ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ದಿನಗಳಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಾಣ ಆರಂಭ

ಖಾಸಗಿಯವರಿಂದ ಭೂಮಿ ಖರೀದಿಗೂ ಜಿಲ್ಲಾಡಳಿತದ ಚಿಂತನೆ
Last Updated 31 ಆಗಸ್ಟ್ 2018, 4:09 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯಲ್ಲಿ ಮಹಾಮಳೆಯಿಂದ ನೆಲೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಲು ಮೊದಲ ಹಂತದಲ್ಲಿ ನಾಲ್ಕು ಕಡೆ ಜಾಗ ಗುರುತಿಸಿದ್ದು, ಜಿಲ್ಲಾಡಳಿತ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿದೆ.

ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌, ಮನೆ ನಿರ್ಮಿಸಿಕೊಡಲು ಸುಂಟಿಕೊಪ್ಪ ಹೋಬಳಿಯ ಗರಗಂದೂರು ಬಳಿ 7 ಎಕರೆ, ಕೆ.ನಿಡುಗಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್‌ಟಿಒ ಕಚೇರಿ ಬಳಿ 4 ಎಕರೆ, ಬಿಳಿಗಿರಿ ಬಳಿ 4 ಎಕರೆ ಸೇರಿ ಒಟ್ಟು 15 ಎಕರೆ ಪ್ರದೇಶ ಗುರುತಿಸಿ, ಅಂತಿಮಗೊಳಿಸಲಾಗಿದೆ. ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದ ಬಳಿ ತೋಟಗಾರಿಕೆ ಇಲಾಖೆಯ 25 ಎಕರೆಯನ್ನೂ ಪುನರ್ವಸತಿಗೆ ಬಳಸಿಕೊಳ್ಳಲು ಮುಂದಾಗಿದೆ.

ಪುನರ್ವಸತಿ ಕೆಲಸಕ್ಕೆ ವಿಶೇಷ ಜಿಲ್ಲಾಧಿಕಾರಿ ಜಗದೀಶ್ ಅವರನ್ನು ಸರ್ಕಾರ ನೇಮಿಸಿದ್ದು, ಮತ್ತಷ್ಟು ಸೂಕ್ತ ಜಾಗಕ್ಕಾಗಿ ಹುಡುಕಾಟ ಆರಂಭವಾಗಿದೆ. ಸ್ಥಳದ ಕೊರತೆಯಾದರೆ ಮೊಣ್ಣಂಗೇರಿಯಲ್ಲಿರುವ ಅರಣ್ಯ ಇಲಾಖೆಗೆ ಸೇರಿದ 50 ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆಯುವುದು, ಖಾಸಗಿಯವರ ಜಾಗ ಖರೀದಿಗೂ ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಸರ್ಕಾರದ ಹಂತದಲ್ಲಿಅರಣ್ಯ ಭೂಮಿಯ ಡಿನೋಟಿಫಿಕೇಷನ್ ಪ್ರಕ್ರಿಯೆ ನಡೆಯಬೇಕಿದ್ದು, ವಿಶೇಷ ಜಿಲ್ಲಾಧಿಕಾರಿ ಹಾಗೂ ಅರಣ್ಯಾಧಿಕಾರಿಗಳು ಗುರುವಾರ ಚರ್ಚೆ ನಡೆಸಿದರು. ಮಕ್ಕಂದೂರು ಬಳಿ ಖಾಸಗಿ ಜಾಗವಿದ್ದು ಖರೀದಿಗೆ ಮಾಲೀಕರ ಜತೆಗೆ ಮಾತುಕತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ಒಂದೇ ಸ್ಥಳದಲ್ಲಿ ಪುನರ್ವಸತಿ ಕಲ್ಪಿಸಲು ಜಾಗದ ಸಮಸ್ಯೆಯೂ ಎದುರಾಗಿದೆ. ಸಮತಟ್ಟಾದ ಪ್ರದೇಶ ಎಲ್ಲಿಯೂ ಲಭ್ಯವಾಗುತ್ತಿಲ್ಲ. ಜಿಲ್ಲಾಡಳಿತ ಗುರುತಿಸಿರುವ ಕೆಲವು ಪ್ರದೇಶಕ್ಕೆ ನಿರಾಶ್ರಿತರು ತೆರಳುವುದಿಲ್ಲ ಎಂದು ಪಟ್ಟು ಹಿಡಿದಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಇಷ್ಟಪಟ್ಟ ಜಾಗದಲ್ಲಿ ಪುನರ್ವಸತಿ: ‘ಜಿಲ್ಲೆಯ ಜನರು ಮಳೆಯಿಂದ ಕಣ್ಣೀರಿನಲ್ಲಿ ಕೈತೊಳೆದಿದ್ದಾರೆ. ಸಂತ್ರಸ್ತರಿಗೆ ಮತ್ತಷ್ಟು ನೋವು ಕೊಡಲು ಇಷ್ಟವಿಲ್ಲ. ನಾವು ಸೂಕ್ತವಾದ ಸ್ಥಳವನ್ನೇ ಗುರುತಿಸುತ್ತೇವೆ. ಅವರು ಒಪ್ಪಿದರೆ ಮಾತ್ರ ಆ ಸ್ಥಳದಲ್ಲಿ ‍ಪುನರ್ವಸತಿ. ಇಲ್ಲದಿದ್ದರೆ ಅವರ ಸ್ವಂತ ಜಾಗದಲ್ಲಿ ಮನೆ ನಿರ್ಮಾಣಕ್ಕೂ ಅವಕಾಶ ಮಾಡಿಕೊಡುತ್ತೇವೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ತಾತ್ಕಾಲಿಕ ಶೆಡ್‌ಗಳಿಗೆ ಎಷ್ಟು ಮಂದಿ ಸಂತ್ರಸ್ತರು ಬರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಸಮೀಕ್ಷೆ ಆರಂಭವಾಗಿದ್ದು ಮೂರು ದಿನಗಳಲ್ಲಿ ಸಂತ್ರಸ್ತರ ಪಟ್ಟಿ ಅಂತಿಮಗೊಳ್ಳಲಿದೆ. ಟಾಟಾ ಸಂಸ್ಥೆಯವರು 200 ಶೆಡ್‌ ನಿರ್ಮಿಸಲು ಜಾಗ ನೀಡುವಂತೆ ಕೋರಿದ್ದಾರೆ. 10 ದಿನಗಳಲ್ಲಿ ಶೆಡ್‌ ನಿರ್ಮಾಣ ಕಾರ್ಯ ಆರಂಭಿಸಲಿದ್ದೇವೆ. ಪ್ರಾಥಮಿಕ ಸಮೀಕ್ಷೆಯಂತೆ 600 ಮನೆ ನಿರ್ಮಾಣ ಮಾಡಬೇಕಿದ್ದು, ಉಳಿದವರಿಗೆ ಸರ್ಕಾರ ನಿಗದಿ ಪಡಿಸಿರುವ ಆರ್ಥಿಕ ನೆರವು ನೀಡಲಾಗುವುದು’ ಎಂದು ಜಗದೀಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT