ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರ ಕೆಲಸ ಮಾಡ್ತೇವೆ, ಅವರು ಓಟ್‌ ಹಾಕಲ್ಲ: ಈಶ್ವರಪ್ಪ

Last Updated 9 ಮಾರ್ಚ್ 2020, 22:31 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶ ಮತ್ತು ರಾಜ್ಯ ಆಳುತ್ತಿರುವ ಬಿಜೆಪಿಯು ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮುಸ್ಲಿಮರಿಗೆ ಟಿಕೆಟ್‌ ಕೊಡದೇ ತಾರತಮ್ಯ ಮಾಡುತ್ತಿದೆ. ಇದು ಸರಿಯಲ್ಲ’ ಎಂದು ಕಾಂಗ್ರೆಸ್‌ ಜಿ.ಪರಮೇಶ್ವರ ಆಕ್ಷೇಪ ವ್ಯಕ್ತಪಡಿಸಿದರು.

ಈ ಮಾತು ವಿಧಾನಸಭೆಯಲ್ಲಿ ಪರಮೇಶ್ವರ ಮತ್ತು ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಮಧ್ಯೆ ಸ್ವಾರಸ್ಯಕರ ಚರ್ಚೆಗೆ ನಾಂದಿಯಾಯಿತು.

ಪರಮೇಶ್ವರ ಆಕ್ಷೇಪಕ್ಕೆ ಉತ್ತರ ನೀಡಿದ ಈಶ್ವರಪ್ಪ, ‘ನಮಗೆ ಮುಸ್ಲಿಮರು ಓಟ್‌ ಹಾಕುವುದಿಲ್ಲ. ನನ್ನ ಕ್ಷೇತ್ರದಲ್ಲಿ 12 ಬೂತ್‌ಗಳಲ್ಲಿ ಮುಸ್ಲಿಂ ಮತದಾರರೇ ಹೆಚ್ಚು. ಪ್ರತಿ ಚುನಾವಣೆಯಲ್ಲೂ ಅಲ್ಲಿ ಬೀಳುವ ಮತ ಶೂನ್ಯ. ಅವರಿಗೆ ಎಂದೂ ತಾರತಮ್ಯ ಮಾಡಿಲ್ಲ.ಮುಸ್ಲಿಂ ಮಹಿಳೆಯರು ಬುರ್ಕಾ ಹಾಕಿಕೊಂಡೇ ಅಕ್ಕತಂಗಿಯಂತೆ ಬರುತ್ತಾರೆ ಎಲ್ಲ ಕೆಲಸಗಳನ್ನು ಮಾಡಿಸಿಕೊಟ್ಟಿದ್ದೇನೆ. ಆದರೆ ಅವರು ಓಟ್‌ ಹಾಕುವುದಿಲ್ಲ’ ಎಂದರು.

‘ಸ್ಥಳೀಯ ಚುನಾವಣೆಯಲ್ಲಿ ಮುಸ್ಲಿಂ ವ್ಯಕ್ತಿಗಳಿಗೆ ಟಿಕೆಟ್‌ ಕೊಟ್ಟು ನಿಲ್ಲಿಸಿದರೂ ಅವರಿಗೂ ಮುಸ್ಲಿಮರು ಓಟ್‌ ಹಾಕಲಿಲ್ಲ. ಇದಕ್ಕೆಲ್ಲ ನೀವು ಮಾಡುತ್ತಿರುವ ಅಪ ಪ್ರಚಾರವೇ ಕಾರಣ. ನಮ್ಮ ಬಗ್ಗೆ ಅನಗತ್ಯವಾಗಿ ಮುಸ್ಲಿಮರಲ್ಲಿ ಭಯ ಬಿತ್ತಿದ್ದೀರಿ. ದೇಶ ಬಿಟ್ಟು ಓಡಿಸುತ್ತಾರೆ ಎಂದು ಕಿವಿ ಊದಿದ್ದೀರಿ. ಒಂದು ಒಳ್ಳೆಯ ಬೆಳವಣಿಗೆ ಎಂದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ಬೂತ್‌
ಗಳಲ್ಲಿ ಮುನ್ನೂರು ಚಿಲ್ಲರೆ ಓಟ್‌ಗಳು ನನಗೆ ಬಿದ್ದಿತ್ತು. ಮುಂದೆ ಪರಿಸ್ಥಿತಿ ಬದಲಾಗುತ್ತದೆ’ ಎಂದು ಹೇಳಿದರು.

‘ಮುಸ್ಲಿಮರು ನಿಮ್ಮ ಪಕ್ಷಕ್ಕೆ ಬಂದರೆ ಕಸ ಹೊಡಿಯಬೇಕಾಗುತ್ತದೆ ಎಂದು ಹೇಳಿದ್ದರಲ್ಲ. ಆ ಕಾರಣಕ್ಕೆ ಮುಸ್ಲಿಮರು ನಿಮ್ಮ ಬಳಿ ಬರುತ್ತಿಲ್ಲ’ ಎಂದು ಪರಮೇಶ್ವರ್‌ ತಿರುಗೇಟು ನೀಡಿದರು.

‘ನಮ್ಮ ಪಕ್ಷಕ್ಕೆ ಮುಸ್ಲಿಮರು ಮಾತ್ರವಲ್ಲ ಯಾರು ಬಂದರೂ ಕಸ ಹೊಡಿಬೇಕು. ನೀವು ಬಂದರೂ ಕಸ ಹೊಡಿಬೇಕು. ನಾವೂ ಕಸ ಹೊಡೆದು ಈ ಹಂತಕ್ಕೆ ಬಂದಿದ್ದೇವೆ. ಇದರರ್ಥ ಕೂಲಿ ಮಾಡಿಸುತ್ತೇವೆ ಅಂತ ಅಲ್ಲ. ಪಕ್ಷದ ಕೆಲಸ ಮಾಡಬೇಕು.
ಪಕ್ಷದ ಕೆಲಸ ನಿಷ್ಠೆಯಿಂದ ಮಾಡಿದರೆ ಮಾತ್ರ ಟಿಕೆಟ್‌ ಸಿಗುತ್ತದೆ’ ಎಂದು ಹೇಳಿದರು.

‘ಹಾಗಿದ್ದರೆ ಅನರ್ಹರಾಗಿದ್ದ 15 ಮಂದಿ ಕಸ ಹೊಡೆದಿದ್ದರಾ’ ಎಂದು ಪರಮೇಶ್ವರ್‌ ಪ್ರಶ್ನಿಸಿದರು, ‘ಇಲ್ಲ ಮುಂದೆ ಅವರೂ ಕಸ ಹೊಡೆಯಬೇಕಾಗುತ್ತದೆ. ಅಂದರೆ ಪಕ್ಷ ಕಟ್ಟುವ ಕೆಲಸ ಮಾಡಬೇಕಾಗುತ್ತದೆ’ ಎಂದು ಈಶ್ವರಪ್ಪ ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT