ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ಪ್ರವಾಹ: ಮೂರು ಸೇತುವೆ ಮುಳುಗಡೆ

Last Updated 28 ಜುಲೈ 2019, 18:46 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದೆ.

ಆದರೆ ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವುದರಿಂದ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ‌ ಕೃಷ್ಣಾ ನದಿ ಮೈತುಂಬಿ ಹರಿಯುತ್ತಿದೆ.

ಕಲ್ಲೋಳ- ಯಡೂರ, ಮಲಿಕವಾಡ-ದತ್ತವಾಡ ಮತ್ತು ಕಾರದಗಾ- ಭೋಜ ಗ್ರಾಮಗಳ ನಡುವಿನ ಸೇತುವೆಗಳು ಮತ್ತೆ ಮುಳುಗಿವೆ. ರಾಜಾಪುರ ಬ್ಯಾರೇಜ್‌ನಿಂದ 81,286 ಹಾಗೂ ದೂಧ್‌ಗಂಗಾ ನದಿಯಿಂದ 11,968 ಕ್ಯುಸೆಕ್ ಸೇರಿ 93,254 ಕ್ಯುಸೆಕ್‌ ನೀರು ಕೃಷ್ಣಾ ನದಿ ಸೇರುತ್ತಿದೆ. ಈ ಸೇತುವೆಗಳಿಗೆ ಪರ್ಯಾಯ ರಸ್ತೆಗಳಿರುವುದರಿಂದ ಸಂಪರ್ಕ ಕಡಿತಗೊಂಡಿಲ್ಲ.

ಒಡೆದ ಇಂಡಿ ಶಾಖಾ ಕಾಲುವೆ: ಆಲಮಟ್ಟಿ ಜಲಾಶಯದಿಂದ ಭಾನುವಾರ ಭಾರಿ ಪ್ರಮಾಣದ ನೀರು ಹರಿದು ಬಂದ ಪರಿಣಾಮ ವಿಜಯಪುರದ ಸಿಂದಗಿ ತಾಲ್ಲೂಕಿನ ಕಲಹಳ್ಳಿ-ಹಿಕ್ಕಣಗುತ್ತಿ ಗ್ರಾಮಗಳ ಮಧ್ಯೆ ಹಾದು ಹೋಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಶಾಖಾ ಕಾಲುವೆ ಒಡೆದು, ನೂರಾರು ಎಕರೆಯಲ್ಲಿ ರೈತರು ಬಿತ್ತನೆ ಮಾಡಿದ್ದ ಹತ್ತಿ, ತೊಗರಿ ಬೆಳೆ ನೀರಿನಲ್ಲಿ ಮುಳುಗಿದೆ.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಅತ್ತಿಹಳ್ಳಿ, ಹೊಂಗಡಹಳ್ಳ, ಮಾರನಹಳ್ಳಿ, ದೇವಾಲದಕೆರೆ ಸೇರಿದಂತೆ ಪಶ್ಚಿಮಘಟ್ಟದ ಅಂಚಿನಲ್ಲಿ ಇರುವ ಗ್ರಾಮಗಳಲ್ಲಿ ಭಾನುವಾರ ಸಾಧಾರಣ ಮಳೆಯಾಗಿದೆ.

ಕೊಡಗಿನಲ್ಲಿ ಜಿಲ್ಲೆಯಾದ್ಯಂತ ಭಾನುವಾರ ಬೆಳಿಗ್ಗೆಯಿಂದ ಸಾಧಾರಣ ಮಳೆಯಾಗುತ್ತಿದೆ. ಮಡಿಕೇರಿ, ತಲಕಾವೇರಿ, ನಾಪೋಕ್ಲು ಹಾಗೂ ಭಾಗಮಂಡಲ,ಬೆಟ್ಟಗೇರಿ, ಪಾಲೂರು ಭಾಗದಲ್ಲೂ ಮಧ್ಯಾಹ್ನ ಬಿಡುವು ನೀಡಿ ಸಾಧಾರಣ ಮಳೆ ಸುರಿದಿದೆ.

ಕಳೆದ ಕೆಲವು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಹಲವೆಡೆ ಉತ್ತಮ ಮಳೆಯಾಗಿದೆ. ಶಿಕಾರಿಪುರ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ತೀರ್ಥಹಳ್ಳಿ, ಶಿವಮೊಗ್ಗ, ಭದ್ರಾವತಿ, ಸಾಗರ, ಸೊರಬ, ಕೋಣಂದೂರು, ರಿಪ್ಪನ್‌ಪೇಟೆ, ಹೊಸನಗರ, ಮಾಸ್ತಿಕಟ್ಟೆ, ಜೋಗ, ಆನವಟ್ಟಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ತ್ಯಾವಣಗಿ, ಸಾಸ್ವೆಹಳ್ಳಿ ಹಾಗೂ ಮಲೇಬೆನ್ನೂರಿನಲ್ಲಿ ಮಳೆಯಾಗಿದೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಬಾಗೂರು ಸುತ್ತಮುತ್ತ ಹದ ಮಳೆಯಾಗಿದೆ. ಪಟ್ಟಣ ಸೇರಿ ತಾಲ್ಲೂಕಿನ ಗೂಳಿಹಟ್ಟಿ, ದುಗ್ಗಾವರ, ಮಾಡದಕೆರೆ, ಮಾವಿನಕಟ್ಟೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಧ್ಯಾಹ್ನದಿಂದ ಸಂಜೆ ವರೆಗೂ ಆಗಾಗ ಸೋನೆ ಮಳೆಯಾಗಿದೆ.

ಬೀದರ್ ಜಿಲ್ಲೆಯ ಕಮಲನಗರ ಮತ್ತು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಭಾನುವಾರ ಉತ್ತಮ ಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT