ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಪ್ರವಾಸೋದ್ಯಮಕ್ಕೆ ಕಪ್ಪುಚುಕ್ಕೆ ತಂದ ರೇವ್‌ ಪಾರ್ಟಿ

‘ರೇವ್‌ ಪಾರ್ಟಿ’ಯಲ್ಲಿ ಗಾಂಜಾ ಅಮಲು, ಎಚ್ಚೆತ್ತ ಜಿಲ್ಲಾ ಪೊಲೀಸರು
Last Updated 4 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನ ಹೋಮ್‌ ಸ್ಟೇಗಳಲ್ಲಿ ನಡೆಯುತ್ತಿರುವ ‘ಗುಪ್ತ ವ್ಯವಹಾರ’ ಪ್ರವಾಸೋದ್ಯಮಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಜಿಲ್ಲೆಯ ಅನಧಿಕೃತ ಹೋಮ್‌ ಸ್ಟೇಗಳು, ಅನೈತಿಕ ಚಟುವಟಿಕೆ ತಾಣವಾಗಿ ಬದಲಾಗಿವೆ ಎಂಬ ಆರೋಪ ಬಲವಾಗಿದೆ.

ಪೊಲೀಸರ ದಾಳಿಯ ಬಳಿಕ ಅವುಗಳ ‘ವ್ಯವಹಾರ’ ಬಯಲಿಗೆ ಬರುತ್ತಿದೆ. ಸ್ಥಳೀಯ ಸಂಸ್ಕೃತಿ, ಆಚಾರ, ವಿಚಾರ ಪರಿಚಯಿಸಬೇಕಿದ್ದ ಹೋಮ್‌ ಸ್ಟೇಗಳು ದಂಧೆಯ ಕೇಂದ್ರವಾಗಿ ಬದಲಾಗಿವೆ.

ಜಿಲ್ಲೆಯು ಬೆಟ್ಟಗುಡ್ಡಗಳಿಂದ ಕೂಡಿದ್ದು ನಾಲ್ಕು ಸಾವಿರ ಹೋಮ್‌ ಸ್ಟೇಗಳಿವೆ ಎಂದು ಅಂದಾಜಿಸಲಾಗಿದೆ. ಆದರೆ, ನೋಂದಣಿ ಆಗಿರುವುದು ಕೆಲವು. ಉಳಿದವು ಅನಧಿಕೃತ! ಇವುಗಳಿಗೆ ಮೂಗುದಾರ ಹಾಕಲು ಪ್ರವಾಸೋದ್ಯಮ ಇಲಾಖೆಗೆ ಸಾಧ್ಯವಾಗುತ್ತಿಲ್ಲ.

ವಿಪರೀತ ಪ್ರವಾಸೋದ್ಯಮದ ಒತ್ತಡದಿಂದ ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬ ಪರಿಸರಪ್ರೇಮಿಗಳ ಎಚ್ಚರಿಕೆ ನಡುವೆಯೂ ಹೋಮ್‌ ಸ್ಟೇಗಳಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳು ಕೆಟ್ಟ ಹೆಸರು ತರುತ್ತಿದೆ. ಈಗ ‘ಟೆಂಟ್‌ ಸ್ಟೇ’ ಪರಿಕಲ್ಪನೆ ಸಹ ಆರಂಭವಾಗಿದೆ. ಬೆಟ್ಟ, ಕಾಫಿ ತೋಟದ ನಡುವೆ ಟೆಂಟ್‌, ಕ್ಯಾಂಪ್‌ ಫೈರ್‌ ಹಾಕಿ ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ.

ಈಗ ಎಚ್ಚೆತ್ತಿರುವ ಪೊಲೀಸರು, ಅಂಥ ಹೋಮ್‌ ಸ್ಟೇಗಳ ಮೇಲೆ ದಾಳಿ ನಡೆಸಿ ಪ್ರಕರಣಗಳನ್ನು ಪತ್ತೆ ಹಚ್ಚಿ ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ.

ಚರಸ್, ಗಾಂಜಾ, ಮದ್ಯ: ಪೊನ್ನಂಪೇಟೆ ಸಮೀಪದ ನಲ್ಲೂರು ಗ್ರಾಮದಲ್ಲಿ ವಿವೇಕ್‌ ಮಾಲೀಕತ್ವದ ‘ವೈಲ್ಡ್‌ ಹೆವೆನ್‌’ ಹೋಮ್‌ ಸ್ಟೇ ಮೇಲೆ ಎರಡು ದಿನಗಳ ಹಿಂದೆ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ದಾಳಿ ಮಾಡಿದಾಗ ರೇವ್‌ ಪಾರ್ಟಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಕೆಲವು ಹೋಮ್‌ ಸ್ಟೇ ಮಾಲೀಕರು ಸಾಮಾಜಿಕ ಜಾಲತಾಣ ಬಳಸಿ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥ ಹೋಮ್‌ ಸ್ಟೇಗಳನ್ನೇ ಹುಡುಕಿಕೊಂಡು ಚೆನ್ನೈ, ಹೈದರಾಬಾದ್‌, ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆಯ ಯುವಕ, ಯುವತಿಯರು ಬರುತ್ತಿದ್ದಾರೆ ಎಂಬ ಆರೋಪವಿದೆ.

‘ವೈಲ್ಡ್‌ ಹೆವೆನ್‌’ ಮೇಲೆ ದಾಳಿ ನಡೆಸಿದಾಗ ಮಹಾನಗರಗಳ ಹಲವು ಯುವಕ, ಯುವತಿಯರು ಮಾದಕ ವಸ್ತು ಸೇವಿಸಿ ಅಮಲಿನಲ್ಲಿ ತೇಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

‘ಅಬ್ಬರದ ಸಂಗೀತವು ಹೋಮ್‌ ಸ್ಟೇ ಸಂಸ್ಕೃತಿಯನ್ನೇ ನಾಶಪಡಿಸುತ್ತಿದೆ. ಈ ರೀತಿ ಹೋಮ್‌ ಸ್ಟೇಗಳಿಂದ, ಅಧಿಕೃತ ಹೋಮ್‌ ಸ್ಟೇಗಳಿಗೂ ಕೆಟ್ಟ ಹೆಸರು ಬರುತ್ತಿದೆ’ ಎಂದು ಅಸೋಸಿಯೇಷನ್‌ ಪದಾಧಿಕಾರಿಗಳು ನೋವು ತೋಡಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಮೂರ್ನಾಡು ಗ್ರಾಮದ ಹೋಮ್‌ ಸ್ಟೇಯೊಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿತ್ತು. ಮಾಲೀಕ ಸೇರಿ ಕೇರಳದ ಐವರು ಗ್ರಾಹಕರನ್ನು ಪೊಲೀಸರು ಬಂಧಿಸಿದ್ದರು.

ಜನವರಿಯಲ್ಲೂ ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ‘ಗ್ಲಾಂಪಿಂಗ್‌’ ಹೋಮ್‌ ಸ್ಟೇಯಲ್ಲಿ ರೇವ್‌ ಪಾರ್ಟಿ ನಡೆಯುತ್ತಿದ್ದುದು ಪತ್ತೆಯಾಗಿತ್ತು. ಅಲ್ಲಿ ಅಪಾರ ಪ್ರಮಾಣದ ಚರಸ್‌, ಹುಕ್ಕಾ ಸೇದಲು ಬಳಸುವ ಸಾಧನ, ಗಾಂಜಾ ಪುಡಿ, ಸಂಗೀತ ಪರಿಕರ, ಸಿಗರೇಟ್‌ ತಯಾರಿಸಲು ಉಪಯೋಗಿಸುವ ಪೇಪರ್‌ ಪತ್ತೆಯಾಗಿದ್ದವು. ಈ ಹೋಮ್‌ ಸ್ಟೇಯಲ್ಲಿ ಮುಂಬೈ, ಪುಣೆ ಹಾಗೂ ಬೆಂಗಳೂರಿನ ವ್ಯಕ್ತಿಗಳು ಶಾಮೀಲಾಗಿ ‘ರೇವ್‌ ಪಾರ್ಟಿ’ ನಡೆಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT