ಲಕ್ಷ್ಮಿಗೆ ಕೊಕ್‌; ಪುಷ್ಪಾಗೆ ಲಕ್‌

7
ಜಾರಕಿಹೊಳಿ ಸಹೋದರರ ಮೇಲುಗೈ

ಲಕ್ಷ್ಮಿಗೆ ಕೊಕ್‌; ಪುಷ್ಪಾಗೆ ಲಕ್‌

Published:
Updated:
Deccan Herald

ಬೆಂಗಳೂರು: ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ನಡೆಯುತ್ತಿದ್ದ ಜಟಾಪಟಿ ತೆರೆ ಕಂಡಿದ್ದು, ಕೊನೆಗೂ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ರಮೇಶ ಜಾರಕಿಹೊಳಿ ಬಣ ಮೇಲುಗೈ ಸಾಧಿಸಿದೆ.

ಶಾಸಕಿಯಾಗಿ ಆಯ್ಕೆಯಾದ ಬಳಿಕ ಅಧ್ಯಕ್ಷೆಯಾಗಿಯೂ ಮುಂದುವರಿದಿದ್ದ ಲಕ್ಷ್ಮಿ ಹೆಬ್ಬಾಳಕರ ಅವರಿಂದ ಮಹಿಳಾ ಘಟಕವನ್ನು ಕಿತ್ತುಕೊಂಡಿರುವ ಹೈಕಮಾಂಡ್‌, ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಮೈಸೂರಿನ ಪುಷ್ಪಾ ಅಮರನಾಥ್‌ಗೆ ಪಟ್ಟ ಕಟ್ಟಿದೆ.

ಹೆಬ್ಬಾಳಕರ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆಪಾದಿಸಿ, ರಾಜ್ಯರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ ರಮೇಶ ಜಾರಕಿಹೊಳಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ತಮ್ಮ ಹಟಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷ್ಮಿ ಅವರ ಬೆನ್ನಿಗೆ ನಿಂತಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹಿನ್ನಡೆಯಾಗಿದೆ.

ಈ ಮೂಲಕ ಸಿದ್ದರಾಮಯ್ಯ ಅವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಿದ್ದಾರೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರಿಗೆ ಪರ್ಯಾಯ ನಾಯಕನಾಗಲು ಹೊರಟಿದ್ದರು. ಅವರ ವೇಗಕ್ಕೆ ಈಗ ಬ್ರೇಕ್‌ ಬಿದ್ದಿದೆ ಎಂದು ಕೈಪಾಳಯದಲ್ಲಿ ಚರ್ಚೆಗಳು ನಡೆದಿವೆ.

ಬೆಳಗಾವಿ ಜಿಲ್ಲೆಯಲ್ಲಿ ಈ ಹಿಂದಿ ನಿಂದಲೂ ಹೊಂದಾಣಿಕೆ ರಾಜಕಾರಣ ನಡೆದುಕೊಂಡು ಬಂದಿದೆ.

ಜಾರಕಿಹೊಳಿ ಸಹೋದರರ ಗರಡಿಯಲ್ಲೇ ಬೆಳೆದಿದ್ದ ಲಕ್ಷ್ಮಿ ಅವರು ಈ ಸಂಪ್ರದಾಯಕ್ಕೆ ತಿಲಾಂಜಲಿ ಇಡುವ ಪ್ರಯತ್ನ ನಡೆಸಿದ್ದರು. ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಮೂಲಕ ಸಡ್ಡು ಹೊಡೆದಿದ್ದರು.

ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯಲ್ಲಿ ಉಭಯ ಗುಂ‍ಪುಗಳ ಪ್ರತಿಷ್ಠೆಯ ಸಮರವೇ ನಡೆದಿತ್ತು. ಇಲ್ಲಿನ ಸಂಘರ್ಷ ಸಮ್ಮಿಶ್ರ ಸರ್ಕಾರಕ್ಕೆ ಕುತ್ತು ತರಲಿದೆ ಎನ್ನುವಷ್ಟರವರೆಗೆ ಸಾಗಿತ್ತು. ಲಕ್ಷ್ಮಿ ಅವರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಜಾರಕಿಹೊಳಿ ಸಹೋದರರು ಪಟ್ಟು ಹಿಡಿದಿದ್ದರು. ಸಿದ್ದರಾಮಯ್ಯ ಅವರ ಮಧ್ಯಪ್ರವೇಶದಿಂದ ವಿವಾದ ತಣ್ಣಗಾಗಿತ್ತು. ಏತನ್ಮಧ್ಯೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿದ್ದ ಸತೀಶ ಜಾರಕಿಹೊಳಿ, ಲಕ್ಷ್ಮಿ ಅಧಿಕಾರ ಮೊಟಕುಗೊಳಿಸುವಂತೆ ಮನವಿ ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ‘ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಹೆಬ್ಬಾಳಕರ ಅವರು ಹೇಳಿಕೊಂಡಿದ್ದರು.

ಎಸ್.ಟಿ ಕೋಟಾದಲ್ಲಿ ಹೊಸಕೋಟೆಯ ಕಮಲಾಕ್ಷಿ ರಾಜಣ್ಣ, ಹಿಂದುಳಿದ ವರ್ಗದಡಿ ಮೈಸೂರಿನ‌ ಪುಷ್ಪಾ ಅಮರನಾಥ್, ಒಕ್ಕಲಿಗ ಕೋಟಾದಲ್ಲಿ ತುಮಕೂರಿನ ಗೀತಾ ಹಾಗೂ ಕುರುಬ ಕೋಟಾದಲ್ಲಿ ನಾಗಲಕ್ಷ್ಮಿ ಚೌಧರಿ ಲಾಬಿ ನಡೆಸಿದ್ದರು. ಪುಷ್ಪಾ ಅವರಿಗೆ ವರಿಷ್ಠರು ಮಣೆ ಹಾಕಿದ್ದಾರೆ.

ಪುಷ್ಪಾ ಅಮರನಾಥ್ ಪರಿಚಯ

ಮೈಸೂರು: ಮೈಸೂರು ಜಿಲ್ಲಾ ರಾಜಕಾರಣದಲ್ಲಿ ಸಕ್ರಿಯವಾಗಿರುವ ಪುಷ್ಪಾ ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

2014ರ ಜುಲೈನಿಂದ 2016ರ ಫೆಬ್ರುವರಿವರೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದರು. 2011ರಲ್ಲಿ ಹುಣಸೂರು ತಾಲ್ಲೂಕಿನ ಧರ್ಮಾಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದರೆ, 2016ರ ಚುನಾವಣೆಯಲ್ಲಿ ಬನ್ನಿಕುಪ್ಪೆ ಕ್ಷೇತ್ರದಿಂದ ಗೆದ್ದಿದ್ದರು. ಈ ವರ್ಷದ ಮಾರ್ಚ್‌ನಲ್ಲಿ ಎಐಸಿಸಿ ಸದಸ್ಯರಾಗಿ ನೇಮಕಗೊಂಡಿದ್ದರು.

ಇವರ ಬಾವ ಎಚ್‌.ಪಿ.ಮಂಜುನಾಥ್‌ ಎರಡು ಅವಧಿಗೆ ಹುಣಸೂರು ಶಾಸಕರಾಗಿದ್ದರು. ಪತಿ ಅಮರನಾಥ್ ಉದ್ಯಮಿ.

ಸಸ್ಯಶಾಸ್ತ್ರದಲ್ಲಿ ಪಿಎಚ್‌.ಡಿ ಪಡೆದಿರುವ ಅವರಿಗೆ ಅಮೆರಿಕದ ಜಾನ್‌ ಹಾಕಿನ್ಸ್‌ ವಿಶ್ವವಿದ್ಯಾಲಯ 2012ರಲ್ಲಿ ‘ಯುವ ವಿಜ್ಞಾನಿ’ ಪ್ರಶಸ್ತಿ ನೀಡಿ ಗೌರವಿಸಿತ್ತು.

ಬಿಡುಗಡೆ ಕೋರಿದ್ದೆ’

‘ಅಧ್ಯಕ್ಷ ಸ್ಥಾನದಿಂದ ನಾನೇ ಬಿಡುಗಡೆ ಕೋರಿದ್ದೆ. ಹೀಗಾಗಿ, ಪುಷ್ಪಾ ಅಮರನಾಥ್‌ ಅವರನ್ನು ಆ ಹುದ್ದೆಗೆ ನೇಮಿಸಿರುವುದಕ್ಕೆ ಬೇಸರವಿಲ್ಲ; ಅಸಮಾಧಾನವೂ ಇಲ್ಲ. ಹುದ್ದೆ ಕಳೆದುಕೊಳ್ಳುವುದಕ್ಕೆ ಯಾರದೋ ಕುತಂತ್ರ, ಕೈವಾಡ ಕೆಲಸ ಮಾಡಿದೆ ಎನ್ನುವುದರಲ್ಲಿ ಅರ್ಥವಿಲ್ಲ’ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !