ಶುಕ್ರವಾರ, ನವೆಂಬರ್ 22, 2019
20 °C
ಕೆಪಿಎಸ್‌ಸಿ

ಕೆಪಿಎಸ್‌ಸಿ | ಪರೀಕ್ಷಾ ನಿಯಮ ಉಲ್ಲಂಘಿಸಿದ ಆರೋಪ: ಅನರ್ಹ ಅಭ್ಯರ್ಥಿಗಳು ನಿರಾಳ

Published:
Updated:

ಬೆಂಗಳೂರು: 2015ನೇ ಸಾಲಿನ 428 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ನಡೆದ ಮುಖ್ಯ ಪರೀಕ್ಷೆಯಲ್ಲಿ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ‘ವ್ಯಕ್ತಿತ್ವ ಪರೀಕ್ಷೆ’ಗೆ (ಸಂದರ್ಶನ) ಅನರ್ಹರಾಗಿದ್ದ 30 ಅಭ್ಯರ್ಥಿಗಳನ್ನು ಪರಿಗಣಿಸುವಂತೆ ಕರ್ನಾಟಕ ಲೋಕ ಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶಿಸಿದೆ.

ಮುಖ್ಯ ಪರೀಕ್ಷೆ ಮತ್ತು ಕನ್ನಡ ಅರ್ಹತಾ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಒಟ್ಟು 129 ಅಭ್ಯರ್ಥಿಗಳು ಪರೀಕ್ಷಾ ನಿಯಮ ಉಲ್ಲಂಘಿಸಿರುವುದನ್ನು ಕೆಪಿಎಸ್‌ಸಿ ಪತ್ತೆ ಹಚ್ಚಿತ್ತು. ಈ ಅಭ್ಯರ್ಥಿಗಳು ತಮ್ಮ ‘ಗುರುತು’ ನಮೂದಿಸುವ ಮೂಲಕ ಮೌಲ್ಯಮಾಪಕರ ಅಥವಾ ಮೌಲ್ಯಮಾಪನ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದು ಕೆಪಿಎಸ್‌ಸಿ ಪ್ರತಿಪಾದಿಸಿತ್ತು.

ಈ ಪೈಕಿ, 30 ಅಭ್ಯರ್ಥಿಗಳ ಹೆಸರು 1:5 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾದವರ ಪಟ್ಟಿಯಲ್ಲಿ ಇತ್ತು. ಕೆಪಿಎಸ್‌ಸಿ ಈ 30 ಅಭ್ಯರ್ಥಿಗಳನ್ನು ಹೊರಗಿಟ್ಟು ಅವರ ಬದಲು ಬೇರೆ 30 ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆ ಮಾಡಿತ್ತು.

ಅನರ್ಹ ಅಭ್ಯರ್ಥಿಗಳ ಪೈಕಿ ಒಟ್ಟು 13 ಮಂದಿ, ಕೆಪಿಎಸ್‌ಸಿ ನಿರ್ಧಾರದ ವಿರುದ್ಧ ಕೆಎಟಿ ಮೆಟ್ಟಿಲೇರಿದ್ದರು. ಅಭ್ಯರ್ಥಿಗಳ ಅಹವಾಲು ಆಲಿಸಿದ ಕೆಎಟಿ, ‘ಉತ್ತರ ಪತ್ರಿಕೆಯಲ್ಲಿ ಯಾವುದೋ ಹೆಸರು, ಚಿಹ್ನೆ ನಮೂದಿಸಿದ ಕಾರಣಕ್ಕೆ ವ್ಯಕ್ತಿತ್ವ ಪರೀಕ್ಷೆಯಿಂದ ಹೊರಗಿಡುವುದು ನ್ಯಾಯಸಮ್ಮತವಲ್ಲ. ಈ ಕಾರಣಕ್ಕೆ ಪಟ್ಟಿಯಿಂದ ಹೊರಗಿಟ್ಟಿರುವ ಎಲ್ಲ 30 ಅಭ್ಯರ್ಥಿಗಳನ್ನೂ ಪರಿಗಣಿಸಬೇಕು. ಒಂದು ತಿಂಗಳ ಒಳಗೆ ಈ ಅಭ್ಯರ್ಥಿಗಳಿಗೂ ವ್ಯಕ್ತಿತ್ವ ಪರೀಕ್ಷೆ ನಡೆಸಿ, ಮುಂದಿನ ಪ್ರಕ್ರಿಯೆ ನಡೆಸಬೇಕು’ ಎಂದು ಆದೇಶಿಸಿದೆ.

‘ಪ್ರಶ್ನೆ ಮತ್ತು ಉತ್ತರ ಪತ್ರಿಕೆಯಲ್ಲಿ (ಓಎಂಆರ್‌ ರಕ್ಷಾ ಪುಟದಲ್ಲಿ ಹೊರತುಪಡಿಸಿ) ಎಲ್ಲಿಯೂ ಯಾವುದೇ ಗುರುತಿನ ಚಿಹ್ನೆ ಹಾಕುವುದು ಅಥವಾ ಏನನ್ನಾದರೂ ಬರೆಯುವುದು ಪರೀಕ್ಷಾ ನಿರ್ದೇಶನಗಳನ್ನು ಉಲ್ಲಂಘಿಸಿದಂತೆ. ಅಂಥ ಉತ್ತರ ಪತ್ರಿಕೆಯನ್ನು ಅಸಿಂಧು ಎಂದು ಪರಿಗಣಿಸಲಾಗುವುದು’ ಎಂಬುದು ಕೆಪಿಎಸ್‌ಸಿ ನಿಯಮ.

129 ಅಭ್ಯರ್ಥಿಗಳ ಪೈಕಿ ಕೆಲವರು ಕನ್ನಡ ಉತ್ತರ ಪತ್ರಿಕೆಯಲ್ಲಿ ವಿವಿಧ ಕಡೆ ‘ಓಂ ನಮಃ ಶಿವಾಯ’, ‘ನಕ್ಷತ್ರ’, ‘ಸಹಿ’ ಹೀಗೆ ಭಿನ್ನ ಭಿನ್ನ ಗುರುತುಗಳನ್ನು ನಮೂದಿಸಿದ್ದರು. ಅಭ್ಯರ್ಥಿಯೊಬ್ಬರು ತನ್ನ ಪ್ರತಿ ಉತ್ತರದ ಕೊನೆಯಲ್ಲಿ ತಮ್ಮ ಹೆಸರು ಬರೆದಿದ್ದರೆ, ಇನ್ನೂ ತಮ್ಮ ‘ಇಷ್ಟ’ ದೇವರ ಹೆಸರು ಬರೆದಿದ್ದರು. ಒಂದಿಬ್ಬರು ಹಿಂದಿ ಕವಿತೆ, ಚಿತ್ರಗೀತೆ, ಬರೆದಿದ್ದರು. ಕೆಲವರು ‘ಪತ್ರ ಲೇಖನ’ ಬರೆಯುವ ವೇಳೆ ತಮ್ಮದೇ ಹೆಸರು ಮತ್ತು ವಿಳಾಸ ನಮೂದಿಸಿದ್ದರು. ಈ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ಕಾರಣ ಕೇಳಿ ನೋಟಿಸ್‌ ಕೂಡಾ ಜಾರಿ ಮಾಡಿತ್ತು.

ಪ್ರತಿಕ್ರಿಯಿಸಿ (+)