ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

428 ಹುದ್ದೆ: ಕೆಪಿಎಸ್‌ಸಿಯಲ್ಲಿ ಸಂಘರ್ಷ

ಗೆಜೆಟೆಡ್‌ ಪ್ರೊಬೇಷನರಿ: ಆಯೋಗ– ಅಧಿಕಾರಿಗಳ ಮಧ್ಯೆ ಶೀತಲ ಸಮರ
Last Updated 26 ಅಕ್ಟೋಬರ್ 2018, 19:34 IST
ಅಕ್ಷರ ಗಾತ್ರ

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ 428 ಹುದ್ದೆಗಳ ನೇಮಕಾತಿಗೆ 2017ರ ಡಿಸೆಂಬರ್‌ ತಿಂಗಳಲ್ಲಿ ನಡೆದ ಮುಖ್ಯಪರೀಕ್ಷೆಯ ಫಲಿತಾಂಶ ಸಿದ್ಧವಾಗಿದ್ದರೂ ಪ್ರಕಟಣೆ ವಿಳಂಬವಾಗುತ್ತಿರುವುದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮತ್ತು ಅಧಿಕಾರಿಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ.

ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದವರನ್ನು 1:5 ಅನುಪಾತದಲ್ಲಿ ಆಯ್ಕೆ ಮಾಡಿ, ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ನಡೆಸಬೇಕು. ಕೆಪಿಎಸ್‌ಸಿಯ ಪರೀಕ್ಷಾ ನಿಯಂತ್ರಕರು ಅರ್ಹರ ಪಟ್ಟಿ ಸಿದ್ಧಪಡಿಸಿ ಆಯೋಗದ ಅನುಮೋದನೆ ಪಡೆದು ತಾತ್ಕಾಲಿಕ ಫಲಿತಾಂಶ ಪ್ರಕಟಿಸುವುದು ಪದ್ಧತಿ. ಆದರೆ, ಕೆಪಿಎಸ್‌ಸಿ ಕಾರ್ಯದರ್ಶಿ ಆರ್‌.ಆರ್‌. ಜನ್ನು ಅವರು, ಅರ್ಹರ ಆಯ್ಕೆ ಪ್ರಕ್ರಿಯೆ ಬಗ್ಗೆ ಸ್ಪಷ್ಟನೆ ಕೋರಿ ಇದೇ 20ರಂದು ಸರ್ಕಾರಕ್ಕೆ ಪತ್ರ ಬರೆದಿರುವುದು ಗೊಂದಲ ಉಂಟು ಮಾಡಿದೆ.

‘ರಾಜ್ಯ ಹೈಕೋರ್ಟ್‌, 1998, 1999, 2004ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕರಣದಲ್ಲಿ ನೀಡಿದ್ದ ತೀರ್ಪಿನಲ್ಲಿ, ವ್ಯಕ್ತಿತ್ವ ಪರೀಕ್ಷೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ, ಪಡೆದ ಅಂಕಗಳ ಆಧಾರದಲ್ಲಿ ಮೀಸಲಾತಿ ವರ್ಗದವರ (ಕೆಟಗರಿ) ಪ್ರತ್ಯೇಕ ಪಟ್ಟಿ ಸಿದ್ಧಪಡಿಸಬೇಕು. ಸಾಮಾನ್ಯ ಮೆರಿಟ್ ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಬೇಕು ಎಂದು ಹೇಳಿದೆ. ಆ ನಿಯಮ ಪಾಲಿಸಬೇಕೇ’ ಎಂದು ಕಾರ್ಯದರ್ಶಿ ಪತ್ರದಲ್ಲಿ ಸ್ಪಷ್ಟನೆ ಕೇಳಿರುವುದು ಕೆಪಿಎಸ್‌ಸಿ ಸದಸ್ಯರು ಮತ್ತು ಅಧಿಕಾರಿಗಳ ಮಧ್ಯೆ ಸಂಘರ್ಷವನ್ನೂ ಸೃಷ್ಟಿಸಿದೆ.

ಫಲಿತಾಂಶ ಸಿದ್ಧವಾಗಿ ತಿಂಗಳುಗಳಾಗುತ್ತಾ ಬಂದರೂ ಪ್ರಕಟಿಸಲು ವಿಳಂಬ ಆಗುತ್ತಿರುವ ಬಗ್ಗೆ, ಅ. 16ರಂದು ನಡೆದ ಆಯೋಗದ ಮಂಡಳಿಯ ಸಭೆಯಲ್ಲಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಫಲಿತಾಂಶವನ್ನು ಆಯೋಗದ ಮುಂದಿಡಲು ಇದೇ 22ರಂದು ಸಭೆ ನಡೆದಿತ್ತು. ಆದರೆ, ಫಲಿತಾಂಶ ಮಂಡಿಸುವ ಬದಲು, ಮುಖ್ಯ ಕಾರ್ಯದರ್ಶಿ ನೀಡಿದ ಸೂಚನೆಯಂತೆ ಸ್ಪಷ್ಟನೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿರುವ ವಿಷಯವನ್ನು ಕಾರ್ಯದರ್ಶಿ ತಿಳಿಸಿದ್ದಾರೆ. ಇದು ಸದಸ್ಯರನ್ನು ಕೆರಳಿಸಿದೆ. ತಮ್ಮ ಗಮನಕ್ಕೆ ತರದೆ ಪತ್ರ ಬರೆದಿರುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ಆಯೋಗದ ಸದಸ್ಯರು ಕಾರ್ಯದರ್ಶಿ ವಿರುದ್ಧ ಕೆಂಡಕಾರಿದ್ದಾರೆ.

ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿ ಕ್ರಿಯಿಸಿದ ಆಯೋಗದ ಅಧ್ಯಕ್ಷ ಟಿ. ಶ್ಯಾಂ ಭಟ್‌, ‘ಪತ್ರ ಬರೆಯುವ ವಿಷಯದಲ್ಲಿ ನನ್ನ ಅಭ್ಯಂತರ ಇಲ್ಲ. ಈ ವಿಷಯದಲ್ಲಿ ನಾನು ಮಧ್ಯಪ್ರವೇಶಿಸುವುದೂ ಇಲ್ಲ. ಆದರೆ, ಪತ್ರ ಬರೆದ ಬಳಿಕ ನನ್ನ ಗಮನಕ್ಕೆ ತರಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸೆ. 18ರಂದೇ ಫಲಿತಾಂಶ ಹಸ್ತಾಂತರಿಸುವುದಾಗಿ ಪರೀಕ್ಷಾ ನಿಯಂತ್ರಕರು ಆಯೋಗಕ್ಕೆ ತಿಳಿಸಿದ್ದರು. ಬಳಿಕ ಏಳು ಬಾರಿ ಇದೇ ರೀತಿ ದಿನ ಪ್ರಕಟಿಸಿ, ಸುಮ್ಮನಾಗಿದ್ದಾರೆ. ಈಗ ಇದ್ದಕ್ಕಿದ್ದಂತೆ ಕಾರ್ಯದರ್ಶಿಯು ಮುಖ್ಯ ಕಾರ್ಯ ದರ್ಶಿಗೆ ಪತ್ರ ಬರೆದಿದ್ದಾರೆ. ಯಾಕೆ ಹೀಗೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ’ ಎಂದು ಆಯೋಗದ ಸದಸ್ಯರೊಬ್ಬರ ಆಕ್ಷೇಪ ವ್ಯಕ್ತಪಡಿಸಿದರು.

ಡಿಸೆಂಬರ್‌ 7ರಂದು ಶ್ಯಾಂ ಭಟ್‌ ನಿವೃತ್ತರಾಗಲಿದ್ದಾರೆ. ಇಬ್ಬರು ಸದಸ್ಯರೂ ಎರಡು ತಿಂಗಳ ಒಳಗೆ ನಿವೃತ್ತರಾಗುತ್ತಿದ್ದಾರೆ. ಅದಕ್ಕೂ ಮೊದಲೇ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗ ಸಿದ್ಧತೆ ನಡೆಸುತ್ತಿದೆ ಎಂದೂ ಹೇಳ ಲಾಗಿದೆ. ಗೊಂದಲದ ಕುರಿತು ಪ್ರತಿಕ್ರಿಯೆ ಪಡೆಯಲು ಕೆಪಿಎಸ್‌ಸಿ ಕಾರ್ಯದರ್ಶಿ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಅಭ್ಯರ್ಥಿಗಳು ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ

1998,1999, 2004ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪು ಅನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿಹಿಡಿದಿದೆ. ಆದರೆ, ಈ ತೀರ್ಪಿನಲ್ಲಿ ತಿಳಿಸಿರುವಂತೆ, ಮುಖ್ಯ ಪರೀಕ್ಷೆಯಿಂದ ವ್ಯಕ್ತಿತ್ವ ಪರೀಕ್ಷೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಮತ್ತೆ ಗೊಂದಲ ಉಂಟಾಗುವ ಸಾಧ್ಯತೆ ಇದ್ದು, ಅಭ್ಯರ್ಥಿಗಳು ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಇದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ಪ್ರಾಥಮಿಕ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:20 ಅನುಪಾತದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುವ ಸಂದರ್ಭದಲ್ಲೇ ಈ ತೀರ್ಪಿನಂತೆ ಆಯ್ಕೆ ಪ್ರಕ್ರಿಯೆ ನಡೆಸಬೇಕಿತ್ತು. ಈಗ ಅನ್ವಯ ಮಾಡಿದರೆ ಇಡೀ ಆಯ್ಕೆ ಪ್ರಕ್ರಿಯೆ ಮೇಲೆ ಪರಿಣಾಮ ಉಂಟಾಗಲಿದೆ ಎಂದೂ ಮೂಲಗಳು ಹೇಳಿವೆ.

**

ವ್ಯಕ್ತಿತ್ವ ಪರೀಕ್ಷೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಸ್ಪಷ್ಟನೆ ಕೇಳಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ ನಿರ್ದೇಶನ ನೀಡಲಾಗುವುದು
- ಟಿ.ಎಂ. ವಿಜಯಭಾಸ್ಕರ್‌, ರಾಜ್ಯ ಮುಖ್ಯ ಕಾರ್ಯದರ್ಶಿ

**

ಫಲಿತಾಂಶ ಸಿದ್ಧವಾಗಿದ್ದರೂ ಆಯೋಗದ ಮುಂದೆ ಬಂದಿಲ್ಲ. ಅಭ್ಯರ್ಥಿಗಳ ಆಯ್ಕೆ ಕುರಿತು ಸ್ಪಷ್ಟನೆಗೆ ಸರ್ಕಾರಕ್ಕೆ ಪತ್ರ ಬರೆಯುವಾಗಲೂ ಕಾರ್ಯದರ್ಶಿ ನಮ್ಮ ಗಮನಕ್ಕೆ ತಂದಿಲ್ಲ
- ಟಿ. ಶ್ಯಾಂ ಭಟ್‌, ಕೆಪಿಎಸ್‌ಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT