ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಸಂತ್ರಸ್ತರ ಮರೆತ ಸರ್ಕಾರ

ಅಸ್ತಿತ್ವಕ್ಕೆ ಬಾರದ ‘ಕೊಡಗು ಮರು ನಿರ್ಮಾಣ ಪ್ರಾಧಿಕಾರ’
Last Updated 29 ನವೆಂಬರ್ 2018, 20:04 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನಲ್ಲಿ ಉಂಟಾಗಿದ್ದ ಭೂಕುಸಿತ, ಪ್ರವಾಹದಿಂದ ಸಂತ್ರಸ್ತರಾದವರಿಗೆ ನೀಡಿದ್ದ ಭರವಸೆಗಳು ಇನ್ನೂ ಈಡೇರಿಲ್ಲ. ‘ಪುನರ್ವಸತಿ ಕೆಲಸಗಳು ನಿಧಾನವಾಗಿವೆ’ ಎಂಬ ಆರೋಪಗಳು ವ್ಯಕ್ತವಾಗಿದ್ದು ಸಂತ್ರಸ್ತರ ಆಕ್ರೋಶ ಹೆಚ್ಚಾಗಿದೆ.

ಸಂತ್ರಸ್ತರಿಗೆ ಬಾಡಿಗೆ ಮನೆಯಲ್ಲಿ ವಾಸಕ್ಕೆ ಹಣ ನೀಡುವ ಯೋಜನೆಯೂ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ, ಪರಿಹಾರ ಕೇಂದ್ರದಿಂದ ವಾಪಸ್‌ ತೆರಳಿರುವ 240 ಸಂತ್ರಸ್ತರು ಬೀಳುವ ಸ್ಥಿತಿಯಲ್ಲಿರುವ ಮನೆ ಹಾಗೂ ಸಂಬಂಧಿಕರ ಮನೆಗಳಲ್ಲೇ ದಿನ ಕಳೆಯುವ ಸ್ಥಿತಿಯಿದೆ. 600 ಮಂದಿ ವಿಧಿಯಿಲ್ಲದೇ ಪರಿಹಾರ ಕೇಂದ್ರದಲ್ಲೇ ಆಶ್ರಯ ಪಡೆದಿದ್ದಾರೆ. ಅವರ ಸಮಸ್ಯೆಗಳನ್ನು ಯಾರೂ ಆಲಿಸುತ್ತಿಲ್ಲ.

ಮಳೆಗಾಲಕ್ಕೂ ಮುನ್ನವೇ 840 ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಬೇಕು. ರಾಜ್ಯದ ವಿವಿಧೆಡೆಯಿಂದ ದಾನಿಗಳು ನೆರವು ಘೋಷಿಸಿದ್ದರೂ ಮನೆ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ. 110 ಎಕರೆ ಜಾಗ ಗುರುತಿಸಿ ಗಾಳಿಬೀಡು ಸಮೀಪ ಮಾದರಿ ಮನೆ ನಿರ್ಮಿಸಲಾಗಿದೆ. ಅದನ್ನು ಹೊರತು ಪಡಿಸಿದರೆ ಬೇರೆ ಯಾವ ಕೆಲಸಗಳೂ ನಡೆದಿಲ್ಲ. ಈಗ ಸಂತ್ರಸ್ತರ ಆಕ್ರೋಶದ ಕಟ್ಟೆ ಒಡೆದಿದೆ.

‘ಆಶ್ರಯ ಕಳೆದುಕೊಂಡವರಿಗೆ ಮನೆ ಬಾಡಿಗೆ ಹಣ ನೀಡಲು ಸರ್ಕಾರದಿಂದ ಇದುವರೆಗೂ ಯಾವ ಆದೇಶವೂ ಬಂದಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

₹ 50 ಸಾವಿರ: ‘ಕುಟುಂಬ ನಿರ್ವಹಣೆಗೆ ಆರಂಭದಲ್ಲಿ ₹3,800 ವಿತರಣೆ ಮಾಡಲಾಗಿತ್ತು. ಈಗ ಆ ಮೊತ್ತವನ್ನು ₹50 ಸಾವಿರಕ್ಕೆ ಏರಿಸಲಾಗಿದೆ. ಬ್ಯಾಂಕ್‌ ಖಾತೆಯ ವಿವರ ಸಲ್ಲಿಸಿರುವ 350 ಸಂತ್ರಸ್ತರಿಗೆ ಈ ಹಣ ಪಾವತಿಸಲಾಗಿದೆ. ಇದಕ್ಕಾಗಿ ಸರ್ಕಾರವು ₹6.50 ಕೋಟಿ ಬಿಡುಗಡೆ ಮಾಡಿದೆ’ ಎಂದು ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಅ.17ರಂದು ಸಂತ್ರಸ್ತರ ಬೇಡಿಕೆ ಆಲಿಸಲು ಮಡಿಕೇರಿಗೆ ಬಂದಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ‘ಮರು ನಿರ್ಮಾಣ ಪ್ರಾಧಿಕಾರ’ ರಚಿಸುವ ಭರವಸೆ ನೀಡಿದ್ದರು. ಅದೂ ಅಸ್ತಿತ್ವಕ್ಕೆ ಬಂದಿಲ್ಲ! ಸಂತ್ರಸ್ತರ ಮಕ್ಕಳ ವಿದ್ಯಾಭ್ಯಾಸದ ಒಂದು ವರ್ಷದ ಖರ್ಚನ್ನು ಸರ್ಕಾರವೇ ಭರಿಸಲಿದೆ. ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಷರತ್ತು ಇಲ್ಲದೇ ಸಾಲ
ಸೌಲಭ್ಯ ಕಲ್ಪಿಸಲು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲಾಗುವುದು ಎಂದೆಲ್ಲಾ ಭರವಸೆ ನೀಡಿದ್ದರು. ಆದರಲ್ಲಿ ಯಾವ ಭರವಸೆಯೂ ಈಡೇರಿಲ್ಲ ಎಂದು ಮಕ್ಕಂದೂರು ಗ್ರಾಮದ ಸಂತ್ರಸ್ತರೊಬ್ಬರು ನೋವು ತೋಡಿಕೊಳ್ಳುತ್ತಾರೆ.

‘ಪ್ರಕೃತಿ ವಿಕೋಪ ಸಂಭವಿಸಿದ್ದ ವೇಳೆ ಅತ್ಯಂತ ವೇಗವಾಗಿ ಕೆಲಸಗಳು ನಡೆದಿದ್ದವು. ಆದರೆ, ಮನೆ ನಿರ್ಮಾಣದ ಭರವಸೆಯಲ್ಲಿರುವ ನಿರಾಶ್ರಿತರಿಗೆ ನಾಲ್ಕು ತಿಂಗಳು ಕಳೆದರೂ ನೆಲೆ ಸಿಕ್ಕಿಲ್ಲ. ಇನ್ನೂ ವಿಳಂಬ ಮಾಡಿದರೆ ಸಂತ್ರಸ್ತರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಬಿಜೆಪಿ ಮುಖಂಡ ಎಂ.ಬಿ. ದೇವಯ್ಯ ಎಚ್ಚರಿಸಿದ್ದಾರೆ.

ಸ್ವಉದ್ಯೋಗಕ್ಕೆ ನೆರವು...
ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲು ಇನ್ಫೊಸಿಸ್‌ ಸೇರಿದಂತೆ ಹಲವು ಸಂಘ– ಸಂಸ್ಥೆಗಳು ದೊಡ್ಡ ಮೊತ್ತದ ನೆರವು ಘೋಷಿಸಿದ್ದವು. ಅದರಲ್ಲಿ ಕೆಲವರು ‘ಮುಖ್ಯಮಂತ್ರಿ ಪರಿಹಾರ ನಿಧಿ’ಗೇ ಹಣ ಸಂದಾಯ ಮಾಡಿದ್ದಾರೆ.

ಇನ್ಫೊಸಿಸ್‌ ಮುಖ್ಯಸ್ಥೆ ಸುಧಾಮೂರ್ತಿ ಅವರು ಮೈಸೂರು ದಸರಾ ಉದ್ಘಾಟನೆಯಲ್ಲಿ ₹ 25 ಕೋಟಿ ನೆರವು ಘೋಷಿಸಿದ್ದರು. ಆದರೆ, ಸರ್ಕಾರದ ವಿಳಂಬ ಧೋರಣೆಯಿಂದ ಬೇಸತ್ತು ತಮ್ಮ ಸಂಸ್ಥೆ ಮೂಲಕವೇ ಸಹಾಯ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಸರ್ಕಾರವೇ ಮನೆ ನಿರ್ಮಿಸಿಕೊಡುತ್ತಿರುವ ಕಾರಣ ಸ್ವಉದ್ಯೋಗಕ್ಕೆ ನೆರವು ಕಲ್ಪಿಸುವಂತೆ ಕೆಲವರು ಸುಧಾಮೂರ್ತಿ ಅವರಲ್ಲಿ ಕೋರಿದ್ದರು. ಗುರುವಾರ ಮಡಿಕೇರಿಗೆ ಬರಲಿರುವ ಇನ್ಫೊಸಿಸ್‌ ತಂಡ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆಯಿದೆ.

*
ಕೇಂದ್ರ ಸರ್ಕಾರವು ಮೊದಲ ಹಂತದ ನೆರವು ನೀಡಲು ಒಪ್ಪಿದೆ. ಮೇ ಅಂತ್ಯಕ್ಕೆ ಸಂತ್ರಸ್ತರು ಹೊಸ ಮನೆಗಳಲ್ಲಿ ವಾಸಿಸುವ ವ್ಯವಸ್ಥೆ ಆಗಬೇಕು.
-ಎಂ.ಬಿ. ದೇವಯ್ಯ, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT