ಹೆದ್ದಾರಿ,ರೈಲು ಮಾರ್ಗಕ್ಕೆ ವಿರೋಧ–ಪರಿಸರ ಪ್ರೇಮಿಗಳ ರ‍್ಯಾಲಿಗೆ ಬಿಜೆಪಿ ಪ್ರತಿರೋಧ

7
ಚತುಷ್ಪಥ ಹೆದ್ದಾರಿ, ರೈಲು ಮಾರ್ಗ ನಿರ್ಮಾಣಕ್ಕೆ ವಿರೋಧ, ಪಶ್ಚಿಮಘಟ್ಟ ರಕ್ಷಿಸದಿದ್ದರೆ ಅಪಾಯ: ಸುರೇಶ್‌ ಹೆಬ್ಳೀಕರ್‌

ಹೆದ್ದಾರಿ,ರೈಲು ಮಾರ್ಗಕ್ಕೆ ವಿರೋಧ–ಪರಿಸರ ಪ್ರೇಮಿಗಳ ರ‍್ಯಾಲಿಗೆ ಬಿಜೆಪಿ ಪ್ರತಿರೋಧ

Published:
Updated:
Deccan Herald

ಮಡಿಕೇರಿ: ಕೊಡಗಿನಲ್ಲಿ ಚತುಷ್ಪಥ ಹೆದ್ದಾರಿ, ನಾಲ್ಕು ರೈಲು ಮಾರ್ಗ ನಿರ್ಮಾಣ ವಿರೋಧಿಸಿ ‘ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ’ ನೇತೃತ್ವದಲ್ಲಿ ಶುಕ್ರವಾರ ಪರಿಸರ ಪ್ರೇಮಿಗಳು ಹಮ್ಮಿಕೊಂಡಿದ್ದ ರ‍್ಯಾಲಿಗೆ ಬಿಜೆಪಿ ಕಾರ್ಯಕರ್ತರು ಪ್ರತಿರೋಧವೊಡ್ಡಿದರು. ಬಳಿಕ ಪೊಲೀಸ್‌ ಬಂದೋಬಸ್ತ್‌ ನಡುವೆ ರ‍್ಯಾಲಿ ಯಶಸ್ವಿಯಾಗಿ ನಡೆಯಿತು.

‘ವಿನಾಶಕಾರಿ ನಾಲ್ಕು ಪಥದ ರಸ್ತೆಯಿಂದ ಕೊಡಗು ರಕ್ಷಿಸಿ’, ‘ಪರಿಸರ ಉಳಿಸಿ, ಕಾವೇರಿ ನದಿ ರಕ್ಷಿಸಿ’ ಎಂದು ಘೋಷಣೆ ಕೂಗುತ್ತಾ ಪರಿಸರ ಪ್ರೇಮಿಗಳು ಜಾಗೃತಿ ಮೂಡಿಸಿದರು. ರ‍್ಯಾಲಿ ಗಾಂಧಿ ಮೈದಾನಕ್ಕೆ ಬರುತ್ತಿದ್ದಂತೆ ‘ಚತುಷ್ಪಥ ರಸ್ತೆ ಬೇಕು’ ಎಂದು ಬಿಜೆಪಿ ಕಾರ್ಯಕರ್ತರು ಕೂಗಿದರು. ಧಿಕ್ಕಾರ, ಜೈಕಾರದ ಘೋಷಣೆಗಳು ಮೊಳಗಿದವು. ಪರಸ್ಪರ ತಳ್ಳಾಟ ನಡೆದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಪ್ರತಿಭಟನಾಕಾರರನ್ನು ಪೊಲೀಸರು ಹೊರ ಕಳುಹಿಸಿದರು.

‘ಯೋಜನೆ ವಿರೋಧಿಸುತ್ತಿರುವವರು ಢೋಂಗಿ ಪರಿಸರವಾದಿಗಳು. ಈ ಹೋರಾಟದಲ್ಲಿ ಪಾಲ್ಗೊಂಡವರು ಜಿಲ್ಲೆಯವರಲ್ಲ. ರಸ್ತೆಗಳ ಅಭಿವೃದ್ಧಿ ಆಗದಿದ್ದರೆ ನಾವು ಬದುಕುವುದು ಹೇಗೆ’ ಎಂದು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿದರು.

ಪರಿಸರ ಹೋರಾಟಗಾರ ಸುರೇಶ್‌ ಹೆಬ್ಳೀಕರ್‌ ಮಾತನಾಡಿ, ‘ಡಿಸೆಂಬರ್‌ನಲ್ಲಿ ಕೊಡಗಿನಲ್ಲಿ ವಿಪರೀತ ಚಳಿ ಇರುತ್ತಿತ್ತು. ಆದರೆ, ಹವಾಮಾನ ಬದಲಾವಣೆಯಿಂದ ಚಳಿ ಮಾಯವಾಗಿದೆ. ಕಾಡು ಕಡಿದು ರೆಸಾರ್ಟ್‌ ಸಂಸ್ಕೃತಿ ಹೆಚ್ಚಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ದಕ್ಷಿಣ ಭಾರತದ ಆರು ರಾಜ್ಯಗಳಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಸಿದ್ದು, ಅದು ಉಳಿದರೆ ಮಾತ್ರ ಎಲ್ಲರೂ ಬದುಕಲು ಸಾಧ್ಯವಿದೆ. ಪಶ್ಚಿಮಘಟ್ಟವು ದೇಶದ ಶೇ 40ರಷ್ಟು ಜನರಿಗೆ ನೀರು, ಉಸಿರು ನೀಡುತ್ತಿದೆ. ಇದನ್ನು ಕಾಪಾಡದಿದ್ದರೆ ಅನಾಹುತವೇ ಹೆಚ್ಚು ಎಂದು ಎಚ್ಚರಿಸಿದರು.

ಕಾವೇರಿ ನದಿ ಉಳಿದರೆ ಮಾತ್ರ ಅವಲಂಬಿತರು ಬದುಕಲು ಸಾಧ್ಯ. ನದಿ ಹರಿಯುವ ಐದು ಜಿಲ್ಲೆಗಳಲ್ಲಿ ಶೇ 32ರಷ್ಟು ಅರಣ್ಯ ಪ್ರದೇಶ ಕುಗ್ಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ರಾಜ್ಯದಲ್ಲಿ 20 ಲಕ್ಷ ಮರಗಳನ್ನು ಕಡಿದು ಹೆದ್ದಾರಿ, ರೈಲು ಮಾರ್ಗ ನಿರ್ಮಾಣ ಮಾಡುವ ಅಗತ್ಯವಾದರೂ ಏನು? ಕಾಡು ನಾಶವಾದರೆ ಹಳ್ಳಿಗಳಲ್ಲಿ ಜನರು ಬದುಕುವುದಾದರೂ ಹೇಗೆ? ಅಂತರ್ಜಲ ಮಟ್ಟ ಕುಸಿಯುತ್ತಿದೆ. ಪರಿಸರ ಎಂಬುದು ಹಸಿರು ಬಣ್ಣ ಮಾತ್ರವಲ್ಲ. ಪರಿಸರದ ಮೇಲೆ ಸಾಮಾಜಿಕ, ಆರ್ಥಿಕ ಜೀವನವೂ ಅವಲಂಬಿತವಾಗಿದೆ ಎಂದು ಎಚ್ಚರಿಸಿದರು.

‘ಪೂರ್ವ ಹಿಮಾಲಯ, ಪಶ್ಚಿಮಘಟ್ಟಗಳು ವಿನಾಶದತ್ತ ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಜನರು ಹಾಳಾಗಬೇಕೆಂಬುದು ಮಾಧವ್‌ ಗಾಡ್ಗಿಳ್, ಕಸ್ತೂರಿ ರಂಗನ್‌ ವರದಿಯ ಉದ್ದೇಶವಲ್ಲ. ಕಾಡು ಉಳಿದರೆ ಭವಿಷ್ಯ ಚೆನ್ನಾಗಿ ಇರಲಿದೆ. ಪಶ್ಚಿಮಘಟ್ಟ ಉಳಿದರೆ ನಮಗೆ ಸಾವಿಲ್ಲ’ ಎಂದು ಹೇಳಿದರು.

ವೇದಿಕೆ ಅಧ್ಯಕ್ಷ ರಾಜೀವ್‌ ಬೋಪಯ್ಯ ಮಾತನಾಡಿ, ‘₹10 ಸಾವಿರ ಕೋಟಿ ಯೋಜನೆಯು ಕೊಡಗನ್ನೇ ನಾಶ ಮಾಡುತ್ತದೆ’ ಎಂದರು.

ವನ್ಯಜೀವಿ ಸಂಘದ ಅಧ್ಯಕ್ಷ ಸಿ.ಪಿ.ಮುತ್ತಣ್ಣ, ಕಾವೇರಿ ಉಳಿಸಿ ಹೋರಾಟ ಸಮಿತಿಯ ಚಂದ್ರಮೋಹನ್‌ ಹಾಜರಿದ್ದರು.

* ದೇಶವನ್ನೇ ಕಾಪಾಡುತ್ತಿರುವ ಪಶ್ಚಿಮಘಟ್ಟ ಉಳಿಸಬೇಕು. ಇದು ಸರ್ಕಾರದ ವಿರುದ್ಧದ ರ‍್ಯಾಲಿ ಅಲ್ಲ. ಜನಜಾಗೃತಿ ಸಮಾವೇಶ
– ಸುರೇಶ್‌ ಹೆಬ್ಳೀಕರ್‌, ಪರಿಸರ ಹೋರಾಟಗಾರ

* ಚತುಷ್ಪಥ ಹೆದ್ದಾರಿ ನಿರ್ಮಾಣದಿಂದ ಆಪತ್ತು ಹೆಚ್ಚು. ಕೊಡಗು ಸುರಕ್ಷಿತ ಪ್ರದೇಶವೆಂದು ಭಾವಿಸಿದ್ದೆವು. ಆದರೆ, ಕಾಡು ನಾಶದಿಂದ ಭೂಕುಸಿತ ಸಂಭವಿಸಿತ್ತು
-ಮಂಜು ಚಿಣ್ಣಪ್ಪ, ಅಧ್ಯಕ್ಷ, ಯುಕೋ ಸಂಘಟನೆ

ಮುಖ್ಯಾಂಶಗಳು
* ಹವಾಮಾನ ಬದಲಾವಣೆಯಿಂದ ಚಳಿ ಮಾಯ
* ಕೊಡಗಿನಲ್ಲಿ ಹೆಚ್ಚುತ್ತಿದೆ ರೆಸಾರ್ಟ್‌ ಸಂಸ್ಕೃತಿ
* ಪೂರ್ವ ಹಿಮಾಲಯಕ್ಕೂ ಆಪತ್ತು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !