ಕೆಎಸ್‌ಒಯು: ಫೇಲಾದರೂ ಪಾಸಾದ ವಿದ್ಯಾರ್ಥಿ!

ಮಂಗಳವಾರ, ಮಾರ್ಚ್ 19, 2019
21 °C
ತಪ್ಪು ಅಂಕ ಪಟ್ಟಿ ನೀಡಿ ಪೇಚಿಗೆ ಸಿಲುಕಿದ ಕೆಎಸ್‌ಒಯು

ಕೆಎಸ್‌ಒಯು: ಫೇಲಾದರೂ ಪಾಸಾದ ವಿದ್ಯಾರ್ಥಿ!

Published:
Updated:
Prajavani

ಮೈಸೂರು: ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ ವಿದ್ಯಾರ್ಥಿಗೆ ಉತ್ತೀರ್ಣವಾಗಿರುವ ಅಂಕಪಟ್ಟಿ ನೀಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಈಗ ಪೇಚಿಗೆ ಸಿಲುಕಿದೆ. ಅಲ್ಲದೇ, ಹೈಕೋರ್ಟ್‌ನಿಂದ ಬುದ್ಧಿವಾದವನ್ನೂ ಹೇಳಿಸಿಕೊಂಡಿದೆ.

ಬೆಂಗಳೂರಿನ ಜಿ.ಎ.ಶ್ರೀನಿವಾಸ ಅವರು ಶಿಕ್ಷಣ ವಿಷಯದಲ್ಲಿ ಕೆಎಸ್‌ಒಯುವಿನಲ್ಲಿ ಪದವಿ ವ್ಯಾಸಂಗ ಮಾಡಿದ್ದಾರೆ. 2013ರ ಸಾಲಿನಲ್ಲಿ ಪರೀಕ್ಷೆಗೆ ಹಾಜರಾಗಿ ಅನುತ್ತೀರ್ಣರಾಗಿದ್ದು, ನಂತರ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಮರುಮೌಲ್ಯಮಾಪನದಲ್ಲಿ ಉತ್ತೀರ್ಣರಾಗಿರುವುದಾಗಿ ಫಲಿತಾಂಶ ಸಿಕ್ಕಿತ್ತು. ಅಲ್ಲದೇ, ವಿ.ವಿ ಅಂಕಪಟ್ಟಿಯನ್ನೂ ನೀಡಿತ್ತು.

ಆದರೆ, ಅಂಕಪಟ್ಟಿ ನೀಡಿದ 2 ವರ್ಷಗಳ ಬಳಿಕ ವಿ.ವಿ.ಯು ಶ್ರೀನಿವಾಸ ಅವರಿಗೆ ಪತ್ರ ಬರೆದಿತ್ತು. ‘ಮರುಮೌಲ್ಯಮಾಪನ ದೋಷದಿಂದ ಕೂಡಿದ್ದು, ನೀವು ಅನುತ್ತೀರ್ಣರಾಗಿದ್ದೀರಿ. ಹಾಗಾಗಿ, ಅಂಕಪಟ್ಟಿಯನ್ನು ವಾಪಸು ಮಾಡಬೇಕು. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ ಒಟ್ಟು ಮೂರು ಬಾರಿ ಮೌಲ್ಯಮಾಪನ ಮಾಡಲಾಗುತ್ತದೆ. ಇದರಲ್ಲಿ ಉತ್ತೀರ್ಣರಾದರೆ ಮಾತ್ರ ಅಂಕ ಪಟ್ಟಿ ನೀಡಲಾಗುತ್ತದೆ. ವಿ.ವಿ.ಯ ಆಂತರಿಕ ದೋಷದಿಂದಾಗಿ ಉತ್ತೀರ್ಣರಾಗಿದ್ದೀರಿ ಎಂದು ಅಂಕ ಪಟ್ಟಿ ನೀಡಿದ್ದು, ವಾಪಸು ಕೊಡಬೇಕು’ ಎಂದು ಕೋರಲಾಗಿತ್ತು.

ಇದರಿಂದ ವಿದ್ಯಾರ್ಥಿಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌, ‘ವಿ.ವಿ.ಯ ತಪ್ಪಿಗೆ ವಿದ್ಯಾರ್ಥಿಯು ಬೆಲೆಕಟ್ಟುವಂತೆ ಆಗಕೂಡದು. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಈ ರೀತಿ ಆಗಲೇಕೂಡದು. ಹಾಗಾಗಿ, ವಿದ್ಯಾರ್ಥಿಯನ್ನು ಈ ವಿಚಾರದಲ್ಲಿ ಪ್ರಶ್ನಿಸಕೂಡದು’ ಎಂದು ಆದೇಶ ನೀಡಿದೆ.

‘ಇದು 2015ರಲ್ಲಿ ನಡೆದಿರುವ ಘಟನೆ. ನನ್ನ ಅವಧಿಯದ್ದಲ್ಲ. ನಮಗಿನ್ನೂ ಹೈಕೋರ್ಟ್ ಆದೇಶ ಪ್ರತಿ ಸಿಕ್ಕಿಲ್ಲ’ ಎಂದು ಕೆಎಸ್‌ಒಯು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 1

  Sad
 • 1

  Frustrated
 • 9

  Angry

Comments:

0 comments

Write the first review for this !