ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿಮೂರು ವರ್ಷಗಳ ಬಳಿಕ ಕೆಪಿಎಸ್‌ಸಿ ಪರಿಷ್ಕರಿಸಿರುವ ಆಯ್ಕೆ ಪಟ್ಟಿ ಜಾರಿ

107 ಹುದ್ದೆಗಳು ಬದಲು
Last Updated 30 ನವೆಂಬರ್ 2019, 19:04 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 107 ಅಧಿಕಾರಿಗಳನ್ನು 13 ವರ್ಷಗಳ ಬಳಿಕ ಹಾಲಿ ಹುದ್ದೆಯಿಂದ, ಹೊಸ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.

1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ನಡೆದಿದ್ದ ಪ್ರಮಾದವನ್ನು ಸರ್ಕಾರ ಕೊನೆಗೂ ಸರಿಪಡಿಸಿದಂತಾಗಿದೆ. ಹುದ್ದೆ ಪಲ್ಲಟ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಶನಿವಾರ ‘ಅನಧಿಕೃತ ಟಿಪ್ಪಣಿ’ ಕಳುಹಿಸಿದೆ. ತಕ್ಷಣವೇ ಈ ಅಧಿಕಾರಿಗಳನ್ನು ಹಾಲಿ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಡಿಪಿಎಆರ್‌ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದೆ.

2006ರಲ್ಲಿ ಗೆಜೆಟೆಡ್ ಪ‍್ರೊಬೇಷನರಿ ಅಧಿಕಾರಿಗಳಾಗಿ ಡಿಪಿಎಆರ್‌, ಆರ್ಥಿಕ, ಕಾರ್ಮಿಕ, ಸಮಾಜ ಕಲ್ಯಾಣ, ಕಂದಾಯ, ಕೌಶಲಾಭಿವೃದ್ಧಿ, ಯುವಜನ ಸೇವೆ, ನಗರಾಭಿವೃದ್ಧಿ ಹಾಗೂ ಸಹಕಾರ ಇಲಾಖೆಯಲ್ಲಿ ಕರ್ತವ್ಯಕ್ಕೆ ಸೇರಿದ ಅಧಿಕಾರಿಗಳು ಹೊಸ ನೇಮಕಾತಿ ಪಟ್ಟಿಯ ಪ್ರಕಾರ ಸ್ಥಾನಪಲ್ಲಟಗೊಂಡಿದ್ದಾರೆ.

ಈ ಅಧಿಕಾರಿಗಳ ಪೈಕಿ, ಕರ್ತವ್ಯಕ್ಕೆ ಸೇರಿದವರು, ಮರಣ ಹೊಂದಿದವರು, ವಜಾಗೊಂಡವರು, ರಾಜೀನಾಮೆ ಹಾಗೂ ಕಡ್ಡಾಯ ನಿವೃತ್ತಿ ಹೊಂದಿರುವವರು ಇದ್ದರೆ ಆಯಾ ನೇಮಕಾತಿ ಪ್ರಾಧಿಕಾರಗಳು ಆ ಮಾಹಿತಿಯನ್ನು ದೃಢೀಕರಿಸಿ ನೀಡಬೇಕು ಎಂದು ಡಿಪಿಎಆರ್‌ ತಿಳಿಸಿದೆ.

ಹೈಕೋರ್ಟ್‌ 2016ರ ಜೂನ್‌ 21ರಂದು ನೀಡಿದ್ದ ಆದೇಶದಂತೆ 1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ 383 ಹುದ್ದೆಗಳ ಆಯ್ಕೆ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪರಿಷ್ಕರಿಸಿದ್ದು, ಇದೇ ಆ. 22ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು. ಆ ಪಟ್ಟಿ ಅನ್ವಯ, ಮೂಲ ಆಯ್ಕೆ ಪಟ್ಟಿಯಲ್ಲಿರುವ ಒಟ್ಟು 173 ಅಧಿಕಾರಿಗಳ ಹುದ್ದೆ ಬದಲಾಗುತ್ತದೆ.

ಈ ಪೈಕಿ, 25 ಅಧಿಕಾರಿಗಳಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡುವಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಹಾಗೂ 11 ಅಧಿಕಾರಿಗಳ (ಐಎಎಸ್‌ಗೆ ಬಡ್ತಿ ಹೊಂದಿರುವ) ಆಯ್ಕೆಗೆ ಸಂಬಂಧಿಸಿದಂತೆ ಕೇಂದ್ರೀಯ ಆಡಳಿತ ನ್ಯಾಯಮಂಡಳಿ ತಡೆಯಾಜ್ಞೆ ನೀಡಿದೆ. ಅಲ್ಲದೆ, ತೀರ್ಪಿನಲ್ಲಿದ್ದ 3ನೇ ನಿರ್ದೇಶನದಂತೆ (90 ಉತ್ತರ ಪತ್ರಿಕೆಗಳ ಮೂರನೇ ಮೌಲ್ಯಮಾಪನ ಅಂಕ ಪರಿಗಣಿಸಬೇಕು) ಪ್ರಕಟಿಸಿರುವ ಅಂತಿಮ ಆಯ್ಕೆ ಪಟ್ಟಿಯಲ್ಲಿ 30 ಅಧಿಕಾರಿಗಳು ಎರಡನೇ ನಿರ್ದೇಶನದಂತೆ ಪ್ರಕಟಿಸಿರುವ ಪರಿಷ್ಕೃರಿಸಿರುವ ಪಟ್ಟಿಯಲ್ಲಿರುವಂತೆ ಹುದ್ದೆ ಬದಲಾಗದೆ ಯಥಾಸ್ಥಿತಿಯಲ್ಲಿ ಮುಂದುವರಿಯುತ್ತಾರೆ. ಹೀಗಾಗಿ, ಈ ಅಧಿಕಾರಿಗಳಿಗೆ ಹೊಸದಾಗಿ ನೇಮಕಾತಿ ಆದೇಶ ನೀಡುವ ಅಗತ್ಯ ಇಲ್ಲ ಎಂದೂ ಡಿಪಿಎಆರ್‌ ಸ್ಪಷ್ಟಪಡಿಸಿದೆ.

ಪರಿಷ್ಕೃತ ಪಟ್ಟಿ ಪ್ರಕಾರ 36 ಅಧಿಕಾರಿಗಳು ಹುದ್ದೆ ಕಳೆದುಕೊಳ್ಳುತ್ತಾರೆ. ಅಧಿಕಾರಿಗಳನ್ನು ಕೈಬಿಡುವ ಸಂಬಂಧ, ವೇತನ, ಭವಿಷ್ಯ ನಿಧಿ ಮತ್ತು ಇತರ ನಿವೃತ್ತಿ ಸೌಲಭ್ಯಗಳನ್ನು ಯಾವ ರೀತಿ ಪರಿಗಣಿಸಬೇಕು ಎಂಬ ಬಗ್ಗೆ ಆರ್ಥಿಕ ಇಲಾಖೆ, ಕಾನೂನು ಇಲಾಖೆ ಮತ್ತು ಡಿಪಿಎಆರ್‌ನಿಂದ (ಸೇವಾನಿಯಮಗಳು) ಅಭಿಪ್ರಾಯ ಪಡೆಯಲು ಸರ್ಕಾರ ನಿರ್ಧರಿಸಿದೆ.

ಹೈಕೋರ್ಟ್‌ ನೀಡಿದ್ದ ತೀರ್ಪು ಜಾರಿ ಆಗಿಲ್ಲವೆಂದು ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನಾ ಅರ್ಜಿ ವಿಚಾರಣಾ ಹಂತದಲ್ಲಿದೆ. ಇದೇ 14ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ತೀರ್ಪು ಜಾರಿಗೆ ನಾಲ್ಕು ವಾರಗಳ ಗಡುವು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT