ಕೊಡಗು: ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ತೆರವು

7

ಕೊಡಗು: ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ತೆರವು

Published:
Updated:

ಮಡಿಕೇರಿ:  ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಹೇರಿದ್ದ ನಿರ್ಬಂಧವನ್ನು ಜಿಲ್ಲಾಡಳಿತ ತೆರವು ಮಾಡಿದೆ. ಕಳೆದ ತಿಂಗಳು ಸುರಿದ ಮಹಾಮಳೆಯಿಂದ ಜಿಲ್ಲೆಯಲ್ಲಿ ಪ್ರವಾಹ, ಭೂಕುಸಿತವಾಗಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಸುರಕ್ಷತೆ ದೃಷ್ಟಿಯಿಂದ ರೆಸಾರ್ಟ್‌, ಹೋಂಸ್ಟೇ ಹಾಗೂ ವಸತಿಗೃಹಗಳಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ಕೊಠಡಿ ನೀಡದಂತೆ ಜಿಲ್ಲಾಡಳಿತವು ತಾಕೀತು ಮಾಡಿತ್ತು. 

‘ಮಡಿಕೇರಿ ತಾಲ್ಲೂಕಿನ ಅಬ್ಬಿ ಜಲಪಾತ, ಮಾಂದಲ್‌ಪಟ್ಟಿ, ತಡಿಯಂಡಮೋಳ್‌ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಇನ್ನೂ ಸುಧಾರಣೆಯಾಗಿಲ್ಲ. ಅಲ್ಲಿಗೆ ಪ್ರವಾಸಿಗರು ತೆರಳುವಂತಿಲ್ಲ’ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸೂಚಿಸಿದ್ದಾರೆ. 

‘ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಪ್ರದೇಶಗಳ ಪುನರ್‌ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕಿದ್ದು, ಜಿಲ್ಲೆಗೆ ಬರುವ ಪ್ರವಾಸಿಗರು ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸಬೇಕು’ ಎಂದೂ ಎಚ್ಚರಿಸಿದ್ದಾರೆ.

ಜಿಲ್ಲೆಯತ್ತ ಪ್ರವಾಸಿಗರು: ಒಂದು ತಿಂಗಳ ಬಳಿಕ ಭಾನುವಾರ ರಾಜಾಸೀಟ್‌, ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಕೆಲವು ಪ್ರವಾಸಿಗರು ಕಂಡುಬಂದರು. ಮಡಿಕೇರಿಗೆ ಬಂದಿದ್ದ ಪ್ರವಾಸಿಗರು ಭೂಕುಸಿತವಾದ ಇಂದಿರಾನಗರ, ಚಾಮುಂಡೇಶ್ವರಿನಗರಕ್ಕೆ ತೆರಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ರಾಷ್ಟ್ರೀಯ ಹೆದ್ದಾರಿ– 275ರ ಮದೆನಾಡು ಗ್ರಾಮದ ಹೊಳೆಯ ಆಸುಪಾಸಿನಲ್ಲಿದ್ದ ಹೋಂಸ್ಟೇ ಹಾಗೂ ವಾಸದ ಮನೆಗಳು ಮಣ್ಣಿನಲ್ಲಿ ಹುದುಗಿ ಹೋಗಿದ್ದು, ಆ ಸ್ಥಳಗಳೇ ಈಗ ಪ್ರವಾಸಿಗರ ನೆಚ್ಚಿನ ತಾಣಗಳಾಗಿವೆ. ಮನೆಯ ಅವಶೇಷ, ಬೆಟ್ಟಗಳಿಂದ ಕೊಚ್ಚಿಕೊಂಡು ಬಂದಿರುವ ಮರಗಳ ಮುಂದೆ ನಿಂತು ಪ್ರವಾಸಿಗರು ಮೊಬೈಲ್‌ನಲ್ಲಿ ಫೋಟೊ ಕ್ಲಿಕ್ಕಿಸಿಕೊಂಡರು. ಅಲ್ಲಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದ್ದು, ಅಪಾಯಕಾರಿ ಸ್ಥಳದಲ್ಲಿ ನಿಲ್ಲದಂತೆ ಸೂಚನೆ ನೀಡಲಾಗುತ್ತಿದೆ. ಆದರೂ, ಸ್ಥಳೀಯರೆಂದು ಹೇಳಿಕೊಂಡು ಭೂಕುಸಿತದ ಸ್ಥಳ ವೀಕ್ಷಣೆಗೆ ಪ್ರವಾಸಿಗರು ಮುಂದಾಗಿದ್ದಾರೆ.

***

ಕಾವೇರಿ ನಾಡಿನ ಪರಿಸ್ಥಿತಿ ನೋಡಿದರೆ ಆತಂಕ ಎದುರಾಗುತ್ತಿದೆ. ದೇವರು ಗಾಯದ ಮೇಲೆ ಬರೆ ಎಳೆದಿದ್ದಾನೆ
– ಅನಿಲ್ ಚಂಗಪ್ಪ, ಗ್ರಾಮಸ್ಥ, ಮುಕ್ಕೋಡ್ಲು

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !