ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿದ್ದಾರೆ ‘ಬೇಟಿ ಬಚಾವೊ’ದವರು...

Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಇಂದಿಗೂ ಪರಂಪರೆ, ಗೊಡ್ಡು ರೀತಿರಿವಾಜುಗಳ ಹಿಡಿತದಲ್ಲಿ ಉಸಿರುಗಟ್ಟಿ ನರಳುತ್ತಿರುವ ಲೋಕವೊಂದಿದೆ. ಗಾಯಗೊಂಡ ಹೆಣ್ಣಿನ ಅಸ್ಮಿತೆಯು ರೆಕ್ಕೆ ಬೀಸಿ ಹಾರಲಾರದೆ ವಿಲಗುಡುತ್ತಿದೆ. ಸಮೃದ್ಧ ಕಲೆ, ಸಾಹಿತ್ಯ-ಸಂಸ್ಕೃತಿಯ ನೆಲೆವೀಡಾದ ಮಧ್ಯಪ್ರದೇಶದ ನೀಮುಚ್ ಮಂದಸೌರಿನ ಹೈವೇಯಲ್ಲಿ ಹಾದುಹೋದರೆ ಖುಲ್ಲಂಖುಲ್ಲಾ ದೇಹವ್ಯಾಪಾರದಲ್ಲಿ ನಿರತರಾಗಿರುವ ಯುವತಿಯರನ್ನು ಕಾಣಬಹುದು. ಇಡೀ ಮಾನವೀಯತೆ ತಲೆತಗ್ಗಿಸುವಂತೆ ವೇಶ್ಯಾವೃತ್ತಿಯನ್ನು ಸೆರಗಲ್ಲಿ ಕಟ್ಟಿಕೊಂಡ ಬೇಡಿಯಾ ಮತ್ತು ಬಂಚಡಾ ಜನಾಂಗದ ಹೆಣ್ಣುಮಕ್ಕಳ ಕಣ್ಣೀರಿನ ಕಥೆ ಪಥರಿಯಾ, ರಾಜಗಡ, ಗುನಾ, ಸಾಗರ್, ಶಿವಪುರ ಮುರೈನಾ ಮತ್ತು ವಿದಿಶಾದ ಒಡಲಲ್ಲಿ ಹೂತುಹೋಗಿದೆ. ಜಗತ್ತು ಪ್ರಗತಿಯತ್ತ ದಾಪುಗಾಲು ಹಾಕಿ ಓಡುತ್ತಿರುವಾಗ ಈ ಬುಡಕಟ್ಟು ಜನಾಂಗದ ಸ್ತ್ರೀಯರು ಇನ್ನೂ ಕಗ್ಗತ್ತಲಲ್ಲಿಯೇ ಇದ್ದಾರೆ. ಹೆದ್ದಾರಿಯ ಟ್ರಕ್ ಡ್ರೈವರುಗಳು, ದಾರಿಹೋಕರು, ಪಡ್ಡೆಗಳೇ ಈ ಬಡಪಾಯಿಗಳ ಗ್ರಾಹಕರು. ಗಿರಾಕಿ ಸಿಕ್ಕಾಗ ಹೊಟ್ಟೆತುಂಬ ಊಟ, ಇಲ್ಲದಿದ್ದಾಗ ಅರೆಹೊಟ್ಟೆ ಉಪವಾಸ.

ಹೆಣ್ಣು ಸಂತತಿಯನ್ನು ಭ್ರೂಣವಾಗಿದ್ದಾಗಲೇ ಅಳಿಸಿಹಾಕುವೆವು ಎಂಬ ಪುರುಷಾಹಂಕಾರಿ ಖಾಪ್ ಪಂಚಾಯಿತಿಗಳ ಮೂರ್ಖ ಅಟ್ಟಹಾಸ ಅಡಗುತ್ತಿಲ್ಲ. ಲಿಂಗಾನುಪಾತ ಹಿಗ್ಗುತ್ತಾ ದಿಗಿಲು ಹುಟ್ಟಿಸುತ್ತಿದೆ. ಬಂಚಡಾ, ಬೇಡಿಯಾ ಡಿನೋಟಿಫೈಡ್ ಆದಿವಾಸಿ ಜನಾಂಗದಲ್ಲಿ ಹೆಣ್ಣುಹುಟ್ಟಿದರೆ ಹಬ್ಬ. 12-14 ವಯಸ್ಸಿಗೆ ಬಾಲೆ ಕಾಲಿಡುತ್ತಲೇ ಪೋಷಕರೇ ದೇಹವ್ಯಾಪಾರದ ದಂಧೆಗೆ ತಳ್ಳುತ್ತಾರೆ. ಮೊದಲ ಗ್ರಾಹಕ ಮೀಸಲು ಮುರಿದಾಗಲೂ ಹಬ್ಬವೇ. ಎಳೆಯ ಹೆಗಲಿಗೆ ದಂಧೆಯ ಶಿಲುಬೆಯನ್ನು ಹೊರಿಸುತ್ತಾರೆ. ಕುಟುಂಬವನ್ನು ಸಾಕುವ ಹೊಣೆ ಅವಳದೇ. ಮಂದಸೌರದಲ್ಲಿಯೇ ಸುಮಾರು 23 ಸಾವಿರ ಜನವಸತಿಯಿರುವ ಅರವತ್ತೈದು ಹಳ್ಳಿಗಳಲ್ಲಿ ಈ ಅನಿಷ್ಟ ಪರಂಪರೆಯಿದೆ. ಮೌರ್ಯರು, ಮಾಳವರು, ಗುಪ್ತರು, ಮೊಗಲರಾಳಿದ ಈ ಸೆರಗು, ಹೆಣ್ಣುಮಕ್ಕಳ ಘೋರ ದುರಂತದ ಕಥೆ ಹೇಳುತ್ತದೆ. ಸುಮಾರು ಐದುನೂರು ವರ್ಷಗಳ ಪುರಾತನ ಇತಿಹಾಸವಿರುವ ಈ ಜನಾಂಗದ ಹೊಟ್ಟೆಯೊಳಗೆ ಬೆಚ್ಚಿಬೀಳುವ ನೋವಿನ ಕಥೆಗಳಿವೆ.

ಕತೆಯೊಂದು ಪ್ರಚಲಿತವಾಗಿದೆ. ಮೇವಾಡದ ರಾಜರು, ಮೊಗಲರಿಂದ ಸೋತು ತಮ್ಮ ರಾಜ್ಯವನ್ನು ಮರಳಿ ಪಡೆಯಲಾಗದೇ ಸೋತುಹೋದ ಸಿಪಾಯಿಗಳೆಲ್ಲ ನರಸಿಂಹಗಡದಲ್ಲಿ ಅವಿತುಕೊಂಡರಂತೆ. ಅಲ್ಲಿಂದ ತಲೆಮರೆಸಿಕೊಂಡು ಮೆಲ್ಲಗೆ ಮಧ್ಯಪ್ರದೇಶಕ್ಕೆ ವಲಸೆ ಹೋದರಂತೆ. ಉದ್ಯೋಗವಿರದೆ, ಹೊಟ್ಟೆಗಿರದೆ ಅವರ ಹೆಂಗಸರು ದೇಹ ಮಾರಿಕೊಳ್ಳುವ ಸಂಕಟಕ್ಕೆ ಬಲಿಯಾಗಬೇಕಾಯ್ತು. ಇನ್ನೊಂದು ಕತೆ- ನೂರೈವತ್ತು ವರುಷಗಳ ಹಿಂದೆ ಬ್ರಿಟಿಷರು ನೀಮೂಚ್‍ನಲ್ಲಿ ತಂಗಿದ್ದ ತಮ್ಮ ಸಿಪಾಯಿಗಳ ಮನರಂಜನೆಗಾಗಿ ರಾಜಸ್ಥಾನದ ಅಲೆಮಾರಿ ಹೆಂಗಸರನ್ನು ಕರೆತರುತ್ತಿದ್ದರಂತೆ. ಹೀಗೆ ಬಂಚಡಾ ಮತ್ತು ಬೇಡಿಯಾ ಜನಾಂಗವು ರತಲಾಮ್, ಮಂದಸೌರಿನವರೆಗೂ ಹಬ್ಬಿತಂತೆ.  

ಮತ್ತೊಂದು ಕತೆ- 1631ರಲ್ಲಿ ಮುಮ್ತಾಜ್ ಮಹಲಳ ಸಾವಿನ ಮರುವರ್ಷ ತಾಜಮಹಲ್ ನಿರ್ಮಾಣಕಾರ್ಯ ಆರಂಭವಾಯ್ತು. ಮುಖ್ಯ ಶಿಲ್ಪಿ ಉಸ್ತಾದ್ ಅಹಮದ್ ಲಾಹೋರಿ ಸಹಿತ ಸಾವಿರಾರು ಕುಶಲಕರ್ಮಿಗಳನ್ನು ದೂರದೂರದಿಂದ ಕರೆಸಲಾಯ್ತು. ಕೆಲಸಗಾರರ ಮನರಂಜನೆಗಾಗಿ ಬಾದಶಹಾ, ಬೇಡಿಯಾ ಜಾತಿಯ ವೇಶ್ಯೆಯರನ್ನು ಆರು ಗ್ರಾಮಗಳಲ್ಲಿ ಇರಿಸಿದ್ದನಂತೆ. ತಾಜಮಹಲ್ ನಿರ್ಮಾಣಕಾರ್ಯದ 21 ವರ್ಷಗಳಲ್ಲಿ ಬೇಡಿಯಾ ಜನಾಂಗದಲ್ಲಿ ವೇಶ್ಯಾವೃತ್ತಿ ಆಳವಾಗಿ ಬೇರುಬಿಟ್ಟಿತು.

ದೇವದಾಸಿ ಪದ್ಧತಿಯ ಮೌಢ್ಯಕ್ಕೆ ‘ದೈವ’ ಶಾಪವಾದರೆ ಈ ಹೆಂಗಸರಿಗೆ ಹುಟ್ಟೇ ಶಾಪ. ಪರಂಪರೆಯೇ ಈ ಅಮಾಯಕರನ್ನು ದುರ್ಗತಿಗೆ ತಳ್ಳಿದೆ. ಹಾಡು, ಕುಣಿತ, ಮಾಟ ಮಂತ್ರಗಳ ಕೌಶಲವಿರುವ ಬೇಡಿಯಾ ಜನರ ’ರಾಯಿ ಕುಣಿತ’ ಬುಂದೇಲಖಂಡದ ಪ್ರಸಿದ್ಧ ಜನಪದ ಕಲೆ. ವೇಗವಾಗಿ ತಿರುಗುತ್ತ ಲಯಬದ್ಧವಾಗಿ ಕುಣಿಯುವ ಈ ಮೋಹಕ ನೃತ್ಯವನ್ನು ಮಶಾಲಿನ ಬೆಳಕಿನಲ್ಲಿ ಮಾಡುತ್ತಾರೆ. ಸಹನರ್ತಕ ಮಶಾಲು ಆರದಂತೆ (ರಾಯಿ)ಸಾಸಿವೆಯನ್ನು ಹಾಕುತ್ತಿರುತ್ತಾನೆ. ಹೀಗೆ ಇದು ’ರಾಯಿ ನೃತ್ಯ’ವೆಂದು ಹೆಸರಾಯಿತು. ಒಂದು ಕಾಲಕ್ಕೆ ರಾಜರು, ಠಾಕೂರರ ಮಂಗಳಕಾರ್ಯಗಳಿಗೆ ಬೇಡಿಯಾ ಬುಡಕಟ್ಟು ಹೆಣ್ಣುಮಕ್ಕಳು ಬಂದು ನೃತ್ಯಮಾಡಿ ಹರಸಿದರೆ ಒಳ್ಳೆಯದಾಗುವುದೆಂಬ ನಂಬಿಕೆಯಿತ್ತು. ಮದುವೆಯೇ ವರ್ಜ್ಯವಾಗಿರುವ ಈ ಜನಾಂಗದ ಹೆಣ್ಣುಮಕ್ಕಳು ‘ರಾಯಿ ನೃತ್ಯದಲ್ಲಿ’ ಸಂಗಾತಿಯನ್ನು ಅರಸುತ್ತಾರೆ. ಆ ಊರಿನ ಠಾಕೂರ್, ಕುಣಿತದವರಲ್ಲಿ ಒಬ್ಬಳನ್ನು ಆರಿಸಿಕೊಳ್ಳುತ್ತಾನೆ. ಸಂಪ್ರದಾಯದ ಪ್ರಕಾರ ಆಕೆ ವಿವಾಹವಾಗುವಂತಿಲ್ಲ. ಆದರೆ ಅವನಿಂದ ಮಕ್ಕಳನ್ನು ಪಡೆಯಬಹುದು. ಬೇರಾವ ಆಯ್ಕೆ, ಹಕ್ಕು ಇಲ್ಲದ ಆಕೆ ಠಾಕೂರನ ‘ಇಟ್ಟುಕೊಂಡವಳಾಗಿ’ರುತ್ತಿದ್ದಳು. ತಳವರ್ಗದ ಮಹಿಳೆಯು ಮೇಲ್ವರ್ಗದವರ ಭೋಗದ ವಸ್ತು. ಸಾಮಾಜಿಕ ಮೇಲು– ಕೀಳಿನ ಈ ಕ್ರೌರ್ಯಕ್ಕೆ ಎಲ್ಲೆಲ್ಲಿಯೂ ಹೆಣ್ಣೇ ಮೊದಲ ಬಲಿಪಶು!

ಇಂದು ಮೋಹಕ ‘ರಾಯಿ ನೃತ್ಯ’ದ ಕೌಶಲ ಹಿಂದೆ ಸರಿದು ಒಂದು ಹೊತ್ತಿನ ಕೂಳಿಗಾಗಿ ದೇಹವ್ಯಾಪಾರದ ಕ್ರೌರ್ಯ ಎದೆ ನಡುಗಿಸುತ್ತದೆ. ಸಹಸ್ರಮಾನಗಳಿಂದ ಅತ್ಯಂತ ಹೀನಾಯವಾಗಿ ಬದುಕುತ್ತಿರುವ ಈ ಜನಾಂಗಕ್ಕೆ ಸರ್ಕಾರದ ಯಾವ ಯೋಜನೆಗಳೂ ತಲುಪಿಲ್ಲ. ವಿಕಾಸದ ಕೊನೆಯ ಮೆಟ್ಟಿಲ ಮೇಲಿನ ದೂಳೂ ಈ ಪ್ರದೇಶಗಳನ್ನು ಸೋಕಿಲ್ಲ. ತಳವರ್ಗಗಳ ಉನ್ನತಿಯ ಮಾತುಗಳನ್ನಾಡುತ್ತೇವೆ, ಯಾವ ಉನ್ನತಿಯೂ ಇತ್ತ ನಡೆದುಬಂದಿಲ್ಲ. ಕರೆದು ಕೆಲಸ ಕೊಡುವವರಿಲ್ಲ. ಬ್ಯಾಂಕುಗಳಿವೆ ಸಾಲ ಕೊಡಲು, ಆದರೆ ಸೌಲಭ್ಯಗಳ ಪ್ರಯೋಜನ ಪಡೆವ ದುಡಿಮೆಯ ಮಾರ್ಗಗಳಿಲ್ಲ. ತಮ್ಮದೆನ್ನುವ ತುಂಡು ಜಮೀನಿಲ್ಲ. ವಿದ್ಯುತ್ ಇಲ್ಲ, ಕುಡಿಯುವ ನೀರಿಲ್ಲ, ಶೌಚಾಲಯಗಳಿಲ್ಲ, ಆರೋಗ್ಯ ಕೇಂದ್ರಗಳಿಲ್ಲ, ಶಾಲೆಗಳಿಲ್ಲ. ಎಲ್ಲಾ ಉಳ್ಳವರೇ ಬಿ.ಪಿ.ಎಲ್. ಕಾರ್ಡ್ ಪಡೆದು ಆ ಸೌಲಭ್ಯವೂ ದಕ್ಕದಂತೆ ದೋಚುತ್ತಿದ್ದಾರೆ. ದೇಶದ ನ್ಯಾಯಾಂಗ, ಶಾಸಕಾಂಗಗಳೂ ನಿದ್ದೆಹೋಗಿವೆ. ಸಂವೇದನಾಶೀಲವಾಗಿ ಸ್ಪಂದಿಸಬೇಕಾಗಿದ್ದ ಸಮಾಜವೂ ಈ ಜನಾಂಗದವರನ್ನು ವಿಚಿತ್ರವಾಗಿ ನೋಡುತ್ತದೆ. 

‘ಹೆಣ್ಣಿನಾ ಬಾಳು ಸುಣ್ಣಾಗಿ ಕುದಿಯಾಲಿ, ಎಲೆ ಜೀವ’, `ಹೆಣ್ಣೆಂಬ ಜನುಮ ಹೊರಬ್ಯಾಡ’ ಎಂದು ನಮ್ಮ ಜನಪದರು ಹೆಣ್ಣಿನ ಕಷ್ಟಗಳನ್ನು ಬಣ್ಣಿಸಿದರೆ, ಈ ಹೆಣ್ಣುಮಕ್ಕಳು ವೇಶ್ಯಾವೃತ್ತಿಯ ಕತ್ತಲಕೂಪದಿಂದ ಹೊರಬರಲು ತಯಾರಿಲ್ಲ. ತಮ್ಮ ಅಸ್ಮಿತೆ, ತಮ್ಮ ಹಕ್ಕುಗಳ ಬಗ್ಗೆ ಅರಿವಿರದ ಜನರಲ್ಲಿ ಶಿಕ್ಷಣದ ದೀಪವಿನ್ನೂ ಬೆಳಗಿಲ್ಲ. ಕಸುಬು ತೊರೆದು ಬದುಕು ಕಟ್ಟಿಕೊಂಡವರು ತೀರಾ ವಿರಳ! ಕಟುವಾಸ್ತವವೆಂದರೆ ಕತ್ತಲಿನಿಂದ ಬೆಳಕಿನೆಡೆಗೆ ಬರಲು ಕೆಲವರಿಗೆ ಆತ್ಮಬಲವಿಲ್ಲ. ಸುರಕ್ಷಿತ ಬದುಕನ್ನು ಕೊಡಲಾರದ ತಮ್ಮ ಪುರುಷರ ಮೇಲೆ ಇವರಿಗೆ ನಂಬಿಕೆಯಿಲ್ಲ. ಈ ಜನಾಂಗದ ಮೈಗಳ್ಳ ಪುರುಷರು ತಮ್ಮವೇ ಕರುಳಬಳ್ಳಿಗಳಿಗೆ, ಸಂಗಾತಿಗಳಿಗೆ, ವಿಟಪುರುಷರನ್ನು ಒದಗಿಸುವ ದಲ್ಲಾಳಿಗಳು! ಇನ್ನು ಕೆಲವು ಆದಿವಾಸಿ ಗಂಡಸರ ಕಸುಬು ಕಳ್ಳತನ. ಕ್ರಿಮಿಗಳಂತೆ ಬಾಳುತ್ತಿರುವ ‘ವಿಮುಕ್ತ ಜಾತಿ’- (ಡಿನೋಟಿಫೈಡ್ ಜನಾಂಗ) ಎಂದು ಹಣೆಪಟ್ಟಿ ಧರಿಸಿರುವ ಈ ವಂಚಿತ ಸಮುದಾಯಗಳನ್ನು ಇತರ ಹಿಂದುಳಿದ ವರ್ಗಕ್ಕೆ ಸೇರಿಸಲು 'ಆದಿವಾಸಿಗಳ ಅಮ್ಮ' ಮಹಾಶ್ವೇತಾ ದೇವಿ ಬಿಡುವಿಲ್ಲದೆ ದುಡಿದಿದ್ದರು.

ಬೇಡಿಯಾ ಬುಡಕಟ್ಟು ಜನಾಂಗವು ಹೆಣ್ಣುಕೂಸುಗಳ, ಬಾಲೆಯರ ಅಕ್ರಮ ಸಾಗಣೆಯಲ್ಲಿ ಕುಖ್ಯಾತಿ ಪಡೆದಿದೆ. ಎಳೆಯ ಬಾಲೆಯರನ್ನು, ಹದಿಹರೆಯದ ಯುವತಿಯರನ್ನು ಅಪಹರಿಸಿ ಈ ದಂಧೆಯಲ್ಲಿ ನೂಕುವ ದೇಹವ್ಯಾಪಾರದ ಜಾಲ ಬೃಹತ್ತಾಗಿ ಬೆಳೆದಿದೆ. ಹೆಣ್ಣಿನ ಹಕ್ಕನ್ನು ಗೌರವಿಸಬೇಕಾದ ಎಲ್ಲ ವ್ಯವಸ್ಥೆಗಳೂ ನಾನಾ ಯೋಜನೆಗಳನ್ನು ರೂಪಿಸುತ್ತ, ಕೋಟಿಗಟ್ಟಲೆ ಹಣವನ್ನು ಬಜೆಟ್ಟಿನಲ್ಲಿ ಘೋಷಿಸುತ್ತಿದ್ದರೂ ಯಥಾಸ್ಥಿತಿಯಲ್ಲಿ ಯಾವ ವ್ಯತ್ಯಾಸವೂ ಆಗದಂತೆ ನಾಜೂಕಾಗಿ ದೌರ್ಜನ್ಯವನ್ನು ಪೋಷಿಸುತ್ತಲೇ ಇವೆ.

ಹಲವಾರು ಎನ್‌.ಜಿ.ಒ.ಗಳು, ಮಧ್ಯಪ್ರದೇಶ ಸರ್ಕಾರವು ವೇಶ್ಯಾವೃತ್ತಿ ನಿರ್ಮೂಲನೆಗಾಗಿ ಶ್ರಮಿಸುತ್ತಿವೆ. ವೇಶ್ಯಾವೃತ್ತಿ ನಿರ್ಮೂಲನೆಗೆಂದೇ ‘ಜಾಬಾಲಿ ಯೋಜನೆ’ ಜಾರಿಯಲ್ಲಿದೆ. ಸತ್ಯಕಾಮ ಜಾಬಾಲಿ ಋಷಿಯ ಕತೆ ನೆನಪಿರಬಹುದು. ತಂದೆ ಯಾರೆಂದು ಅರಿಯದ ಮಗು ತಾಯಿಯನ್ನೇ ಕೇಳುತ್ತಾನೆ. ಆಕೆ ಪ್ರಾಮಾಣಿಕವಾಗಿ ತಾರುಣ್ಯದಲ್ಲಿ ತನಗೆ ತುಂಬಾ ಜನರೊಂದಿಗೆ ಸಂಪರ್ಕವಿತ್ತು. ‘ನಿನ್ನ ತಂದೆ ಯಾರೆಂದು ನಾನರಿಯೆ. ನೀನು ಜಾಬಾಲಾಳ ಮಗ ಅಷ್ಟೆ' ಎಂದಿರುತ್ತಾಳೆ. ಈ ಜಾಬಾಲಿಯರು ಅಕ್ಷರಸ್ಥರಾಗಲೆಂದು ಸರ್ಕಾರಿ ದಾಖಲೆಯಲ್ಲಿ ‘ಜಾಬಾಲಿ ಶಾಲೆಗಳೂ’ ಇವೆ. ಅವು ಹೆಸರಿಗಷ್ಟೇ! ಶಾಲೆಗಳ ಸುಳಿವು ಕೂಡ ಸಿಗದಂತೆ ಈಗ ಅವು ಸಮುದಾಯ ಕೇಂದ್ರಗಳಾಗಿ ಊರವರು ಅವುಗಳನ್ನು ಕಲ್ಯಾಣಮಂಟಪಗಳನ್ನಾಗಿಸಿದ್ದಾರೆ. ಜಾಬಾಲಿ ಯೋಜನೆಯಡಿ ಪ್ರತಿ ಜಿಲ್ಲೆಗೂ ₹ 10 ಕೋಟಿ ಮೀಸಲಿಟ್ಟರೂ ಈ ಹೆಣ್ಣುಮಕ್ಕಳ ಬದುಕು ಯಾವ ಸುಧಾರಣೆಯನ್ನೂ ಕಂಡಿಲ್ಲ. ಈ ಅಮಾಯಕರು ಹಿಂದುಳಿದ ಮತ್ತು ಪರಿಶಿಷ್ಟ ಜಾತಿಯವರಿಗೆ ಸಿಗುವ ಮೂಲಭೂತ ಸೌಕರ್ಯಗಳಿಂದಲೂ ವಂಚಿತರು.

ಸದಾ ಪೋಲಿಸರ ಕಾಟ, ಜೈಲಿನ ವಾಸ ಈ ಅಲೆಮಾರಿಗಳ ಬದುಕಿನ ಅವಿಭಾಜ್ಯ ಕರ್ಮ. ಮಧ್ಯಪ್ರದೇಶ, ರಾಜಸ್ಥಾನದ ಸುಡು ಸುಡುವ ಮರಳುಗಾಡಿನ ‘ಲೂ’ ಬೀಸಿ ಬೀಸಿ ಒಡಲನ್ನು ಸುಡುವಾಗ ಹೈವೇಗಳ ಆಸುಪಾಸಿನಲ್ಲಿ ತಮ್ಮ ಗಿರಾಕಿಗಳನ್ನು ಹೊಂಚುತ್ತ ಕುಳಿತ ಈ ಹೆಣ್ಣುಮಕ್ಕಳ ಬದುಕು ಎದೆ ಸುಡುತ್ತದೆ. ‘ಬೇಟಿ ಪಢಾವೊ, ಬೇಟಿ ಬಚಾವೊ’ ಕೇವಲ ಕಾಗದದ ಮೇಲಿನ ಘೋಷಣೆಯಾಗಿಯೇ ಉಳಿದಿದೆ. ಹಳ್ಳಿಗಾಡು, ಆದಿವಾಸಿ ಬುಡಕಟ್ಟು ಜನಾಂಗಗಳು ಮೌಢ್ಯದ ಕತ್ತಲಲ್ಲಿಯೇ ಮುಳುಗಿ ಕಡುಬಡತನದಲ್ಲಿ ಬದುಕುತ್ತಿವೆ. ‘ಹನಿವ ಕಂಗಳ ನೋಟ ಮತ್ತೆಲ್ಲೂ ಸಿಗದು, ಈ ಹಳ್ಳಿಯಂಥ ಹಳ್ಳಿ ಬೇರೆಲ್ಲೂ ಸಿಗದು, ನಮ್ಮ ಕತೆಯನ್ನು ರಚಿಸಬೇಡಿರಿ ಎಲ್ಲೂ, ಶೋಷಣೆಯ ಹೊರತು ಬೇರಾವ ಕತೆಯೂ ಇಲ್ಲವಿಲ್ಲಿ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT