ಬುಧವಾರ, ನವೆಂಬರ್ 13, 2019
25 °C
ಸೆಪ್ಟೆಂಬರ್ ಕೊನೆಯ ವಾರದ ಬದಲು, ಡಿಸೆಂಬರ್‌ನಲ್ಲಿ ಆಯೋಜನೆ

ಮುಂಗಾರು ವಿಸ್ತರಣೆ ಸಾಧ್ಯತೆ; ಕೃಷಿ ಮೇಳ ಮುಂದೂಡಿಕೆ

Published:
Updated:

ಧಾರವಾಡ: ‘ನೈರುತ್ಯ ಮುಂಗಾರು ಒಂದು ತಿಂಗಳು ವಿಸ್ತರಣೆಯಾಗುವ ಸಾಧ್ಯತೆ ಇರುವುದರಿಂದ ಕೃಷಿ ಮೇಳವನ್ನು ಡಿಸೆಂಬರ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಬಿ.ಚೆಟ್ಟಿ ತಿಳಿಸಿದರು.

ಉತ್ತರ ಕರ್ನಾಟಕ ಜಿಲ್ಲಾ ವ್ಯಾಪ್ತಿ ಹೊಂದಿರುವ ಕೃಷಿ ವಿವಿ ಪ್ರತಿ ವರ್ಷ ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ಆಯೋಜಿಸಲಾಗುವ ಕೃಷಿ ಮೇಳವನ್ನು ಈ ಬಾರಿ ಡಿಸೆಂಬರ್‌ಗೆ ಮುಂದೂಡಲಾಗಿದೆ. ಈ ಕುರಿತು ಅಧಿಕಾರಿಗಳ ಸಭೆ ನಡೆಸಿದ ಡಾ. ಚೆಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸೆ. 21ರಿಂದ 24ರವರೆಗೆ ಮೇಳ ನಡೆಸಲು ಈ ಮೊದಲು ತೀರ್ಮಾನಿಸಲಾಗಿತ್ತು. ಆದರೆ ಉತ್ತರ ಕರ್ನಾಟಕ ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪರ, ಉತ್ತರ ಕನ್ನಡ, ಗದಗ ಜಿಲ್ಲೆಯಲ್ಲಿ ಉಂಟಾದ ನೆರೆ ಪರಿಸ್ಥಿತಿಯಿಂದ ಸಾಕಷ್ಟು ಹಾನಿಯಾಗಿದೆ. ರೈತರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಹೀಗಾಗಿ ಹಿಂಗಾರು ಹಂಗಾಮಿಗೆ ಅನುಕೂಲವಾಗುವಂತೆ ತಂತ್ರಜ್ಞಾನವನ್ನು ಮೇಳದಲ್ಲಿ ಪ್ರದರ್ಶಿಸಲಾಗುವುದು’ ಎಂದರು.

‘ಹವಾಮಾನ ಇಲಾಖೆ ಮುನ್ಸೂಚನೆಯಂತೆ ಸೆ. 21ರಿಂದ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಅದರಂತೆಯೇ ಈ ಬಾರಿ ನೈರುತ್ಯ ಮುಂಗಾರು ಒಂದು ತಿಂಗಳು ಹೆಚ್ಚುವರಿಯಾಗಿ ಸುರಿಯಲಿದೆ. ಅಕ್ಟೋಬರ್‌ನಲ್ಲೂ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಇಂಥ ಸಂದರ್ಭದಲ್ಲಿ ಕೃಷಿ ಮೇಳ ಆಯೋಜಿಸುವುದು ಸೂಕ್ತವಲ್ಲ ಎಂದು ಸ್ಟಿಯರಿಂಗ್ ಕಮಿಟಿ ಅಭಿಪ್ರಾಯ ವ್ಯಕ್ತಪಡಿಸಿತು. ಆದರೆ ಹಿಂಗಾರು ಹಂಗಾಮಿಗೆ ಅನುಕೂಲವಾಗುವಂತೆ ಬೀಜ ಮಾರಾಟವನ್ನು ಆರಂಭಿಸಲಾಗಿದೆ. ಕೃಷಿ ವಿವಿಯ ಬೀಜಘಟಕದಲ್ಲಿ ಗುಣಮಟ್ಟದ ಬೀಜಗಳ ಮಾರಾಟ ನಡೆದಿದೆ’ ಎಂದು ಡಾ. ಚೆಟ್ಟಿ ತಿಳಿಸಿದರು.

ಪ್ರತಿಕ್ರಿಯಿಸಿ (+)