ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಕ್ಸ್, ಮಾರ್ಕ್ಸ್‌ವಾದ ಮತ್ತು ಕನ್ನಡ ಸಂಸ್ಕೃತಿ

ಇಡೀ ಜಗತ್ತಿನಲ್ಲಿ ಕಳೆದ ನೂರು ವರ್ಷಗಳ ಎಲ್ಲ ಪ್ರಗತಿಪರ ಚಿಂತನೆಗಳೂ ಮಾರ್ಕ್ಸ್ ಚಿಂತನೆಗೆ ಋಣಿಯಾಗಿವೆ
Last Updated 4 ಮೇ 2018, 21:59 IST
ಅಕ್ಷರ ಗಾತ್ರ

ಗ್ರೀಕ್ ಪುರಾಣಗಳ ದೇವತೆ ಪ್ರೊಮಿಥ್ಯೂಸ್‌ಗೆ ಮಾನವರಿಗೆ ಸಹಾಯ ಮಾಡಲೇಬೇಕೆಂಬ ತೀವ್ರ ಕಾಳಜಿ; ಅವನು ದೇವತೆಗಳ ಕಣ್ಣು ತಪ್ಪಿಸಿ, ದೇವಲೋಕದಿಂದ ಬಳ್ಳಿಯ ಕಾಂಡದಲ್ಲಿ ಬೆಂಕಿಯನ್ನು ಅಡಗಿಸಿಕೊಂಡು ಬಂದು ಮಾನವರಿಗೆ ಕೊಡುತ್ತಾನೆ. ಬೆಂಕಿ ಮಾನವರ ಪ್ರಗತಿಯ ಹಾದಿ ತೆರೆಯುತ್ತದೆ.

ಫ್ಯೂಡಲ್ ಸಾಮಾಜಿಕ ರಚನೆಯನ್ನು ಪಲ್ಲಟಗೊಳಿಸಿ ನಿರ್ಗತಿಕರ ಸ್ಥಿತಿಯನ್ನು ಬದಲಿಸುವ ಸಿದ್ಧಾಂತ ರೂಪಿಸಲೆತ್ನಿಸಿದ ಕಾರ್ಲ್ಸ್ ಮಾರ್ಕ್ಸ್, ಪ್ರೊಮಿಥ್ಯೂಸ್ ಕತೆಯನ್ನು ಇಷ್ಟಪಡುತ್ತಿದ್ದ. ಚರಿತ್ರೆಯ ಚಕ್ರದ ನಡೆಯನ್ನೇ ಬದಲಿಸಲು ತತ್ವಜ್ಞಾನ, ಚರಿತ್ರೆ, ರಾಜಕೀಯ ವ್ಯವಸ್ಥೆಗಳನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದ ಮಾರ್ಕ್ಸ್ ಸಾಹಿತ್ಯದ ಸೂಕ್ಷ್ಮ ವಿದ್ಯಾರ್ಥಿಯಾಗಿದ್ದ. ಶೇಕ್ಸ್‌ಪಿಯರನ ನಾಟಕಗಳ ಮೂಲಕವೂ ಚರಿತ್ರೆಯ ಸಂಘರ್ಷಗಳನ್ನು ಅರಿಯಲೆತ್ನಿಸಿದ. ಮಾರ್ಕ್ಸ್ ಹಾಗೂ ಏಂಗೆಲ್ಸ್ ಬರೆದ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೊ’ ಜಗತ್ತಿನ ವಿಮೋಚನೆಯ ಸರ್ವಕಾಲದ ಪ್ರಣಾಳಿಕೆಯಾಗಿರುವಂತೆಯೇ ಅದ್ಭುತ ಕಾವ್ಯವೂ ಆಗಿದೆ.

‘ತತ್ವಜ್ಞಾನಿಗಳು ಜಗತ್ತನ್ನು ವ್ಯಾಖ್ಯಾನಿಸುತ್ತಾ ಬಂದಿದ್ದಾರೆ. ಈಗ ಇರುವ ಕೆಲಸವೆಂದರೆ ಜಗತ್ತನ್ನು ಬದಲಾಯಿಸುವುದು’ ಎಂದ ಮಾರ್ಕ್ಸ್ ಮಾತಿನಲ್ಲಿ ತತ್ವಜ್ಞಾನಿಗಳ ಕೆಲಸ ವ್ಯರ್ಥವೆಂಬ ಅರ್ಥವಿರಲಿಲ್ಲ; ಯಾವುದೇ ತತ್ವಜ್ಞಾನವನ್ನು ಕ್ರಿಯೆಗೆ ಸಿದ್ಧ ಮಾಡುವಂತೆ ಅಣಿಗೊಳಿಸಬೇಕೆಂಬ ತುಡಿತವಿತ್ತು. ಮಾರ್ಕ್ಸ್ ಚಿಂತನೆ ಇಪ್ಪತ್ತನೆಯ ಶತಮಾನದಲ್ಲಿ ಜಗತ್ತಿನ ಎಲ್ಲ ದೇಶಗಳ ಚಿಂತನೆ, ವ್ಯಾಖ್ಯಾನ, ಕಲೆ, ಚಳವಳಿ, ರಾಜಕಾರಣ ಹಾಗೂ ಬರವಣಿಗೆಗಳ ದಿಕ್ಕನ್ನು ಬದಲಿಸಿತು. ಮಾರ್ಕ್ಸ್ ಚಿಂತನೆಯನ್ನು ಗ್ರಹಿಸಿದ ಯಾರೂ ಯಥಾಸ್ಥಿತಿವಾದಿಗಳಾಗಿ ಉಳಿಯಲಾರರು.

ಮಾರ್ಕ್ಸ್ ಚಿಂತನೆ 1920ರ ಸುಮಾರಿಗೆ ಕಾರ್ಮಿಕ ಚಳವಳಿಗಳ ಮೂಲಕ ಕನ್ನಡನಾಡನ್ನು ಪ್ರವೇಶಿಸಿ ಇಲ್ಲಿನ ಚಳವಳಿ, ಸಂಸ್ಕೃತಿ, ರಾಜಕಾರಣಗಳ ನಡೆಯನ್ನು ಬದಲಿಸಿತು. ಕನ್ನಡ ನವೋದಯ ಘಟ್ಟದ ಕುವೆಂಪು ಕಾವ್ಯದಲ್ಲಿ ಕಮ್ಯುನಿಸ್ಟ್ ವ್ಯವಸ್ಥೆಯ ವಿಮರ್ಶೆ ಹಾಗೂ ಸಮಾನತೆಯ ಆಶಯಗಳೆರಡೂ ಹಣಿಕಿಕ್ಕಿವೆ. ಕಕ್ಕಿಲ್ಲಾಯ, ಉಪಾಧ್ಯಾಯ ಮೊದಲಾದವರು ಮಾರ್ಕ್ಸ್ ಚಿಂತನೆಗಳನ್ನು ಹಬ್ಬಿಸತೊಡಗಿದರು. ಕಮ್ಯುನಿಸ್ಟ್ ರಾಜಕಾರಣ ಹಾಗೂ ಕನ್ನಡ ಸಂಸ್ಕೃತಿಗಳ ನಂಟು ಗಾಢವಾಗತೊಡಗಿತು.

ಪ್ರಗತಿಶೀಲ, ಬಂಡಾಯ, ದಲಿತ ಹಾಗೂ ಸ್ತ್ರೀ ಘಟ್ಟಗಳು ಮಾರ್ಕ್ಸ್‌ವಾದದಿಂದ ಪ್ರತ್ಯಕ್ಷ, ಪರೋಕ್ಷ ಪ್ರಭಾವ ಪಡೆದಿವೆ. ದಲಿತ ಸಾಹಿತ್ಯದ ಆರಂಭದಲ್ಲೂ, ನಂತರದಲ್ಲೂ ಮಾರ್ಕ್ಸ್‌ವಾದದ ಛಾಯೆಯಿದೆ. ಮಾರ್ಕ್ಸ್‌ವಾದಿಗಳು ಕರ್ನಾಟಕದಲ್ಲಿ ದಲಿತ ಚಳವಳಿಯ ತರುಣರಿಗೂ, ತರುಣ ಮಾರ್ಕ್ಸಿಸ್ಟರಿಗೂ ಚಿಂತನ ಶಿಬಿರ ನಡೆಸುತ್ತಿದ್ದುದರಿಂದ ಕೂಡ ಕನ್ನಡ ದಲಿತ ಚಿಂತನೆಯಲ್ಲಿ ಮಾರ್ಕ್ಸ್‌ವಾದ ಬೆರೆತಿದೆ.

ಲೋಹಿಯಾ ಪ್ರಭಾವದಿಂದಾಗಿ ನವ್ಯ ಸಾಹಿತ್ಯ ಮಾರ್ಕ್ಸ್‌ವಾದದ ಬಗ್ಗೆ ಸಂದೇಹವನ್ನು ಬೆಳೆಸಿಕೊಂಡಿತು; ಆದರೆ ನವ್ಯದ ತೀಕ್ಷ್ಣತೆ ಮಾರ್ಕ್ಸ್‌ವಾದದ ವಿರೋಧದಿಂದಲೂ ಬಂತು. ಕನ್ನಡ ವಿಮರ್ಶೆಯ ಬಹುತೇಕ ಸಾಮಾಜಿಕ ವಿಮರ್ಶೆಯ ಮಾದರಿಗಳು ಮಾರ್ಕ್ಸ್‌ವಾದಿ ವಿಮರ್ಶೆಯಿಂದ ಪ್ರಭಾವಿತಗೊಂಡಿವೆ.

ಪ್ರಗತಿಶೀಲ ಘಟ್ಟದ ನಿರಂಜನ ನೇರವಾಗಿ ಮಾರ್ಕ್ಸ್‌ವಾದ ಹಾಗೂ ಕಮ್ಯುನಿಸ್ಟ್ ಪಾರ್ಟಿಯ ಜೊತೆಗೆ ಸಂಪರ್ಕ ಸಾಧಿಸಿದರು; ಅನಕೃ, ಕಟ್ಟೀಮನಿ, ತರಾಸು ಅವರ ಸಾಮಾಜಿಕ ಕಾಳಜಿ ಮಾರ್ಕ್ಸ್ ಚಿಂತನೆಯ ಸರಳ ಗ್ರಹಿಕೆಯಿಂದ ಹುಟ್ಟಿತು. ಪ್ರಗತಿಶೀಲ ಹಾಗೂ ಬಂಡಾಯ ಪ್ರಣಾಳಿಕೆಗಳೆರಡರಲ್ಲೂ ಮಾರ್ಕ್ಸ್ ಚಿಂತನೆಗಳ ಪ್ರೇರಣೆಯಿದೆ. ಸಾಹಿತ್ಯಕ ಸಂಸ್ಕೃತಿಯ ಮೂಲಕ ಕರ್ನಾಟಕದಲ್ಲಿ ಹಬ್ಬಿದ ಸಮತಾವಾದ ಸ್ಥಳೀಯ ಬೇರುಗಳನ್ನೂ ಪಡೆದಿದೆ.

ಕನ್ನಡ ರಂಗಭೂಮಿಗೆ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ಮೂಲಕವೂ ಬಂದ ಮಾರ್ಕ್ಸ್‌ವಾದ ಹಾಗೂ ಕಮ್ಯುನಿಸಂ ರಂಗಭೂಮಿಯ ಮೂಲಕ ನಾಡಿನುದ್ದಕ್ಕೂ ಹಬ್ಬಿದೆ. 1979ರಲ್ಲಿ ‘ಸಮುದಾಯ’ ತಂಡದ ಸಾಂಸ್ಕೃತಿಕ ಜಾಥಾ ಕರ್ನಾಟಕದಲ್ಲಿ ಎಡಪಂಥೀಯ ರಂಗಭೂಮಿಯನ್ನು ಹಾಗೂ ಕಮ್ಯುನಿಸ್ಟ್ ಚಿಂತನೆಯನ್ನು ನೆಲೆಯೂರಿಸಿತು.

ಸಿಜಿಕೆ, ಪ್ರಸನ್ನ, ಗಂಗಾಧರಮೂರ್ತಿ, ಮಾಲತಿ ಮೊದಲಾದವರ ಜೊತೆ ಹತ್ತಾರು ನಟ, ನಟಿಯರು ಹಾಡುಗಳು, ಬೀದಿ ನಾಟಕಗಳ ಮೂಲಕ ಮಾರ್ಕ್ಸ್‌ವಾದದ ಸಂಘರ್ಷ, ವೈಚಾರಿಕ ಆಲೋಚನೆಯನ್ನು, ಸಾಮಾನ್ಯರು ತಮ್ಮ ಸ್ಥಿತಿಯನ್ನು ತಾವೇ ಬದಲಾಯಿಸುವ ಸಾಧ್ಯತೆಗಳನ್ನು ಬಿತ್ತಿದರು. ರಂಗಭೂಮಿಯಲ್ಲಿ, ಬೀದಿ ನಾಟಕಗಳಲ್ಲಿ ಅಲಕ್ಷಿತರ ದನಿ ಕೇಳಿಬರತೊಡಗಿದಂತೆ, ಕರ್ನಾಟಕದ ಆಧುನಿಕ ಜನಪ್ರಿಯ ಸಂಸ್ಕೃತಿ ನಿಜವಾದ ಜನಸಂಸ್ಕೃತಿಯಾಯಿತು.

ದಲಿತಸಂಘರ್ಷ ಸಮಿತಿಯ ಹೋರಾಟದ ಹಾಡುಗಳು ಗದ್ದರ್ ಹಾಡುಗಳ ಮೂಲಕ ಬಂದ ವರ್ಗ ಪ್ರಜ್ಞೆಯನ್ನೂ ಹಬ್ಬಿಸಲೆತ್ನಿಸಿದವು. ಡಿ.ಆರ್. ನಾಗರಾಜ್, ಜಿ. ರಾಜಶೇಖರ್, ರಾಜೇಂದ್ರ ಚೆನ್ನಿಯವರ ಬರಹಗಳು ಕನ್ನಡ ವಿಮರ್ಶೆಯಲ್ಲಿ, ಸಂಸ್ಕೃತಿ ಚಿಂತನೆಯಲ್ಲಿ ಮಾರ್ಕ್ಸ್‌ವಾದಿ ವಿಮರ್ಶೆಯ ಸೂಕ್ಷ್ಮ ಎಳೆಗಳನ್ನು ಬೆಸೆದಿವೆ. ಬಂಡಾಯ ಸಾಹಿತ್ಯದಲ್ಲಿ ಬರಗೂರು ರಾಮಚಂದ್ರಪ್ಪನವರಿಂದ ಹಿಡಿದು ಹಲವರ ನೋಟಕ್ರಮಗಳು ಮಾರ್ಕ್ಸ್ ಗ್ರಹಿಸಿದ ಸಮಾಜ, ಸಂಸ್ಕೃತಿಗಳ ಗ್ರಹಿಕೆಗಳನ್ನು ಆಧರಿಸಿವೆ. ಸಮಾಜವಾದಿ ಶಾಂತವೇರಿ ಗೋಪಾಲಗೌಡರು ಕೂಡ ಕೊನೆಗೆ ವರ್ಗಸಂಘರ್ಷವೊಂದೇ ಉತ್ತರ; ‘ರಕ್ತಕ್ರಾಂತಿಯೇ ಸೂಕ್ತ’ ಎಂಬ ನಿಲುವಿಗೆ ತಲುಪಿದ್ದರು.

90ರ ದಶಕದಲ್ಲಿ ಸೋವಿಯತ್ ಯೂನಿಯನ್ ಒಡೆದಾಗ ಕರ್ನಾಟಕದಲ್ಲೂ ಮಾರ್ಕ್ಸ್‌ವಾದದ ಬಗ್ಗೆ ಅನುಮಾನಗಳೆದ್ದವು.

ಆದರೆ ಬಂಡವಾಳಶಾಹಿಯ ವರ್ತನೆ ಕುರಿತ ಮಾರ್ಕ್ಸ್ ಚಿಂತನೆಗಳು ಜಾಗತೀಕರಣ-ಖಾಸಗೀಕರಣದ ವಿನಾಶಕರ ಮುಖವನ್ನು ಗ್ರಹಿಸಲು ಕನ್ನಡ ಚಿಂತಕರಿಗೆ ನೆರವಾದವು. ಆದರೆ ಕಾರ್ಪೊರೇಟ್ ವಲಯಗಳು, ಸರ್ಕಾರಗಳು ಹಾಗೂ ಕಾನೂನಿನ ಕುಣಿಕೆಗಳು ಹೋರಾಟದ ಹಕ್ಕುಗಳನ್ನು ದಮನ ಮಾಡತೊಡಗಿದ್ದರಿಂದ ಪ್ರತಿಭಟನೆಗಳು ಕಡಿಮೆಯಾದವು. ಖಾಸಗಿ ಕ್ಷೇತ್ರಗಳ ವಾಚಾಳಿಗಳು ಹಾಗೂ ಬಲಪಂಥೀಯರು ಯಾವ ಅಧ್ಯಯನವೂ ಇಲ್ಲದೆ ಮಾರ್ಕ್ಸ್‌ವಾದದ ವಿರುದ್ಧ ಅಸಹನೆ ಬಿತ್ತಲೆತ್ನಿಸಿದರು.

2011ರಲ್ಲಿ ಟೆರಿ ಈಗಲ್ಟನ್ ಬರೆದ ‘ವೈ ಮಾರ್ಕ್ಸ್ ವಾಸ್ ರೈಟ್’ ಪುಸ್ತಕ ‘ಮಾರ್ಕ್ಸ್‌ವಾದವನ್ನು ಒಪ್ಪಿದ್ದೇವೆಂದು ಹೇಳಿಕೊಳ್ಳುತ್ತಿದ್ದ ಸರ್ಕಾರಗಳು ಚೆಲ್ಲುತ್ತಿದ್ದ ಹಿಂಸೆ ಹಾಗೂ ಮಾರ್ಕ್ಸ್‌ವಾದದ ನಿರಂತರ ಸಾಧ್ಯತೆ’ ಎರಡನ್ನೂ ಚರ್ಚಿಸುತ್ತದೆ; ಹಾಗೆಯೇ, ‘ಪ್ರಜಾ ಪ್ರಭುತ್ವವಾದಿ’ ಸರ್ಕಾರಗಳು ಸೃಷ್ಟಿಸುತ್ತಿರುವ ಹಿಂಸೆಗಳನ್ನೂ ಚರ್ಚಿಸುತ್ತದೆ. ಈ ಪುಸ್ತಕದ ಕನ್ನಡ ಅನುವಾದಗಳು ಕೂಡ ಕರ್ನಾಟಕದಲ್ಲಿ ಚರ್ಚೆಯಾಗಿವೆ.

ಮಾರ್ಕ್ಸ್‌ವಾದ ಕ್ರಿಯೆ, ಪ್ರಯೋಗಗಳ ಜೊತೆಗೇ ಬೆಳೆಯುವ ಸಿದ್ಧಾಂತವಾದ್ದರಿಂದ ಚಳವಳಿಯ ಬಲವಿಲ್ಲದೆ ಅದು ಬೆಳೆಯಲಾರದು. ಖಾಸಗಿ ವಲಯ ತನ್ನ ಕೆಲಸಗಾರರ ಹಕ್ಕುಗಳನ್ನು ಮೊಟಕಾಗಿಸಿರುವ ಈ ಕಾಲದಲ್ಲಿ ಸಾರ್ವಜನಿಕ ವಲಯದಲ್ಲಿ ಕಾರ್ಮಿಕ ಸಂಘಟನೆಗಳು ಅಷ್ಟಿಷ್ಟು ಉಳಿದಿವೆ.

ಕಾರ್ಮಿಕರ ದುಡಿಮೆಯಿಂದಲೇ ಲಾಭದಲ್ಲಿರುವ ಸರ್ಕಾರಿ ಫ್ಯಾಕ್ಟರಿಗಳಲ್ಲಿ ವಿದೇಶಿ ಬಂಡವಾಳದ ಆಕ್ರಮಣ ಶುರುವಾದರೂ ಎಚ್ಚೆತ್ತುಕೊಳ್ಳದ ಕಾರ್ಮಿಕರಿರುವಾಗ ಮಾರ್ಕ್ಸ್ ರೂಪಿಸಿದ ಬಿಡುಗಡೆಯ ಮಾರ್ಗಗಳು ಬೆಳೆಯುವುದು ಕಷ್ಟ. ಆದರೂ ಇವತ್ತು ಅಂಗನವಾಡಿ ಕಾರ್ಯಕರ್ತೆಯರನ್ನಾಗಲೀ, ಅಸಂಘಟಿತ ವಲಯಗಳ ಕೆಲಗಾರರನ್ನಾಗಲೀ ಕಮ್ಯುನಿಸ್ಟರು ಮಾತ್ರ ಸಂಘಟಿಸಬಲ್ಲರು.

ಕಮ್ಯುನಿಸ್ಟರಲ್ಲಿ ದೀರ್ಘ ಹೋರಾಟಗಳನ್ನು ಕಟ್ಟಬಲ್ಲ ಅನುಭವ ಸೀಮಿತವಾಗಿಯಾದರೂ ಉಳಿದಿದೆ. ಇತರ ಪ್ರಗತಿಪರ ವೇದಿಕೆಗಳಲ್ಲಿ ಇಂಥ ಸ್ಪಷ್ಟತೆ, ಬದ್ಧತೆಗಳಿಲ್ಲ. ಕೋಮುವಾದಕ್ಕೆ ಪ್ರಬಲ ಪ್ರತಿರೋಧ ಕಮ್ಯುನಿಸ್ಟರಿಂದಲೂ ರೂಪುಗೊಂಡಿದೆ. ಬಿ.ಎಂ. ಪುಟ್ಟಯ್ಯನವರ ಚಿಂತನೆಯು ಅಂಬೇಡ್ಕರ್ ಮತ್ತು ಮಾರ್ಕ್ಸ್ ಚಿಂತನೆಗಳನ್ನು ಒಟ್ಟಿಗೆ ಇಟ್ಟು ದಲಿತ– ಶ್ರಮಿಕ ವರ್ಗದ ಕಷ್ಟಗಳನ್ನು ಗ್ರಹಿಸಲು ಯತ್ನಿಸಿದೆ.

ಇಡೀ ಜಗತ್ತನ್ನು ಮಾರುಕಟ್ಟೆಯನ್ನಾಗಿಸಿ ಜನರೆಲ್ಲ ತಾವು ಹೇಳಿದ್ದನ್ನು ಕೊಳ್ಳಬೇಕು ಎನ್ನುತ್ತಾ, ರಾಜಕಾರಣ, ಸಮಾಜ, ಸಂಸ್ಕೃತಿ ಎಲ್ಲವನ್ನೂ ಮಾರುಕಟ್ಟೆಯನ್ನಾಗಿಸುವ ದುರಾಸೆಯ ನವಬಂಡವಾಳಶಾಹಿಯ ಕೇಡಿಗ ಕಾಲವಿದು; ದೇಶದ ಉದ್ಯಮಗಳನ್ನೆಲ್ಲ ವಶಪಡಿಸಿಕೊಂಡು ರಾಜಕೀಯವನ್ನೂ ಸಮಾಜವನ್ನೂ ತಾನೇ ನಿಯಂತ್ರಿಸುತ್ತೇನೆ ಎಂಬ ದುರಹಂಕಾರಿ ಉದ್ಯಮಿಗಳ ಕಾಲ ಇದು. ಇಂಥ ಹುಸಿ ‘ಪ್ರಜಾಪ್ರಭುತ್ವ’ಗಳಲ್ಲಿ ಜನರೂ, ಸರ್ಕಾರಗಳೂ ಉದ್ಯಮಪತಿಗಳ ಗುಲಾಮರಾಗತೊಡಗುತ್ತಾರೆ.

ಈ ಅಪಾಯ ಕುರಿತ ಎಚ್ಚರ ಹಾಗೂ ಪ್ರತಿಭಟನೆ ಜಗತ್ತಿನಲ್ಲಿ ರೂಪುಗೊಳ್ಳತೊಡಗಿದೆ. ಕರ್ನಾಟಕದಲ್ಲೂ ‘ಮಾರ್ಕ್ಸ್-200’ ಸಂದರ್ಭದಲ್ಲಿ ಇಂಥದೊಂದು ಎಚ್ಚರ ಮೂಡಲಿ. ದುಡಿಯುವ ವರ್ಗಗಳು ತಮ್ಮ ಮಾಲೀಕರು ಹಾಗೂ ಬಂಡವಾಳಶಾಹಿ ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳಲು ಕಮ್ಯುನಿಸಮ್ಮಿನ ವಿರುದ್ಧ ಹಬ್ಬಿಸುವ ಸುಳ್ಳುಗಳ ಗಿಳಿಪಾಠ ಒಪ್ಪಿಸುವುದನ್ನು ನಿಲ್ಲಿಸಿ, ಮಾರ್ಕ್ಸ್ ಚಿಂತನೆಗಳನ್ನು ಗ್ರಹಿಸಿ ತಂತಮ್ಮ ಬಿಡುಗಡೆಯ ಮಾರ್ಗಗಳನ್ನು ಕಂಡುಕೊಳ್ಳಲಿ. ಮಾರ್ಕ್ಸ್‌ವಾದಿಗಳು ಅಂಬೇಡ್ಕರ್ ಚಿಂತನೆಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆಂದು ಕುಪಿತರಾಗುವ ದಲಿತ ಚಿಂತಕರಿಗೂ ಮಾರ್ಕ್ಸ್‌ವಾದದ ಈ ಕಾಲದ ವ್ಯಾಖ್ಯಾನಗಳು ದಕ್ಕಲಿ.

ಎಲ್ಲ ಚಿಂತನೆ ಹಾಗೂ ಕ್ರಿಯೆಗಳನ್ನು ನಿರ್ಗತಿಕರನ್ನು ಮನಸ್ಸಿನಲ್ಲಿಟ್ಟುಕೊಂಡು ರೂಪಿಸಬೇಕು ಎಂಬ ಮಾರ್ಕ್ಸ್‌ವಾದದ ಆಶಯ ಹಾಗೂ ಎಂಥ ಭೌತಿಕ ಸ್ಥಿತಿಯನ್ನಾದರೂ ವ್ಯವಸ್ಥಿತ ಅಧ್ಯಯನ ಹಾಗೂ ಸಂಘಟಿತ ಕ್ರಿಯೆಗಳಿಂದ ಬದಲಿಸಬಹುದು ಎಂಬ ಕನಸು ಸದಾ ನಮ್ಮಲ್ಲಿರಲಿ. ಕಳೆದ ನೂರು ವರ್ಷಗಳಲ್ಲಿ ಜಗತ್ತಿನ ಎಲ್ಲ ಪ್ರಗತಿಪರ ಚಿಂತನೆಗಳು ಕಾರ್ಲ್ ಮಾರ್ಕ್ಸ್ ಹಾಗೂ ಏಂಗೆಲ್ಸರ ಚಿಂತನೆಗಳಿಗೆ ಋಣಿಯಾಗಿವೆ ಎಂಬ ಸತ್ಯ ಎಲ್ಲರಿಗೂ ಗೊತ್ತಿರಲಿ.

(ನಟರಾಜ್ ಹುಳಿಯಾರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT