ಗುರುವಾರ , ಜೂನ್ 4, 2020
27 °C

ರಾಜ್ಯದ 49 ಬರ ಪೀಡಿತ ತಾಲ್ಲೂಕುಗಳಿಗೆ ತಲಾ ₹1 ಕೋಟಿ ಅನುದಾನ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ 49 ಬರ ಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ತಲಾ ₹1 ಕೋಟಿ ಅನುದಾನ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ಬೇಸಿಗೆ ಕಾಲಿಟ್ಟಿರುವುದರಿಂದ ಎಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಮತ್ತು ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಕ್ರಮವಹಿಸಲು ಗ್ರಾಮ ಪಂಚಾಯ್ತಿಗಳಲ್ಲಿ ಕೊರೊನಾ ಟಾಸ್ಕ್‌ ಫೋರ್ಸ್‌ ರಚನೆ ಮಾಡಲಾಗಿದೆ. ಅಲ್ಲದೆ, ಗ್ರಾಮ ಸಮಿತಿಗಳನ್ನು ರಚನೆ ಮಾಡಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿಯೂ ಅವರು ತಿಳಿಸಿದರು.

ರಾಜ್ಯದ ನರೇಗಾ ಯೋಜನೆಗೆ ಕೇಂದ್ರ ಸರ್ಕಾರ ₹1,861ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ₹1,039 ಕೋಟಿ ಬಾಕಿ ಕೊಡಬೇಕಾಗಿದೆ. ಇದಕ್ಕೆ ರಾಜ್ಯ ಸರ್ಕಾರದಿಂದಲೂ ₹257 ಕೋಟಿ ಅನುದಾನ ಸೇರಿಸಲಾಗುವುದು. ಈ ಹಿಂದೆ ಕೆಲವರಿಗೆ ಕೂಲಿ ಮತ್ತು ಸಲಕರಣೆಗಳ ಬಿಲ್‌ ಪಾವತಿ ಬಾಕಿ ಉಳಿದಿತ್ತು. ಅವೆಲ್ಲವನ್ನು ಪಾವತಿಸಿದ ಬಳಿಕ ₹1,077 ಕೋಟಿ ಬಾಕಿ ಉಳಿಯುತ್ತದೆ ಎಂದು ಅವರು ವಿವರಿಸಿದರು.

ಕೋವಿಡ್‌–19 ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿರುವುದರಿಂದ ರಾಜ್ಯದಲ್ಲಿ ಪ್ರತಿಯೊಬ್ಬ ಕೂಲಿ ಕಾರ್ಮಿಕನಿಗೂ ತಲಾ ₹275 ಗಳಷ್ಟು ಕೂಲಿಯನ್ನು ಹೆಚ್ಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಉಳಿಕೆ ಹಣವನ್ನು ಬಳಕೆ ಮಾಡಿಕೊಳ್ಳುತ್ತೇವೆ. ಅಲ್ಲದೆ, ಮುಂದಿನ ದಿನಗಳಲ್ಲಿ ನರೇಗಾ ಕೂಲಿ ಕಾರ್ಮಿಕರನ್ನು ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳುವಂತೆ ಮಾಡಿ ಕಾಮಗಾರಿ ಮಾಡಿಸಲಾಗುವುದು. ಇದರಿಂದ ಸಂಕಷ್ಟಕ್ಕೆ ಒಳಗಾದ ಕೂಲಿ ಕಾರ್ಮಿಕರಿಗೆ ನೆರವಾಗಲಿದೆ ಎಂದು ಅವರು ಹೇಳಿದರು.

ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ: ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ತಿದ್ದುಪಡಿ ಮಸೂದೆಗೆ ಸುಗ್ರೀವಾಜ್ಞೆ ಹೊರಡಿಸಿದ್ದು, ಅದಕ್ಕೆ ರಾಜ್ಯಪಾಲರ ಒಪ್ಪಿಗೆಯೂ ಸಿಕ್ಕಿದೆ. ಕೊರೊನಾ ಸಮಸ್ಯೆ ಮುಗಿದ ನಂತರ ಹೊಸ ಕಾಯ್ದೆಯ ಪ್ರಕಾರವೇ ಪಂಚಾಯತ್‌ ಚುನಾವಣೆ ನಡೆಸಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.

ವೇತನ ಕಡಿತಕ್ಕೆ ಬೆಂಬಲ: ‘ಕೇಂದ್ರದಲ್ಲಿ ಸಚಿವರು, ಸಂಸದರ ವೇತನ ಕಡಿತ ಮಾಡಿರುವ ರೀತಿಯಲ್ಲೇ ರಾಜ್ಯದಲ್ಲೂ ಜನಪ್ರತಿನಿಧಿಗಳ ವೇತನ ಕಡಿತ ಮಾಡುವುದಾದರೆ, ಅದನ್ನು ಬೆಂಬಲಿಸುತ್ತೇನೆ. ಈಗಾಗಲೇ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನಾಲ್ಕು ತಿಂಗಳ ಸಂಬಳ ನೀಡಿದ್ದೇನೆ. ಮುಖ್ಯಮಂತ್ರಿ ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬೆಂಬಲ ನೀಡುತ್ತೇನೆ’ ಎಂದು ಅವರು ತಿಳಿಸಿದರು.

‘ಮಲಗಿಲ್ಲ, ಕರ್ತವ್ಯ ನಿಭಾಯಿಸುತ್ತಿದ್ದೇನೆ’
‘ನನಗೆ ಎರಡು ಮೂರು ಜಿಲ್ಲೆಗಳ ಉಸ್ತುವಾರಿ ಕೊಟ್ಟಿದ್ದಾರೆ. ನಾನು ಆ ಜಿಲ್ಲೆಗಳಿಗೆ ಹೋಗಿ ಕೋವಿಡ್‌ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇನೆ. ನನಗೆ ಮಲಗಿಕೊಳ್ಳಲು ಪುರುಸೊತ್ತು ಇಲ್ಲ’ ಎಂದು ಈಶ್ವರಪ್ಪ ಅವರು ಡಿ.ಕೆ.ಶಿವಕುಮಾರ್‌ ವಿರುದ್ಧ ಕಿಡಿಕಾರಿದರು.

‘ಈಶ್ವರಪ್ಪ ಗ್ರಾಮೀಣ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಎಲ್ಲಿ ಮಲಗಿದ್ದಾರೋ’ ಎಂಬ ಶಿವಕುಮಾರ್‌ ಅವರ ಟೀಕೆಗೆ ಉತ್ತರಿಸಿ, ‘ಅವರು ಸುದ್ದಿಗೋಷ್ಠಿ ಕರೆದು ಈ ರೀತಿ ಮಾತನಾಡುತ್ತಾರೆ ಎಂಬುದು ಗೊತ್ತಿರಲಿಲ್ಲ. ಕೋವಿಡ್‌ ವಿಚಾರದಲ್ಲಿ ರಾಜಕೀಯ ಮಾಡಬಾರದೆಂದು ಹೇಳಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

‘ನಾನು ರಾಜಕೀಯ ಮಾಡಲು ಸುದ್ದಿಗೋಷ್ಠಿ ಕರೆದಿಲ್ಲ. ನಾನು ಎಲ್ಲಿ ಮಲಗಿದ್ದೆ ಎಂಬುದನ್ನು ಶಿವಕುಮಾರ್‌ ಹೇಳಲಿ. ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಬಿಟ್ಟು ಬೇರೆ ಏನೂ ಮಾಡುತ್ತಿಲ್ಲ. ಸಚಿವನಾಗಿ ನನ್ನ ಕರ್ತವ್ಯವನ್ನು ಚೆನ್ನಾಗಿಯೇ ನಿಭಾಯಿಸುತ್ತಿದ್ದೇನೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು