ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹರ ಅಕ್ರಮ–ಸಕ್ರಮಕ್ಕೆ ಕರ್ನಾಟಕ ಸಿವಿಲ್‌ ಸೇವೆಗಳ ಕಾಯ್ದೆ

ಕೆಪಿಎಸ್‌ಸಿ ಮೀಸಲಿಗೆ ಕಾಯ್ದೆ ಜಾರಿಗೆ ಸರ್ಕಾರದ ನಿರ್ಧಾರ
Last Updated 28 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಸಿವಿಲ್‌ ಸೇವೆಗಳ (ನೇಮಕಾತಿಯ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆ ಕಾರ್ಯವಿಧಾನ) ಕಾಯ್ದೆ–2018 ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರ ಕೆಪಿಎಸ್‌ಸಿಯ ಅಕ್ರಮ ನೇಮಕಾತಿಗಳನ್ನು ಸಕ್ರಮ ಮಾಡಲು ಹಾಗೂ ನ್ಯಾಯಾಂಗದ ಮೇಲೆ ಸವಾರಿ ನಡೆಸಲು ಮುಂದಾಗಿದೆ’ ಎಂದು ಉದ್ಯೋಗಾಕಾಂಕ್ಷಿಗಳು ಹಾಗೂ ಅವಕಾಶ ಕೈತಪ್ಪಿದವರು ಆಕ್ಷೇಪಿಸಿದ್ದಾರೆ.

ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಈ ಕಾಯ್ದೆಗೆ ಅಂಗೀಕಾರ ಸಿಕ್ಕಿದೆ. ಆದರೆ, ರಾಜ್ಯಪಾಲರು ಇನ್ನೂ ಅಂಕಿತ ಹಾಕಿಲ್ಲ. ಇದಕ್ಕೆ ಅಂಗೀಕಾರ ನೀಡದಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಹೋರಾಟಗಾರರು ನಿರ್ಧರಿಸಿದ್ದಾರೆ.

1998, 1999 ಮತ್ತು 2004ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ್ದ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕುರಿತು 2016ರ ಜೂನ್‌ 12ರಂದು ತೀರ್ಪು ನೀಡಿರುವ ಹೈಕೋರ್ಟ್‌, ‘ಈ ಪ್ರಕ್ರಿಯೆಯೇ ಅಸಾಂವಿಧಾನಿಕ. ಸರ್ಕಾರದ ಆದೇಶಗಳು ಮತ್ತು ನಿಯಮಗಳಿಗೆ ವಿರುದ್ಧವಾಗಿದೆ’ ಎಂದು ಹೇಳಿತ್ತು. ಈ ತೀರ್ಪನ್ನು ಅನ್ವಯಿಸಿ ಸಾಮಾನ್ಯ ಅರ್ಹತೆಗೆ ಮೀಸಲಿದ್ದ ಹುದ್ದೆಗಳಿಗೆ ಕೇವಲ ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ಒಳಗೊಂಡ ಮೆರಿಟ್ ಪಟ್ಟಿ ಹಾಗೂ ಮೀಸಲಾತಿ (ಎಸ್‌ಸಿ, ಎಸ್‌ಟಿ, ಇತರ ಹಿಂದುಳಿದ ವರ್ಗಗಳು) ಕೋರಿದ್ದ ಅಭ್ಯರ್ಥಿಗಳ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಲು ಕೆಪಿಎಸ್‌ಸಿ ಸಿದ್ಧತೆ ನಡೆಸಿತ್ತು.

‘ಇದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದವರು ಅವಕಾಶ ವಂಚಿತರಾಗಲಿದ್ದಾರೆ’ ಎಂಬ ಕಾರಣ ನೀಡಿ ಸಚಿವರಾದ ಪ್ರಿಯಾಂಕ್‌ ಖರ್ಗೆ, ಪುಟ್ಟರಂಗ ಶೆಟ್ಟಿ, ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಾ.ಎಚ್.ಸಿ.ಮಹದೇವಪ್ಪ ಅವರು ಕೆಪಿಎಸ್‌ಸಿ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆ ಬಳಿಕ ಸರ್ಕಾರ ಹೊಸ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ.

ಹೈಕೋರ್ಟ್ ಹಾಗೂ ಸುಪ್ರಿಂ ಕೋರ್ಟ್‌ಗಳ ಆದೇಶಗಳ ಪ್ರಕಾರ, 1998, 1999 ಹಾಗೂ 2004 ಸಾಲಿನ ಆಯ್ಕೆ ಪಟ್ಟಿಯನ್ನು ಪರಿಷ್ಕರಿಸಿದ್ದ ಕೆಪಿಎಸ್‌ಸಿ, 47 ಮಂದಿಯನ್ನು ಅನರ್ಹರು ಎಂದು ಗುರುತಿಸಿತ್ತು. ಆ ಪ್ರಕಾರ 1998ನೇ ಸಾಲಿನಲ್ಲಿ ಆಯ್ಕೆಯಾಗಿ ಐಎಎಸ್‌ಗೆ ಬಡ್ತಿ ಪಡೆದಿರುವ ಎಂಟು ಅಧಿಕಾರಿಗಳು ಹಿಂಬಡ್ತಿ ಪಡೆಯಲಿದ್ದಾರೆ. ಮೂರೂ ವರ್ಷಗಳಲ್ಲಿ ಆಯ್ಕೆಯಾಗಿದ್ದ 150ಕ್ಕೂ ಹೆಚ್ಚು ಅಧಿಕಾರಿಗಳ ಸ್ಥಾನವೂ ಪಲ್ಲಟಗೊಳ್ಳಲಿದೆ. ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ನೇಮಿಸಲು ಹೊರಟಿರುವ ಕರಿಗೌಡ (ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ) ಕೂಡಾ ಈ ಪಟ್ಟಿಯಲ್ಲಿದ್ದಾರೆ. ಈ ಹೊಸ ಕಾಯ್ದೆ 1994ರಿಂದಲೇ ಪೂರ್ವಾನ್ವಯ ಆಗಲಿರುವುದರಿಂದ ಅನರ್ಹರಿಗೆಲ್ಲ ರಕ್ಷಣೆ ಸಿಗಲಿದೆ ಎಂಬುದು ಉದ್ಯೋಗಾಕಾಂಕ್ಷಿಗಳ ಆತಂಕ.

‘ಈ ಕಾಯ್ದೆಯಲ್ಲಿ ಅರ್ಹತಾ ಮಾನದಂಡವನ್ನು ತಿದ್ದುಪಡಿ ಮಾಡಿದ್ದಾರೆ. 1995ರ ಗೆಜೆಟೆಡ್‌ ಪ್ರೊಬೆಷನರಿ ನಿಯಮ 4ರಲ್ಲಿ ಕಂಡಿಕೆ ‘ಸಿ’ಗೆ (ಸಂದರ್ಶನ) ತಿದ್ದುಪಡಿ ಮಾಡಲಾಗಿದೆ. ಇದರಿಂದ ಅರ್ಹತೆ ಇದೆ ಎಂಬ ಕಾರಣ ಹೇಳಿ ಯಾರೂ ಬೇಕಾದರೂ ಆಯ್ಕೆಯಾಗಲು ಅವಕಾಶ ಕಲ್ಪಿಸಿದಂತಾಗಿದೆ’ ಎಂದು ಅವರು ವಿಶ್ಲೇಷಿಸಿದರು.

‘ಸರ್ಕಾರದ ನಡೆಯ ಹಿಂದೆ ದುರುದ್ದೇಶ ಇರುವಂತೆ ತೋರುತ್ತಿದೆ’ ಎಂದು ಹೋರಾಟಗಾರರಾದ ಕೆ.ಆರ್‌.ಖಲೀಲ್‌ ಅಹ್ಮದ್‌ ಹಾಗೂ ಎನ್‌.ವಾಸುದೇವ್‌ ಅನುಮಾನ ವ್ಯಕ್ತಪಡಿಸಿದರು.

‘ಹೊಸ ಕಾಯ್ದೆಯಲ್ಲಿರುವ ಅಂಶಗಳು ನೇಮಕಾತಿಯಲ್ಲಿ ಆಗಿರುವ ಅನ್ಯಾಯವನ್ನು ಪುಷ್ಟೀಕರಿಸುವಂತಿವೆ. ಮೂರು ವರ್ಷಗಳಲ್ಲಿ ನಡೆದ ನೇಮಕಾತಿಗಳಲ್ಲಿ ನೂರಾರು ಅರ್ಹ ಅಭ್ಯರ್ಥಿಗಳು ಅವಕಾಶ ವಂಚಿತರಾಗಿದ್ದರು. ಅವರ ಹಿತಕಾಯುವ ಸಲುವಾಗಿ ಸರ್ಕಾರ ಈವರೆಗೂ ಯಾವುದೇ ಮಾಹಿತಿ ಕಲೆ ಹಾಕಿಲ್ಲ. ಅವರಿಗೆ ನ್ಯಾಯ ಒದಗಿಸಲು ಕಿಂಚಿತ್ತೂ ಕ್ರಮ ಕೈಗೊಂಡಿಲ್ಲ’ ಎಂದು ಉದ್ಯೋಗಾಕಾಂಕ್ಷಿಗಳು ಬೇಸರ ವ್ಯಕ್ತಪಡಿಸಿದರು.

‘ಪ್ರಚಲಿತ ಕಾನೂನುಗಳ ಪ್ರಕಾರ ಹೊಸ ಕಾಯ್ದೆಯನ್ನು ಅನುಷ್ಠಾನ ಮಾಡುವುದು ಕಷ್ಟಸಾಧ್ಯ. ಇದನ್ನು ನ್ಯಾಯಾಲಯ ಒಪ್ಪುವುದೂ ಅನುಮಾನ. ಗ್ರಾಮೀಣ ಮೀಸಲಾತಿ ಹಾಗೂ ಮಹಿಳಾ ಮೀಸಲಾತಿಗಳಲ್ಲಿ ಸರ್ಕಾರ ಇದೇ ರೀತಿ ಸುಗ್ರೀವಾಜ್ಞೆ ಹೊರಡಿಸಿತ್ತು. ಅದನ್ನು ನ್ಯಾಯಾಲಯ ಅನೂರ್ಜಿತಗೊಳಿಸಿತ್ತು. ಈಗ ಜಾರಿಗೆ ತರಲು ಹೊರಟಿಸುವ ಹೊಸ ಕಾಯ್ದೆಗೂ ಇದೇ ಗತಿ ಆಗಲಿದೆ’ ಎಂದು ಉದ್ಯೋಗಾಕಾಂಕ್ಷಿಗಳು ವಿಶ್ಲೇಷಿಸಿದರು.

ಕಾಯ್ದೆಯಿಂದ ಒಂದು ಸಮುದಾಯಕ್ಕಷ್ಟೇ ಪ್ರಯೋಜನ?

ಹೊಸ ಕಾಯ್ದೆಯಿಂದ ಒಂದು ಸಮುದಾಯಕ್ಕಷ್ಟೇ ಅನುಕೂಲವಾಗಲಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

‘ಗ್ರೂಪ್‌ ಎ, ಬಿ, ಸಿ ಮತ್ತು ಡಿ ಹುದ್ದೆಗಳ ನೇಮಕಾತಿ ವೇಳೆ ಅನುಸರಿಸಬೇಕಾದ ಮೀಸಲಾತಿ ಕುರಿತು ಸಮಾಜ ಕಲ್ಯಾಣ ಇಲಾಖೆಯು 1995ರಲ್ಲಿ ಹೊರಡಿಸಿದ್ದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಅಭ್ಯರ್ಥಿಗಳು ಯಾವ ಜಾತಿ, ಪಂಗಡ, ವರ್ಗಗಳಿಗೆ ಸೇರಿದವರೆನ್ನುವುದನ್ನು ಪರಿಗಣಿಸದೆ, ಅರ್ಹತೆ ಆಧಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಬೇಕು ಎಂಬ ಅಂಶ ಈ ಆದೇಶದಲ್ಲಿದೆ. ಅಂದರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ ಹೆಚ್ಚಿನ ಅಂಕ ಪಡೆದರೆ ಅಂತಹ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಅಡಿ ಆಯ್ಕೆ ಆಗಲಿದ್ದಾರೆ.

‘ಆದರೆ, ವಾಸ್ತವದಲ್ಲಿ ಹೀಗಾಗಿಲ್ಲ. 1998, 1999 ಹಾಗೂ 2004ರ ನೇಮಕಾತಿಗಳಲ್ಲಿ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳೇ ಸಾಮಾನ್ಯ ವರ್ಗದಡಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಬೆರಳೆಣಿಕೆಯ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಕಾಯ್ದೆಯನ್ನು ಪೂರ್ವಾನ್ವಯ ಮಾಡುವ ಬದಲು ಭವಿಷ್ಯದ ನೇಮಕಾತಿಗಳಿಗೆ ಅನ್ವಯವಾಗುವಂತೆ ಮಾಡಬೇಕಿತ್ತು’ ಎಂದು ಉದ್ಯೋಗಾಕಾಂಕ್ಷಿಗಳು ಅಭಿಪ್ರಾಯಪಟ್ಟರು.
ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿ

**

ವರ್ಷ ಹುದ್ದೆಗಳು

1998 383

1999 193

2004 153

2017 428

ಒಟ್ಟು 1,156

**

1998ರಲ್ಲಿ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಹಿಂದುಳಿದ ವರ್ಗದ ಅಭ್ಯರ್ಥಿಗಳು

ವರ್ಗ ಸಂಖ್ಯೆ

3ಎ 27

ಎಸ್‌ಸಿ 1

ಎಸ್‌ಟಿ 0

2ಎ 2‌

2ಬಿ 2

3 ಬಿ 2

**

ನೇಮಕಾತಿಯಲ್ಲಿನ ಅಕ್ರಮ ಪ್ರಶ್ನಿಸಿ ಹಲವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಸರ್ಕಾರ ಮೊದಲು ಅವರ ಹಿತ ಕಾಯುವ ಪ್ರಯತ್ನ ಮಾಡಬೇಕಿತ್ತು.
- ಎನ್‌.ವಾಸುದೇವ್‌, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿದಾರರು

**

ಜಾರಿಗೆ ತರಲು ಹೊರಟಿರುವ ಹೊಸ ಕಾಯ್ದೆಯು ನೇಮಕಾತಿ ಕುರಿತಂತೆ ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವುದಿಲ್ಲ. ಇನ್ನಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
- ಕೆ.ಆರ್‌.ಖಲೀಲ್‌ ಅಹ್ಮದ್‌, ಹೋರಾಟಗಾರ

**

ಸುಪ್ರೀಂ ಕೋರ್ಟ್‌ ತೀರ್ಪಿನ ಆಧಾರದಲ್ಲಿ ಹೈಕೋರ್ಟ್‌ ಆದೇಶ ನೀಡಿತ್ತು. ಅದನ್ನು ತಪ್ಪಾಗಿ ಅರ್ಥೈಸಿಕೊಂಡು ರಾಜ್ಯ ಈ ಕಾಯ್ದೆ ತರಲು ಹೊರಟಿದೆ ಇದು ಅಸಂವಿಧಾನಿಕ ಆಗಲಿದೆ.
- ವಿಕ್ರಮ್ ಪದಕಿ, ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT