ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ಮೂರು ಬ್ಯಾಚ್‌ನವರಿಗೂ ರಕ್ಷಣೆ

ಅಕ್ರಮ–ಸಕ್ರಮಕ್ಕೆ ಸುಗ್ರೀವಾಜ್ಞೆಯ ದಾರಿ
Last Updated 3 ಜೂನ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: 1998ನೇ ಸಾಲಿನ ಗೆಜೆಟೆಡ್ ಅಧಿಕಾರಿಗಳ ನೇಮಕಾತಿ ಅಕ್ರಮಗಳನ್ನು ಸಕ್ರಮ ಮಾಡುವುದರ ಜತೆಗೆ 1999 ಹಾಗೂ 2004ರ ಬ್ಯಾಚ್ ಅಧಿಕಾರಿಗಳ ರಕ್ಷಣೆಗೂ ಮುಂದಾಗಿರುವ ಸರ್ಕಾರ, ಅದಕ್ಕಾಗಿಯೇ ಸುಗ್ರೀವಾಜ್ಞೆ ತರುತ್ತಿದೆ ಎಂಬ ಆಕ್ಷೇಪ ಅಧಿಕಾರಿಗಳ ವಲಯದಲ್ಲಿ ವ್ಯಕ್ತವಾಗಿದೆ.

1998ನೇ ಸಾಲಿನಲ್ಲಿ ನಡೆದ ನೇಮಕಾತಿಯಲ್ಲಿಅನ್ಯಾಯಕ್ಕೆ ಒಳಗಾಗಿದ್ದ 28 ಮಂದಿಗೆ ಹೊಸದಾಗಿ ಹುದ್ದೆ ನೀಡುವುದು ಹಾಗೂ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿದ್ದ 28 ಅಧಿಕಾರಿಗಳಿಗೆ ಸೇವಾ ಭದ್ರತೆ ಕಲ್ಪಿಸುವ ಸುಗ್ರೀವಾಜ್ಞೆ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು.

‘ಸುಗ್ರೀವಾಜ್ಞೆ ಜಾರಿಗೆ ಬಂದರೆ ಈ ಮೂರು ಬ್ಯಾಚ್‌ನಲ್ಲಿ ನಡೆದ ಅಕ್ರಮ ನೇಮಕಾತಿಗಳು ಸಕ್ರಮಗೊಳ್ಳಲಿವೆ. ಮೊದಲಿಗೆ 1998ರ ಬ್ಯಾಚ್ ಎಂದು ಹೇಳಿಕೊಂಡು, ಈಗ ಉಳಿದ ಎರಡು ಬ್ಯಾಚ್‌ಗೂ ಅನ್ವಯಿಸುವ ಪ್ರಯತ್ನ ನಡೆದಿದೆ’ ಎಂದು ಅನ್ಯಾಯಕ್ಕೆ ಒಳಗಾದವರ ಪರ ಹೋರಾಟ ನಡೆಸಿದ ವಕೀಲ ಖಲೀಲ್ ಅಹಮದ್ ಹೇಳುತ್ತಾರೆ.

‘ಸುಗ್ರೀವಾಜ್ಞೆ ತರುತ್ತಿರುವುದೇ ಹೈಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಅಂತಹುದರಲ್ಲಿ ಉಳಿದೆರಡು ಬ್ಯಾಚ್‌ಗಳಿಗೂ ಅನ್ವಯಿಸುವಂತೆ ಮಾಡುವ ಹುನ್ನಾರ ನಡೆದಿದೆ. ಸರ್ಕಾರ ಹೇಳಿದ್ದು ಒಂದು, ಮಾಡುತ್ತಿರುವುದು ಮತ್ತೊಂದು’ ಎಂದು ಅವರು ಆರೋಪಿಸಿದರು.

ನಷ್ಟದ ಅಂದಾಜು: ಹೈಕೋರ್ಟ್ ತೀರ್ಪು ಪಾಲನೆಯಾಗಿದ್ದರೆ 1998ರ ಬ್ಯಾಚ್‌ನ 28 ಅಧಿಕಾರಿಗಳನ್ನು ಹುದ್ದೆಯಿಂದ ಬಿಡುಗಡೆ ಮಾಡಿ, ಈವರೆಗೆ ಕೊಟ್ಟಿರುವ ವೇತನ ವಾಪಸ್ ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕಿತ್ತು. ಹಾಗೆ ಮಾಡದೆ ಹೊಸದಾಗಿ 28 ಅಧಿಕಾರಿಗಳನ್ನು ನೇಮಿಕೊಳ್ಳುವುದರಿಂದ ಸರ್ಕಾರದ ಬೊಕ್ಕಸಕ್ಕೂ ಆರ್ಥಿಕ ಹೊರೆಯಾಗಲಿದೆ.

1998ರಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಗೊಂಡರೂ 2006ರಲ್ಲಿ ಪ್ರಕ್ರಿಯೆ ಪೂರ್ಣಗೊಂಡು, ಕೆಲಸಕ್ಕೆ ಹಾಜರಾಗಿದ್ದರು. ಈಗ ನೇಮಕಗೊಳ್ಳುವ ಅಧಿಕಾರಿಗಳಿಗೆ ಇಷ್ಟು ವರ್ಷದ ವೇತನವನ್ನು ಒಮ್ಮೆಲೆ ಕೊಡಬೇಕಿದೆ. ಸುಮಾರು ₹40 ಕೋಟಿಯಷ್ಟು ಹೆಚ್ಚುವರಿ ಹೊರೆ ಸರ್ಕಾರದ ಮೇಲೆ ಆಗಲಿದೆ ಎಂದು ಅಂದಾಜು ಮಾಡಲಾಗಿದೆ.

ವೇತನವಷ್ಟೇ ಕೊಡಬೇಕೆ, ತಡವಾಗಿರುವುದರಿಂದ ಅದಕ್ಕೆ ಬಡ್ಡಿ ಸೇರಿಸಿಕೊಡಬೇಕೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಬಡ್ಡಿಯನ್ನೂ ಸೇರಿಸಿ ಕೊಡಲು ನಿರ್ಧರಿಸಿದರೆ, ಆರ್ಥಿಕ ಹೊರೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT