ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ ₹1,855 ಕೋಟಿ ಖರ್ಚಿಗೆ ಆತುರ

ಗುರುವಾರ , ಮಾರ್ಚ್ 21, 2019
30 °C
ನೀರಾವರಿ ಗುತ್ತಿಗೆ ತರಾತುರಿ

ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ ₹1,855 ಕೋಟಿ ಖರ್ಚಿಗೆ ಆತುರ

Published:
Updated:

ಬೆಂಗಳೂರು: ಲೋಕಸಭೆ ಚುನಾವಣೆ ಮುಗಿಯುವ ಮುನ್ನವೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂಬ ತವಕದಲ್ಲಿ ನಿಯಮಗಳನ್ನು ಉಲ್ಲಂಘಿಸಿ, ₹1,856 ಕೋಟಿ ಮೊತ್ತದ ಯೋಜನೆಗೆ ಜಲಸಂಪನ್ಮೂಲ ಇಲಾಖೆ ಟೆಂಡರ್ ಕರೆದಿದೆ.

ತುರ್ತು ಕಾಮಗಾರಿ ಅಲ್ಲದೇ ಇದ್ದರೂ  ಅಲ್ಪಾವಧಿ ಟೆಂಡರ್‌ ಕರೆಯಲಾಗಿದೆ. ಇದರ ಹಿಂದೆ ‘ಅನ್ಯ’ ಉದ್ದೇಶ ಇರುವುದು ಸ್ಪಷ್ಟ ಎಂದು ಇಲಾಖೆಯ ಅಧಿಕಾರಿಗಳೇ ಹೇಳುತ್ತಿದ್ದಾರೆ.

ನಿಯಮಗಳಲ್ಲಿ ಇರುವ ಅವಕಾಶ ಬಳಸಿಕೊಂಡು ಟೆಂಡರ್ ಕರೆಯಲಾಗಿದೆ. 2 ತಿಂಗಳು ಸಮಯ ಕೊಡಬೇಕು ಎಂಬುದೇನಿಲ್ಲ ಎಂದು ಟೆಂಡರ್‌ ಕರೆದಿರುವ ಕೃಷ್ಣಾ ಭಾಗ್ಯ ಜಲ ನಿಗಮದ ಎಂಜಿನಿಯರ್ ಸಮರ್ಥಿಸಿಕೊಂಡಿದ್ದಾರೆ.

ಏನಿದು ಯೋಜನೆ: ಕೃಷ್ಣಾ ನದಿ ನೀರನ್ನು ಆಶ್ರಯಿಸಿರುವ ಪ್ರದೇಶಗಳಲ್ಲಿ ನೀರಿನ ಮಿತವ್ಯಯ ಹಾಗೂ ಸಮರ್ಪಕ ಬಳಕೆಯ ಉದ್ದೇಶದಿಂದ ಕೆಲವು ಪ್ರದೇಶಗಳನ್ನು ಹನಿ ನೀರಾವರಿಗೆ ಒಳಪಡಿಸುವ ಯೋಜನೆ ಆರು ವರ್ಷದ ಹಿಂದೆಯೇ ಸಿದ್ಧವಾಗಿತ್ತು. ನಾರಾಯಣಪುರ ಎಡದಂಡೆ ನಾಲೆ (ಎನ್‌ಎಲ್‌ಬಿಸಿ) ವ್ಯಾಪ್ತಿಯ 1,05,623 ಹೆಕ್ಟೇರ್‌ ಪ್ರದೇಶವನ್ನು ₹2,368 ಕೋಟಿ ವೆಚ್ಚದಲ್ಲಿ ಹನಿ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಯೋಜನೆ ರೂಪಿಸಲಾಗಿತ್ತು. ಅದಕ್ಕೆ ಈಗ ಟೆಂಡರ್‌ ಆಹ್ವಾನಿಸಲಾಗಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ವ್ಯಾಪ್ತಿಯ ಕೃಷಿ ಭೂಮಿಗೆ ನೀರುಣಿಸುವ ಉದ್ದೇಶದಿಂದ ‘ನಂದವಾಡಗಿ ಹನಿ ನೀರಾವರಿ ಯೋಜನೆ’ಯಡಿ ಮೂರು ಪ್ರತ್ಯೇಕ ಪ್ಯಾಕೇಜ್‌ಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಇದೇ 1ರಂದು ಟೆಂಡರ್ ಕರೆಯಲಾಗಿದೆ. ಏಪ್ರಿಲ್‌ 4 ರವರೆಗೆ ಮಾತ್ರ ಅವಕಾಶ ಕೊಟ್ಟಿರುವುದು ಅನುಮಾನಕ್ಕೆ ಕಾರಣ ಎಂದು ಮೂಲಗಳು ಹೇಳಿವೆ.

ವಿನ್ಯಾಸ, ನೀರು ಪೂರೈಕೆಗೆ ವ್ಯವಸ್ಥೆ, ಅನುಷ್ಠಾನ, ಪರೀಕ್ಷೆ ಮತ್ತು ಕಾರ್ಯಾಚರಣೆ, ನಿರ್ವಹಣೆ ಹಸ್ತಾಂತರಿಸುವ ಕೆಲಸಗಳೂ ಪ್ಯಾಕೇಜ್‌ಗಳಲ್ಲಿ ಸೇರಿವೆ. 

ಉಲ್ಲಂಘನೆ ಎಲ್ಲಿ: ಕರ್ನಾಟಕ ಸಾರ್ವಜನಿಕ ಸಂಗ್ರಹಗಳಲ್ಲಿ ಪಾರದರ್ಶಕತೆ ಕಾಯ್ದೆ(ಕೆಟಿ‍ಪಿಪಿ ಕಾಯ್ದೆ) ಅಡಿ ಟೆಂಡರ್‌ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಕೈಗೊಳ್ಳಲು ಹಲವು ನಿಬಂಧನೆಗಳನ್ನು ವಿಧಿಸಲಾಗಿದೆ. 

ಇಷ್ಟು ಬೃಹತ್ ಮೊತ್ತದ ಟೆಂಡರ್ ಕರೆಯುವಾಗ ನಿಯಮದಂತೆ ಕನಿಷ್ಠ ಸಮಯ ನೀಡದೇ ಇದ್ದರೆ, ಟೆಂಡರ್ ಸಲ್ಲಿಸುವವರು ಯೋಜನೆಯ ಪರಾಮರ್ಶೆ ಮಾಡುವುದು ಕಷ್ಟ ಎಂಬ ಕಾರಣಕ್ಕೆ 60 ದಿನ ಸಮಯ ನೀಡಬೇಕು ಎಂಬ ನಿಯಮ ಇದೆ. ಇಲ್ಲಿ ಅದನ್ನು ಉಲ್ಲಂಘನೆ ಮಾಡಲಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ. 

‘ಮಳೆಯಿಂದ ಸಂತ್ರಸ್ತರಾದವರಿಗೆ ಪುನರ್ವಸತಿ, ಪ್ರಾಕೃತಿಕ ವಿಕೋಪದ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಾಗ ಕೆಟಿಪಿಪಿ ಕಾಯ್ದೆ ಅನ್ವಯಿಸಬೇಕಿಲ್ಲ. ಹನಿ ನೀರಾವರಿ ಯೋಜನೆ ಅನುಷ್ಠಾನ ತುರ್ತಾಗಿ ಆಗಬೇಕಾದ ಯೋಜನೆಯೇನೂ ಅಲ್ಲ. ಕಾಯ್ದೆ ಅನ್ವಯ ಅವಕಾಶ ನೀಡಿದ್ದರೆ ನಷ್ಟವೇನೂ ಆಗುತ್ತಿರಲಿಲ್ಲ’

ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳನ್ನು ತಮಗೆ ಬೇಕಾದಂತೆ ರೂಪಿಸಿ, ಅಷ್ಟೇ ಮೊತ್ತಕ್ಕೆ ನಿಗದಿಪಡಿಸಿಕೊಳ್ಳುವ ಚತುರತೆ ಹೊಂದಿರುವ ಮೂವರು ಪ್ರಭಾವಿ ಗುತ್ತಿಗೆದಾರರಿದ್ದಾರೆ. ಅವರ ಪೈಕಿ ರಾಯಚೂರು ಜಿಲ್ಲೆಯ ಮಾಜಿ ಶಾಸಕರೊಬ್ಬರೂ ಸೇರಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಈ ತರಾತುರಿಯ ಹಿಂದೆ ಇದೆ. ಲೋಕಸಭೆ ಚುನಾವಣೆ ಬಳಿಕ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಬದಲಾವಣೆ ಆಗಬಹುದು. ಹೀಗಾಗಿ, ಅದಕ್ಕೆ ಮುನ್ನವೇ ಟೆಂಡರ್ ಪ್ರಕ್ರಿಯೆ ಮುಗಿಸುವ ಲೆಕ್ಕಾಚಾರವೂ ಇದರ ಹಿಂದೆ ಇದ್ದಂತಿದೆ. ಈ ಕಾರಣಕ್ಕೆ ನಿಯಮ ಉಲ್ಲಂಘನೆ ಮಾಡಿರುವ ಸಂಶಯ ಇದೆ’ ಎಂದು ಹಿರಿಯ 
ಅಧಿಕಾರಿಯೊಬ್ಬರು ಹೇಳಿದರು. 

ಕೆಟಿಪಿಪಿ ಕಾಯ್ದೆ ಹೇಳುವುದೇನು?

ಕೆಟಿಪಿಪಿ ಕಾಯ್ದೆ 2000ರ ಅಧ್ಯಾಯ 5ರ 17ನೇ ನಿಯಮದಲ್ಲಿ ಟೆಂಡರ್‌ಗೆ ನೀಡಬೇಕಾದ ಕನಿಷ್ಠ ಸಮಯವನ್ನು ನಿಗದಿಪಡಿಸಲಾಗಿದೆ.

ಟೆಂಡರ್‌ ಆಹ್ವಾನಿಸುವ ನೋಟಿಸ್‌ ಪ್ರಕಟಣೆ ದಿನಾಂಕ ಹಾಗೂ ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕದ ಮಧ್ಯೆ ಕನಿಷ್ಠ ಸಮಯ ನೀಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ₹2 ಕೋಟಿ ಮೊತ್ತದ ಒಳಗಿನ ಟೆಂಡರ್‌ಗೆ ಕನಿಷ್ಠ 30 ದಿನ ಹಾಗೂ ₹2 ಕೋಟಿಗೂ ಹೆಚ್ಚಿನ ಮೊತ್ತದ ಟೆಂಡರ್‌ಗೆ ಕನಿಷ್ಠ 60 ದಿನ ಇರುವಂತೆ ನೋಡಿಕೊಳ್ಳಬೇಕು.

* ಕೆಟಿಪಿಪಿ ಕಾಯ್ದೆ ಅನುಸಾರ ಟೆಂಡರ್‌ ಪ್ರಕ್ರಿಯೆಗೆ ಒಂದು ವಾರ ಸಮಯ ನೀಡಿದರೆ ಸಾಕು. ನಿಯಮಗಳಲ್ಲಿ ಇರುವ ಅವಕಾಶ ಬಳಸಿಕೊಳ್ಳಲಾಗಿದೆ

-ಶಂಕರ್‌, ವ್ಯವಸ್ಥಾಪಕ ನಿರ್ದೇಶಕ, ಕೆಬಿಜೆಎನ್‌ಎಲ್‌

ಯೋಜನೆಯ ವಿವರ

₹638.08 ಕೋಟಿ

ಪ್ಯಾಕೇಜ್‌ 1ರ ಅಡಿ 12 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿ

₹785.64 ಕೋಟಿ

ಪ್ಯಾಕೇಜ್ 2ರ ಅಡಿ 12,500 ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿ

₹432.13 ಕೋಟಿ

ಪ್ಯಾಕೇಜ್ 3 ಅಡಿ 11,600 ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !