ಭಾನುವಾರ, ಏಪ್ರಿಲ್ 18, 2021
33 °C
ಶೀಘ್ರವೇ ಜಮೀನು ಹಸ್ತಾಂತರ

ಬಗೆಹರಿದ ಗೊಂದಲ: ಕಾರವಾರದ ಚಿತ್ತಾಕುಲಾದಲ್ಲಿ ಕೆಎಸ್‌ಸಿಎ ಸ್ಟೇಡಿಯಂ ನಿರ್ಮಾಣ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ತಾಲ್ಲೂಕಿನ ಚಿತ್ತಾಕುಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾವರ್‌ಪೈಯಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮತ್ತು ಸರ್ಕಾರದ ನಡುವೆ ಮೂಡಿದ್ದ ಗೊಂದಲ ಬಗೆಹರಿದಿದೆ. ಹೀಗಾಗಿ ಸಂಸ್ಥೆ ಮತ್ತು ಜಿಲ್ಲಾಡಳಿತದ ನಡುವೆ ಶೀಘ್ರದಲ್ಲೇ ಒಪ್ಪಂದ ಏರ್ಪಟ್ಟು ಜಮೀನು ಕೆಎಸ್‌ಸಿಎಗೆ ಹಸ್ತಾಂತರವಾಗಲಿದೆ. 

ಗ್ರಾಮದ ಗುಡ್ಡ ಪ್ರದೇಶದಲ್ಲಿರುವ 11 ಎಕರೆ 34 ಗುಂಟೆ ಗೋಮಾಳದಲ್ಲಿ ಸ್ಟೇಡಿಯಂ ನಿರ್ಮಾಣವಾಗಲಿದೆ. ಇದಕ್ಕಾಗಿ ಜಮೀನನ್ನು ಗೋಮಾಳ ಶೀರ್ಷಿಕೆಯಿಂದ ಹೊರಗಿಡಲಾಗಿದೆ. ಪ್ರತಿ ವರ್ಷ ಪ್ರತಿ ಎಕರೆಗೆ ₹ 5 ಸಾವಿರದಂತೆ 30 ವರ್ಷಗಳಿಗೆ ಗುತ್ತಿಗೆ ನೀಡಲು ಒಪ್ಪಿಗೆ ನೀಡಲಾಗಿದೆ. ಈ ಮೊತ್ತವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಶೇ 10ರಷ್ಟು ಹೆಚ್ಚಿಸಲಾಗುವುದು ಎಂದು ಕಂದಾಯ ಇಲಾಖೆ ತಿಳಿಸಿದೆ.

ಗೊಂದಲವೇನಿತ್ತು?: ಸ್ಟೇಡಿಯಂ ನಿರ್ಮಾಣದ ಬಗ್ಗೆ ಕೆಎಸ್‌ಸಿಎ ಸಲ್ಲಿಸಿದ ಪ್ರಸ್ತಾವದ ಸಂಬಂಧ ಹಿಂದಿನ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು 2017ರ ಜೂನ್ 26ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದರಲ್ಲಿ ಗೋಮಾಳದ ಪ್ರತಿ ಎಕರೆ ಜಮೀನನ್ನು ವರ್ಷಕ್ಕೆ ₹ 40 ಸಾವಿರದಂತೆ ಗುತ್ತಿಗೆ ನೀಡುವುದು ಅಥವಾ ಮಾರುಕಟ್ಟೆಯ ಬೆಲೆಯ ಶೇ 5ರಷ್ಟನ್ನು ಬಾಡಿಗೆ ವಿಧಿಸಲು ಸಲಹೆ ನೀಡಿದ್ದರು.

ಸ್ಥಳೀಯ ಕ್ರೀಡಾಪಟುಗಳಿಗೆ ರಿಯಾಯಿತಿ ದರದಲ್ಲಿ ಕ್ರೀಡಾಂಗಣವನ್ನು ಬಳಸಲು ನೀಡುವುದು, ಸರ್ಕಾರಿ ಕ್ರೀಡಾ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವುದು, ಕ್ರೀಡಾಂಗಣ ನಿರ್ವಹಣಾ ಸಮಿತಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸದಸ್ಯರಾಗಿರಬೇಕು ಎಂದು ಪ್ರಸ್ತಾವ ಸಲ್ಲಿಸಿದ್ದರು. ಆದರೆ, ತನ್ನ ನಿಯಮದಲ್ಲಿ ಈ ರೀತಿಯ ಅವಕಾಶಗಳಿಲ್ಲ ಎಂದು ಕೆಎಸ್‌ಸಿಎ ತಿಳಿಸಿತ್ತು. ಗುತ್ತಿಗೆ ಮೊತ್ತವನ್ನು ಕಡಿಮೆ ಮಾಡಲೂ ಕೋರಿತ್ತು. 

ಈ ಬಗ್ಗೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಮಡಿಕೇರಿ ತಾಲ್ಲೂಕಿನ ಹೊದ್ದೂರಿನಲ್ಲಿ ಕೂಡ ಕ್ರಿಕೆಟ್ ಸ್ಟೇಡಿಯಂಗೆ ಜಮೀನು ಗುತ್ತಿಗೆ ನೀಡಲಾಗಿದೆ. ಆದರೆ, ಅಲ್ಲಿ ಇಂತಹ ಷರತ್ತುಗಳಿಲ್ಲ. ಹಾಗಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಸಲ್ಲಿಸಿದ ಪ್ರಸ್ತಾವಗಳನ್ನು ತಿರಸ್ಕರಿಸಿ ಜಮೀನು ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಕೆಎಸ್‌ಸಿಎ ಮುಂದೆ ಬಂದರೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಆದರೆ, ಸ್ಟೇಡಿಯಂ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಜಾಗವನ್ನು ಹಸ್ತಾಂತರಿಸಿದ ನಂತರ ಖಾಲಿ ಬಿಡಬಾರದು. ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಈ ಯೋಜನೆಯನ್ನು ಬೆಂಬಲಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು. 

‘2020ರ ಏಪ್ರಿಲ್‌ನಲ್ಲಿ ಪಂದ್ಯದ ಗುರಿ’: ‘ಜಮೀನು ಹಸ್ತಾಂತರಕ್ಕೆ ಸಂಬಂಧಿಸಿ ಕೆಎಸ್‌ಸಿಎ ಮಾಡಿದ್ದ ಮನವಿಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಈ ಕುರಿತು ಈಗಾಗಲೇ ಪತ್ರ ವ್ಯವಹಾರ ಶುರುವಾಗಿದೆ. ಎಲ್ಲವೂ ಸುಗಮವಾಗಿ ಸಾಗಿದರೆ ಇನ್ನೊಂದೆರಡು ತಿಂಗಳಲ್ಲಿ ಒಪ್ಪಂದವಾಗಿ ಜಮೀನು ಹಸ್ತಾಂತರವಾಗಲಿದೆ. ಬಳಿಕ ಸ್ಟೇಡಿಯಂ ನಿರ್ಮಾಣ ಆರಂಭವಾಗುತ್ತದೆ. ಮುಂದಿನ ವರ್ಷ ಏಪ್ರಿಲ್ ವೇಳೆಗೆ ಕಾರವಾರದಲ್ಲಿ ಕ್ರಿಕೆಟ್ ಪಂದ್ಯ ಏರ್ಪಡಿಸುವ ಗುರಿ ಹೊಂದಲಾಗಿದೆ’ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸುಧಾಕರ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು