ದಿನೇಶ್‌ ಗುಂಡೂರಾವ್‌, ಈಶ್ವರ ಖಂಡ್ರೆ ಪದಗ್ರಹಣ

7

ದಿನೇಶ್‌ ಗುಂಡೂರಾವ್‌, ಈಶ್ವರ ಖಂಡ್ರೆ ಪದಗ್ರಹಣ

Published:
Updated:

ಬೆಂಗಳೂರು: ‘ನಾನು ಯಾರೊಬ್ಬರ ಪರವೂ ಅಲ್ಲ. ಪಕ್ಷದ ಪರ. ಪಕ್ಷಕ್ಕೆ ತೊಂದರೆ ನೀಡುವವರು ಯಾರೇ ಆಗಿದ್ದರೂ ಅಂಥವರಿಗೆ ಬೆಂಬಲವಿಲ್ಲ. ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕಕ್ಕಾಗಿ ಭಾರೀ ಲಾಬಿ ನಡೆದಿದೆ. ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷಕ್ಕೆ ತೊಂದರೆ ಕೊಟ್ಟರೆ ಸಹಿಸುವುದಿಲ್ಲ’ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಎಚ್ಚರಿಕೆ ನೀಡಿದರು. 

ಬುಧವಾರ ನಡೆದ ಕಾರ್ಯಕ್ರಮದಲ್ಲಿ ದಿನೇಶ್ ಗುಂಡೂರಾವ್ ಹಾಗೂ ಈಶ್ವರ ಖಂಡ್ರೆ ಅವರಿಗೆ ಕಾಂಗ್ರೆಸ್ ಪಕ್ಷದ ಬಾವುಟ ನೀಡುವ ಮೂಲಕ ನಿರ್ಗಮಿತ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅಧಿಕಾರ ಹಸ್ತಾಂತರ ಮಾಡಿದರು. ಇದೇ ಸಂದರ್ಭದಲ್ಲಿ ದಿನೇಶ್‌ ಗುಂಡೂರಾವ್‌ ಮಾತನಾಡಿದರು.

ಎಂ.ಬಿ.ಪಾಟೀಲ್‌, ಹೆಚ್.ಕೆ.ಪಾಟೀಲ್‌ ಇದೇ ವೇದಿಕೆಯಲ್ಲಿ ಇದ್ದರು. 

37 ಸ್ಥಾನ ಪಡೆದ ಜೆಡಿಎಸ್‌ಗೆ ಸಿಎಂ ಸ್ಥಾನ ಬಿಟ್ಟುಕೊಟ್ಟು, ಮೈತ್ರಿ ಸರ್ಕಾರ ರಚನೆಗೆ ಹೈಕಮಾಂಡ್‌ ಏಕೆ ಆದೇಶ ನೀಡಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ದುರ್ಬಲರು, ಸಾಮಾಜಿಕ ನ್ಯಾಯದ ಪರವಾಗಿ ಈ ಸರ್ಕಾರ ನಿಲ್ಲಬೇಕು. ಇದರೊಂದಿಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ. ದೇಶದಲ್ಲಿ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಸೋತಿದೆ. ಕಾಂಗ್ರೆಸ್‌ಗೆ ಭವಿಷ್ಯ ಇದೆ. ರಾಹುಲ್ ಗಾಂಧಿ ಕೈ ಅನ್ನು ಬಲಪಡಿಸಬೇಕಿದೆ ಎಂದರು. 

ಕಲ್ಬುರ್ಗಿ ಹತ್ಯೆ, ಗೌರಿ ಲಂಕೇಶ ಹತ್ಯೆ ಆಯ್ತು. ಯಾಕೆ ಈ ಹತ್ಯೆಗಳು ನಡೆದವು ಎಂಬುದು ಎಲ್ಲರಿಗೂ ತಿಳಿದಿದೆ. ವಿರುದ್ಧ ಮಾತನಾಡಿದರೆ ಅವರನ್ನು ಧಮನ ಮಾಡುವ ಹಂತಕ್ಕೆ ಬಿಜೆಪಿ ತಲುಪಿದೆ. ಕೋಮು ಸೌಹಾರ್ದತೆಗೆ ದೇಶದಲ್ಲಿ ಧಕ್ಕೆ ಉಂಟಾಗಿದೆ. ಇಂತಹ ದೊಡ್ಡ ಸವಾಲನ್ನು ನಾವು ಎದುರಿಸಬೇಕಿದೆ ಎಂದು ಕರೆ ನೀಡಿದರು. 

ಸಿದ್ದರಾಮಯ್ಯ ಈಗಲೂ ಜನಪ್ರಿಯ!

ಈಗಲೂ ಸಿದ್ದರಾಮಯ್ಯನವರೇ ಜನಪ್ರಿಯ ನಾಯಕರು. ನೀವು ಸೋತಿರಬಹುದು, ಪಕ್ಷ ಅಧಿಕಾರಕ್ಕೆ ಬರದೇ ಇರಬಹುದು. ಕೆಲವು ದಿನಗಳು ಕಳೆಯಲಿ, ಜನರು ಮತ್ತೆ ನೀವು ನೀಡಿದ ಕಾರ್ಯಕ್ರಮಗಳನ್ನು ನೆನಪಿಸಿಕೊಳ್ಳುತ್ತಾರೆ ಎಂದು ಹೊಗಳಿಕೆ ಮಾತುಗಳನ್ನು ಆಡಿದರು. 

ನನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದ ಪರಮೇಶ್ವರ ಅವರೇ, ನನಗೆ ಅಧ್ಯಕ್ಷ ಸ್ಥಾನ ಹಸ್ತಾಂತರಿಸಿದ್ದಾರೆ ಎಂದು ಹೆಮ್ಮೆಯ ಭಾವ ವ್ಯಕ್ತಪಡಿಸಿದರು. 

ಸಿದ್ದರಾಮಯ್ಯ ಹಾಗೂ ಪರಮೇಶ್ವರ ನಡುವೆ ಶಮನವಾಗದ ಅಸಮಾಧಾನ?

20 ನಿಮಿಷದ ಭಾಷಣದಲ್ಲಿ ಡಿಸಿಎಂ ಪರಮೇಶ್ವರ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಪ್ರಸ್ತಾಪ ಮಾಡಲಿಲ್ಲ. ಪಕ್ಷದ ಸಹಕಾರ ಕೊಟ್ಟವರ ಪಟ್ಟಿಯಲ್ಲಿಯೂ ಸಿದ್ದರಾಮಯ್ಯ ಹೆಸರು ಪ್ರಸ್ತಾಪವಿರಲಿಲ್ಲ.

ಸೋಲಿನ ಕಾರಣ ತೆರೆದಿಟ್ಟ ಸಿದ್ದರಾಮಯ್ಯ

ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿ ಎಂಟು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಅವರ ಅವಧಿಯಲ್ಲಿ ಎಲ್ಲ ಚುನಾವಣೆ ನಡೆದಿದೆ. ಪರಸ್ಪರ ಹೊಂದಾಣಿಕೆಯಿಂದ ನಾವು ಕಾರ್ಯ ನಿರ್ವಹಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು. 

‘ಐದು ವರ್ಷ ನಾವು ನುಡಿದಂತೆ ನಡೆದಿದ್ದೇವೆ. ಹಾಗಾಗಿ, ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ನಂಬಿಕೆ ಇತ್ತು. ನಮ್ಮ ಸೋಲಿಗೆ ಬಿಜೆಪಿಯ ಅಪಪ್ರಚಾರ ಹಾಗು ಹಿಂದ್ವುತ ಕಾರಣ. ನಮ್ಮ‌ ಪಕ್ಷದ ವಿರುದ್ಧ ಮನೆ ಮನೆಗೆ ಹೋಗಿ ಸಂಘ ಪರಿವಾರದವರು ಅಪಪ್ರಚಾರ ಮಾಡಿದ್ದರು. 

ಆದರೆ, ನಾವು ಜನರಿಗೆ ಸರಿಯಾದ ಮಾಹಿತಿ ಕೊಡುವುದರಲ್ಲಿ ಹಾಗೂ ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಗಿದ್ದೇವೆ ಎಂದು ಅನಿಸುತ್ತೆ’ ಹೀಗೆ ಕಾಂಗ್ರೆಸ್ ಸೋಲಿನ ಬಗ್ಗೆ ಮೊದಲ ಬಾರಿ ಸಿದ್ದರಾಮಯ್ಯ ಮಾಹಿತಿ ತೆರೆದಿಟ್ಟರು. 

ಮತೀಯವಾದಿಗಳನ್ನು ದೂರ ಇಡಲು ಜೆಡಿಎಸ್ ಜೊತೆ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಹಿಂದಿನ ಸರ್ಕಾರದ ಎಲ್ಲ ಯೋಜನೆಗಳ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಅನ್ನಭಾಗ್ಯ ಅಕ್ಕಿ ಏಳರಿಂದ ಐದು ಕೆಜಿ ಕಡಿತ ವಿಚಾರವಾಗಿ, ‘ಅಕ್ಕಿ ಕಡಿತ ಮಾಡಬೇಡಿ 7 ಕೆಜಿ ಅಕ್ಕಿ ನೀಡಿ. ಪೆಟ್ರೋಲ್ ಹಾಗು ಡೀಸೆಲ್ ಮೇಲಿರುವ ಹಾಕಿರುವ ಶೇಕಡ 2ರಷ್ಟು ಸೆಸ್ ವಾಪಸ್ ತೆಗದುಕೊಳ್ಳಿ ಎಂದು ಸಿಎಂಗೆ ಪತ್ರ ಬರೆದಿದ್ದೇನೆ’ ಎಂದರು. 

ನಮ್ಮ ಮುಂದೆ ಈಗ ಲೋಕಸಭಾ ಚುನಾವಣೆ ಇದೆ. ಬಿಜೆಪಿಯವರು ಸುಳ್ಳು- ಪೊಳ್ಳು ಮಾಹಿತಿ ನೀಡುತ್ತಾರೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಹುಷರಾಗಿಬೇಕು. ಕರ್ನಾಟಕದಲ್ಲಿ 20 ಲೋಕಸಭಾ ಕ್ಷೇತ್ರಗಳನ್ನ ಗೆಲ್ಲಬೇಕು. ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ. ಕೋಮುವಾದಿಗಳು ಮತ್ತೆ ಅಧಿಕಾರಕ್ಕೆ ಬರಬಾರದು.‌ ಹೀಗಾಗಿ ಜ್ಯಾತತೀತ ಶಕ್ತಿಗಳು ಮತ್ತೆ ಒಂದಾಗುತ್ತಿವೆ ಎಂದು ಹೇಳಿದರು. 

‘ಸಿದ್ದರಾಮಯ್ಯ ಉತ್ತಮ ಯೋಜನೆ ನೀಡಿದ್ದಾರೆ. ಆದರೆ ಪ್ರಸ್ತುತ ನಮ್ಮ ಐಕ್ಯತೆ ಮುಖ್ಯವಾಗಿದೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಶಾಸಕರು ಕೆಲಸ ಮಾಡಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬುದ್ಧಿಕಲಿಸಬೇಕಿದೆ. ದಿನೇಶ್,ಈಶ್ವರ್ ಖಂಡ್ರೆ ಪಕ್ಷ ಗಟ್ಟಿಗೊಳಿಸಲಿದ್ದಾರೆ. ಅವರಿಗೆ ಹಿರಿಯ ನಾಯಕರು ಸಾಥ್ ನೀಡಲಿದ್ದಾರೆ’ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು. 

ದಿನೇಶ್, ಈಶ್ವರ್ ಖಂಡ್ರೆ ಉತ್ತಮ ಯುವನಾಯಕರು.ಈಶ್ವರ್ ಖಂಡ್ರೆಯಿಂದ ಉತ್ತಕರ್ನಾಟಕ್ಕೆ ಮಹತ್ವ ಸಿಕ್ಕಿದೆ. ಇವರಿಬ್ಬರಿಂದ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳು ಬರಲಿವೆ ಎಂದು ಕೆ.ಸಿ.ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದರು. 

‘2010ರಲ್ಲಿ ಸೋನಿಯಾ ಗಾಂಧಿ ನನಗೆ ಜವಾಬ್ದಾರಿ ನೀಡಿದ್ದರು. ಅದನ್ನು ಇಲ್ಲಿಯವರೆಗೆ ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಅನೇಕ ಚುನಾವಣೆಗಳನ್ನು ನಿಭಾಯಿಸಿದ್ದೇನೆ. ದಿನೇಶ್ ಗುಂಡುರಾವ್, ಈಶ್ವರ್ ಖಂಡ್ರೆ ನೇತ್ರತ್ವದಲ್ಲಿ ಪಕ್ಷ ಮತ್ತಷ್ಟು ಸದೃಢವಾಗಲಿದೆ’ ಎಂದು ಜಿ.ಪರವೇಶ್ವರ ಭರವಸೆ ವ್ಯಕ್ತಪಡಿಸಿದರು. 

* ಮುಂದಿನ ಲೋಕಸಭಾ ಚುನಾವಣೆಯಲ್ಲಿ 2೦ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತೇವೆ. ಬೇರು ಮಟ್ಟದಲ್ಲಿ ಪಕ್ಷವನ್ನ ಮತ್ತೆ ಗಟ್ಟಿ ಮಾಡಿ ಮುಂದಿನ ಲೋಕಸಭಾ ಚುನಾವಣೆ ಎದುರಿಸುತ್ತೇವೆ. 
– ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !