ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ ಗೇಲ್ ಅಬ್ಬರ: ಪಂಜಾಬ್‌ ಜಯಭೇರಿ

ಈ ಆವೃತ್ತಿಯ ಮೊದಲ ಶತಕ ಗಳಿಸಿದ ವೆಸ್ಟ್‌ ಇಂಡೀಸ್‌ ಆಟಗಾರ * ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೋಲು
Last Updated 19 ಏಪ್ರಿಲ್ 2018, 20:32 IST
ಅಕ್ಷರ ಗಾತ್ರ

ಮೊಹಾಲಿ: ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಕ್ರಿಸ್‌ ಗೇಲ್ ಸಿಡಿಲಬ್ಬರದ ಬ್ಯಾಟಿಂಗ್‌ ಮುಂದೆ ಗುರುವಾರ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಬೌಲರ್‌ಗಳು ಬಸವಳಿದರು.

ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್ ಶತಕ ದಾಖಲಿಸಿದರು. 63 ಎಸೆತಗಳಲ್ಲಿ ಔಟಾಗದೆ 104 ರನ್ ಗಳಿಸಿದ ಅವರು 11 ಸಿಕ್ಸರ್‌ಗಳನ್ನು ಸಿಡಿಸಿದರು. ಈ ಟೂರ್ನಿಯ ಮೊದಲ ಶತಕ ಇದಾಗಿದೆ.

ಅವರ ಆಟದ ಬಲದಿಂದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 15 ರನ್‌ಗಳಿಂದ ಗೆದ್ದಿತು. 194 ರನ್‌ಗಳ ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ 178 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ನಾಯಕ ಕೇನ್‌ ವಿಲಿಯಮ್ಸನ್ (54; 41 ಎ, 2 ಸಿ, 3 ಬೌಂ) ಮತ್ತು ಕರ್ನಾಟಕದ ಮನೀಷ್ ಪಾಂಡೆ (57; 42 ಎ, 1 ಸಿ, 3 ಬೌಂ) ಅವರ ಅರ್ಧಶತಕದ ಆಟ ವ್ಯರ್ಥವಾಯಿತು.

ಶಿಖರ್‌ ಧವನ್‌, ವೃದ್ಧಿಮಾನ್ ಸಹಾ ಮತ್ತು ಯೂಸುಫ್ ಪಠಾಣ್‌ ಬೇಗನೇ ಔಟಾಗಿ ಕಾರಣ ಸನ್‌ರೈಸರ್ಸ್‌ ಪಾಳಯದಲ್ಲಿ ಆತಂಕ ಮೂಡಿಸಿದರು. ಆದರೆ ಕೇನ್‌ ವಿಲಿಯಮ್ಸನ್ ಮತ್ತು ಮನೀಷ್ ಪಾಂಡೆ ಜಯದ ಭರವಸೆ ಮೂಡಿಸಿದರು. ಶಕೀಬ್ ಅಲ್‌ ಹಸನ್ ಕೂಡ ಉತ್ತಮ ಕಾಣಿಕೆ ನೀಡಿದರು. ಆದರೆ ತಂಡಕ್ಕೆ ಜಯ ಗಳಿಸಿಕೊಡಲು ಇವರಿಗೆ ಸಾಧ್ಯವಾಗಲಿಲ್ಲ.

ಗೇಲ್‌ ಹೋದ ವರ್ಷ ಆರ್‌ಸಿಬಿ ತಂಡದಲ್ಲಿದ್ದರು. ಈ ವರ್ಷದ ಟೂರ್ನಿಗಾಗಿ ನಡೆದಿದ್ದ ಹರಾಜುಪ್ರಕ್ರಿಯೆಯಲ್ಲಿ ಅವರನ್ನು ಆರ್‌ಸಿಬಿ ಖರೀದಿಸಿರಲಿಲ್ಲ. ಆದರೆ ಎರಡು ದಿನಗಳ ಹಿಂದೆ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಿನ ಪಂದ್ಯದಲ್ಲಿ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಕ್ಕಿತ್ತು. ಅದರಲ್ಲಿ ಅವರು 62 ರನ್‌ ಸಿಡಿಸಿದ್ದರು. ಗುರುವಾರ ರಾತ್ರಿಯೂ ಅಬ್ಬರಿಸಿದರು.

ತಾವೆದುರಿಸಿದ 61ನೇ ಎಸೆತದಲ್ಲಿ ಒಂಟಿ ರನ್ ಗಳಿಸುವ ಮೂಲಕ ಶತಕ ಪೂರೈಸಿದರು. ವಿಐಪಿ ಗ್ಯಾಲರಿಯಲ್ಲಿದ್ದ ಕಿಂಗ್ಸ್‌ ಫ್ರ್ಯಾಂಚೈಸ್‌ನ ಸಹ ಮಾಲಕಿ ಪ್ರೀತಿ ಜಿಂಟಾ ಕುಣಿದು ಕುಪ್ಪಳಿಸಿದರು.

37.1 ಕೋಟಿ ಮಂದಿ ವೀಕ್ಷಣೆ
ಐಪಿಎಲ್‌ನ ಮೊದಲ ವಾರದ ಪಂದ್ಯಗಳನ್ನು 37.1 ಕೋಟಿ ಮಂದಿ ವೀಕ್ಷಿಸುವ ಮೂಲಕ ಹೊಸ ದಾಖಲೆ ನಿರ್ಮಾಣ ಆಗಿದೆ. ಟಿ.ವಿ ಹಾಗೂ ಹಾಟ್‌ಸ್ಟಾರ್‌ ವೆಬ್‌ಸೈಟ್ ಮೂಲಕ ಕ್ರಮವಾಗಿ 28.84 ಕೋಟಿ ಹಾಗೂ 8.24 ಕೋಟಿ ಜನರು ಐಪಿಎಲ್‌ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಐಪಿಎಲ್‌ ಆರಂಭವಾದಾಗಿನಿಂದಲೂ ಅದರ ಮೊದಲ ವಾರದಲ್ಲೇ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪಂದ್ಯಗಳನ್ನು ವೀಕ್ಷಿಸಿರುವುದು ಹೊಸ ದಾಖಲೆ.

ಸಂಕ್ಷಿಪ್ತ ಸ್ಕೋರ್‌: ಕಿಂಗ್ಸ್ ಇಲೆವನ್ ಪಂಜಾಬ್‌: 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 193 (ಕೆ.ಎಲ್‌.ರಾಹುಲ್‌ 18, ಕ್ರಿಸ್ ಗೇಲ್‌ ಅಜೇಯ 104, ಮಯಂಕ್ ಅಗರವಾಲ್‌ 18, ಕರುಣ್‌ ನಾಯರ್‌ 31, ಆ್ಯರನ್ ಫಿಂಚ್‌ ಅಜೇಯ 14; ಭುವನೇಶ್ವರ್ ಕುಮಾರ್‌ 25ಕ್ಕೆ1, ರಶೀದ್ ಖಾನ್‌ 55ಕ್ಕೆ1, ಸಿದ್ಧಾರ್ಥ್ ಕೌಲ್‌ 33ಕ್ಕೆ1);

ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 178 (ವೃದ್ಧಿಮಾನ್ ಸಹಾ 6, ಕೇನ್ ವಿಲಿಯಮ್ಸನ್‌ 54, ಯೂಸುಫ್ ಪಠಾಣ್‌ 19, ಮನೀಷ್ ಪಾಂಡೆ ಅಜೇಯ 57, ; ಮೋಹಿತ್ ಶರ್ಮಾ 51ಕ್ಕೆ2, ಆ್ಯಂಡ್ರ್ಯೂ ಟೈ 23ಕ್ಕೆ2).

ಫಲಿತಾಂಶ: ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ 15 ರನ್‌ಗಳ ಜಯ. ಪಂದ್ಯಶ್ರೇಷ್ಠ: ಕ್ರಿಸ್‌ ಗೇಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT