ಒಳ್ಳೆಯ ಬಸ್ಸುಗಳು ಗುಜರಿಗೆ; ಹಳೆಯವು ರಸ್ತೆಗೆ!

7
ಕೆಎಸ್‌ಆರ್‌ಟಿಸಿ ಹಾಸನ ವಿಭಾಗದಲ್ಲಿ ಚಾಸಿ ಸಂಖ್ಯೆ ತಿದ್ದಿ ಹರಾಜು

ಒಳ್ಳೆಯ ಬಸ್ಸುಗಳು ಗುಜರಿಗೆ; ಹಳೆಯವು ರಸ್ತೆಗೆ!

Published:
Updated:

ಬೆಂಗಳೂರು: ಗುಜರಿ ಸೇರಬೇಕಾದ ಹಳೇ ಬಸ್ಸುಗಳು ರಸ್ತೆಯಲ್ಲಿವೆ! ರಸ್ತೆಯ ಮೇಲಿರಬೇಕಾಗಿದ್ದ ಒಳ್ಳೇ ಬಸ್ಸುಗಳು ಗುಜರಿ ಸೇರಿವೆ!!

ಕೆಎಸ್‌ಆರ್‌ಟಿಸಿ ಹಾಸನ ವಿಭಾಗದಲ್ಲಿ ನಡೆದಿರುವ ಕರ್ಮಕಾಂಡ ಇದು...

ಉತ್ತಮ ಸ್ಥಿತಿಯಲ್ಲಿರುವ 21 ಚಾಸಿಗಳ ಸಂಖ್ಯೆಗಳನ್ನು ಬದಲಾವಣೆ ಮಾಡಿ ಗುಜರಿ ವ್ಯಾಪಾರಿಗಳಿಗೆ ಹರಾಜು ಹಾಕಿರುವ ಪ್ರಕರಣದ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಈ ಅಕ್ರಮ ‍ಪತ್ತೆ ಹಚ್ಚಿದ್ದಾರೆ.

2013ರಿಂದ 2015ರ ಮಧ್ಯೆ ಈ ವಂಚನೆ ಪ್ರಕರಣ ನಡೆದಿದೆ. ಹಳೇ ಮತ್ತು ಹೊಸ ಬಸ್ಸುಗಳ ಚಾಸಿ ಸಂಖ್ಯೆಗಳನ್ನು ಅದಲುಬದಲು ಮಾಡಿರುವುದನ್ನು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಖಚಿತಪಡಿಸಿದೆ.

‘ಉತ್ತಮ ಸ್ಥಿತಿಯಲ್ಲಿರುವ ಚಾಸಿಗಳನ್ನು ಹರಾಜು ಹಾಕಿ, ಸಂಸ್ಥೆಗೆ ಭಾರಿ ನಷ್ಟ ಮಾಡಲಾಗಿದೆ’ ಎಂದು ಆರೋಪಿಸಿ ‘ಕಮಿಟಿ ಫಾರ್‌ ಹ್ಯೂಮನ್ ರೈಟ್ಸ್‌ ಇರಾಡಿಕೇಟಿಂಗ್‌ ಕರಪ್ಷನ್‌’ ದೂರು ನೀಡಿತ್ತು. ತನಿಖೆ ಆರಂಭವಾಗಿ ಮೂರು ವರ್ಷ ಕಳೆದಿದ್ದರೂ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಲು ಸಾಧ್ಯವಾಗಿಲ್ಲ. ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿ ಅವರೇ ತನಿಖೆಯ ಪ್ರಗತಿ ಪರಿಶೀಲಿಸಿದ್ದಾರೆ. ತಿಂಗಳೊಳಗೆ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಪೊಲೀಸ್‌ ವಿಭಾಗಕ್ಕೆ ತಾಕೀತು ಮಾಡಿದ್ದಾರೆ.ಗಡುವು ಮುಗಿದು 2 ತಿಂಗಳು ಕಳೆದರೂ ತನಿಖೆ ಪೂರ್ಣಗೊಂಡಿಲ್ಲ. ಅಧಿಕಾರಿಗಳ ಅಸಹಕಾರ ದಿಂದಾಗಿ ವಿಳಂಬವಾಗುತ್ತಿದೆ ಎಂದು ಲೋಕಾಯುಕ್ತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. 

‘ಹಾಸನ ವಿಭಾಗದ 23 ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧವಾಗಿದೆ. ಇನ್ನೂ 73 ಅಧಿಕಾರಿಗಳು, ನೌಕರರ ವಿಚಾರಣೆ ನಡೆಯಬೇಕಿದೆ. ಅಧಿಕಾರಿಗಳ ಪ್ರಾಸಿಕ್ಯೂಷನ್‌ಗೆ ಸರ್ಕಾರ ಅನುಮತಿ ಕೊಟ್ಟರೆ ಮಾತ್ರ ದೋಷಾರೋಪ ಪಟ್ಟಿ ಸಲ್ಲಿಸಬಹುದು. ‘ಸಾರಿಗೆ ನಿಗಮಗಳಿಗೆ ಬರುವ ಹೊಸ ಬಸ್‌ಗಳನ್ನು 7.5ರಿಂದ 9ಲಕ್ಷ ಕಿ.ಮೀ ಓಡಿಸಿದ ಬಳಿಕ ಹರಾಜು ಹಾಕಬೇಕು. ಗ್ರಾಮೀಣದಲ್ಲಿ 7.5 ಲಕ್ಷ ಕಿ.ಮೀ ಹಾಗೂ ಉತ್ತಮ ರಸ್ತೆಗಳಲ್ಲಿ 9ಲಕ್ಷ ಕಿ.ಮೀ ಓಡಿಸಬೇಕು ಎಂಬ ನಿಯಮವಿದೆ.

ಲೋಕಾಯುಕ್ತಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ...

ಲೋಕಾಯುಕ್ತ ಸಂಸ್ಥೆಗಿದ್ದ ಪೊಲೀಸ್‌ ಅಧಿಕಾರವನ್ನು ಕಿತ್ತುಕೊಂಡ ಬಳಿಕ ಈ ಸಂಸ್ಥೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇದರಿಂದಾಗಿ ಎಷ್ಟೋ ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಲು ಅದಕ್ಕೆ ಸಾಧ್ಯವಾಗಿಲ್ಲ. ಎಸಿಬಿ ಸ್ಥಾಪಿಸುವ ಮುನ್ನ ಕೈಗೆತ್ತಿಕೊಂಡಿರುವ ಪ್ರಕರಣದ ತನಿಖೆ ಮಾತ್ರ ಲೋಕಾಯುಕ್ತ ಪೂರ್ಣಗೊಳಿಸಬಹುದು ಎಂಬ ಕೋರ್ಟ್‌ ಸೂಚನೆಗೂ ಬೆಲೆ ಸಿಕ್ಕಿಲ್ಲ.

ಮುಖ್ಯಾಂಶಗಳು
* ಕೆಎಸ್‌ಆರ್‌ಟಿಸಿ ಬಸ್ಸುಗಳ ಚಾಸಿ ಸಂಖ್ಯೆ ತಿದ್ದಿ ಹರಾಜು

* ತನಿಖೆ ಪೂರ್ಣಗೊಳಿಸಲಾಗದ ಲೋಕಾಯುಕ್ತ

* 23 ಅಧಿಕಾರಿಗಳ ವಿಚಾರಣೆ ಪೂರ್ಣ; ಕೈಗೆ ಸಿಗದ 73 ಅಧಿಕಾರಿಗಳು

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !