‘ಇಳಿದು ಹೋಗು ತಾಯಿ...’

7
ಮೀಸಲು ಪ್ರದೇಶದಲ್ಲಿ ಮನೆ ಕಟ್ಟಿದರು; ಪ್ರವಾಹದ ಬಿಸಿಯನ್ನು ಉಂಡರು

‘ಇಳಿದು ಹೋಗು ತಾಯಿ...’

Published:
Updated:
Deccan Herald

ಮುಳಸೋಗೆ (ಕುಶಾಲನಗರ): ಉಕ್ಕೇರಿದ ಕಾವೇರಿ ನದಿಯೀಗ ಒಂದು ಹೆಜ್ಜೆ ಹಿಂದೆ ಸರಿದಿದೆ. ಆದರೆ, ‘ಇಳಿದುಹೋಗು ತಾಯಿ’ ಎನ್ನುವ ಕಾವೇರಿ ಮಕ್ಕಳ ಮೊರೆ ಮಾತ್ರ ಇನ್ನೂ ಜೋರಾಗಿ ಕೇಳುತ್ತಿದೆ.

ಮುಳಸೋಗೆಯಲ್ಲಿ ಐದು ದಿನಗಳಿಂದ ನೀರಿನಲ್ಲಿಯೇ ಮುಳುಗು ಹಾಕಿದ್ದ ಮನೆಗಳು ಮತ್ತೆ ದರ್ಶನ ನೀಡಲಾರಂಭಿಸಿವೆ. ‘ಅಗೋ ನೋಡು ನಮ್ಮ ಮನೆ’ ಎನ್ನುತ್ತಾ ನಿಟ್ಟುಸಿರು ಬಿಟ್ಟವರಲ್ಲೂ ಒಳಗೇನಾಗಿದೆಯೋ ಎಂಬ ದುಗುಡ ಉಳಿದುಕೊಂಡಿದೆ.

ರಸ್ತೆಯಂಚಿನ ಮನೆಗಳಲ್ಲೇ ಇನ್ನೂ ಸೊಂಟದವರೆಗೂ ನೀರಿದೆ. ಆದರೆ, ನಾಲ್ಕೈದು ದಿನಗಳಿಂದ ಕಾದ ಜೀವಗಳಿಗೆ ಈಗ ತಾಳ್ಮೆ ಉಳಿದಿಲ್ಲ. ಕೊಳಚೆಯೂ ಮಿಶ್ರಣಗೊಂಡು ಗಬ್ಬು ನಾರುತ್ತಿರುವ ನೀರಿನಲ್ಲಿ ಹೆಜ್ಜೆ ಹಾಕುತ್ತಾ, ಬಾಗಿಲು ತೆರೆದರೆ, ಸೋಫಾ ಸೆಟ್‌ಗಳು, ಡೈನಿಂಗ್‌ ಟೇಬಲ್‌ಗಳ ಜತೆ ಹಾವು–ಚೇಳುಗಳೂ ತೇಲಾಡುತ್ತಿವೆ.

ಸೊಂಟದವರೆಗೆ ನೀರು ತುಂಬಿಕೊಂಡಿದ್ದರೂ ಎಲ್ಲರಿಗೂ ಅಳಿದುಳಿದ ಸಾಮಾನುಗಳನ್ನು ರಕ್ಷಿಸಿಕೊಳ್ಳುವ ಧಾವಂತ. ಬಳಸಲು ಸಾಧ್ಯವಿಲ್ಲ ಎಂದು ಕೆಸರು ತುಂಬಿದ ಅಕ್ಕಿ ಚೀಲವನ್ನು ರಾಮಚಂದ್ರ ತಾತ ರಸ್ತೆಯ ಪಕ್ಕದಲ್ಲಿ ಇಟ್ಟ ಕ್ಷಣದಲ್ಲಿ ನೆರೆದವರ ಕಣ್ಣಾಲಿಗಳೆಲ್ಲ ತೇವ, ತೇವ.

ಮಳೆಯಿಂದ ತೀರಾ ಸಂಕಷ್ಟಕ್ಕೆ ಈಡಾಗಿರುವ ಕೊಡಗಿನ ಪ್ರದೇಶಗಳಲ್ಲಿ ಕುಶಾಲನಗರ ಸಹ ಒಂದು. ಈ ಪುಟ್ಟ ಪಟ್ಟಣವನ್ನು ಅರ್ಧ ಚಂದ್ರಾಕೃತಿಯಲ್ಲಿ ಸುತ್ತು ಹಾಕುವ ಕಾವೇರಿ ತನ್ನ ಪಾತ್ರ ಬಿಟ್ಟೇನೂ ಹೆಜ್ಜೆ ಹಾಕಿಲ್ಲ. ಇದೇ ಕಾರಣದಿಂದ ಮೂಲ ಊರಿನಲ್ಲಿ ಏನೊಂದೂ ಅನಾಹುತ ಆಗಿಲ್ಲ. ತನಗೆ ಮೀಸಲಿದ್ದ ಪ್ರದೇಶದಲ್ಲಿ ನಿರ್ಮಾಣವಾಗಿರುವ ಹೊಸ ಬಡಾವಣೆಗಳನ್ನು ಮಾತ್ರ ಆಕೆ ಕಾಡದೇ ಬಿಟ್ಟಿಲ್ಲ.

ನಿವೃತ್ತ ಸೈನಿಕರು, ವೈದ್ಯರು, ಶಿಕ್ಷಕರು, ಸರ್ಕಾರಿ ಉದ್ಯೋಗಿಗಳೇ ಹೆಚ್ಚಾಗಿರುವ ಮುಳಸೋಗೆ ಗ್ರಾಮದ (ಕುಶಾಲನಗರದ ತೆಕ್ಕೆಯಲ್ಲೇ ಇದೆ) ಕುವೆಂಪುನಗರ ಬಡಾವಣೆ ಐದು ದಿನಗಳವರೆಗೆ ನೀರಿನಲ್ಲಿ ಮುಳುಗಿ ಹೋಗಿತ್ತು. ಅದರ ಪಕ್ಕದ ಸಾಯಿ ಬಡಾವಣೆ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.

ನದಿ ದಂಡೆಯ ಗದ್ದೆ ಬಯಲು ಪ್ರದೇಶದಲ್ಲಿ ನಿರ್ಮಾಣವಾಗಿವೆ ಈ ಬಡಾವಣೆಗಳು. ಕಾವೇರಿ ಮೈದುಂಬಿ ಹರಿಯುವಾಗ ಅವಳ ಬಳಕೆಗೆಂದು ಮೀಸಲು ಬಿಟ್ಟಿದ್ದ ಪಥದಲ್ಲಿ ಮನೆ ಕಟ್ಟಿಕೊಂಡಿರುವುದು ತಮ್ಮದೇ ತಪ್ಪು ಎನ್ನುವುದು ಇಲ್ಲಿನ ಬಹುತೇಕ ನಿವಾಸಿಗಳ ಅರಿವಿಗೆ ಬಂದಿದೆ.

‘ಹೌದು ಸರ್‌, ನದಿ ದಂಡೆಯ ಮೇಲೆ ಮನೆ ಕಟ್ಟಿ ತಪ್ಪು ಮಾಡಿದ್ದೇವೆ’ ಎಂದು ಸುತ್ತಲೂ ತುಂಬಿಕೊಂಡಿದ್ದ ನೀರಿನತ್ತ ನೋಟ ಬೀರಿದರು ಸ್ಥಳೀಯರಾದ ಬಿ.ವಿ. ವಾಸುದೇವ. ‘ಪಕ್ಕದ ಸಾಯಿ ಬಡಾವಣೆಯವ್ರು ಕೆರೆಯನ್ನು ಮುಚ್ಚಿ ಮನೆ ಕಟ್ಟಿದ್ದಾರೆ. ಅವರ ಮನೆಗಳಿಗೂ ನೀರು ನುಗ್ಗಿದೆ. ನಮಗೆಲ್ಲ ಕಾವೇರಿ ತಾಯಿ ತಕ್ಕ ಪಾಠ ಕಲಿಸಿದ್ದಾಳೆ’ ಎಂದು ಆತ್ಮಾವಲೋಕನಕ್ಕೆ ಇಳಿದರು.

 

ಪುಡಿಯೊಕ್ಕಡ ರಾಜಾ ಅವರ ಮನೆಯಿಂದ ನೀರು ಹಿಂದೆ ಸರಿದಿದ್ದರಿಂದ ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಮನೆ ಸ್ವಚ್ಛಗೊಳಿಸುವ ಕೆಲಸದಲ್ಲಿ ತಲ್ಲೀನರಾಗಿದ್ದರು. ಆಳೆತ್ತರ ತುಂಬಿಕೊಂಡಿದ್ದ ಕೆಸರನ್ನು ತೆಗೆದು ಹೊರಹಾಕುತ್ತಿದ್ದರು.

ರಾಜಾ ಅವರ ಮನೆಯ ಮುಂದೆ ಮಾತಿಗೆ ಸಿಕ್ಕ ಅದೇ ಬಡಾವಣೆ ನಿವಾಸಿ ಅಕ್ಷತಾ, ‘ನಮ್ಮನೆಯಿಂದ ರ‍್ಯಾಪ್ಟಿಂಗ್‌ ಮಾಡಿಕೊಂಡು ಬರಬೇಕಾಗುತ್ತೆ ಅಂತ ಕನಸಿನಲ್ಲೂ ಎಣಿಸಿರಲಿಲ್ಲ’ ಎಂದು ವಿಷಾದದ ನಗೆ ಬೀರಿದರು. ‘ನೀರು ಇಳಿಯುತ್ತೆ ಎಂದು ಬೆಳಗಿನಿಂದ ಕಾಯ್ತಾ ಇದೀವಿ. ಒಂದೂವರೆ ವರ್ಷದ ಹಿಂದಷ್ಟೇ ಕಟ್ಟಿದ ಮನೆ ಹೇಗಾಗಿದೆ ನೋಡಿ’ ಎಂದು ಜಿನುಗುತ್ತಿದ್ದ ಕಣ್ಣೀರನ್ನು ಒರೆಸಿಕೊಂಡರು.

ಕೊಡಗಿನ ರಾಜರ ಕಾಲದಲ್ಲಿ, ಬಳಿಕ ನಡೆದ ಬ್ರಿಟಿಷರ ರಾಜ್ಯಭಾರದಲ್ಲಿ ಗದ್ದೆ ಬಯಲಿನಲ್ಲಿ ಮನೆ ಕಟ್ಟಲು ಅವಕಾಶ ಕೊಟ್ಟಿರಲಿಲ್ಲ. ನದಿಪಾತ್ರದ ಮೀಸಲು ಪ್ರದೇಶವನ್ನು ಜತನದಿಂದಲೇ ಕಾಪಾಡಿಕೊಂಡು ಬರಲಾಗಿತ್ತು. ಆದರೆ, ನಿವೇಶನಗಳಿಗೆ ಬೇಡಿಕೆ ಹೆಚ್ಚಾದಂತೆ ಸುಮಾರು 15 ವರ್ಷಗಳ ಹಿಂದೆ ಇಲ್ಲಿ ಬಡಾವಣೆಗಳ ನಿರ್ಮಾಣ ಮಾಡಲಾಯಿತು.

‘ಲೇಔಟ್‌ ಮಾಡೋದಕ್ಕೆ ಒಪ್ಪಿಗೆ ಕೊಟ್ಟ ಅಧಿಕಾರಿಗಳನ್ನು ಮೊದಲು ಹಿಡಿಯಬೇಕು’ ಎಂದ ಎಚ್‌.ಕೆ. ಕುಮಾರ್‌, ಅದೇ ಉಸಿರಿನಲ್ಲಿ ‘ನಾವೂ ಇಲ್ಲಿ ಮನೆ ಕಟ್ಟಿದ್ದು ತಪ್ಪು’ ಎಂದರು.

ನದಿ ದಂಡೆಯ ಮೇಲೆಯೇ ಭವ್ಯವಾದ ಬಂಗಲೆಯೊಂದು ಮೊದಲ ಅಂತಸ್ತಿನವರೆಗೆ ಮುಳುಗಿ ನಿಂತಿತ್ತು. ‘ಅದು ಮಲೆಯಾಳಿ ಉದ್ಯಮಿಯೊಬ್ಬರ ಮನೆ. ರಿವರ್‌ ಸೈಡ್‌ ಅಂತ ಉಮೇದಿನಿಂದ ಕಟ್ಟಿದ್ದರು. ಈಗೇನಾಗಿದೆ ನೋಡಿ’ ಎಂದು ಕಾವೇರಪ್ಪ ನಗೆ ಬೀರಿದರು.

ಕೂಡಿಗೆಯಲ್ಲಿ ವೈದ್ಯರಾಗಿರುವ ಡಾ.ರವಿಚಂದ್ರ ಅವರ ಮನೆಯೂ ನೀರಿನಲ್ಲಿ ಮುಳುಗಿತ್ತು. ನೀರು ಸ್ವಲ್ಪ ಇಳಿದ ಕೂಡಲೇ ಮನೆಯ ಮೊದಲ ಮಹಡಿಯಲ್ಲಿದ್ದ ಮಹತ್ವದ ಕಾಗದ–ಪತ್ರಗಳನ್ನು ಈಜಿಕೊಂಡು ಹೋಗಿ ತಂದಿದ್ದಾರೆ. ‘ನೀರು ಇನ್ನೇನು 3–4 ದಿನಗಳಲ್ಲಿ ಇಳಿಯಬಹುದು. ಆಮೇಲಿನ ವಾತಾವರಣ ನೆನೆಸಿಕೊಂಡರೆ ಈಗಲೇ ಭಯ ಆಗುತ್ತೆ. ಕಾಲರಾ–ಚಿಕೂನ್‌ ಗುನ್ಯಾ ಭೀತಿ ಕಾಡಲಾರಂಭಿಸಿದೆ’ ಎಂದು ಹೇಳಿದರು.

ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದ ಹತ್ತಿರದಲ್ಲಿ ಹತ್ತಾರು ಮಣ್ಣಿನ ಮನೆಗಳು ಭಗ್ನಾವಶೇಷಗಳಾಗಿ ನಿಂತಿದ್ದವು. ಆ ಮನೆಗಳು ನಮ್ಮವೆಂದು ಹೇಳಿಕೊಳ್ಳುವವರು, ನೋವು ತೋಡಿಕೊಳ್ಳುವವರು ಯಾರೂ ಇರಲಿಲ್ಲ.

ಪ್ರವಾಹದ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲಾಗಿದ್ದು, ಪೊಲೀಸ್‌ ಪಹರೆ ಹಾಕಲಾಗಿದೆ. ಭಾವಾವೇಶದಿಂದ ಜನ ನೀರಿಗೆ ಇಳಿಯದಂತೆ ನಿಗಾ ಇಟ್ಟಿರುವುದು ಎದ್ದುಕಂಡಿತು. ನೀರು ಇಳಿದ ಪ್ರದೇಶದಲ್ಲಿ ಬ್ಲೀಚಿಂಗ್‌ ಪೌಡರ್‌ ಸಿಂಪಡಣೆ ಮಾಡಲಾಗುತ್ತಿತ್ತು. ಮಕ್ಕಳಿಗೆ ಮಾತ್ರ ಉಣಬಡಿಸುತ್ತಿದ್ದ ಬಿಸಿಯೂಟವನ್ನು ಶಾಲೆಗಳು ಸಂತ್ರಸ್ತರಿಗೂ ಕೊಡುತ್ತಿರುವುದು ಕಂಡುಬಂತು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !