ಶನಿವಾರ, ಸೆಪ್ಟೆಂಬರ್ 19, 2020
22 °C
ಡಿ.16ರ ಪರೀಕ್ಷೆ ಮುಂದೂಡಲು ಕೆಪಿಎಸ್‌ಸಿಗೆ ಆಗ್ರಹ

ಒಂದೇ ದಿನ ನೆಟ್‌– ಕೆಪಿಎಸ್‌ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಪಿಎಸ್‌ಸಿ ಮತ್ತು ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್) ಪರೀಕ್ಷೆ ಒಂದೇ ದಿನ (ಡಿ.16) ನಡೆಯುತ್ತಿರುವುದರಿಂದ ರಾಜ್ಯದ ಸಾವಿರಾರು ಅಭ್ಯರ್ಥಿಗಳು ತೊಂದರೆಗೆ ಸಿಲುಕಿದ್ದಾರೆ.

ಅಭ್ಯರ್ಥಿಗಳ ಎದುರಿಸುತ್ತಿರುವ ಸಮಸ್ಯೆಗೆ ಸ್ಪಂದಿಸದ ಕೆಪಿಎಸ್‌ಸಿ ಡಿ.16 ರಂದು ಪರೀಕ್ಷೆ ನಡೆಸಿಯೇ ತೀರುವುದಾಗಿ ಹೇಳಿದೆ. ಹೀಗಾಗಿ ಸಾಕಷ್ಟು ಅಭ್ಯರ್ಥಿಗಳು ‘ಪ್ರಜಾವಾಣಿ’ ಕಚೇರಿಗೆ ಕರೆ ಮಾಡಿ ಅಳಲು ತೋಡಿಕೊಂಡರು. ಸಾವಿರಾರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಡಿ.16 ರ ಪರೀಕ್ಷೆಯನ್ನು ಮುಂದೂಡಿ ಬೇರೊಂದು ದಿನಾಂಕವನ್ನು ನಿಗದಿ ಮಾಡಬೇಕು ಎಂದೂ ಮನವಿ ಮಾಡಿದರು.

ನೆಟ್‌ ಪರೀಕ್ಷೆ ದಿನಾಂಕವನ್ನು ಬಹಳ ಹಿಂದೆಯೇ ಪ್ರಕಟಿಸಲಾಗಿತ್ತು. ಕೆಪಿಎಸ್‌ಸಿ ಪರೀಕ್ಷೆ ದಿನಾಂಕವನ್ನು ಆ ಬಳಿಕ ಪ್ರಕಟಿಸಿತು. ತಕ್ಷಣವೇ ಈ ವಿಷಯವನ್ನು ಪತ್ರದ ಮೂಲಕ ಕೆಪಿಎಸ್‌ಸಿ ಗಮನಕ್ಕೆ ತರಲಾಯಿತು. ಆಗ ಅಧಿಕಾರಿಗಳು ಬದಲಾಯಿಸುವುದಾಗಿ ಭರವಸೆ ನೀಡಿದ್ದರು. ಆದರೆ,ಕೆಪಿಎಸ್‌ಸಿ ಸಿಬ್ಬಂದಿ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ’ ಎಂದು ಅಭ್ಯರ್ಥಿಯೊಬ್ಬರು ತಿಳಿಸಿದರು.

‘ಕೆಪಿಎಸ್‌ಸಿ ಪರೀಕ್ಷೆ ಇದೇ 12 ರಿಂದ ಆರಂಭವಾಗುತ್ತದೆ. ವಿಜ್ಞಾನ ಎಂಟು ವಿಷಯಗಳ ಪರೀಕ್ಷೆಗಳು ನಡೆಯಲಿದೆ. ಆದರೆ, ನೆಟ್‌ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತದೆ. ಇಡೀ ರಾಜ್ಯದ ಅಭ್ಯರ್ಥಿಗಳು ಬೆಂಗಳೂರಿಗೇ ಬರಬೇಕು. ಕೆಪಿಎಸ್‌ಸಿ ಪರೀಕ್ಷೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯುತ್ತದೆ. ವಿಜಯಪುರ, ಬೀದರ್‌ ಮತ್ತು ಕಲಬುರ್ಗಿ ಜಿಲ್ಲೆಯ ಅಭ್ಯರ್ಥಿಗಳು ಧಾರವಾಡ ಪರೀಕ್ಷಾ ಕೇಂದ್ರಗಳಲ್ಲಿ ಕೆಪಿಎಸ್‌ಸಿಗೆ ಪರೀಕ್ಷೆ ಬರೆದರೆ, ನೆಟ್‌ ಪರೀಕ್ಷೆಗೆ ಬೆಂಗಳೂರಿಗೇ ಬರಬೇಕು. ಪರಿಸ್ಥಿತಿ ಈ ರೀತಿ ಇರುವಾಗ ಎರಡೂ ಪರೀಕ್ಷೆಯನ್ನು ಒಂದೇ ದಿನ ಬರೆಯುವುದು ಹೇಗೆ. ಇದರಿಂದ ನಮ್ಮ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ’ ಎಂದರು.

ಕೆಪಿಎಸ್‌ಸಿ ಈ ಹಿಂದೆ ಅಕ್ಟೋಬರ್‌– ನವೆಂಬರ್‌ನಲ್ಲಿ ಪರೀಕ್ಷೆ ನಡೆಸಬೇಕಿತ್ತು. ಕಾರಣಾಂತರಗಳಿಂದ ಪರೀಕ್ಷೆಯನ್ನು ಮುಂದೂಡಿತ್ತು.

ಡಿಸೆಂಬರ್‌ನಲ್ಲಿ ನಡೆಸುವಾಗ ಡಿ.16 ರ ನೆಟ್‌ ಪರೀಕ್ಷೆ ಅಲ್ಲದೆ, ಡಿ 23 ಕ್ಕೆ ನಡೆಯುವ ಕೆವಿಎಸ್‌ (ಕೇಂದ್ರೀಯ ವಿದ್ಯಾಲಯ) ಮತ್ತು ಡಿ.30 ಕ್ಕೆ ನಡೆಯುವ ಕೆಎಸ್‌ಇಟಿ (ಕರ್ನಾಟಕ ಸ್ಟೇಟ್‌ ಎಲಿಜಿಬಿಲಿಟಿ ಟೆಸ್ಟ್‌) ದಿನಾಂಕಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಿತ್ತು. ಈ ವಿಷಯದಲ್ಲಿ ಕೆಪಿಎಸ್‌ಸಿ ನಿರ್ಲಕ್ಷ್ಯ ತೋರಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

*
ವಿದ್ಯಾರ್ಥಿಗಳು ಕೇಳಲಾಗದೆ ಕೆಪಿಎಸ್‌ಸಿ ಹೆಲ್ಪ್‌ಲೈನ್‌ ಅನ್ನು ಬಂದ್‌ ಮಾಡಿ ಬಿಟ್ಟಿದೆ. ಈಗ ನಮಗೆ ಏನು ಮಾಡಬೇಕೆಂದು ತೋಚುತ್ತಿಲ್ಲ
– ಅಭ್ಯರ್ಥಿ, ವಿಜಯಪುರ ಜಿಲ್ಲೆ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು