ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರ ವಿರುದ್ಧ ವರಿಷ್ಠರಿಗೆ ದೂರು: ದೆಹಲಿಗೆ ದಿನೇಶ್ ಗುಂಡೂರಾವ್

ಸೋನಿಯಾ, ವೇಣುಗೋಪಾಲ್‌ ಭೇಟಿಮಾಡಿ ದೂರು ಸಲ್ಲಿಕೆ
Last Updated 15 ನವೆಂಬರ್ 2019, 22:29 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರುಪಕ್ಷದ ಹಿರಿಯ ಮುಖಂಡರ ವಿರುದ್ಧ ದೂರು ಹೊತ್ತುಕೊಂಡು ಶುಕ್ರವಾರ ದೆಹಲಿ ತಲುಪಿದ್ದಾರೆ. ಎರಡು ದಿನಗಳ ಕಾಲ ಅಲ್ಲಿಯೇ ಬೀಡುಬಿಟ್ಟು, ‘ದೊಡ್ಡವರ’ ವಿರುದ್ಧ ಹೈಕಮಾಂಡ್‌ಗೆ ದೂರು ಸಲ್ಲಿಸಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕೆಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಮಾಡಿ ಪಕ್ಷದ ಇತ್ತೀಚಿನ ರಾಜಕೀಯ ಬೆಳವಣಿಗೆ ವಿವರಿಸಲಿದ್ದಾರೆ. ಪ್ರಮುಖವಾಗಿ ಹಿರಿಯ ನಾಯಕರ ವರ್ತನೆ, ಅಸಹಕಾರ ಮತ್ತು ವ್ಯತಿರಿಕ್ತ ಟೀಕೆ– ಟಿಪ್ಪಣಿಗಳನ್ನು ವರಿಷ್ಠರ ಗಮನಕ್ಕೆ ತರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಸಿದ್ದರಾಮಯ್ಯ ಹಾಗೂ ಹಿರಿಯರು ಎಂಬ ಬಣಗಳು ನಿರ್ಮಾಣವಾಗಿದ್ದು, ಇದರಿಂದ ಪಕ್ಷ ಮುನ್ನಡೆಸುವುದು ಕಷ್ಟವಾಗಿದೆ. ದೊಡ್ಡವರ ಕಿರಿಕಿರಿ ಜಾಸ್ತಿಯಾಗಿದ್ದು, ಅವರು ಸಭೆಗೂ ಬರುವುದಿಲ್ಲ, ಜವಾಬ್ದಾರಿಗಳನ್ನೂ ಹೊತ್ತುಕೊಳ್ಳುತ್ತಿಲ್ಲ. ಎಲ್ಲಾ ಜವಾಬ್ದಾರಿಗಳನ್ನು ನಮ್ಮ ಮೇಲೆ ಹಾಕಿ, ಸುಮ್ಮನೆ ಟೀಕೆ ಮಾಡುತ್ತಿದ್ದಾರೆ. ಹಿರಿಯ ನಾಯಕರನ್ನು ಕರೆಸಿಕೊಂಡು ಬುದ್ಧಿವಾದ ಹೇಳದಿದ್ದರೆ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದು ಕಷ್ಟಕರವಾಗುತ್ತದೆ. ಇದು ಉಪಚುನಾವಣೆ ಮೇಲೂ ಪರಿಣಾಮ ಬೀರಲಿದೆ’ ಎಂದು ದಿನೇಶ್ ವರಿಷ್ಠರ ಗಮನಕ್ಕೆ ತರಲು ನಿರ್ಧರಿಸಲಿದ್ದಾರೆ ಎನ್ನಲಾಗಿದೆ.

ಅಭ್ಯರ್ಥಿಗಳ ಆಯ್ಕೆ ಸಂಬಂಧ ನಡೆದ ಕೊನೆಹಂತದ ಸಭೆಗಳಲ್ಲೂ ಮುರಿದ ಮನಸ್ಸುಗಳನ್ನು ಬೆಸೆಯುವ ಕೆಲಸ ಆಗಿಲ್ಲ. ‘ನಮ್ಮ ಒಪ್ಪಿಗೆ ಕೇಳದೆ ನೀವು ಸಿದ್ಧಪಡಿಸಿಕೊಂಡು ಬಂದಿರುವ ಪಟ್ಟಿಗೆ ಒಪ್ಪಿಗೆ ಇಲ್ಲ’ ಎಂದು ಹಿರಿಯರು ಸಭೆಯಿಂದ ಹೊರನಡೆದಿದ್ದರು. ‘ನೀವು ಹೇಳಿದವರಿಗೆ ಟಿಕೆಟ್ ಕೊಡಲಾಗುವುದು. ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಹೊರಬೇಕು’ ಎಂದು ಹಿರಿಯರಿಗೆ ಸಿದ್ದರಾಮಯ್ಯ ಆಹ್ವಾನ ನೀಡಿದ್ದರು. ಅದಕ್ಕೂ ಪ್ರಮುಖ ನಾಯಕರು ಒಪ್ಪಿರಲಿಲ್ಲ. ಹೀಗೆ ‘ಬಣ’ಗಳ ನಡುವೆ ವಾಗ್ವಾದ, ಮುನಿಸು ಮುಂದುವರಿದಿತ್ತು.

ಈ ಎಲ್ಲಾ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ಹಿರಿಯರ ವಿರುದ್ಧ ಹೈಕಮಾಂಡ್‌ಗೆ ದಿನೇಶ್ ದೂರು ಮುಟ್ಟಿಸಲಿದ್ದಾರೆ.

ದೂರಿಗೆ ಕಾರಣಗಳು
ವಿಧಾನಸಭಾ ಉಪಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಸಿದ್ದರಾಮಯ್ಯ ಹಾಗೂ ಪಕ್ಷದ ಹಿರೀಕರ ನಡುವಿನ ಭಿನ್ನಮತ ತೀವ್ರಸ್ವರೂಪ ಪಡೆದುಕೊಂಡಿತ್ತು. ‘ಸಿದ್ದರಾಮಯ್ಯ ಜತೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿಕೊಂಡು ಪಕ್ಷ ಹಾಳುಮಾಡುತ್ತಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದ್ದರು. ವಿವಿಧ ಕ್ಷೇತ್ರಗಳಿಗೆ ಅಭ್ಯರ್ಥಿ ಪಟ್ಟಿ ಸಿದ್ಧಪಡಿಸುವ ಸಮಯದಲ್ಲಿ ಏಕವಚನದಲ್ಲಿ ಕಿತ್ತಾಡಿಕೊಂಡಿದ್ದು ಜಗಜಾಹೀರಾಗಿತ್ತು.

ನಂತರ ಸೋನಿಯಾ ಗಾಂಧಿ ಅವರಿಗೆ ಹಿರಿಯರು ದೂರು ಸಲ್ಲಿಸಿದ್ದು, ಸಿದ್ದರಾಮಯ್ಯ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ತಪ್ಪಿಸುವ ಪ್ರಯತ್ನ ನಡೆಸಿದ್ದರು. ಈ ಪ್ರಯತ್ನ ಫಲಿಸಲಿಲ್ಲ. ಕೊನೆಗೂ ಅವರಿಗೆ ಅಧಿಕಾರ ಧಕ್ಕಿತು. ಈ ಬೆಳವಣಿಗೆ ನಂತರ ಬಣ ರಾಜಕಾರಣ ತಾರಕಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT