ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ ವರ್ಗಾವಣೆ ಆದೇಶ ರದ್ದುಗೊಳಿಸಿದ ಹೈಕೋರ್ಟ್‌

ಇತರ ನಿಗಮಗಳಿಗೆ ನಿಯೋಜನೆ ಕಾನೂನು ಬಾಹಿರ
Last Updated 28 ಮೇ 2019, 18:51 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಕ್ಲಾಸ್‌–1 ಮತ್ತು ಕ್ಲಾಸ್‌–2ಅಧಿಕಾರಿಗಳನ್ನು ಯೋಜನೆಮೇರೆಗೆ ಬೇರೆ ನಿಗಮಗಳಿಗೆ ವರ್ಗಾವಣೆ ಮಾಡುವುದು ಕಾನೂನುಬಾಹಿರ’ ಎಂದು ಹೈಕೋರ್ಟ್‌ ಆದೇಶಿಸಿದೆ.

ಕೆಎಸ್ಆರ್‌ಟಿಸಿಯಿಂದ ಬೆಂಗಳೂರುಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಈಶಾನ್ಯ ಮತ್ತು ವಾಯವ್ಯ ಸಾರಿಗೆ ನಿಗಮಗಳಿಗೆ ನಿಯೋಜನೆ ಆಧಾರದಲ್ಲಿ ವರ್ಗಾವಣೆ ಮಾಡಿದ್ದ ಆದೇಶವನ್ನು ಪ್ರಶ್ನಿಸಿದಕ್ಷಿಣ ಕನ್ನಡ ಜಿಲ್ಲೆಯ ಕೆ.ಅಬ್ದುಲ್‌ ಅಜೀಜ್‌ ಸೇರಿದಂತೆ ಒಟ್ಟು ಆರು ಜನರು ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಆರ್.ದೇವದಾಸ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

ಈ ಕುರಿತಂತೆ ಕಾಯ್ದಿರಿಸಲಾಗಿದ್ದ ಆದೇಶವನ್ನು ನ್ಯಾಯಪೀಠ ಮಂಗಳವಾರ ಪ್ರಕಟಿಸಿ, ನಿಗಮದ ನೌಕರರ ವರ್ಗಾವಣೆಗೆ 2000ನೇ ಇಸ್ವಿಯಲ್ಲಿ ಅವಕಾಶ ಕಲ್ಪಿಸಲಾಗಿದ್ದ ಆದೇಶವನ್ನು ರದ್ದುಪಡಿಸಿದೆ. ‘ಅರ್ಜಿದಾರರು ಕೆಎಸ್‌ಆರ್‌ಟಿಸಿಯಲ್ಲೇ ಮುಂದುವರಿಯಬೇಕು’ ಎಂದು ಹೇಳಿದೆ.

‘ಅರ್ಜಿದಾರರನ್ನು ಕೆಎಸ್ಆರ್‌ಟಿಸಿ ನೌಕರರು ಎಂದೇ ನೇಮಕ ಮಾಡಿಕೊಳ್ಳಲಾಗಿದೆ. ಉಳಿದ ನಿಗಮಗಳು ಸ್ವಾಯತ್ತ ಮತ್ತು ಸ್ವತಂತ್ರ ಸಂಸ್ಥೆಗಳಾಗಿರುವುದರಿಂದ ಅವರನ್ನು ನಂತರದಲ್ಲಿ ಆ ನಿಗಮಗಳಿಗೆ ನಿಯೋಜನೆ ಮಾಡಿರುವುದು ರಸ್ತೆ ಸಾರಿಗೆ ನಿಗಮ ಕಾಯ್ದೆ–1950ರ ಅನುಸಾರ ಕಾನೂನು ಬಾಹಿರ’ ಎಂದು ನ್ಯಾಯಪೀಠ ಹೇಳಿದೆ.

‘ಒಂದು ನಿಗಮದ ಸಿಬ್ಬಂದಿಯನ್ನು ಹೊಸದಾಗಿ ಸ್ಥಾಪಿಸಲಾದ ಮತ್ತೊಂದು ನಿಗಮಕ್ಕೆ ಅಗತ್ಯಕ್ಕೆ ಅನುಗುಣವಾಗಿ ವರ್ಗಾವಣೆ ಮಾಡಿದರೆ, ಆ ಸಿಬ್ಬಂದಿ ಯಾವ ನಿಗಮಕ್ಕೆ ವರ್ಗಾವಣೆ ಆಗಿರುತ್ತಾರೋ ಆ ನಿಗಮದ ಸಿಬ್ಬಂದಿಯಾಗುತ್ತಾರೆ. ಅವರು ಮೊದಲು ಸೇವೆ ಸಲ್ಲಿಸುತ್ತಿದ್ದ ನಿಗಮದ ಸಿಬ್ಬಂದಿಯಾಗುವುದಿಲ್ಲ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ಕೆಎಸ್‌ಆರ್‌ಟಿಸಿಯನ್ನು 1997ರ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ವಿಭಜನೆ ಮಾಡಿ ಬಿಎಂಟಿಸಿಯನ್ನು ಸ್ವತಂತ್ರ ಸಂಸ್ಥೆಯನ್ನಾಗಿ ರೂಪಿಸಲಾಯಿತು. ಇದೇ ಸಾಲಿನ ನವೆಂಬರ್‌ನಲ್ಲಿ ವಾಯವ್ಯ ನಿಗಮ ಹಾಗೂ ನಂತರದಲ್ಲಿ ಈಶಾನ್ಯ ಸಾರಿಗೆ ನಿಗಮವನ್ನು ಪ್ರಾರಂಭಿಸಲಾಯಿತು.

ಹೊಸ ನಿಗಮಗಳು ಆರಂಭವಾದಾಗ ಕೆಎಸ್‌ಆರ್‌ಟಿಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರ್ಜಿದಾರರನ್ನು, ಆಡಳಿತಾತ್ಮಕ ಕಾರಣಗಳ ಮೇರೆಗೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ನಿಯೋಜನೆ ಮೇರೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT