ಗಬ್ಬು ನಾರುತ್ತಿದೆ ಕೊಮ್ಮಘಟ್ಟ ಕೆರೆ

7
ನೀರಿಗಿಂತ ತ್ಯಾಜ್ಯದ ರಾಶಿಯೇ ತುಂಬಿಕೊಂಡಿದೆ

ಗಬ್ಬು ನಾರುತ್ತಿದೆ ಕೊಮ್ಮಘಟ್ಟ ಕೆರೆ

Published:
Updated:
Deccan Herald

ಬೆಂಗಳೂರು:‌ ಈ ಕೆರೆಯಲ್ಲಿ ನೀರಿಗಿಂತ ತ್ಯಾಜ್ಯದ ರಾಶಿಯೇ ಹೆಚ್ಚಾಗಿ ಕಾಣುತ್ತದೆ. ಅದರಲ್ಲೂ ಪ್ಲಾಸ್ಟಿಕ್‌ ಬಾಟಲಿಗಳು ಹಾಗೂ ಕವರ್‌ಗಳದೇ ರಾಜ್ಯಭಾರ. ಕೊಳಚೆ ಸಹ ಈ ಕೆರೆಯ ಒಡಲನ್ನು ಸೇರುತ್ತಿದ್ದು, ಸುತ್ತಲಿನ ಪರಿಸರ ಗಬ್ಬೆದ್ದು ನಾರುತ್ತಿದೆ.

ಇದು ಕೆಂಗೇರಿ ಹೋಬಳಿಯಲ್ಲಿ 32 ಎಕರೆಯಷ್ಟು ಪ್ರದೇಶದಲ್ಲಿ ವ್ಯಾಪಿಸಿರುವ ಕೊಮ್ಮಘಟ್ಟ ಕೆರೆಯ ದುಸ್ಥಿತಿ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸಿದ ಕೆರೆ ಇದು. ಒತ್ತುವರಿದಾರರ ಕಪಿಮುಷ್ಟಿಗೆ ಈ ಕೆರೆಯೇನೋ ಸಿಲುಕಿಲ್ಲ. ಆದರೆ, ಸಮೀಪದ ಬಡಾವಣೆಗಳು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೆ ನೀರು ಕೆರೆಗೆ ಸೇರುತ್ತಿದ್ದು, ಕಂಟಕವಾಗಿ ಪರಿಣಮಿಸಿದೆ.

‘ಕೆಂಗೇರಿ, ನಾಗದೇವನಹಳ್ಳಿ, ಮರಿಯಪ್ಪನ ಪಾಳ್ಯ ಹಾಗೂ ಸುತ್ತಲಿನ ಪ್ರದೇಶಗಳಿಂದ ಜನ ವಾಯುವಿಹಾರಕ್ಕೆ ಇಲ್ಲಿಗೇ ಬರುತ್ತಿದ್ದರು. ಈಗ ಅವರ ಸಂಖ್ಯೆ ಕುಸಿದಿದೆ. ಏಕೆಂದರೆ, ಕೆರೆ ದುರ್ನಾತ ಬೀರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಒಳಚರಂಡಿ ನೀರು ಹರಿಯುವುದರ ಕುರಿತು ಬಿಡಿಎಗೆ ದೂರು ನೀಡಿದ್ದರೂ ಪ್ರಯೋಜನವಿಲ್ಲ’ ಎಂದು ಸೂಲಿಕೆರೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಶೋಭಾ ಹರೀಶ್‌ ಬೇಸರ ವ್ಯಕ್ತಪಡಿಸುತ್ತಾರೆ.

‘ಕೆರೆಗಳು ಅಮೂಲ್ಯ, ಪ್ಲಾಸ್ಟಿಕ್‌ ಬಿಸಾಡಿ ಅವುಗಳನ್ನು ಹಾಳು ಮಾಡಬೇಡಿ’ ಎಂಬ ಸಂದೇಶ ಸಾರುವ ಫಲಕಗಳನ್ನು ಅಳವಡಿಸಲಾಗಿದೆ. ಆದರೆ, ತ್ಯಾಜ್ಯದಿಂದ ಹೂತು ಹೋಗುತ್ತಿರುವ ಕೆರೆಯನ್ನು ಕಾಪಾಡಲು ಕ್ರಮ ಕೈಗೊಂಡಿಲ್ಲ. ಸ್ವಚ್ಛತೆ ಬಗ್ಗೆ ನಿಗಾ ವಹಿಸಲು ಬಿಡಿಎ ಅಧಿಕಾರಿಗಳು ಇತ್ತ ಕಾಲಿಡುತ್ತಿಲ್ಲ. ಸ್ಥಳೀಯ ಶಾಸಕರು ಆರು ವರ್ಷಗಳಿಂದ ಕೆರೆಯ ಪರಿಶೀಲನೆ ನಡೆಸಿಲ್ಲ’ ಎಂದು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಕೆ.ವಿ.ಪುಟ್ಟಪ್ಪ ದೂರುತ್ತಾರೆ.

‘ಕಲುಷಿತ ನೀರಿನಿಂದ ಪಕ್ಷಿಗಳು‌ ಮತ್ತು ಮೀನುಗಳು ಸಾವನ್ನಪ್ಪಿವೆ. ಗಣೇಶ ಮೂರ್ತಿಗಳ ವಿಸರ್ಜನೆಗೆ ನಿರ್ಮಿಸಿರುವ ತೊಟ್ಟಿಯಲ್ಲಿ ಮೂರ್ತಿಗಳ ಅವಶೇಷಗಳನ್ನೂ ತೆರವುಗೊಳಿಸಿಲ್ಲ’ ಎಂದು ಸ್ಥಳೀಯ ನಿವಾಸಿ ಮಹದೇವಯ್ಯ ಬೇಸರ ವ್ಯಕ್ತಪಡಿಸುತ್ತಾರೆ.

**

ವಿಶ್ರಾಂತಿಗೆ ಆಸನಗಳ ಕೊರತೆ

‘ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಬರುವ ಸ್ಥಳೀಯರಿಗೆ ವಿಶ್ರಾಂತಿ ಪಡೆಯಲು ಆಸನಗಳ ಕೊರತೆ ಎದ್ದು ಕಾಣುತ್ತಿದೆ. ಈ ಕುರಿತು ಬಿಡಿಎಗೆ ತಿಳಿಸಿದರೂ, ನಿರ್ಲಕ್ಷ್ಯ ವಹಿಸಿದೆ. ಆದರೂ ಪಂಚಾಯ್ತಿಯಿಂದಲೇ ಅಲ್ಲಲ್ಲಿ ಆಸನಗಳನ್ನು ಕಲ್ಪಿಸಲಾಗಿದೆ. ಕೆರೆ ಅಭಿವೃದ್ಧಿಗೆ ಹೊರಟಿರುವ ಬಿಡಿಎ, ಅದರ ಅಂದವನ್ನೇ ಹಾಳು ಮಾಡುತ್ತಿದೆ’ ಎಂದು ಶೋಭಾ ಹರೀಶ್‌ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಎಲ್ಲಿಂದ ಕೊಳಚೆ ಬರುತ್ತಿದೆ?

‘ಚಿಕ್ಕಬಸ್ತಿ, ದೊಡ್ಡಬಸ್ತಿ, ಉಲ್ಲಾಳ, ಕೆಂಗೇರಿ ಉಪನಗರ, ಮಂಗನಹಳ್ಳಿ, ಮಾರುತಿನಗರ, ಚಿಕ್ಕನಹಳ್ಳಿ, ರಾಮಸಂದ್ರ ಹಾಗೂ ಸುತ್ತಲಿನ ಪ್ರದೇಶಗಳ ಒಳಚರಂಡಿ ನೀರು ಮತ್ತು ಕೈಗಾರಿಕೆಗಳ ತ್ಯಾಜ್ಯ ಕೆರೆ ಸೇರುತ್ತಿದೆ’ ಎಂದು ಹೇಳುತ್ತಾರೆ ಮಹದೇವಯ್ಯ.

‘ಕಾಸು ಸಿಗುವ ನಂಬಿಕೆ ಇಲ್ಲ’

‘2 ವರ್ಷಗಳಿಂದ ವಿವಿಧ ಪ್ರಭೇದಗಳ ಮೀನು ಮರಿಗಳನ್ನು (ವರ್ಷಕ್ಕೆ 60–70 ಸಾವಿರ ಮೀನಿನ ಮರಿ) ಕೆರೆಗೆ ಬಿಡುತ್ತಿದ್ದೇನೆ. ಈಗ ಅದರಿಂದ ಎರಡು ಕಾಸು ಸಿಗುವ ನಂಬಿಕೆ ಉಳಿದಿಲ್ಲ. 5ರಿಂದ 6 ಕೆ.ಜಿ ತೂಕದ ಸಾವಿರಾರು ಮೀನುಗಳು ಸಾಯುತ್ತಿವೆ. ಪಕ್ಷಿಗಳು ಸಹ ಮೀನುಗಳನ್ನು ತಿನ್ನುತ್ತಿವೆ. ಕಲುಷಿತ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸುತ್ತಾರೆ ಕೆರೆಗೆ ಮೀನು ಬಿಟ್ಟಿರುವ ವೆಂಕಟೇಶ್.

ಪಕ್ಷಿ ಸಂಕುಲದ ಆಗರ

ಈ ಕೆರೆ ವಲಸೆ ಹಕ್ಕಿಗಳು ಹಾಗೂ ಕೊಕ್ಕರೆಗಳ (ನೂರಾರು ಬಗೆಯ ದೇಶಿ ಮತ್ತು ವಿದೇಶಿ ಪಕ್ಷಿಗಳು ಬರುತ್ತವೆ) ತಾಣವಾಗಿದೆ. ಇನ್ನು, ಕೆರೆ ಏರಿಯಲ್ಲಿ ನಿರ್ಮಿಸಿರುವ ಉದ್ಯಾನ ವೈವಿಧ್ಯದಿಂದ ಕೂಡಿದೆ. ಕೆರೆಯ ಮಧ್ಯಭಾಗದಲ್ಲಿ ಪುಟ್ಟ ದ್ವೀಪವನ್ನೂ ನಿರ್ಮಿಸಲಾಗಿದೆ. ಸಂಜೆ ವೇಳೆ ಇಲ್ಲಿ ಸದಾ ಹಕ್ಕಿಗಳ ಕಲರವದಿಂದ ಕೂಡಿರುತ್ತದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !