ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ರಿಂದ ನಾಡದೋಣಿ ಮೀನುಗಾರಿಕೆ ಆರಂಭ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಪ್ರಜಾವಾಣಿ ಫೋನ್‌ ಇನ್‌ ಕಾರ್ಯಕ್ರಮ
Last Updated 11 ಏಪ್ರಿಲ್ 2020, 11:57 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇದೇ 15 ರಿಂದ ನಾಡದೋಣಿ, ಸಾಂಪ್ರದಾಯಿಕ ದೋಣಿಗಳ ಮೀನುಗಾರಿಕೆಯನ್ನು ಆರಂಭಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಕರೆಗೆ ಉತ್ತರಿಸಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು.

ಬಂದರು, ಧಕ್ಕೆಗಳಲ್ಲಿ ಮೀನುಗಳನ್ನು ಇಳಿಸುವುದರಿಂದ ಜನರ ದಟ್ಟಣೆ ಉಂಟಾಗುತ್ತದೆ. ಅದಕ್ಕಾಗಿ ನಾಡದೋಣಿಗಳ ಮೀನುಗಳನ್ನು ಜನಸಂದಣಿ ಇಲ್ಲದ ಪ್ರದೇಶಗಳಲ್ಲಿ ಇಳಿಸಲಾಗುವುದು. ನಂತರ ಮೀನುಗಾರರ ಮಹಿಳೆಯರ ಮೂಲಕ ಮನೆಗಳ ಬಾಗಿಲಿಗೇ ಮೀನುಗಳ ಮಾರಾಟ ಮಾಡಲಾಗುವುದು ಎಂದು ಹೇಳಿದರು.

ಮೀನುಗಾರಿಕೆ ನಿಷೇಧದ ಅವಧಿಯನ್ನು ಕಡಿಮೆ ಮಾಡುವಂತೆ ಮೀನುಗಾರರ ಸಂಘಗಳಿಂದ ಮನವಿ ಬಂದಿದ್ದು, ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಕೂಲಂಕಷವಾಗಿ ಚರ್ಚಿಸಿ, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಸಮುದ್ರದಲ್ಲಿ ಅತಿ ಅಪರೂಪದ ಮೀನುಗಳ ಕೃಷಿಗೆ ಒತ್ತು ನೀಡಲು ಮೂಲ್ಕಿಯಲ್ಲಿ ಪಂಜರು ಕೃಷಿಯ ಮೂಲಕ ಇಂತಹ ಅಪರೂಪದ ಮೀನುಗಳ ಉತ್ಪಾದನೆ ಮಾಡಲಾಗುವುದು ಎಂದರು.

ಈ ಬಾರಿ ಮೀನುಗಾರಿಕೆಗೆ ಇತಿಹಾಸದಲ್ಲಿಯೇ ಗರಿಷ್ಠ ಅನುದಾನ ಒದಗಿಸಲಾಗಿದೆ. ಉಳಿತಾಯ ಪರಿಹಾರ ಯೋಜನೆಯಡಿ ಕಳೆದ ಮೂರು ವರ್ಷಗಳಿಂದ ಬರಬೇಕಿದ್ದ ಬಾಕಿ ಹಣ ಬಿಡುಗಡೆ ಹಂತದಲ್ಲಿದೆ. ಕೇಂದ್ರ ಸರ್ಕಾರದ ಪಾಲು ₹5.50 ಕೋಟಿ ಬಿಡುಗಡೆ ಮಾಡಿದ್ದು, ರಾಜ್ಯದ ಪಾಲು ₹5.50 ಕೋಟಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

23 ಸಾವಿರ ಮೀನುಗಾರ ಮಹಿಳೆಯರು ಪಡೆದಿರುವ ಸಾಲ ಮನ್ನಾದ ಹಣ ₹61 ಕೋಟಿಯನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು. 2–3 ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಸ್ವಯಂ ದೃಢೀಕರಣ ಪಡೆದು, ಭೂಮಿ ತಂತ್ರಾಂಶದ ಮೂಲಕ ಹಣ ಜಮಾ ಆಗಲಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಜೆಟ್ಟಿಯ ಮೂರನೇ ಹಂತದ ವಿಸ್ತರಣೆ, ಹೆಜಮಾಡಿ ಕಿರು ಬಂದರು, ಹಂಗಾರುಕಟ್ಟೆ ಜೆಟ್ಟಿ ಹಾಗೂ ಗಂಗೊಳ್ಳಿ ಜೆಟ್ಟಿಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT