ಶನಿವಾರ, ಡಿಸೆಂಬರ್ 14, 2019
24 °C
ಗೆಜೆಟೆಡ್‌ ಪ್ರೊಬೇಷನರ್ಸ್‌ ಹುದ್ದೆಗಳಿಗೆ 1:3 ಮತ್ತೆ ಜಾರಿ

ಕೆಪಿಎಸ್‌ಸಿ: ವ್ಯಕ್ತಿತ್ವ ಸಂದರ್ಶನ ಅನುಪಾತ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್‌ ಪ್ರೊಬೇಷನರ್ಸ್‌ (ಎ ಮತ್ತು ಬಿ ಗುಂಪಿನ) ಹುದ್ದೆಗಳ ನೇಮಕಾತಿಗಾಗಿ ವ್ಯಕ್ತಿತ್ವ ಸಂದರ್ಶನ ನಡೆಸುವಾಗ ಒಂದು ಹುದ್ದೆಗೆ ಮೂವರು ಅಭ್ಯರ್ಥಿಗಳನ್ನು ಕರೆಯುವ (1:3 ಅನುಪಾತ) ಪದ್ಧತಿಯನ್ನು ಮತ್ತೆ ಜಾರಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇದಕ್ಕಾಗಿ ಕರ್ನಾಟಕ ಗೆಜೆಟೆಡ್‌ ಪ್ರೊಬೇಷನರ್ಸ್ (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ)(ತಿದ್ದುಪಡಿ) ನಿಯಮಗಳು 2019 ಕ್ಕೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಪಿ.ಸಿ.ಹೋಟಾ ಸಮಿತಿಯ ಶಿಫಾರಸ್ಸಿನಂತೆ 2014 ರಲ್ಲಿ ರಾಜ್ಯ ಸರ್ಕಾರ ವ್ಯಕ್ತಿತ್ವ ಸಂದರ್ಶನಕ್ಕೆ 1:3 ಅನುಪಾತವನ್ನು ಅಳವಡಿಸಿಕೊಂಡಿತ್ತು. 2016 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆ ನಿಯಮಕ್ಕೆ ತಿದ್ದುಪಡಿ ತಂದು ಅನುಪಾತವನ್ನು 1:5 ಕ್ಕೆ ಹೆಚ್ಚಿಸಿತ್ತು. ಇದರಿಂದ ಸಂದರ್ಶನಕ್ಕೆ ಹಾಜರಾಗುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿತ್ತು. 

ಕೇಂದ್ರ ಲೋಕಸೇವಾ ಆಯೋಗ ವ್ಯಕ್ತಿತ್ವ ಪರೀಕ್ಷೆಗೆ 1:3ರ ಅನುಪಾತವನ್ನೇ ಅಳವಡಿಸಿಕೊಂಡಿದೆ. ಹೋಟಾ ಸಮಿತಿಯೂ ಇದೇ ಅನುಪಾತದಲ್ಲಿ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಕರೆಯಬೇಕು ಎಂದೂ ಶಿಫಾರಸ್ಸು ಮಾಡಿರುವುದರಿಂದ, ಆಯ್ಕೆ ಪ್ರಕ್ರಿಯೆಯಲ್ಲಿ ಗುಣಮಟ್ಟ ಕಾಪಾಡಲು 1:5 ಅನುಪಾತದ ಬದಲು 1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆ ನಡೆಸುವುದು ಸೂಕ್ತವೆಂದು ಕರ್ನಾಟಕ ಲೋಕ ಸೇವಾ ಆಯೋಗ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಸಂದರ್ಶನಕ್ಕೆ ಅಭ್ಯರ್ಥಿಗಳನ್ನು ಕರೆಯುವ ಅನುಪಾತ 1:5 ಇದ್ದಾಗ, ಈ ಸಂದರ್ಶನ ಪ್ರಕ್ರಿಯೆ ಪೂರ್ಣಗೊಳಿಸಲು ಹಲವು ತಿಂಗಳು ಬೇಕಾಗುತ್ತದೆ. ಇದರಿಂದ  ಬೇರೆ ನೇಮಕಾತಿ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಆಯೋಗ ಸರ್ಕಾರಕ್ಕೆ ತಿಳಿಸಿತ್ತು. ಆದ್ದರಿಂದ ಕರ್ನಾಟಕ ಗೆಜೆಟೆಡ್‌ ಪ್ರೊಬೇಷನರ್ಸ್‌(ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ)(ತಿದ್ದುಪಡಿ) ನಿಯಮ 2017 ರ 2(ಎ) ಅನ್ನು ಕೈ ಬಿಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದರ ಪರಿಣಾಮವೇನು: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ, ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಹಾಜರಾಗಲು ಅನುವು ಮಾಡಿಕೊಡುವ ಉದ್ದೇಶದಿಂದ ನಿಯಮಕ್ಕೆ ತಿದ್ದುಪಡಿ ಮಾಡಿತ್ತು. ತಿದ್ದುಪಡಿ ಮಾಡಿ ಅನುಪಾತ ಕಡಿಮೆ ಮಾಡಿರುವುದರಿಂದ ಗ್ರಾಮೀಣ ಪ್ರದೇಶದವರಿಗೆ ಅವಕಾಶಗಳು ಕಡಿಮೆ ಆಗಬಹುದು ಎಂದು ವಿಶ್ಲೇಷಿಸಲಾಗಿದೆ.

ಗ್ರಾಮೀಣ ಪ್ರದೇಶದವರಿಗೆ ಅವಕಾಶಗಳು ಕಡಿಮೆ ಆಗುವುದಿಲ್ಲ. ಪರೀಕ್ಷೆಯಲ್ಲಿ ಚೆನ್ನಾಗಿ ಬರೆದ ಗುಣಮಟ್ಟದ ಅಭ್ಯರ್ಥಿಗಳು ಅವಕಾಶಗಳಿಂದ ವಂಚಿತರಾಗುವುದಿಲ್ಲ. ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳಿಗೆ ಅವಕಾಶ ಸಿಗುತ್ತಿದೆ ಎಂದು ಕೆಪಿಎಸ್‌ಸಿ ಮೂಲಗಳು ಹೇಳಿವೆ.

ವಿಳಂಬಕ್ಕೆ ತೆರೆ: ಸುರೇಶ್‌ ಕುಮಾರ್‌

‘ಸಂದರ್ಶನ ಪ್ರಕ್ರಿಯೆ ವಿಳಂಬವಾಗುತ್ತಿರುವುದನ್ನು ಮನಗಂಡು ಸಚಿವ ಸಂಪುಟ ಸಭೆ ಮತ್ತೆ 1:3 ಪ್ರಮಾಣದಲ್ಲಿ ಸಂದರ್ಶನಕ್ಕೆ ಅರ್ಹ ಅಭ್ಯರ್ಥಿಗಳನ್ನು ಕರೆಯುವ ನಿರ್ಧಾರಕ್ಕೆ ಅನುಮೋದನೆ ನೀಡಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸುರೇಶ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು