ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸತಿನ ಸೃಷ್ಟಿಗೆ ನಿರಾಕರಣೆ ಮುಖ್ಯ: ಸಿತಾಂಶು ಯಶಸ್ಚಂದ್ರ

Last Updated 2 ಜೂನ್ 2018, 19:30 IST
ಅಕ್ಷರ ಗಾತ್ರ

2017 ರ ಪ್ರತಿಷ್ಠಿತ ಸರಸ್ವತೀ ಸಮ್ಮಾನ್ ಪ್ರಶಸ್ತಿಗೆ ಪಾತ್ರರಾಗಿರುವ ಸಿತಾಂಶು ಯಶಸ್ಚಂದ್ರರ ಸೃಜನಶೀಲ ಬರವಣಿಗೆಯನ್ನು ಓದುವುದು ಎಂದರೆ ಗುಜರಾತಿನ ಮೂರು ದಶಕಗಳ, 1950ರಿಂದ 1970ರವರೆಗಿನ ಸಾಹಿತ್ಯವನ್ನು ಒಟ್ಟಾರೆಯಾಗಿ ನೋಡುವುದು ಎಂದಾಗುತ್ತದೆ. ಅವರ ಬರವಣಿಗೆಯ ಕಾಲ ಹೆಚ್ಚುಕಡಿಮೆ ನಮ್ಮ ಗೋಪಾಲಕೃಷ್ಣ ಅಡಿಗರ ಕಾಲ.

ಇಲ್ಲಿ ಕುವೆಂಪು ಮತ್ತಿತರರು ಅಡಿಗರ ಹಿರಿಯ ಸಮಕಾಲೀನರಾಗಿದ್ದಂತೆ ಸಿತಾಂಶು ಯಶಸ್ಚಂದ್ರರ ಜೊತೆ ಖ್ಯಾತ ಉಮಾಶಂಕರ ಜೋಶಿ ಹಾಗೂ ಸುರೇಶ್ ಜೋಶಿ ಇದ್ದರು. ಅಡಿಗರು ಹೇಗೆ ನವೋದಯದಿಂದ ಭಿನ್ನವಾದ ಕಾವ್ಯ ಸೃಷ್ಟಿಗೆ ಪ್ರಾರಂಭಿಸಿದರೋ ಅದೇ ರೀತಿಯಲ್ಲಿ ಯಶಸ್ಚಂದ್ರ ಉಮಾಶಂಕರ ಜೋಶಿ ಹಾಗೂ ಸುರೇಶ್ ಜೋಶಿ ಅವರ ಕಾವ್ಯ ರೀತಿಯನ್ನು ನಿರಾಕರಿಸಿದರೂ ಅದನ್ನು ತಮ್ಮ ಕಾವ್ಯ ಜೀವನದ ಒಂದು ಅಂಶವಾಗಿರಿಸಿ ಕೊಂಡು ಅಡಿಗರಂತೆ ಹೊಸ ಲಯ, ಹೊಸ ಧೋರಣೆಗಳನ್ನು ತಮ್ಮ ಕಾಲದ ಗುಜರಾತಿ ಸಾಹಿತ್ಯಕ್ಕೆ ತಂದು ಅದನ್ನು ಶ್ರೀಮಂತವಾಗಿಸಿದರು.

ಅಡಿಗರಂತೆ ಅವರೂ ಪುರಾಣೇತಿಹಾಸದ ಪುನರ್‌ಸೃಷ್ಟಿ, ಪುನರ್ ವಿಮರ್ಶೆಗೆ ಒಳಗಾಗಿಸಿ ಆಧುನಿಕತೆಯ, ಅಸ್ತಿತ್ವವಾದದ, ಅದಕ್ಕನುಗುಣವಾದ ಛಂದೋರೂಪವನ್ನು ಸೃಷ್ಟಿಸಿಕೊಂಡರು. ಅವರಿಗೆ ಪ್ರಶಸ್ತಿ ತಂದು ಕೊಟ್ಟಿದ್ದು, 2008ರಲ್ಲಿ ಪ್ರಕಟವಾದ ವಖಾರ್ ಕವನ ಸಂಕಲನ. ವಖಾರ್ ಎಂದರೆ ಗೋದಾಮು ಅಥವಾ ಉಗ್ರಾಣ.

ಸಿತಾಂಶು ಯಶಸ್ಚಂದ್ರ ಹುಟ್ಟಿದ್ದು 1941ರಲ್ಲಿ, ಕಚ್‌ನ ಭುಜ್ ಜಿಲ್ಲೆಯಲ್ಲಿ; ಅವರ ಪೂರ್ವಿಕರ ಸ್ಥಳ ಮಧ್ಯ ಗುಜರಾತಿನ ಪೆಟ್‌ಲಾಡ್. ಸೇಂಟ್ ಝೇವಿಯರ್ಸ್‌ ಕಾಲೇಜಿನಲ್ಲಿ ಗೌರಿಪ್ರಸಾದ್ ಝಾಲಾ ಎನ್ನುವವರ ಬಳಿ ಕಾವ್ಯ ಮೀಮಾಂಸೆ ಅಭ್ಯಾಸ ಮಾಡಿದರು. ಯಶಸ್ಚಂದ್ರ ಇನ್ನೂ ಏಳು ವರ್ಷದವರಾಗಿದ್ದಾಗ ತಮ್ಮ ತಂದೆಯನ್ನು ಕಳೆದುಕೊಂಡರು. ನಾನಿನ್ನೂ ಅವರನ್ನು ಹುಡುಕುತ್ತಲೇ ಇದ್ದೇನೆ ಎನ್ನುವುದು ಅವರ ಕಾವ್ಯ ವಸ್ತುವಿನ ಒಂದು ಎಳೆ. ತೌಲನಿಕ ಸಾಹಿತ್ಯದ ಅಧ್ಯಯನ ನಡೆಸಿ, ಆ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿಗಾಗಿ ಇಂಡಿಯಾನ ವಿಶ್ವವಿದ್ಯಾನಿಲಯ ನಂತರ ಪ್ಯಾರಿಸ್‌ನ ಸೋರ್‌ಬಾನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ನಡೆಸಿದರು.

ಅವರು ಅಲ್ಲಿಗೆ ಹೋಗಿದ್ದು ಫುಲ್‌ಬ್ರೈಟ್ ಫೆಲೋಶಿಪ್ ಮೇಲೆ. ನಂತರದ ದಿನಗಳಲ್ಲಿ ಯಶಸ್ಚಂದ್ರ ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿ, ಭಾರತೀಯ ವಿಶ್ವಕೋಶದ ಸಂಪಾದಕರಾಗಿ ಕೆಲಸ ನಿರ್ವಹಿಸಿದರು. ರಾಜ್‌ಕೋಟ್‌ನ ಸೌರಾಷ್ಟ್ರ ವಿಶ್ವವಿದ್ಯಾನಿಲಯದ ಕುಲಪತಿಯೂ ಆಗಿದ್ದು ನಂತರ ಬರೋಡಾ ವಿಶ್ವವಿದ್ಯಾನಿಲಯದ ಗುಜರಾತಿ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು. ಇದು ಅವರ ವೃತ್ತಿ ಜೀವನದ ಸಂಕ್ಷಿಪ್ತ ವಿವರ.

ಯಶಸ್ಚಂದ್ರರ ಕೆಲವು ಸಾಂಸಾರಿಕ ವಿವರಗಳು ಅವರ ಬರವಣಿಗೆಯ ವಸ್ತು, ರೀತಿಗಳ ಬಗ್ಗೆ ಉಪಯುಕ್ತ ವಿವರಗಳನ್ನು ಒದಗಿಸುತ್ತವೆ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಈತ ಬೆಳೆದದ್ದು ಅವರ ಅಜ್ಜಿ ಹೇಳುತ್ತಿದ್ದ ಸೆಕ್ಯೂಲರ್ ಕಥೆಗಳನ್ನು ಕೇಳಿ. ಪದೇ ಪದೇ ಸಾವನ್ನು ಕುರಿತ ಘಟನೆಗಳಿಗೆ ಕಿವಿಯಾಗಿ, ಪ್ರತ್ಯಕ್ಷದರ್ಶಿಯ ಕಣ್ಣಾಗಿ ಈ ನೆನಪುಗಳ ಚರಿತ್ರೆಯಲ್ಲಿ ಬೌದ್ಧಿಕವಾಗಿ ಬೆಳೆದರು. ನಿಜ, ಅವರೇ ಹೇಳುವ ಹಾಗೆ, ಒಬ್ಬರ ಬರವಣಿಗೆಯನ್ನು ಅವರ ಜೀವನ ವೃತ್ತಾಂತದೊಂದಿಗೆ ಬೆರೆಸಿ ಹೇಳುವುದು ಸುಲಭವಲ್ಲ. ಆದರೆ, ವೈಯಕ್ತಿಕ ಜೀವನವನ್ನು ಬರವಣಿಗೆಯಿಂದ ಬೇರ್ಪಡಿಸಿಕೊಳ್ಳುವುದೂ ಕಷ್ಟ.

‘ನಾನು ಅನೇಕ ಬಂಧುಗಳ ಮರಣದ ಅನುಭವದೊಟ್ಟಿಗೆ ಬದುಕಿದ್ದೇನೆ. ತಂದೆ ತೀರಿಕೊಂಡರು. ನಂತರ, ಚಿಕ್ಕಪ್ಪ ಅವರು ಎಲ್ಲ ಬಿಟ್ಟು ಗಂಗಾನದಿಯಲ್ಲಿ ಮುಳುಗಿ ಸತ್ತು ಹೋದರು. ನನ್ನ ತಾಯಿಯ ತಾಯಿ ನಮ್ಮೊಡನೆ ಇದ್ದರು. ಆಕೆಗೆ ತುಂಬ ವಯಸ್ಸಾಗಿತ್ತು. ನಾನು ಸಣ್ಣವನು. ಹಾಗಾಗಿ, ಆಕೆಯ ಬಗ್ಗೆ ತ್ವೇಷ ಇತ್ತು. ಅದು ಅವರ ಸಾವನ್ನು ಬಯಸುತ್ತಿತ್ತು ಎಂದು ನನ್ನ ಅನುಮಾನ. ಹಾಗಾಗಿ ಪಶ್ಚಾತ್ತಾಪ, ಅಪರಾಧ ಪ್ರಜ್ಞೆ ನನ್ನಲ್ಲಿ ಮಡುಗಟ್ಟುತ್ತಾ ಹೋಯಿತು. ಸಾವಿನ ಕಥನ ಪುರಾಣ ಕಥೆಯಾಯಿತು. ತಂದೆ ತೀರಿಕೊಂಡ ನಂತರ ನಾವು ಊಳಿಗಮಾನ್ಯ ಜೀವನ ರೀತಿಯ ಭುಜ್ ಬಿಟ್ಟು ಬರೋಡೆಗೆ ಬಂದೆವು. ಐವತ್ತು ಕೋಣೆಗಳಿದ್ದ ಹವೇಲಿಯಂಥ ಮನೆಯಲ್ಲಿ ಇದ್ದ ನಾವೀಗ ಮೂರು ಕೋಣೆಯ ಅಪಾರ್ಟ್‌ಮೆಂಟ್‌ಗೆ ಬಂದಿದ್ದೆವು. ಒಟ್ಟಿನಲ್ಲಿ ಸಾವಿನ ಸಂಬಂಧವಿರಿಸಿಕೊಂಡೇ ಬದುಕಿನ ಜೊತೆ ಬೆಳೆದೆ.’

ಇಷ್ಟರ ಜೊತೆಗೆ ಯಶಸ್ಚಂದ್ರರ ಮೊದಲ ಮಗು ಉಸಿರಾಡಲಾಗದೆ, ಪಾರ್ಶ್ವವಾಯುವಿಗೆ ತುತ್ತಾಗಿ, ಅವಳನ್ನು ಬೆಳೆಸುವುದೇ ಒಂದು ಸವಾಲಾಗಿತ್ತು. ಇವುಗಳಿಂದಾಗಿಯೋ ಏನೋ ಯಶಸ್ಚಂದ್ರರೂ ವೈದ್ಯಕೀಯವಾಗಿ ಪರಿಪಾಟಲು ಪಟ್ಟು ಅದರಿಂದ ಹೊರಬರಬೇಕಾಯಿತು. ಇಂಥ ವಿಷಣ್ಣ, ವಾಸ್ತವಿಕ, ಅಸ್ತಿತ್ವವಾದಿ ನೆಲೆಯಲ್ಲಿ ಬಂದ ‘ಜಟಾಯು’ ಕಥನ ಕವನಕ್ಕೆ 1987ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. ದ್ವಿಪದಿ ರೂಪದಲ್ಲಿರುವ ಈ ಆಖ್ಯಾಯಿಕೆಯನ್ನು ನೋಡುವ ಮೊದಲು ಇಸ್ಲಾಮಿಕ್ ಉಗ್ರವಾದಿಗಳು ಬಮಿಯಾನ್ ಗುಹೆಗಳಲ್ಲಿನ ಬುದ್ಧನ ಬೃಹತ್ ಶಿಲಾಮೂರ್ತಿಗಳ ಮೇಲೆ ನಡೆಸಿದ ದಾಳಿಯನ್ನು ಕುರಿತ ಭಾವಾತಿರೇಕವೇ ಇಲ್ಲದ ಈ ಸಣ್ಣ ಕವನವನ್ನು ನೋಡಬಹುದು.

ಬಮಿಯಾನ್ ಬುದ್ಧ
ಕಲ್ಲೊಳಗೆ ಕಡೆದ ಮೂರ್ತಿಯಾಗಿರದೆ
ಬಮಿಯಾನ್ ಗುಹೆಗಳಲ್ಲಿ ಅವನೇ ನಿಂತಿದ್ದರೆ
ಅಲ್ಲೇ ನಿಶ್ಚಲವಾಗಿ ನಿಂತಿರುತ್ತಿದ್ದ.
ಕಣ್ಣುಗಳು ಕಮಲದ ಹಾಗೆ;
ಮುಖ : ಶಾಂತ
ಉಟ್ಟು ತೆಳು ಧೋತ್ರ ಬಿಸಿಗಾಳಿಯಲ್ಲಿ
ಪತರಗುಡುತ್ತಿದೆ;
ತುಟಿಗಳ ಮೇಲೆ ಮೃದು ಮಂದಹಾಸ;
ಕೈ ಮೇಲೆತ್ತಿರುವುದು
ಹರಸುವುದಕ್ಕೆ ಮಾತ್ರ :ನಿರ್ಭೀತ ಮನುಷ್ಯ.

ಯಶಸ್ಚಂದ್ರರ ದ್ವಿಪದಿ ರೂಪದಲ್ಲಿರುವ, ದೀರ್ಘ ಕಥನ ಕವನಕ್ಕೆ ಬಂದಾಗ ಸಂಪ್ರದಾಯವನ್ನು ನಿರಾಕರಿಸುತ್ತ ಬೆಳೆದ ಬಗೆಯನ್ನು ಅದು ಕಾಣಿಸುತ್ತದೆ. ರಾಮಾಯಣ, ಮಹಾಭಾರತ ಕಾವ್ಯಗಳನ್ನು ದೂರ ಸರಿಸುತ್ತಲೇ ಅವನ್ನು ಒಳಗೊಂಡು ಬೆಳೆಯುವ ರೀತಿ ನಮ್ಮ ಕಾಲದ್ದು. ಜಟಾಯು ರಾಮಾಯಣದ ವಿಸ್ಮಯಕಾರಿ ಪಾತ್ರ, ಅದು ಹ್ರಿಂಸಾ ಸ್ವಭಾವದ, ಕ್ಷುದ್ರ ಗೃಧ್ರ ಆದರದು ಅಪಹೃತಳಾಗುತ್ತಿರುವ ಸೀತೆಯನ್ನು ಉಳಿಸಲು ತನ್ನ ಪ್ರಾಣವನ್ನು ತ್ಯಜಿಸುತ್ತದೆ. ಈ ಅಸಂಬದ್ಧ ಸಂಬಂಧವೇ ವಿಸ್ಮಯಕಾರಿಯಾದದ್ದು. ಲಕ್ಕಡ್ ಬಜಾರ್, ಎನ್ನುವ ಕವನದಲ್ಲಿ ಈ ಸಾಲುಗಳು ಬರುತ್ತವೆ:

ಸಾಗುವಾನಿ ಮರದ ಮಂಡಿಗೆ ಬಿತ್ತು ಬೆಂಕಿ: ಅಸಂಖ್ಯ ಸಂಖ್ಯೆಯ
ಕೊಕ್ಕರೆಗಳು ಹಾರಿ ಹೋದುವು.
ರಾಮ ಕಳಿಸಿದ ಶಬರಿಗೆ ಸಂದೇಶ: ‘ಸಾಧ್ಯವಾದರೆ, ನಾ ನಿನ್ನಲ್ಲಿಗೆ ಬರುತ್ತೇನೆ’.

ಶ್ರೀರಾಮನ ಪಾತ್ರದ ನಿರಾಕರಣೆ ಇದಕ್ಕಿಂತ ಮುಂದೆ ಹೋಗಲಾರದು. ಇದೇ ರೀತಿ ಕಾಡಿನಲ್ಲಿ ಬೆಳೆದು, ಬದುಕು ಬಂದ ಹಾಗೆ ಸ್ವೀಕರಿಸುವುದನ್ನು ಕಲಿತ ಜಟಾಯು ಈಗೇಕೆ, ಹೀಗೆ ತನ್ನದಲ್ಲದ ಸಂಕಟಕ್ಕೆ ಒಡ್ಡಿಕೊಂಡು ಸಾಯಬೇಕು?

ಅಯೋಧ್ಯಾನಗರ ಉತ್ತರದಲ್ಲಿ, ದಕ್ಷಿಣದಲ್ಲಿ ಲಂಕೆ; 
ಈ ಎರಡರ ನಡುವೆ ಸತ್ಯದ 
ಬೆಳಕಿಲ್ಲದೆಡೆಯಲ್ಲಿ ಹಬ್ಬಿರುವ ಸಾಧು ಕಾನನ ...

ಜಟಾಯು ಕಣ್ಣುಬಾಯಾಗಿ ಗಾಬರಿಯಲ್ಲಿ ನೋಡುತ್ತಿದ್ದ ಹಾಗೆ
ಉತ್ತರದ ಅಯೋಧ್ಯ, ದಕ್ಷಿಣದ ಲಂಕೆ ಒಟ್ಟಾಗಿ ಬಂದುವು;
ಅಲ್ಲಿ ನಡೆಯುತ್ತಿದ್ದ ವಿದ್ಯಮಾನ
ಅವನ ಸಂಬಂಧದ ಆಚೆಗಿನದಾಗಿತ್ತು,
ಆದರೆರಡೂ ನಗರಗಳ ಭಾರ ಅವನ ರೆಕ್ಕೆಗಳ ಮೇಲಿತ್ತು;
ಈ ಬೃಹದ್ಭಾರದ ಅಡಿಯಲ್ಲಿ
ಬಡ ಕಾನನವಾಸಿ ನಲುಗಿ ಬಸವಳಿದ;
ಕ್ಷಣಾರ್ಧದಲ್ಲಿ ಅವನಿಗರಿವಾಯ್ತು
ತಾ ಮಾಡಿದ ಹೆಸರಿಲ್ಲದ ತಪ್ಪು;
ಹತ್ತು ತಲೆಗಳ ಭಯಂಕರ ಜಗದ
ಯಜಮಾನ ಒಂದೆಡೆ, ಇನ್ನೊಂದೆಡೆ
ಸೀತೆಯ ಮನಮೋಹಕ ಯಜಮಾನ
ಬಡಗೃದ್ಧ್ರ ಮೇಲೆಂಥ ಸಾಧಿಸಲಾಗದ ಕಾರ್ಯಭಾರ!
ಇದಕ್ಕೆ ಮೊದಲೊಂದು ಕ್ಷಣದಲ್ಲಿ ಬೀಸುಗಾಳಿಯೊಳಗೆ
ಏರೇರಿ ಹಾರುತ್ತಿದ್ದ; ಬಂತು
ಆಗ ಥಟ್ಟೆಂದು ರಾಘವ, ಓ, ಲಕ್ಷಣಾ
ಹೊನ್ನ ಜಿಂಕೆಯ ಮಾಯ; ರಾವಣ
ಬಂದಿಳಿದ, ಸೀತೆಯನ್ನಪಹರಿಸಿ
ಹಾರಿದ, ಅದೇ ಕ್ಷಣ ಜಟಾಯು
ಇಳಿದ ರಣಾಂಗಣಕ್ಕೆ ಹೋ ಹೋ
ಸ್ಪರ್ಧೆಯಲ್ಲಿ ಸೋತ, ಅವನಂತ್ಯ ಸಮೀಪ
ಸೂರ್ಯಕಾಂತಿ, ಕವನದ ಸಾಲುಗಳು ಹೇಳುವಂತೆ:
ನಾನು ಗೋಡೆಯ ಎರಡು ಮಗ್ಗುಲಲ್ಲಿ ನಿಂತಿದ್ದೇನೆ‌
ನಾನು ನಿನ್ನನ್ನು ಭೇಟಿ ಮಾಡಲಾರೆ.
ಭೇಟಿಯಾಗಲಾರದ ಪ್ರಜ್ಞೆಗಳು ಮನುಷ್ಯನ ಒಳ
ಪ್ರಜ್ಞೆಯಲ್ಲಿ ಎಷ್ಟಿವೆಯೋ ಯಾರು ಬಲ್ಲರು? ಜಟಾಯುವಿನಲ್ಲಿ
ಕಾಣುವಂಥ ತಿರುವು ನಚಿಕೇತ ಜ್ಞಾನಿಯಾದದ್ದು ಹೇಗೆ?

ಎನ್ನುವ ಕವನದಲ್ಲಿ ಕಾಣಬಹುದು.

ಯಮನಿಗಾಗಿ ಅವನ ಅರಮನೆಯ ಹೊರ
ಮೆಟ್ಟಿಲ ಮೇಲೆ ಕೂತು ಸೋತು, ಸುಸ್ತಾಗಿ;
ಬಾಯಾರಿ ಕೂತಿದ್ದ ನಚಿಕೇತ ಥಟ್ಟನೆ ಎದ್ದು:
ತಂದೆಯ ಶಕ್ತಿಹೀನ ಗೋವುಗಳ
ಚಿಂತೆ ಬಿಟ್ಟು
ಮೂಲ ಪ್ರಶ್ನೆಗೆ
ಉತ್ತರ ತಂತಾನೆ ಕಾಣುತ್ತಾನೆ
ದೇವರಿಂದ ಬಯಸದೆ ಇನ್ನಾವ ವರವನ್ನೂ
ಪ್ರಯಾಣದಾಯಾಸದಿಂದ ಬಳಲಿ, ಬಾಯಾರಿದ ನಚಿಕೇತ
ತನ್ನ ಸ್ವ-ಗೃಹಕ್ಕೆ ಅದೇ ಇರುಳಲ್ಲಿ ಹಿಂತಿರುಗಿ
ನೀರು ಸಮೃದ್ಧವಾಗಿರುವ ಊರ ಬಾವಿಯ
ಮೆಟ್ಟಿಲ ಮೇಲೆ ಕೂತು,
ಅವಳಿಗಾಗಿ ಕಾಯುತ್ತಾನೆ
ಹೊಸ ಮಡಕೆ ಹೊತ್ತು ಬರುವಾಕೆಗೆ ಕಾಯುತ್ತಾನೆ.

ತಮ್ಮ ಕಾವ್ಯ ಪ್ರಯಾಣದ ಬಗ್ಗೆ ಮಾತನಾಡುತ್ತಾ: ‘ನಾನು ಐವತ್ತು ಅರವತ್ತರ ದಶಕಗಳ ಕೊನೆಯಲ್ಲಿ ಬರೆಯಲು ಪ್ರಾರಂಭಿಸಿದೆ. ನನ್ನ ಮುಂದೆ ಅನೇಕ ಮಾದರಿಗಳಿದ್ದುವು. ಅವುಗಳನ್ನು ನಿರಾಕರಿಸಿದಾಗ, ನನಗೆ ಹೊಸ ಮಾರ್ಗ ಕಂಡಿತು. ಈ ನಿರಾಕರಣೆ ಸೃಜನಶೀಲ ಮನಸ್ಸಿನ ಒಂದು ಭಾಗ- ಹೊಸದೇನನ್ನೋ ಸೃಷ್ಟಿಸುವಾಗ ಈ ನಿರಾಕರಣೆ ಮುಖ್ಯವಾಗುತ್ತದೆ. ರಾಮಾಯಣ, ಮಹಾಭಾರತಗಳು ನಮ್ಮ ಸಾಮಾಜಿಕ ಹಾಗೂ ಒಳ ಮನಸ್ಸಿನ ಅಸಾಮಾನ್ಯ ಭಾಗವಾಗಿ ಜೀವನದ ವಾಸ್ತವವನ್ನೂ ನಮ್ಮಿಂದ ಕಸಿದುಕೊಂಡು ಬಿಡುತ್ತವೆ. ಹಾಗಾಗಿ ನಾವು ಇವನ್ನು ಬಿಟ್ಟೇ ಮುಂದೆ ಸಾಗಬೇಕು’ ಎನ್ನುತ್ತಾರೆ.

ದಲಿತ ಕಾವ್ಯ ಗುಜರಾತಿ ಸಾಹಿತ್ಯದ ಮೇಲೆ ಅಂಥ ಗಾಢ ಪರಿಣಾಮ ಏಕೆ ಬೀರಿಲ್ಲ ಎನ್ನುವ ಪ್ರಶ್ನೆಗೆ ಅವರ ಉತ್ತರ ಹೀಗಿದೆ: ಇದಕ್ಕೆ ಕಾರಣ ಐವತ್ತರ ದಶಕದಲ್ಲಿ ಗಾಂಧಿ ವಿಚಾರಧಾರೆಯಿಂದ ಪ್ರಭಾವಿತವಾಗಿ ಬಂದ ಗಟ್ಟಿ ಕಾವ್ಯ ಹಾಗೂ ಗದ್ಯ ಸಾಹಿತ್ಯ. ದಲಿತೋದ್ಧಾರದಲ್ಲಿ ಇಡೀ ಸಮಾಜವೇ ತನ್ನನ್ನು ತೊಡಗಿಸಿಕೊಂಡಿದ್ದರಿಂದ ಇಲ್ಲಿನ ದೃಷ್ಟಿಕೋನ ಬದಲಾಯಿತು. ಮತ್ತೆ ಮಹಾರಾಷ್ಟ್ರದಲ್ಲಿ ಆದ ಅಂಬೇಡ್ಕರ್- ಗಾಂಧಿ ದ್ವಿಧಾಕರಣ ಗುಜರಾತಿನಲ್ಲಿ ಆಗಲಿಲ್ಲ.

ಮಹಾರಾಷ್ಟ್ರದಲ್ಲಿ ಈ ಎರಡೂ ಸಂಪೂರ್ಣವಾಗಿ ವಿಭಜಿತಗೊಂಡವು. ನಮ್ಮಲ್ಲಿ ದಲಿತ ಲೇಖಕರು ಹಲವರಿದ್ದಾರೆ. ಅವರಿಗೆ ದಲಿತರ ಬಗ್ಗೆ ಸಹಾನುಭವ ಇದೆ. ಅವರು ದಲಿತರ ರಾಜಕೀಯ ಸಮಸ್ಯೆಗಳಿಗೆ ಉತ್ತರ ಅನ್ವೇಷಿಸುತ್ತಿದ್ದಾರೆ. ಆದರೆ, ಅವರಲ್ಲಿ ಅನೇಕರು ಗಾಂಧಿಯ ಬಗ್ಗೆ ಗಾಢ ಮರ್ಯಾದೆ ಹೊಂದಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಯಶಸ್ಚಂದ್ರರಿಗೆ ಅನೇಕ ಗೌರವಗಳು ಸಂದಿವೆ. ಗುಜರಾತ್ ಸಾಹಿತ್ಯ ಸಭಾದಿಂದ 1987ರಲ್ಲಿ ರಂಜಿತ್‌ರಾಮ್ ಸುವರ್ಣ ಚಂದ್ರ ಪ್ರಶಸ್ತಿ. ಅದೇ ವರ್ಷ ಜಟಾಯುವಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. 1996 ನ್ಯಾಷನಲ್ ಹಾರ್ಮನಿ ಅವಾರ್ಡ್. 1998ರಲ್ಲಿ ಕಬೀರ್ ಸಮ್ಮಾನ್. 2006ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ.

ವೈಯಕ್ತಿಕ ಸಮಾಧಾನ ಎಂದರೆ ಸರಸ್ವತೀ ಸಮ್ಮಾನ್ ಪ್ರಶಸ್ತಿ ತೀರ್ಮಾನದ ಛಾಯಾ ಪರಿಷದ್ ಸದಸ್ಯನಾಗಿ ಕನ್ನಡಕ್ಕೆ ಎರಡು ಸರಸ್ವತೀ ಸಮ್ಮಾನ್ ಪ್ರಶಸ್ತಿ ಲಭ್ಯವಾಗುವಂತೆ ನಾನು ಮಾಡಿದ್ದು. ಒಂದು ಎಸ್.ಎಲ್. ಭೈರಪ್ಪನವರಿಗೆ ಅವರ ‘ಮಂದ್ರ’ ಕಾದಂಬರಿಗೆ. ಎರಡು ವೀರಪ್ಪ ಮೊಯಿಲಿ ಅವರಿಗೆ ‘ರಾಮಾಯಣ ಮಹಾನ್ವೇಷಣಂ’ಗೆ. ಮೂರನೆಯ ಸರಸ್ವತೀ ಸಮ್ಮಾನ್ ಡಾ.ನಾ. ಮೊಗಸಾಲೆಗೆ ಬರಲಿ ಎನ್ನುವ ಪ್ರಯತ್ನ ಕೈಗೂಡಲಿಲ್ಲ. ಆ ವ್ಯಥೆ ಉಳಿದಿದೆ.
(ಆಕರ: ಗುಜರಾತಿ ಭಾಷಾ ಸಮಿತಿ ವರದಿ ಮತ್ತು ಯಶಸ್ಚಂದ್ರ ಅವರೇ ಮಾಡಿದ ಅವರ ಕವನಗಳ ಅನುವಾದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT