ಗುರುವಾರ , ಫೆಬ್ರವರಿ 20, 2020
19 °C
ಎಲ್ಲರ ಚಿತ್ತ ಹೈಕಮಾಂಡ್‌ನತ್ತ; ರಾಜೀನಾಮೆ ಒಪ್ಪಿಗೆ ಸಾಧ್ಯತೆ

ಕೆಪಿಸಿಸಿ ಸಾರಥ್ಯ: ವೇಣುಗೋಪಾಲ್‌ ಭೇಟಿಯಾದ ಡಿಕೆಶಿ, ಮುನಿಯಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಕಾಂಗ್ರೆಸ್ ಮುಖಂಡರ ಚಿತ್ತ ಹೈಕಮಾಂಡ್‌ನತ್ತ ನೆಟ್ಟಿದೆ. ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ನೀಡಿರುವ ರಾಜೀನಾಮೆ ಇನ್ನೂ ಅಂಗೀಕಾರ ಆಗದಿರುವುದು ಈ ಸ್ಥಾನದ ಮೇಲೆ ಕಣ್ಣಿಟ್ಟವರಿಗೆ ತಲೆಬಿಸಿ ತಂದಿದೆ.

ರಾಜೀನಾಮೆ ಸಲ್ಲಿಸಿ ಒಂದು ವಾರವಾಗಿದ್ದು, ಸ್ವೀಕರಿಸುವಂತೆ ಹೈಕಮಾಂಡ್ ಮೇಲೆ ಹಿರೀಕರು ಒತ್ತಡ ಹಾಕು
ತ್ತಿದ್ದಾರೆ. ಬಹುತೇಕ ಒಪ್ಪುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

‘ಭಾರತ್ ಬಚಾವೊ’ ರ‍್ಯಾಲಿ ಮುಗಿದಿದ್ದು, ಸೋಮವಾರದ ನಂತರ ರಾಜಕೀಯ ಚಟುವಟಿಕೆಗಳು ಚುರುಕು
ಪಡೆದುಕೊಳ್ಳಲಿವೆ. ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದ ಶಾಸಕ ಡಿ.ಕೆ.ಶಿವಕುಮಾರ್ ಅಲ್ಲಿಯೇ ಉಳಿದಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ. ಮತ್ತೊಬ್ಬ ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪ ಸಹ ಅಲ್ಲೇ ಬಿಡಾರ ಹೂಡಿದ್ದಾರೆ. ಇಬ್ಬರೂ ನಾಯಕರು ಕೆಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಆಗಿ ಒಂದು ಸುತ್ತಿನ ಮಾತುಕತೆ ನಡೆದಿದ್ದಾರೆ.

ಸೋಮವಾರ ಪಕ್ಷದ ಕೆಲ ಹಿರಿಯ ನಾಯಕರ ಜತೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖ ನಾಯಕರನ್ನು ಅವರು ಭೇಟಿ ಆಗುವರು. ಎಚ್.ಕೆ.ಪಾಟೀಲ, ಈಶ್ವರ ಖಂಡ್ರೆ ಸಹ ದೆಹಲಿಯಲ್ಲೇ ಅಧಿಕಾರಕ್ಕಾಗಿ ಪ್ರಯತ್ನ ನಡೆಸಿದ್ದಾರೆ.

ಹೊಸ ಸಮೀಕರಣ:  ರಾಜ್ಯದಲ್ಲಿ ಸತತವಾಗಿ ಪಕ್ಷ ಹಿನ್ನಡೆ ಕಂಡಿದ್ದು, ಚುನಾವಣೆಯಿಂದ ಚುನಾವಣೆಗೆ ಸೊರಗುತ್ತಲೇ ಸಾಗಿದೆ. ಪಕ್ಷವನ್ನು ಮೇಲೆತ್ತುವಂತಹ ನಾಯಕರಿಗಾಗಿ ಹುಡುಕಾಟ ನಡೆಸಿದ್ದು, ಅದಕ್ಕಾಗಿ ಜಾತಿ ಬಲ ಹೊಂದಿದವರು ಹಾಗೂ ನಾಯಕರ ಸಾಮರ್ಥ್ಯವನ್ನು ಗಮನಿಸಿ ಅಧಿಕಾರ ಹಂಚಿಕೆಗೆ ಹೈಕಮಾಂಡ್ ಮುಂದಾಗಿದೆ.

ಸಿದ್ದರಾಮಯ್ಯ ನೀಡಿರುವ ರಾಜೀನಾಮೆ ಒಪ್ಪಿಕೊಂಡರೂ ಅವರನ್ನು ಬಿಟ್ಟು ಪಕ್ಷ ಸಂಘಟಿಸುವ ಸ್ಥಿತಿಯಲ್ಲೂ ಇಲ್ಲ. ಹಿಂದುಳಿದ ವರ್ಗಗಳ ಪ್ರಮುಖ ನಾಯಕರಾಗಿದ್ದು, ಅವರನ್ನೂ ಒಳಗೊಂಡು ಹೊಸ ‘ಸಮೀಕರಣ’ ರೂಪಿಸುತ್ತಿದೆ.

ಹಿಂದುಳಿದ, ದಲಿತ, ಒಕ್ಕಲಿಗ, ಲಿಂಗಾಯತ ಸಮುದಾಯದ ನಾಯಕರನ್ನು ಒಳಗೊಂಡ ತಂಡ ರಚನೆಗೆ ಸಿದ್ಧತೆ ಆರಂಭಿಸಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಒಕ್ಕಲಿಗ ಅಥವಾ ದಲಿತ ಸಮುದಾಯದಲ್ಲಿ ಯಾರಿಗೆ ನೀಡಲಾಗುತ್ತದೆ ಎಂಬುದರ ಮೇಲೆ ಇತರ ಹುದ್ದೆಗಳಿಗೆ ನೇಮಕ ನಡೆಯಲಿದೆ. ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಹಾಗೂ ದಲಿತ (ಎಡ) ವರ್ಗದ ಕೆ.ಎಚ್.ಮುನಿಯಪ್ಪ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ. ಮತ್ತೊಬ್ಬ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೆಸರೂ ಕೇಳಿಬಂದಿದೆ. ಸಿದ್ದರಾಮಯ್ಯ ತಮ್ಮ ಪ್ರಭಾವ ಬಳಸಿ, ಬೆಂಬಲಿಗರಿಗೆ ಅವಕಾಶ ಕೊಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಒಂದು ವೇಳೆ ಒಕ್ಕಲಿಗರಿಗೆ ಅಧ್ಯಕ್ಷ ಸ್ಥಾನ ನೀಡಿದರೆ, ಶಾಸಕಾಂಗ ಪಕ್ಷದ ನಾಯಕರನ್ನಾಗಿ ಜಿ.ಪರಮೇಶ್ವರ ಅಥವಾ ಎಂ.ಬಿ.ಪಾಟೀಲ ಹಾಗೂ ವಿರೋಧ ಪಕ್ಷದ ನಾಯಕನ್ನಾಗಿ ಸಿದ್ದರಾಮಯ್ಯ ಅವರನ್ನೇ ಮುಂದುವರಿಸಬಹುದು. ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆಗಳೂ ಇವೆ. ಕೆಪಿಸಿಸಿ ಕಾರ್ಯಾಧ್ಯಕ್ಷರು ಬದಲಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯಗೆ ಆಹ್ವಾನ

ಶನಿವಾರ ರಾತ್ರಿ ದೂರವಾಣಿ ಕರೆ ಮಾಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಆಂಜಿಯೊ ಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ್ದಾರೆ. ಚೇತರಿಸಿಕೊಂಡ ನಂತರ ದೆಹಲಿಗೆ ಬರಲು ಆಹ್ವಾನ ನೀಡಿದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು