ಮಂಗಳವಾರ, ಡಿಸೆಂಬರ್ 10, 2019
20 °C
91ರ ಬದಲಿಗೆ 119 ಉತ್ತರ ಪತ್ರಿಕೆಗಳ ಪರಿಗಣನೆ * 15ಕ್ಕೂ ಹೆಚ್ಚು ಅಧಿಕಾರಿಗಳ ಹುದ್ದೆ ಬದಲು?

ಕೆಪಿಎಸ್‌ಸಿಯಿಂದ ಮತ್ತೆ ಎಡವಟ್ಟು!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) 91 ಉತ್ತರ ಪತ್ರಿಕೆಗಳ ಬದಲು 91 ಅಭ್ಯರ್ಥಿಗಳ 119 ಉತ್ತರ ಪತ್ರಿಕೆಗಳ ಮೂರನೇ ಮೌಲ್ಯಮಾಪನ ಅಂಕಗಳನ್ನು ಪರಿಗಣಿಸಿದ ಪರಿಣಾಮ, ಒಬ್ಬ ಅಧಿಕಾರಿ ಐಎಎಸ್ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದರೆ, ಐಎಎಸ್ ಬಡ್ತಿ ನಿರೀಕ್ಷೆಯಲ್ಲಿರುವ ಇಬ್ಬರು ನಿರಾಶೆ ಅನುಭವಿಸುವಂತಾಗಿದೆ.

ಕೆಪಿಎಸ್‌ಸಿ ಮಾಡಿದ ಈ‌ ‘ಮಹಾ’ ಎಡವಟ್ಟು, 15ಕ್ಕೂ ಹೆಚ್ಚು ಅಧಿಕಾರಿಗಳು ಹುದ್ದೆ ಬದಲಿಸಬೇಕಾದ ಅನಿವಾರ್ಯತೆ ತಂದೊಡ್ಡಿದೆ. ಈ ತಪ್ಪಿನಿಂದಾಗಿ ಅಧಿಕಾರಿಗಳು ರೋಸಿ ಹೋಗಿದ್ದಾರೆ. ಅಷ್ಟೇ ಅಲ್ಲ, ಈ ಬೆಳವಣಿಗೆ ಕೆಪಿಎಸ್‌ಸಿ ಮೇಲಿನ ವಿಶ್ವಾಸಾರ್ಹತೆಗೆ ಮತ್ತೊಮ್ಮೆ ಕುತ್ತು ತಂದಿದೆ ಎಂದೂ ದೂರಿದ್ದಾರೆ.

ಕೆಪಿಎಸ್‌ಸಿಯ ಈ ನಡೆಯ ವಿರುದ್ಧ ಚನ್ನಪ್ಪ (ಐಎಎಸ್ ಬಡ್ತಿ ನಿರೀಕ್ಷೆಯಲ್ಲಿರುವವರು) ಎಂಬುವವರು ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ಹೈಕೋರ್ಟ್ ಪೀಠ, ಕೆಪಿಎಸ್‌ಸಿಗೆ ನೋಟಿಸ್ ಜಾರಿ ಮಾಡಿದೆ.

ಏನಿದು ವಿವಾದ?: 1998ನೇ ಸಾಲಿನ 383 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, 2016ರ ಜೂನ್‌ 21ರಂದು ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿದ್ದ ಮೂರನೇ ಅಂಶವನ್ನು ಪಾಲಿಸುವ ವೇಳೆ ಕೆಪಿಎಸ್‌ಸಿ ಈ ಎಡವಟ್ಟು ಮಾಡಿದೆ. 91 ಸ್ಕ್ರಿ‍ಪ್ಟ್‌ಗಳ (ಉತ್ತರ ಪತ್ರಿಕೆ) ಮೂರನೇ ಮೌಲ್ಯಮಾಪನ ಅಂಕಗಳನ್ನು ಪರಿಗಣಿಸಿ ನೇಮಕಾತಿ ಪಟ್ಟಿ ಪರಿಷ್ಕರಿಸುವಂತೆ ತೀರ್ಪಿನಲ್ಲಿ ಹೇಳಿದೆ. ಆದರೆ, ಕೆಪಿಎಸ್‌ಸಿ 91 ಅಭ್ಯರ್ಥಿಗಳ ಉತ್ತರ ಪತ್ರಿಕೆಗಳ ಮೂರನೇ ಮೌಲ್ಯಮಾಪನ‌ ಅಂಕಗಳನ್ನು ಪರಿಗಣಿಸಿರುವುದು ವಿವಾದಕ್ಕೆ ಕಾರಣವಾಗಿದೆ.

‘ಕೆಪಿಎಸ್‌ಸಿ 91 ಸ್ಕ್ರಿಪ್ಟ್ (ಕೆಲ ಅಭ್ಯರ್ಥಿಗಳ ಒಂದಕ್ಕಿಂತ ಹೆಚ್ಚು) ಅಂದರೆ, 76 ಅಭ್ಯರ್ಥಿಗಳ ಉತ್ತರ ಪತ್ರಿಕೆಗಳ ಮೂರನೇ ಮೌಲ್ಯಮಾಪನ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು. ಅದರ ಬದಲು, 91 ಅಭ್ಯರ್ಥಿಗಳನ್ನು ಅಂದರೆ, 119 ಉತ್ತರ ಪತ್ರಿಕೆಗಳ ಮೂರನೇ ಮೌಲ್ಯಮಾಪನ ಅಂಕಗಳನ್ನು ಗಣನೆಗೆ ತೆಗೆದುಕೊಂಡಿದೆ. ಇದು ಹೈಕೋರ್ಟ್ ನೀಡಿದ ಅಂತಿಮ ತೀರ್ಪಿನ ಉಲ್ಲಂಘನೆ’ ಎಂದು ನ್ಯಾಯಾಂಗ‌ ನಿಂದನೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದರಿಂದಾಗಿ, ಕೆಎಎಸ್‌ಸಿಯಿಂದ ಐಎಎಸ್‌ಗೆ ಬಡ್ತಿ ಪಡೆದಿರುವ ಅಕ್ರಂ ಪಾಷಾ ಅವರು ಹಿಂಬಡ್ತಿ ಪಡೆದು ಬೇರೆ ಹುದ್ದೆಗೆ ಸ್ಥಾನಪಲ್ಲಟಗೊಳ್ಳುತ್ತಾರೆ. ಅಲ್ಲದೆ, ಇದರಿಂದ 15 ಅಧಿಕಾರಿಗಳಿಗೆ ಲಾಭವಾದರೆ, ಅಷ್ಟೇ ಸಂಖ್ಯೆಯ ಅಧಿಕಾರಿಗಳಿಗೆ (ಹುದ್ದೆ ಬದಲಾಗುವುದರಿಂದ) ಅನ್ಯಾಯವಾಗುತ್ತದೆ. ಮೀಸಲಾತಿಯಲ್ಲಿ ಹುದ್ದೆಗೆ ಅರ್ಹರಾದ ಇಬ್ಬರು ಸಾಮಾನ್ಯ ವರ್ಗಕ್ಕೆ ಹೋಗುವುದರಿಂದ, ಸಾಮಾನ್ಯ ವರ್ಗದಲ್ಲಿ ಹುದ್ದೆಯಲ್ಲಿರುವವರಿಗೆ ಅನ್ಯಾಯವಾದಂತಾಗುತ್ತದೆ ಎನ್ನುವುದು ನೊಂದವರ ವಾದ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ಅವರನ್ನು ಸಂಪರ್ಕಿಸಲು ಯತ್ನಿಸಿದರೂ, ಅವರು ಲಭ್ಯರಾಗಲಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು