬಿದ್ದು ಮಣ್ಣಾಗಿದೆ.

ನೂರಾರು ಮೆಣಸಿನ ಚೀಲಗಳ ಸಂಗ್ರಹ ಈ ಎಸ್ಟೇಟ್‌ನಲ್ಲಿತ್ತು. ಹೊಳೆಯ ನಡುವೆ ದ್ವೀಪದಂತೆ ಬಿದ್ದಿದ್ದ ಮಣ್ಣಿನ ಮುದ್ದೆಯಲ್ಲಿ ಕಾರ್ಮಿಕರು ಆ ಚೀಲಗಳನ್ನು ಹುಡುಕಿ ತೆಗೆದು ರಸ್ತೆಗೆ ತರುತ್ತಿದ್ದ ನೋಟ ಮನ ಕಲಕುತ್ತಿತ್ತು. ಚಿತ್ರಾ ಸುಬ್ಬಯ್ಯ ಈ ಎಸ್ಟೇಟ್‌ನ ಮಾಲೀಕರು. ಎಷ್ಟು ಕೋಟಿ ರೂಪಾಯಿ ಸುರಿದರೂ ಎಸ್ಟೇಟ್‌ನ ಮರುನಿರ್ಮಾಣ ಈಗ ಅಸಾಧ್ಯ.

ಗುಡ್ಡದ ಅಡಿಯನ್ನು ಕೊರೆದು ರಸ್ತೆ ನಿರ್ಮಾಣ ಮಾಡಿದ್ದೇ ಈ ಸ್ಥಿತಿಗೆ ಕಾರಣ ಎಂದು ಸ್ಥಳೀಯರು ದೂರುತ್ತಾರೆ. ಗುಡ್ಡದ ಮೇಲಿನ ಮರಗಳ ಸಂಖ್ಯೆ ಕೂಡ ಕಡಿಮೆಯಾಗಿತ್ತು ಎಂದು ಅದೇ ವ್ಯಕ್ತಿಗಳು ಸಣ್ಣ ದನಿಯಲ್ಲಿ ಹೇಳುತ್ತಾರೆ.

ಮುಕ್ಕೋಡ್ಲು ಗ್ರಾಮದ ರೋಹನ್‌ ಕಾರ್ಯಪ್ಪ ಅವರ 22 ಎಕರೆ ತೋಟದಲ್ಲಿ ಒಂಬತ್ತು ಎಕರೆ ಕೊಚ್ಚಿಕೊಂಡು ಹೋಗಿದ್ದು, ಅಲ್ಲೀಗ ಕಂದಕ ನಿರ್ಮಾಣವಾಗಿದೆ. ನೀರಿನಲ್ಲಿ ತೇಲುತ್ತಿದ್ದ ಕಾಫಿ ಬೀಜಗಳನ್ನು ರೋಹನ್‌ ನೋವಿನಿಂದ ನೋಡುತ್ತಿದ್ದರು. ‘ನಾವು ಅನುಭವಿಸಿರುವ ಹಾನಿ ಊಹೆಗೆ ನಿಲುಕಲಾರದ್ದು ಬಿಡಿ’ ಎಂದು ಅವರು ವಿವರಿಸುತ್ತಾರೆ.

ಮಕ್ಕಂದೂರು, ಹಟ್ಟಿಹೊಳೆ, ತಂತಿಪಾಲ, ಮಾದಾಪುರ, ಗರ್ವಾಲೆ, ಕಾಲೂರು ಹಾಗೂ ಸುತ್ತಲಿನ ಭಾಗಗಳ ಸಾವಿರಾರು ಎಕರೆಗಳಷ್ಟು ಕಾಫಿ ತೋಟ
ಗಳು ಹೇಳ ಹೆಸರಿಲ್ಲದಂತೆ ಕಣಿವೆಗೆ ಜಾರಿಕೊಂಡು ಹೋಗಿವೆ. ಫಲವತ್ತಾದ ಮಣ್ಣೆಲ್ಲ ಕೊಚ್ಚಿ ಹೋಗಿದ್ದರಿಂದ ಮತ್ತೆ ತೋಟ ಬೆಳೆಸಲು 2–3 ಪೀಳಿಗಗಳೇ ಕಳೆಯಬೇಕು ಎನ್ನುವುದು ಹಲವು ಕಾಫಿ ಬೆಳೆಗಾರರ ಅಭಿಪ್ರಾಯವಾಗಿದೆ.

‘ಮಾರುಕಟ್ಟೆ ಬೆಲೆಯಲ್ಲಿ ನಮ್ಮ ತೋಟಗಳನ್ನೆಲ್ಲ ಸ್ವಾಧೀನಕ್ಕೆ ತೆಗೆದುಕೊಂಡು ನಾವು ಹೊಸದಾಗಿ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು’ ಎಂದು ಕಾಂಡನಕೊಲ್ಲಿಯ ಅಂತೋನಿ, ಮಕ್ಕಂದೂರಿನ ಜಗದೀಪ್‌ ಸರ್ಕಾರಕ್ಕೆ ಮನವಿ ಮಾಡುತ್ತಾರೆ. ‘ತೋಟವನ್ನು ನಾವೇ ಅಣಿಗೊಳಿಸಲು ಕನಿಷ್ಠ 15–20 ವರ್ಷಗಳು ಬೇಕು. ಕೋಟ್ಯಂತರ ರೂಪಾಯಿ ಹಣ ಬೇಕು. ನಮ್ಮ ಬಳಿ ಹಣ, ಸಮಯ ಎರಡೂ ಇಲ್ಲ’ ಎಂದು ವಿವರಿಸುತ್ತಾರೆ.

ಕಾಫಿ ಬೆಳೆಗಾರರ ಈ ನಿಲುವಿಗೆ ವ್ಯತಿರಿಕ್ತ ಅಭಿಪ್ರಾಯವೂ ಕೇಳಿಬಂದಿದೆ. ‘ಸುರಿಯುತ್ತಿದ್ದ ಮಳೆಯಿಂದ, ಕುಸಿಯುತ್ತಿದ್ದ ಗುಡ್ಡದಿಂದ ಅಪಾಯ ಎದುರಾದರೂ ಮನೆಬಿಟ್ಟು ಕದಲದವರು ನೂರಾರು ಮಂದಿ ಇದ್ದಾರೆ. ಅಂಥವರು ಊರನ್ನು ಬಿಟ್ಟುಬರಲು ಒಪ್ಪುವರೇ’ ಎಂದು ಕಾಲೂರಿನ ದೊಡ್ಡಯ್ಯ ಪ್ರಶ್ನಿಸುತ್ತಾರೆ.

ಸರ್ವಸ್ವವನ್ನೂ ಕಳೆದುಕೊಂಡಿರುವ ಹಲವು ಕಾಫಿ ಬೆಳೆಗಾರರು ತಮ್ಮ ಮಕ್ಕಳು ವಿದೇಶದಲ್ಲಿ ನಡೆಸಿರುವ ವಿದ್ಯಾಭ್ಯಾಸವನ್ನು ಹೇಗೆ ಪೂರ್ಣಗೊಳಿಸಬೇಕು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ‘ವಿದ್ಯಾಭ್ಯಾಸ ಮೊಟಕುಗೊಳ್ಳದಂತೆ ಯಾವ ರೀತಿ ನೆರವು ಒದಗಿಸಬಹುದು ಎಂಬ ಯೋಚನೆ ಮಾಡುತ್ತಿದ್ದೇವೆ’ ಎಂದು ಅಪ್ಪಚ್ಚು ರಂಜನ್‌ ಹೇಳುತ್ತಾರೆ.

ಸರ್ವೇ ಕಾರ್ಯಕ್ಕೆ ಕಠಿಣ ಸವಾಲು
ಕುಸಿದಿರುವ ಗುಡ್ಡಗಳಲ್ಲಿದ್ದ ಎಸ್ಟೇಟ್‌ ಹಾಗೂ ತೋಟಗಳ ಗಡಿ ಗುರುತಿಸುವುದು ಸಹ ಸವಾಲಿನ ಕೆಲಸವಾಗಿದೆ. ಈ ಹಿಂದೆ (1925) ಬ್ರಿಟಿಷರು ಮಾಡಿದ್ದ ಸರ್ವೇ ದತ್ತಾಂಶ ಹಾಗೂ ನಕ್ಷೆಗಳೇ ಕಂದಾಯ ಇಲಾಖೆಯ ಈಗಿನ ಪ್ರಮುಖ ದಾಖಲೆಯಾಗಿವೆ. ಅವುಗಳ ಆಧಾರದ ಮೇಲೆ ಎಲ್ಲ ಹಿಡುವಳಿದಾರರ ಗಡಿ ಗುರುತಿಸಬೇಕಿದೆ. ಇದಕ್ಕೆಲ್ಲ ಹಲವು ವರ್ಷಗಳೇ ಹಿಡಿಯುತ್ತವೆ ಎಂದು ಕಂದಾಯ ಇಲಾಖೆಯ ಮೂಲಗಳು ಹೇಳುತ್ತವೆ.

ಮಾಲೀಕರ ಗತಿ ಏನು?
‘ನಾವೇನೋ ಕೂಲಿ–ನಾಲಿ ಮಾಡಿ ಬದುಕುತ್ತೇವೆ. ಇಡೀ ಎಸ್ಟೇಟ್‌ ಕಳೆದುಕೊಂಡ ನಮ್ಮ ಮಾಲೀಕರ ಗತಿ ಏನು’
ಸ್ವತಃ ಬೀದಿಪಾಲಾಗಿ ಸುಂಟಿಕೊಪ್ಪದಲ್ಲಿ ತೆರೆಯಲಾದ ನಿರಾಶ್ರಿತರ ಕೇಂದ್ರದಲ್ಲಿರುವ ಹಾಲೇರಿ ಎಸ್ಟೇಟ್‌ನ ಮಾದೇವಮ್ಮ ಈ ಪ್ರಶ್ನೆ ಎತ್ತಿದಾಗ ಅಲ್ಲಿ ನೆರೆದವರ ಕಣ್ಣಾಲಿಗಳೆಲ್ಲ ತೇವವಾಗಿದ್ದವು. ಸ್ವಂತದ ಬದುಕಿನ ಭವಿಷ್ಯವೇನು ಎಂಬ ಚಿಂತೆಯನ್ನೂ ಮರೆತ ಆ ತಾಯಿ ಹೃದಯ, ಅನ್ನ ಕೊಟ್ಟಿದ್ದ ಮಾಲೀಕರ ಒಳಿತಿಗಾಗಿ ಮಿಡಿಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT