ಕೋಡಿ: ತಂತ್ರಜ್ಞಾನದ ಕೊಂಡಿ, ವೇಗದ ಮೋಡಿ!

ಸೋಮವಾರ, ಮೇ 20, 2019
30 °C
‘ನಾಗರಹಾವು’ ನಿರ್ದೇಶಕ ಕೋಡಿ ರಾಮಕೃಷ್ಣ ಇನ್ನಿಲ್ಲ

ಕೋಡಿ: ತಂತ್ರಜ್ಞಾನದ ಕೊಂಡಿ, ವೇಗದ ಮೋಡಿ!

Published:
Updated:
Prajavani

1970ರ ದಶಕದ ಕೊನೆಯಲ್ಲಿ ತಮ್ಮ ಮನಸ್ಸೂ ಹುಚ್ಚುಖೋಡಿಯೇ ಆಗಿತ್ತೆಂದು ಕೋಡಿ ರಾಮಕೃಷ್ಣ ಆಗಾಗ ಹೇಳಿಕೊಳ್ಳುತ್ತಿದ್ದರು. ನಾಯಕ ಆಗುವ ಕನಸು ಹೊತ್ತು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ, ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಲ್ಲುವಿನ ರಾಮಕೃಷ್ಣ, ದಾಸರಿ ನಾರಾಯಣ ರಾವ್ ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಪಳಗಿದರು.

ಬಹು ಬೇಗ ಸಿನಿಮಾ ಪಟ್ಟುಗಳನ್ನು ಜೀರ್ಣಿಸಿಕೊಂಡ ಅವರು 38 ವರ್ಷಗಳ ಸುದೀರ್ಘ ವೃತ್ತಿಬದುಕಿನಲ್ಲಿ ನಿರ್ದೇಶಿಸಿದ ಸಿನಿಮಾಗಳ ಸಂಖ್ಯೆ ಕುರಿತೇ ಅನೇಕರಿಗೆ ಗೊಂದಲಗಳಿವೆ.

ಜೂನಿಯರ್‌ ಎನ್‌ಟಿಆರ್‌ ಅವರಿಂದ ಹಿಡಿದು ನಂದಮೂರಿ ಬಾಲಕೃಷ್ಣ ಅವರತನಕ ತೆಲುಗು ಚಿತ್ರರಂಗದ ಹಲವು ನಾಯಕರ ಕಣ್ಣುಗಳು ಈ ಸುದ್ದಿ ಕೇಳಿ ತೇವಗೊಂಡವು.

‘ಇಂಟ್ಲೊ ರಾಮಯ್ಯ ವೀದಿಲೋ ಕೃಷ್ಣಯ್ಯ’ (1982) ತೆಲುಗು ಸಿನಿಮಾ ನಿರ್ದೇಶಿಸಿದಾಗ ಕೋಡಿ ರಾಮಕೃಷ್ಣ ಅವರಿಗಿನ್ನೂ ಮೂವತ್ತರ ಹರೆಯ. ಚಿರಂಜೀವಿ, ಮಾಧವಿ ಜೋಡಿಯ ಅವರ ಮೊದಲ ಚಲನಚಿತ್ರವೇ ತಮಿಳು, ಕನ್ನಡ (ಮನೇಲಿ ರಾಮಣ್ಣ ಬೀದೀಲಿ ಕಾಮಣ್ಣ), ಹಿಂದಿಗೆ ರೀಮೇಕ್‌ ಆದದ್ದೇ ಅದರ ಯಶಸ್ಸಿಗೆ ಹಿಡಿದ ಕನ್ನಡಿ.

ಸಾಮಾಜಿಕ, ರಾಜಕೀಯ, ಡ್ರಾಮಾ, ಫ್ಯಾಂಟಸಿ, ದೈವೀಶಕ್ತಿ ಹೀಗೆ ಹಲವು ಬಗೆಯ ಸಿನಿಮಾಗಳನ್ನು ಕೊಟ್ಟವರು ರಾಮಕೃಷ್ಣ. ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಿನಿಮಾ ಹೆಣಗಾಡುತ್ತಿದ್ದಾಗಲೇ ಅವರು ಹೊಸ ಪಟ್ಟುಗಳಿಂದ ದೃಶ್ಯಗಳನ್ನು ಕಟ್ಟಿದವರು. 1983ರಲ್ಲಿ ತೆರೆಕಂಡ ಗೂಢಚಾರಿ ನಂ. 1ಅದಕ್ಕೆ ಉದಾಹರಣೆ. 1995ರಲ್ಲಿ ಬಿಡುಗಡೆಯಾದ ‘ಅಮ್ಮೋರು’ ತೆಲುಗು ಸಿನಿಮಾ ನಟಿ ಸೌಂದರ್ಯ ಪ್ರಭಾವಳಿಯನ್ನು ಹಿಗ್ಗಿಸಿದ್ದೇ ಅಲ್ಲದೆ ಟ್ರೆಂಡ್‌ ಸೃಷ್ಟಿಸಿತು. ನಂದಮೂರಿ ಬಾಲಕೃಷ್ಣ, ಚಿರಂಜೀವಿ, ಜಗಪತಿ ಬಾಬು ವೆಂಕಟೇಶ್ ಅವರಂಥ ಪಳಗಿದ ನಟರನ್ನು ನಿರ್ದೇಶಿಸಿದ ಅವರು, ವಿನೋದ್ ಕುಮಾರ್‌ ತರಹದ ಹೊಸಬರಿಗೆ ‘ಭಾರತ್ ಬಂದ್’ನಂಥ ರಾಜಕೀಯ ಸಿನಿಮಾ ಮೂಲಕ ಇಂಧನವಾದರು.

ಸಿನಿಮಾ ನಾಯಕನ ಮಾಧ್ಯಮ ಎನ್ನುವುದನ್ನು ಒಡೆಯಲೆಂದೇ ಅವರು ನಾಯಕಿಯರನ್ನೇ ಪ್ರಧಾನವಾಗಿಸಿ ಹಲವಾರು ಚಲನಚಿತ್ರಗಳನ್ನು ಕೊಟ್ಟರು. ಕನ್ನಡದ ನಟಿಯರಾದ ಪ್ರೇಮ, ರಾಧಿಕಾ ಕುಮಾರಸ್ವಾಮಿ ಕೂಡ ಅವರ ಶೋಧನೆಯ ಕಣ್ಣಿಗೆ ಬಿದ್ದವರು. 2009ರಲ್ಲಿ ತೆರೆಕಂಡ ‘ಅರುಂಧತಿ’ ತೆಲುಗು ಸಿನಿಮಾ ಅನುಷ್ಕಾ ಶೆಟ್ಟಿ ವೃತ್ತಿಬದುಕಿಗೆ ಚಿಮ್ಮುಹಲಗೆಯಾಯಿತು. 2014ರಲ್ಲಿ ತೆರೆಕಂಡ ‘ಅವತಾರಂ’ನಲ್ಲಿ ಭಾನುಪ್ರಿಯಾ ಜತೆಗೆ ನಟಿಸುವ ಅವಕಾಶವನ್ನು ರಾಧಿಕಾ ಕುಮಾರಸ್ವಾಮಿ ಅವರಿಗೆ ರಾಮಕೃಷ್ಣ ನೀಡಿದ್ದರು.

ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ಅವರ ನಿರ್ದೇಶನದ ಸಾಕ್ಷ್ಯಗಳು ಉಳಿದಿವೆ. ವಿಷ್ಣುವರ್ಧನ್ ಮೃತಪಟ್ಟ ನಂತರ ಅವರ ಪ್ರಭಾವಳಿ ಇಟ್ಟುಕೊಂಡು ತಯಾರಾದ ‘ನಾಗರಹಾವು’ ಕನ್ನಡದಲ್ಲಿ ಅವರ ನಿರ್ದೇಶನದ ಏಕೈಕ ಸಿನಿಮಾ.

ಕೋಡಿ ರಾಮಕೃಷ್ಣ ವೇಗಕ್ಕೆ ಇನ್ನೊಂದು ಹೆಸರು. 1985–87ರ ಅವಧಿಯಲ್ಲಿ ಹದಿನೈದು, 88–90ರ ಅವಧಿಯಲ್ಲಿ ಇಪ್ಪತ್ತು, 91–95ರ ಅವಧಿಯಲ್ಲಿ 21 ಸಿನಿಮಾಗಳನ್ನು ನಿರ್ದೇಶಿಸಿದರು. ಈ ಕಾಲಘಟ್ಟದಲ್ಲಿ ನಿರ್ದೇಶಕನೊಬ್ಬ ಚಕಚಕನೆ ಹಾಗೆ ಚಲನಚಿತ್ರಗಳ ನಿರ್ದೇಶಿಸುವುದನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. 2012ರಲ್ಲಿ ಜೀವಮಾನದ ಸಾಧನೆಗಾಗಿ ರಘುಪತಿ ವೆಂಕಯ್ಯ ಪ್ರಶಸ್ತಿ ಸಂದಾಗ ಮಾಧ್ಯಮಗಳು, ಹಳೆಯ ರೋಚಕ ಸಿನಿಮಾ ಕಥೆಗಳನ್ನು ಕೆದಕಿದ್ದವು.

ಪುಟ್ಟಪರ್ತಿ ಸತ್ಯ ಕುರಿತು ಸಿನಿಮಾ ಮಾಡಲೆಂದು ಅವರು ಸಿದ್ಧತೆ ನಡೆಸಿದ್ದಾಗಲೇ ಆರೋಗ್ಯ ಕೈಕೊಟ್ಟಿತು. ಹೀಗಾಗಿ ಅದು ಸೆಟ್ಟೇರಲೇ ಇಲ್ಲ. ಅದೇ ಕಾರಣಕ್ಕೆ ‘ನಾಗರಹಾವು’ ಕನ್ನಡ ಚಿತ್ರವೇ ಅವರ ಸುದೀರ್ಘ ವೃತ್ತಿಬದುಕಿನ ಕೊನೆಯ ಸಿನಿಮಾ ಆಯಿತು.

ಪತ್ನಿ ಕೋಡಿ ಪದ್ಮ, ಇಬ್ಬರು ಹೆಣ್ಣುಮಕ್ಕಳಾದ ದೀಪ್ತಿ, ಪ್ರವಲ್ಲಿಕಾ ಅವರಲ್ಲಿ ರಾಮಕೃಷ್ಣ ಬದುಕಿನ ಕುರಿತ ಹಲವು ಕಥೆಗಳು ಈಗಲೂ ಉಸಿರಾಡುತ್ತಿವೆ.

**

ತೆಲುಗಿನ ಖ್ಯಾತ ಚಿತ್ರ ನಿರ್ದೇಶಕ ಕೋಡಿ ರಾಮಕೃಷ್ಣ ಅವರು ಹೈದರಾಬಾದ್‌ನ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ನಿಧನರಾದರು. 2016ರಲ್ಲಿ ತೆರೆಕಂಡ ಕನ್ನಡದ ‘ನಾಗರಹಾವು’ ಚಿತ್ರ ನಿರ್ದೇಶಿಸಿದ್ದು ಕೂಡ ಇವರೇ.

ಉಸಿರಾಟದ ತೀವ್ರ ತೊಂದರೆ ಕಾಣಿಸಿಕೊಂಡಿದ್ದ ಕಾರಣ ರಾಮಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿತ್ತು. ಆದರೆ, ಅವರು ಶ್ವಾಸಕೋಶದ ಸೋಂಕಿನ ಕಾರಣ ಮೃತಪಟ್ಟರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !