ಕೆಪಿಎಸ್‌ಸಿ: ಅಭ್ಯರ್ಥಿಗಳ ಆಯ್ಕೆ ಪಟ್ಟಿ ಅತಂತ್ರ!

7
ಅಧಿಕಾರಿಗಳು– ಆಯೋಗದ ಮಧ್ಯೆ ಮುಂದುವರಿದ ‘ಮುಸುಕಿನ ಗುದ್ದಾಟ’

ಕೆಪಿಎಸ್‌ಸಿ: ಅಭ್ಯರ್ಥಿಗಳ ಆಯ್ಕೆ ಪಟ್ಟಿ ಅತಂತ್ರ!

Published:
Updated:

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್‌ ‘ಸಿ’ ವೃಂದದ 1,839 ತಾಂತ್ರಿಕೇತರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯೂ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿ ಪಟ್ಟಿ, ಕರ್ನಾಟಕ ಲೋಕಸೇವಾ ಆಯೋಗದ ‍‍(ಕೆಪಿಎಸ್‌ಸಿ) ಅಧಿಕಾರಿಗಳು ಹಾಗೂ ಅಧ್ಯಕ್ಷ–ಸದಸ್ಯರ ನಡುವಿನ ‘ಮುಸುಕಿನ ಗುದ್ದಾಟ’ದಿಂದ ಅತಂತ್ರ ಸ್ಥಿತಿ ಎದುರಿಸುತ್ತಿದೆ.

ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅಧ್ಯಕ್ಷತೆಯಲ್ಲಿ ನಡೆದ ಕೆಪಿಎಸ್‌ಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ತಾತ್ಕಾಲಿಕ ಪಟ್ಟಿಯನ್ನು ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಆರ್‌.ಆರ್‌. ಜನ್ನು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಇದೇ 30ರ ಒಳಗೆ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದೂ ತಿಳಿಸಿದ್ದಾರೆ.

ಆದರೆ, ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಅನುಮೋದನೆ ಇಲ್ಲದೆ, ಆಯ್ಕೆ ಪಟ್ಟಿ ಪ್ರಕಟಿಸಲು ಅವಕಾಶವಿಲ್ಲ. ‘ನಮ್ಮಿಂದ ವಿಳಂಬ ಆಗಿಲ್ಲ. ಆಯೋಗ ಅನುಮೋದನೆ ನೀಡಿದ ತಕ್ಷಣ ಪಟ್ಟಿ ಪ್ರಕಟಿಸಲು ನಾವು ಸಿದ್ಧ’ ಎಂದು ಉದ್ಯೋಗಾಕಾಂಕ್ಷಿಗಳಿಗೆ ಮಾತುಕೊಟ್ಟಿರುವ ಕೆಪಿಎಸ್‌ಸಿ ಅಧಿಕಾರಿ ವರ್ಗ, ಪಟ್ಟಿ ಪ್ರಕಟಣೆ ವಿಳಂಬಕ್ಕೆ ಅಧ್ಯಕ್ಷರು– ಸದಸ್ಯರು ಕಾರಣವೆಂದು ಬೊಟ್ಟು ಮಾಡುತ್ತಿದೆ.

ಆಯೋಗದ ವಿಳಂಬ ನಡೆಗೆ ಬೇಸತ್ತು ವಾಟ್ಸ್ಆ್ಯಪ್‌ ಗ್ರೂಪ್‌ ಮಾಡಿಕೊಂಡಿರುವ ಉದ್ಯೋಗಾಕಾಂಕ್ಷಿಗಳು, ಇದೇ 12ರಂದು ಕೆಪಿಎಸ್‌ಸಿ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

‘ಸರ್ಕಾರಿ ಉದ್ಯೋಗದ ಆಸೆಯಿಂದ ಸಾಲ ಮಾಡಿ ತರಬೇತಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದ ಅಭ್ಯರ್ಥಿಯೊಬ್ಬ ಕನಸು ಕಾಣುತ್ತಲೇ ಸತ್ತು ಹೋದ. ಉದ್ಯೋಗ ಸಿಗಬಹುದೆಂಬ ಆಸೆಯಿಂದ ನಾವು ಕಾಯುತ್ತಿದ್ದೇವೆ. ಆಯ್ಕೆ ಪಟ್ಟಿ ಯಾವಾಗ ಬಿಡುಗಡೆ ಮಾಡುತ್ತೀರಿ?’ ಎಂದು ಅಂಗಲಾಚಿದ ಉದ್ಯೋಗಾಕಾಂಕ್ಷಿಗಳಿಗೆ ಕೆಪಿಎಸ್‌ಸಿ ಕಾರ್ಯದರ್ಶಿ ಜನ್ನು ಅ. 15ರಂದು ನೀಡಿದ ಭರವಸೆಯ ಮಾತುಗಳು ಈ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಹರಿದಾಡುತ್ತಿದೆ.

‘ಅದೇ ಕಣ್ರೀ... ಎಲ್ಲ ರೆಡಿ ಮಾಡಿ ಎರಡು ತಿಂಗಳು ಆಯಿತು. ಯಾವುದೂ ಆಕ್ಷೇಪ ಬಾರದಂತೆ ಮೆರಿಟ್‌, ಮೀಸಲಾತಿ ನೋಡಿಕೊಂಡು ಪಾರದರ್ಶಕವಾಗಿ ಪಟ್ಟಿ ಸಿದ್ಧಪಡಿಸಿ ಆಯೋಗದ ಅನುಮೋದನೆಗೆ ಕಳುಹಿಸಿದ್ದೇವೆ. ಅಭ್ಯರ್ಥಿಗಳ ಆಯ್ಕೆಗೆ ಕೌನ್ಸೆಲಿಂಗ್‌ ಅಗತ್ಯ ಎಂದು ಪಟ್ಟಿಯನ್ನು ಆಯೋಗ ಮರಳಿಸಿತ್ತು. ಆದರೆ, ಅಗತ್ಯವಿಲ್ಲ ಎಂದು ಮತ್ತೆ ಅನುಮೋದನೆಗೆ ಕಳುಹಿಸಿದ್ದೇವೆ. ಶಶಿಕುಮಾರ್‌ (ಆಯೋಗದ ಅಧ್ಯಕ್ಷ ಟಿ. ಶ್ಯಾಂ ಭಟ್‌ ಅವರ ಆಪ್ತ ಕಾರ್ಯದರ್ಶಿ) ಗೊತ್ತಲ್ಲ. ಅವರನ್ನು ಭೇಟಿ ಮಾಡಿ’ ಎಂದು ಜನ್ನು ಹೇಳಿರುವ ಮಾತು ವಾಟ್ಸ್‌ ಆ್ಯಪ್‌ನಲ್ಲಿದೆ.

‘ಕೆಪಿಎಸ್‌ಸಿಯಲ್ಲಿ ಅಧ್ಯಕ್ಷರು ಸೇರಿ 14 ಮಂದಿ ಇದ್ದಾರೆ. ಅವರೆಲ್ಲ ಬರಬೇಕಲ್ಲ. ಎಲ್ಲರೂ ಸಹಿ ಹಾಕಬೇಕು. ನೋಡದೆ ಯಾರೂ ಸಹಿ ಹಾಕಲ್ಲ. ನಿಮ್ಮ ಪಟ್ಟಿ ಒಂದೇ ಅಲ್ಲ. ಹಲವು ಇವೆ. ರಿಕ್ವೆಸ್ಟ್‌ ಮಾಡುವುದು ಬೇಡ. ನಮಗೆ ಅದೇ ಕೆಲಸ’ ಎಂದು ಶಶಿಕುಮಾರ್‌ ಹೇಳಿದ ಮಾತು ಕೂಡಾ ಅದರಲ್ಲಿದೆ.

‘ಅಭ್ಯರ್ಥಿಗಳ ಹಿತಾಸಕ್ತಿ ಕಾಪಾಡಬೇಕಾದ ಆಯೋಗ ವಿಳಂಬ ನೀತಿ ಅನುಸರಿಸುತ್ತಿದೆ. ಆ ಮೂಲಕ, 1,800ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡುತ್ತಿದೆ. ಖಾಲಿ ಹುದ್ದೆ ಭರ್ತಿ ಮಾಡುವಂತೆ ಆಯೋಗದ ಮೊರೆ ಹೋದ ಇಲಾಖೆಗಳೂ ತ್ವರಿತ ನೇಮಕಾತಿ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿವೆ’ ಎಂದು ಉದ್ಯೋಗಾಕಾಂಕ್ಷಿಗಳು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಪಿಎಸ್‌ಸಿ ಕಾರ್ಯದರ್ಶಿ ಮತ್ತು ಅಧ್ಯಕ್ಷರಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.

ಉದ್ಯೋಗಾಕಾಂಕ್ಷಿಗಳಲ್ಲಿ ಅನುಮಾನ!

ಸಬ್‌ ರಿಜಿಸ್ಟ್ರಾರ್, ವಾರ್ಡನ್‌, ಮಹಿಳಾ ಸೂಪರ್‌ವೈಸರ್‌ ಸೇರಿ ಗ್ರೂಪ್‌ ‘ಸಿ’ ವೃಂದದ 1,839 ತಾಂತ್ರಿಕೇತರ ಹುದ್ದೆಗಳಿಗೆ (ಕಾನೂನು ಮಾಪನ–2, ಪೌರಾಡಳಿತ– 41, ಆರ್ಥಿಕ ಮತ್ತು ಸಾಂಖ್ಯಿಕ–187, ಅಲ್ಪಸಂಖ್ಯಾತರ ಕಲ್ಯಾಣ–432, ನೋಂದಣಿ ಮತ್ತು ಮುದ್ರಾಂಕ– 64, ಕೊಳೆಗೇರಿ ಅಭಿವೃದ್ಧಿ ಮಂಡಳಿ–1, ಸಮಾಜ ಕಲ್ಯಾಣ–443, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ– 669) 2016ರ ಅ. 5 ಮತ್ತು 22ರಂದು ಕೆಪಿಎಸ್‌ಸಿ ಅರ್ಜಿ ಆಹ್ವಾನಿಸಿತ್ತು. ಅದೇ ವರ್ಷ ಡಿ. 18ರಂದು  ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. 2017ರ ಜೂನ್‌ನಲ್ಲಿ ಅರ್ಹತಾ ಪಟ್ಟಿ ಪ್ರಕಟಿಸಿದ್ದು, ಅದೇ ವರ್ಷ ಆಗಸ್ಟ್‌ನಲ್ಲಿ ಮೂಲ ದಾಖಲೆಗಳ ಪರಿಶೀಲನೆಯೂ ಮುಗಿದಿತ್ತು. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಒಂದು ವರ್ಷ ಮೂರು ತಿಂಗಳ ಬಳಿಕ ಕೆಪಿಎಸ್‌ಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಸಿದ್ಧಪಡಿಸಿ ಆಯೋಗದ ಅನುಮೋದನೆಗೆ ಸಲ್ಲಿಸಿದೆ. ಈ ಬಗ್ಗೆ ಪ್ರಕಟಣೆಯನ್ನೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಆದರೆ, ಆಯೋಗ ಅನುಮೋದನೆ ನೀಡದಿರುವುದು ಅಭ್ಯರ್ಥಿಗಳಲ್ಲಿ ಅನುಮಾನ ಉಂಟು ಮಾಡಿದೆ.

**

ಅಭ್ಯರ್ಥಿಗಳಿಂದ ವಾಟ್ಸ್ಆ್ಯಪ್‌ ಗ್ರೂಪ್‌ ರಚನೆ

‘ಗ್ರೂಪ್‌’ನಲ್ಲಿ ಹರಿದಾಡಿದ ಕಾರ್ಯದರ್ಶಿಯ ಭರವಸೆ

ಕೆಪಿಎಸ್‌ಸಿ ಎದುರು ಪ್ರತಿಭಟನೆ ಇಂದು

Tags: 

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !