ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಕೆಎಸ್‌ಒಯು ಮೊಬೈಲ್‌ ಅಪ್ಲಿಕೇಷನ್‌ ಸಿದ್ಧ

ಆನ್‌ಲೈನ್‌ ಮೂಲಕ ಕಲಿಕೆಗೆ ವಿದ್ಯಾರ್ಥಿಗಳಿಗೆ ಸೌಲಭ್ಯ
Last Updated 18 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಮೈಸೂರು: ದೂರಶಿಕ್ಷಣದ ಆಶಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕೆಎಸ್‌ಒಯು) ಒಂದು ಹೆಜ್ಜೆ ಮುಂದೆ ಇಟ್ಟಿದೆ. ವಿ.ವಿ.ಯ ಮೊಬೈಲ್‌ ಫೋನ್‌ ಅಪ್ಲಿಕೇಷನ್‌ ವಿದ್ಯಾರ್ಥಿಗಳಿಗಾಗಿ ಸಿದ್ಧವಾಗಿದೆ.

ವಿವಿಧ ಕೋರ್ಸ್‌ಗಳಿಗೆ ದಾಖಲಾಗುವ ವಿದ್ಯಾರ್ಥಿಗಳು ಈಗಲೂ ಕೆಎಸ್‌ಒಯು ನೀಡುತ್ತಿದ್ದ ಮುದ್ರಿತ ಸಿದ್ಧಪಠ್ಯಗಳನ್ನು ಪರಾಮರ್ಶಿಸಬೇಕಿದೆ. ಅಲ್ಲದೇ, ವಿದ್ಯಾರ್ಥಿಗಳು ಜೆರಾಕ್ಸ್‌ ಅಂಗಡಿಗಳಲ್ಲಿ ಸಿಗುವ ಪಠ್ಯಗಳನ್ನೂ ಕೊಂಡು ಓದುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ವಿಶ್ವವಿದ್ಯಾಲಯವು ಮೊಬೈಲ್‌ ಅಪ್ಲಿಕೇಷನ್‌ ಸಿದ್ಧಪಡಿಸಿದೆ. ಈ ಅಪ್ಲಿಕೇಷನ್‌ನ್ನು ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ವಿದ್ಯಾರ್ಥಿಗಳು ಹಾಕಿಕೊಂಡಲ್ಲಿ ಸಿದ್ಧಪಠ್ಯವನ್ನೂ ಸೇರಿದಂತೆ ಸಾಕಷ್ಟು ಬಗೆಯ ಕಲಿಕಾ ಸಾಮಗ್ರಿಗಳನ್ನು ತಮ್ಮ ಮೊಬೈಲ್‌ ಫೋನ್‌ ಮೂಲಕವೇ ಡೌನ್‌ಲೋಡ್‌ ಮಾಡಿಕೊಂಡು ವ್ಯಾಸಂಗ ಮಾಡುವ ಅವಕಾಶ ಸಿಗಲಿದೆ.

ವಿಡಿಯೊ ನೋಡಿ, ಕಲಿಯಿರಿ: ಈಚೆಗಷ್ಟೇ ವಿಶ್ವವಿದ್ಯಾಲಯವು ವಿಡಿಯೊ ಉಪನ್ಯಾಸ ಮಾಲೆ ಕಾರ್ಯಕ್ರಮಕ್ಕೂ ತಯಾರಿ ನಡೆಸಿದೆ. ವಿ.ವಿ.ಯಲ್ಲಿ ಲಭ್ಯವಿರುವ ವಿವಿಧ ಕೋರ್ಸ್‌ಗಳ ವಿವಿಧ ವಿಷಯಗಳನ್ನು ಕುರಿತು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಡಿಯೊ ಉಪನ್ಯಾಸಗಳನ್ನು ಚಿತ್ರೀಕರಿಸಲಿದೆ. ಈ ವಿಡಿಯೊಗಳನ್ನು ಕೆಎಸ್‌ಒಯು ಅಪ್ಲಿಕೇಷನ್ ಮೂಲಕ ವಿದ್ಯಾರ್ಥಿಗಳು ವೀಕ್ಷಿಸಬಹುದು. ಇದು ತರಗತಿಯಲ್ಲಿ ಪಾಠ ಕೇಳಿದಂತೆಯೇ ಇರಲಿದೆ. ರಾಜ್ಯದ ಯಾವುದೇ ಭಾಗದಲ್ಲಿರುವ ವಿದ್ಯಾರ್ಥಿಗಳು ಉಚಿತವಾಗಿ ಈ ವಿಡಿಯೊಗಳನ್ನು ವೀಕ್ಷಿಸಬಹುದಾದ ಅವಕಾಶ ಇದರಿಂದ ಸಿಗಲಿದೆ.

‘ಇದು ಡಿಜಿಟಲ್‌ ಯುಗ. ಸಾಂಪ್ರದಾಯಿಕ ಕಲಿಕಾ ಪದ್ಧತಿ ದಿನ ಕಳೆದಂತೆ ಬೆಲೆ ಕಳೆದುಕೊಳ್ಳುತ್ತದೆ. ಇದಕ್ಕೆ ನಾವು ಈಗಿಂದಲೇ ಸಿದ್ಧತೆ ನಡೆಸಬೇಕು. ವಿದ್ಯಾರ್ಥಿಗಳು ಈಗ ಹೆಚ್ಚು ಬುದ್ಧಿವಂತರಿದ್ದಾರೆ. ಆನ್‌ಲೈನ್‌ ವೇದಿಕೆಗಳಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಿಕೊಡಬೇಕು. ಮೊಬೈಲ್‌ ಅಪ್ಲಿಕೇಷನ್‌ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ’ ಎಂದು ಕೆಎಸ್‌ಒಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ‍‘ಪ್ರಜಾವಾಣಿ’ಗೆ ತಿಳಿಸಿದರು.

ಇದಕ್ಕೆ ಪೂರಕವಾಗಿ 2020ರಿಂದ ವಿ.ವಿ.ಯಲ್ಲಿ ಆನ್‌ಲೈನ್‌ ಕೋರ್ಸ್‌ಗಳು ಶುರುವಾಗಲಿವೆ. ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕವೇ ಕಲಿಯುವ ಸಾಧ್ಯತೆ ಇದರಿಂದ ತೆರೆದುಕೊಳ್ಳಲಿದೆ ಎಂದು ಮಾಹಿತಿ ನೀಡಿದರು.

ವೆಬ್‌ಸೈಟ್ ಮರು ವಿನ್ಯಾಸ
ಕೆಎಸ್‌ಒಯುನ ವೆಬ್‌ಸೈಟನ್ನು ಮರುವಿನ್ಯಾಸಗೊಳಿಸಲಾಗುತ್ತಿದೆ. ವೆಬ್‌ಸೈಟ್‌ ಮೂಲಕವೂ ಸಿದ್ಧಪಠ್ಯ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಸಿಗಲಿದೆ.

ದೇಶದ ಎಲ್ಲ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಗಳನ್ನು ಮಾದರಿಯಾಗಿ ಇರಿಸಿಕೊಂಡು ವೆಬ್‌ಸೈಟ್ ಮರು ವಿನ್ಯಾಸ ಪ್ರಕ್ರಿಯೆ ಆರಂಭವಾಗಿದೆ. ಈ ವೆಬ್‌ಸೈಟ್‌ಗಳ ಗುಣಮಟ್ಟಕ್ಕೆ ಸರಿಸಮವಾಗಿ ವಿನ್ಯಾಸ ಸಿದ್ಧವಾಗುತ್ತದೆ. ವಿನ್ಯಾಸಕ್ಕೆ ಮಾತ್ರವೇ ಇದು ಸೀಮಿತವಾಗದೇ ವಿಷಯಾಧಾರಿತವಾಗಿಯೂ ಗುಣಮಟ್ಟವನ್ನು ಕಾಪಾಡಿಕೊಳ್ಳಲಾಗುತ್ತಿದೆ ಎಂದು ಪ್ರೊ.ವಿದ್ಯಾಶಂಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT