ಭಾನುವಾರ, ಆಗಸ್ಟ್ 25, 2019
28 °C

ಉಕ್ಕೇರಿ ಹರಿಯುತ್ತಿರುವ ಕೃಷ್ಣಾ; ಪರಿಹಾರ ಕೈಗೊಳ್ಳಲು ಬಂದ ಎಸ್‌ಡಿಆರ್‌ಎಫ್‌ ತಂಡ

Published:
Updated:

ಬೆಳಗಾವಿ: ಜಿಲ್ಲೆಯ ಬೆಳಗಾವಿ, ಖಾನಾಪುರ, ಬೈಲಹೊಂಗಲ, ಹಿರೇಬಾಗೇವಾಡಿಯಲ್ಲಿ ಮಳೆ ಮುಂದುವರಿದಿದೆ. ಇನ್ನೊಂದೆಡೆ, ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಕೃಷ್ಣಾ ಹಾಗೂ ಉಪನದಿಗಳಾದ ವೇದಗಂಗಾ, ದೂಧ್‌ಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ದಂಡೆಯ ಗ್ರಾಮಗಳಲ್ಲಿ, ಹೊಲ– ಗದ್ದೆಗಳಲ್ಲಿ ನೀರು ನುಗ್ಗುತ್ತಿದೆ.

ನದಿ ದಂಡೆಯಲ್ಲಿರುವ ಚಿಕ್ಕೋಡಿ, ಅಥಣಿ, ರಾಯಬಾಗ ತಾಲ್ಲೂಕುಗಳ ಹಲವು ಗ್ರಾಮಗಳಲ್ಲಿ ಹಾಗೂ ಗದ್ದೆಗಳಲ್ಲಿ ನೀರು ನುಗ್ಗಿ, ಅಪಾರ ಪ್ರಮಾಣದ ಹಾನಿಯುಂಟು ಮಾಡಿದೆ. ಕೆಲವು ಕಡೆ ಮನೆಗಳಿಗೂ ನೀರು ನುಗ್ಗಿದೆ. ಚಿಕ್ಕೋಡಿಯ ಯಡೂರವಾಡಿ ಗ್ರಾಮದಲ್ಲಿ ನೀರು ನುಗ್ಗಿದ್ದು, ಜನರು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮಾಂಜರಿ ಗ್ರಾಮದ ಜನರ ಸಂಚಾರಕ್ಕೆ ದೋಣಿ ವ್ಯವಸ್ಥೆ ಮಾಡಲಾಗಿದೆ.

ನದಿಗಳ ದಂಡೆಯಲ್ಲಿರುವ ಗ್ರಾಮಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯದ ವಿಕೋಪ ಪರಿಹಾರ ಪಡೆಯ (ಎಸ್‌ಡಿಆರ್‌ಎಫ್‌) 50ಕ್ಕೂ ಹೆಚ್ಚು ಸಿಬ್ಬಂದಿ ಬಂದಿಳಿದಿದ್ದಾರೆ. ಕೇಂದ್ರದ ಎನ್‌ಡಿಆರ್‌ಎಫ್‌ ಯೋಧರು ಕೂಡ ಶೀಘ್ರದಲ್ಲಿಯೇ ಬರುವ ನಿರೀಕ್ಷೆ ಇದೆ. ನದಿ ದಂಡೆಯಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 13,527 ಕ್ಯುಸೆಕ್‌ ನೀರು ಹರಿಯಬಿಡಲಾಗಿದೆ. ಇದರ ಜೊತೆಗೆ ರಾಜಾಪುರ ಬ್ಯಾರೇಜ್‌ನಿಂದ 1,72,030 ಹಾಗೂ ದೂಧ್‌ಗಂಗಾ ನದಿಯಿಂದ 33,088 ಕ್ಯುಸೆಕ್‌ ನೀರು ಸೇರಿ ಚಿಕ್ಕೋಡಿಯ ಕಲ್ಲೋಳ ಬಳಿ ಕೃಷ್ಣಾ ನದಿಗೆ 2.20 ಲಕ್ಷ ಕ್ಯುಸೆಕ್‌ ನೀರು ಸೇರಿಕೊಳ್ಳುತ್ತಿದೆ. ಅಲ್ಲಿನ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಇದುವರೆಗೆ ಮುಳುಗಡೆಯಾಗಿರುವ 16 ಸೇತುವೆಗಳು ಈಗಲೂ ಜಲಾವೃತವಾಗಿವೆ. ಈ ಸೇತುವೆಗಳಿಗೆ ಪರ್ಯಾಯ ರಸ್ತೆಗಳಿದ್ದು, ಜನರ ಓಡಾಟಕ್ಕೆ ತೊಂದರೆಯಾಗಿಲ್ಲ. ಖಾನಾಪುರ ತಾಲ್ಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಮಲಪ್ರಭಾ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನೀಲಾವಡೆ ಸೇತುವೆ ಮೇಲೆ ಹರಿಯುತ್ತಿದೆ.

ಕೊಚ್ಚಿಕೊಂಡು ಹೋದ ಯುವಕ: ಜಿಲ್ಲೆಯ ಗೋಕಾಕ ತಾಲ್ಲೂಕಿನ ಅಂಕಲಗಿ ಗ್ರಾಮದಲ್ಲಿ ರಭಸದಿಂದ ಹರಿಯುತ್ತಿದ್ದ ಹಳ್ಳದಲ್ಲಿ ಶಿವಾನಂದ ಶಂಕರ ನಾಯಿಕ (25) ನೀರು ಪಾಲಾಗಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ಯುವಕರು ಇವರನ್ನು ಹುಡುಕುವ ಪ್ರಯತ್ನ ನಡೆಸಿದ್ದಾರೆ.

Post Comments (+)