ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂವಿ ಆಯ್ಕೆಯಲ್ಲಿ ಅಕ್ರಮ? : ₹40 ಲಕ್ಷದಿಂದ ₹50 ಲಕ್ಷಕ್ಕೆ ಹುದ್ದೆ ಮಾರಾಟ ಆರೋಪ

ಕೆಪಿಎಸ್‌ಸಿ
Last Updated 1 ಆಗಸ್ಟ್ 2019, 19:42 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಮೋಟಾರು ವಾಹನ ನಿರೀಕ್ಷಕ (ಐಎಂವಿ) 150 ಹುದ್ದೆಗಳಿಗೆ ಆಯ್ಕೆಯಾದವರ ತಾತ್ಕಾಲಿಕ ಪಟ್ಟಿಯನ್ನು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಪ್ರಕಟಿಸಿದ್ದು, ಈ ನೇಮಕಾತಿಯಲ್ಲಿ ಸ್ವಜನ ಪಕ್ಷಪಾತ, ಭಾರಿ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

‘ಆರ್‌ಟಿಓ (ಪ್ರಾದೇಶಿಕ ಸಾರಿಗೆ ಅಧಿಕಾರಿ), ಆರ್‌ಟಿಓ ಇನ್‌ಸ್ಪೆಕ್ಟರ್‌ಗಳ ಹತ್ತಿರದ ಸಂಬಂಧಿಗಳು ವಾಮಮಾರ್ಗದ ಮೂಲಕ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ₹40 ರಿಂದ ₹ 50 ಲಕ್ಷದವರೆಗೆ ಹುದ್ದೆಗಳು ಮಾರಾಟವಾಗಿವೆ’ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ನೇಮಕಾತಿ ಕುರಿತು ತನಿಖೆ ನಡೆಸಬೇಕು ಎಂದು ದಾಖಲೆಗಳ ಸಮೇತ ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

150 ಹುದ್ದೆಗಳ ಪೈಕಿ, 129 ಹುದ್ದೆಗಳಿಗೆ ಮಾತ್ರ ಕೆಪಿಎಸ್‌ಸಿ ಜುಲೈ 4ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಗೆ ತಕರಾರು ವ್ಯಕ್ತಪಡಿಸಿ 800ಕ್ಕೂ ಹೆಚ್ಚು ಅಭ್ಯರ್ಥಿಗಳು ಕೆಪಿಎಸ್‌ಸಿಗೆ ದೂರು ನೀಡಿದ್ದಾರೆ. ಈ ನಡುವೆಯೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಕೆಪಿಎಸ್‌ಸಿ ಅವಸರ ತೋರಿಸುತ್ತಿದೆ ಎನ್ನಲಾಗಿದೆ.

ಈ ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ 2016ರ ಫೆ.4ರಂದು ಅಧಿಸೂಚನೆ ಹೊರಡಿಸಿತ್ತು. ಅಭ್ಯರ್ಥಿಗಳು ಎಲ್ಲ ದಾಖಲೆಗಳ ತಲಾ ಮೂರು ಪ್ರತಿಗಳನ್ನು ಅರ್ಜಿಯ ಜೊತೆಗೇ ಅಪ್‌ಲೋಡ್‌ ಮಾಡಿದ್ದಾರೆ. 2,047 ಅಭ್ಯರ್ಥಿಗಳು ಆಯ್ಕೆಗಾಗಿ ಪರೀಕ್ಷೆ ಬರೆದಿದ್ದರು. ಅಭ್ಯರ್ಥಿಗಳ ಸೇವಾನುಭವ ಮತ್ತು ವಾಹನ ಚಾಲನಾ ಪರವಾನಗಿಯ ನೈಜತೆ ‍ಪರಿಶೀಲಿಸಲು ದಾಖಲೆಗಳನ್ನು ಕೆಪಿಎಸ್‌ಸಿಯು ಸಾರಿಗೆ ಇಲಾಖೆಗೆ ಕಳುಹಿಸಿತ್ತು. ಆದರೆ, ದಾಖಲೆಗಳನ್ನು ಪರಿಶೀಲಿಸಿ ಕೆಪಿಎಸ್‌ಸಿಗೆ ವರದಿ ನೀಡುವ ಸಂದರ್ಭದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಎಸಗಿದ ಆರೋಪ ಕೇಳಿಬಂದಿದೆ.

ಸ್ವಜನ ಪಕ್ಷಪಾತದ ವೈಖರಿ: ಹಲವು ಅಭ್ಯರ್ಥಿಗಳು ಒಂದೇ ವರ್ಕ್‌ಶಾಪ್‌ನಿಂದ ಸೇವಾನುಭವ ಪ್ರಮಾಣ ಪತ್ರ ಪಡೆದು ಸಲ್ಲಿಸಿದ್ದಾರೆ. ಆದರೆ, ಸಾರಿಗೆ ಇಲಾಖೆಯ ಅಧಿಕಾರಿಗಳು, ತಮ್ಮ ಮಕ್ಕಳು, ಹತ್ತಿರದ ಸಂಬಂಧಿಕರ
ಮತ್ತು ‘ಬೇಕಾದವರ’ ಪ್ರಮಾಣ ಪತ್ರಗಳನ್ನು ಮಾತ್ರ ದೃಢೀಕರಿಸಿದ್ದಾರೆ ಎನ್ನಲಾಗಿದೆ.

ಕೆಎಸ್‌ಆರ್‌ಟಿಸಿ ವಾಹನಗಳನ್ನು ದುರಸ್ತಿ ಮಾಡುವ ಕಲಬುರ್ಗಿಯಲ್ಲಿರುವ ಇಕ್ಬಾಲ್‌ ಎಂಜಿನಿಯರಿಂಗ್‌ ವರ್ಕ್‌ ಶಾಪ್‌ನಲ್ಲಿ ಸೇವಾ ಪ್ರಮಾಣ ಪತ್ರ ಪಡೆದ ಐವರು ಅಭ್ಯರ್ಥಿಗಳ ಪೈಕಿ, ಇಲಾಖೆಯ ನೌಕರರ ಸಂಬಂಧಿಗಳಾದ ಇಬ್ಬರ ಪ್ರಮಾಣ ಪತ್ರವನ್ನು ಮಾತ್ರ ಸಾರಿಗೆ ಇಲಾಖೆ ಮಾನ್ಯ ಮಾಡಿದೆ. ನೇಮಕಾತಿ ಪ್ರಕ್ರಿಯೆ ಭಾಗವಾಗಿ (ಮೂಲ ದಾಖಲೆ ಪರಿಶೀಲನೆ) ಪ್ರಕಟಿಸಿದ ಪಟ್ಟಿಯಲ್ಲಿ ಇಲ್ಲದ ಅಭ್ಯರ್ಥಿ ಹೆಸರು, ‘ಸೇವಾ ಪ್ರಮಾಣ ಪತ್ರ ದೃಢೀಕರಿಸಿಲ್ಲ’ ಎಂಬ ಷರಾ ಬರೆದು ತಿರಸ್ಕರಿಸಿರುವ ಪಟ್ಟಿಯಲ್ಲಿರುವುದೂ ಸಂದೇಹ ಮೂಡಿಸಿದೆ. ಅಭ್ಯರ್ಥಿಗಳಿಗೆ ಡ್ರೈವಿಂಗ್‌ ಟ್ರ್ಯಾಕ್‌ ಮತ್ತು ದೇಹದಾರ್ಢ್ಯ ಪರೀಕ್ಷೆ ಸರಿಯಾಗಿ ನಡೆಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಅಭ್ಯರ್ಥಿಯೊಬ್ಬರು, 45 ಅಭ್ಯರ್ಥಿಗಳ ಒಂದು ವರ್ಷದ ಸೇವಾ ಪ್ರಮಾಣ ಪತ್ರದ ನೈಜತೆ ಬಗ್ಗೆ ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದರು. ಈ ಎಲ್ಲ ಅಭ್ಯರ್ಥಿಗಳು ಪೆಟ್ರೋಲ್‌ ಹೆವಿ ಗೂಡ್ಸ್‌ ವೆಹಿಕಲ್‌ (ಎಚ್‌ಜಿವಿ) ದುರಸ್ತಿ ಪ್ರಮಾಣ ಪತ್ರ ಪಡೆದಿಲ್ಲ ಎಂದು ಎಸಿಬಿ ವರದಿ ನೀಡಿದೆ. ಆದರೆ, ಈ ಪೈಕಿ, 14 ಅಭ್ಯರ್ಥಿಗಳ ಪರವಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಕೆಪಿಎಸ್‌ಸಿಗೆ ವರದಿ ನೀಡಿದ್ದು, ಅವರೆಲ್ಲರನ್ನು ಆಯ್ಕೆ ಪಟ್ಟಿಯಲ್ಲಿ ಪರಿಗಣಿಸಿರುವುದೂ ಅನುಮಾನಗಳಿಗೆ ಕಾರಣವಾಗಿದೆ.

ತಾತ್ಕಾಲಿಕ ಪಟ್ಟಿಯಲ್ಲಿರುವವರ ಪೈಕಿ ಶೇ 25ರಷ್ಟು ಅಭ್ಯರ್ಥಿಗಳು ಸಾರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಪತ್ನಿ, ಮಕ್ಕಳು, ಸಂಬಂಧಿಗಳು. ಅಷ್ಟೇ ಅಲ್ಲ, ಆಯ್ಕೆ ಪರೀಕ್ಷೆ 400 ಅಂಕಗಳಿಗೆ ನಡೆದಿದ್ದು, ಕೇವಲ 21 ಅಂಕ ಪಡೆದ ಅಭ್ಯರ್ಥಿ ಆಯ್ಕೆಯಾದರೆ, ಮೆರಿಟ್‌ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿರುವವರು ಆಯ್ಕೆಯಾಗಿಲ್ಲ. ಅಷ್ಟರಮಟ್ಟಿಗೆ ವರ್ಕ್‌ಶಾಪ್‌ ಸೇವಾನುಭವದ ಪ್ರಮಾಣ ಪತ್ರದ ದೃಢೀಕರಣ ವೇಳೆ ಸಾರಿಗೆ ಅಧಿಕಾರಿಗಳು ಕರಾಮತ್ತು ಪ್ರದರ್ಶಿಸಿದ್ದಾರೆ ಎನ್ನಲಾಗಿದೆ.

ತಾತ್ಕಾಲಿಕ ಪಟ್ಟಿಯಲ್ಲಿರುವವರ ಪೈಕಿ ಶೇ 25ರಷ್ಟು ಅಭ್ಯರ್ಥಿಗಳು ಸಾರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಪತ್ನಿ, ಮಕ್ಕಳು, ಸಂಬಂಧಿಗಳು. ಅಷ್ಟೇ ಅಲ್ಲ, ಆಯ್ಕೆ ಪರೀಕ್ಷೆ 400 ಅಂಕಗಳಿಗೆ ನಡೆದಿದ್ದು, ಕೇವಲ 21 ಅಂಕ ಪಡೆದ ಅಭ್ಯರ್ಥಿ ಆಯ್ಕೆಯಾದರೆ, ಮೆರಿಟ್‌ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿರುವವರು ಆಯ್ಕೆಯಾಗಿಲ್ಲ. ಅಷ್ಟರಮಟ್ಟಿಗೆ ವರ್ಕ್‌ಶಾಪ್‌ ಸೇವಾನುಭವದ ಪ್ರಮಾಣ ಪತ್ರದ ದೃಢೀಕರಣ ವೇಳೆ ಸಾರಿಗೆ ಅಧಿಕಾರಿಗಳು ಕರಾಮತ್ತು ಪ್ರದರ್ಶಿಸಿದ್ದಾರೆ ಎನ್ನಲಾಗಿದೆ.

12 ವರ್ಷಗಳಿಂದ ಐಎಂವಿ ಹುದ್ದೆಯಲ್ಲಿರುವ ಮೂವರು ಮತ್ತೆ ಪರೀಕ್ಷೆ ಬರೆದು ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಹಿಂದೆ ನಡೆದ ಐಎಂವಿ ಹುದ್ದೆಯ ನೇಮಕಾತಿ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಇವರೂ ಪೆಟ್ರೋಲ್ ಚಾಲಿತ ಲಾರಿ ಮತ್ತು ಬಸ್‌ ದುರಸ್ತಿ ಪ್ರಮಾಣ ಪತ್ರ ಸಲ್ಲಿಸಿ ಆಯ್ಕೆಯಾಗಿರುವುದು ಶಂಕೆಗೆ ಕಾರಣವಾಗಿದೆ.

ಪೆಟ್ರೋಲ್‌ನಲ್ಲಿ ಓಡುವ ಲಾರಿ, ಬಸ್‌
ಐಎಂವಿ ಹುದ್ದೆಯ ನೇಮಕಾತಿಗೆ ಹೊರಡಿಸಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಪೆಟ್ರೋಲ್‌ನಲ್ಲಿ ಓಡುವ ಬಸ್‌ ಮತ್ತು ಲಾರಿ (ಹೆವಿ ಗೂಡ್ಸ್‌ ವೆಹಿಕಲ್‌– ಎಚ್‌ಜಿವಿ) ದುರಸ್ತಿಯ ಸೇವಾನುಭವ ಪ್ರಮಾಣ ಪತ್ರ ಹೊಂದಿರಬೇಕು. ಆದರೆ, ಪೆಟ್ರೋಲ್‌ನಲ್ಲಿ ಓಡುವ ಬಸ್‌, ಲಾರಿಗಳೇ ಈಗ ಇಲ್ಲ.

ಹೀಗಾಗಿ, ಈ ಪ್ರಮಾಣ ಪತ್ರಕ್ಕೆ ವಿನಾಯಿತಿ ನೀಡಿ ಕೇಂದ್ರ ಮೋಟಾರು ವಾಹನ ಕಾಯ್ದೆಗೆ 2019ರ ಮಾರ್ಚ್‌ನಲ್ಲೇ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಆದರೂ, ಈ ಬಗ್ಗೆ ನಕಲಿ ಪ್ರಮಾಣ ಪತ್ರಗಳನ್ನು ದೃಢೀಕರಿಸಿ ಕೆಪಿಎಸ್‌ಸಿಗೆ ಸಾರಿಗೆ ಇಲಾಖೆ ವರದಿ ನೀಡಿದೆ ಎಂದು ಗೊತ್ತಾಗಿದೆ.

ಸೇವಾನುಭವ ಪ್ರಮಾಣ ಪತ್ರಗಳ ಪರಿಶೀಲನೆ ವೇಳೆ ಬೆಂಗಳೂರು, ಕೋಲಾರ, ದಾವಣಗೆರೆ ಭಾಗದ ಸಾರಿಗೆ ಅಧಿಕಾರಿಗಳು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಆದರೆ, ಉತ್ತರ ಕರ್ನಾಟಕ ಭಾಗದ ಸಾರಿಗೆ ಅಧಿಕಾರಿಗಳು ಅಕ್ರಮಕ್ಕೆ ಸಾಥ್‌ ನೀಡಿದ್ದಾರೆ ಎಂದೂ ಅಭ್ಯರ್ಥಿಗಳು ದೂರಿದ್ದಾರೆ.

**
ಮೋಟಾರು ವಾಹನ ನಿರೀಕ್ಷಕ ಹುದ್ದೆಗಳಿಗೆ ಆಯ್ಕೆಯಾದವರ ತಾತ್ಕಾಲಿಕ ಪಟ್ಟಿಗೆ ಆಕ್ಷೇಪಗಳು ಬಂದಿವೆ. ಅವುಗಳನ್ನು ಪರಿಶೀಲಿಸುತ್ತಿದ್ದೇವೆ.
-ಜಿ.ಸತ್ಯವತಿ, ಕೆಪಿಎಸ್‌ಸಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT