4

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕೋಳಿಗೂ ಅರ್ಧ ಟಿಕೆಟ್!

Published:
Updated:

ಗೌರಿಬಿದನೂರು: ಆರು ವರ್ಷ ಮೀರಿದ ಎಲ್ಲರೂ ಬಸ್‌ ಪ್ರಯಾಣದ ವೇಳೆ ಟಿಕೆಟ್‌ ಪಡೆಯಬೇಕಾಗಿರುವುದು ಕಡ್ಡಾಯ. ಅಚ್ಚರಿ ಎನ್ನುವಂತೆ ತಾಲ್ಲೂಕಿನ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕಿಯೊಬ್ಬರು ಒಂದೂವರೆ ತಿಂಗಳ ಎರಡು ಕೋಳಿಗಳಿಗೂ ಟಿಕೆಟ್ ನೀಡಿದ್ದಾರೆ!

ಗೌರಿಬಿದನೂರಿನಲ್ಲಿ ಪ್ರತಿ ಭಾನುವಾರ ಸಂತೆ ನಡೆಯುತ್ತದೆ. ರೈತ ಶ್ರೀನಿವಾಸ ಸಂತೆಯಲ್ಲಿ ಎರಡು ಕೋಳಿ ಖರೀದಿಸಿದ್ದಾರೆ. ವಾಟದಹೊಸಹಳ್ಳಿಗೆ ಹೋಗುವ ಬಸ್ ಹತ್ತಿದ್ದಾರೆ. ಸ್ವಗ್ರಾಮ ಮುದಲೋಡುವಿಗೆ ಟಿಕೆಟ್ ನೀಡುವಂತೆ ನಿರ್ವಾಹಕಿ ರಂಗಮ್ಮ ಅವರನ್ನು ಕೋರಿದ್ದಾರೆ. 15 ಕಿಲೋಮೀಟರ್ ದೂರದ ಗ್ರಾಮಕ್ಕೆ ಟಿಕೆಟ್ ದರ ₹ 24 ಇದೆ.

ಎರಡು ಕೋಳಿಗಳಿಗೂ ತಲಾ ಅರ್ಧ ಟಿಕೆಟ್ ತೆಗೆದುಕೊಳ್ಳಬೇಕು ಎಂದು ರಂಗಮ್ಮ ಹೇಳಿದ್ದಾರೆ. ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ‘ಕೋಳಿಗೆ ಟಿಕೆಟ್ ಪಡೆಯಲಾಗುತ್ತದೆ ಎಂದು ಬರೆದುಕೊಡಿ’ ಎಂದು ಶ್ರೀನಿವಾಸ್ ಆಕ್ರೋಶದಿಂದ ನುಡಿದಿದ್ದಾರೆ. ಎರಡು ಕೋಳಿಗೆ ತಲಾ ₹ 12ರಂತೆ ಟಿಕೆಟ್ ನೀಡಿ, ಅದನ್ನು ಟಿಕೆಟ್ ಹಿಂಬದಿಯಲ್ಲಿ ರಂಗಮ್ಮ ಬರೆದುಕೊಟ್ಟಿದ್ದಾರೆ. 

ಶ್ರೀನಿವಾಸ್ ಅವರಿಂದ ಟಿಕೆಟ್‌ ಪಡೆದ ಯುವಕನೊಬ್ಬ, ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. 

‘ಸಂಸ್ಥೆಯ ಬಸ್‌ಗಳಲ್ಲಿ ಸಾಕು ಪ್ರಾಣಿಗಳನ್ನು ಸಾಗಿಸಿದರೆ ಅರ್ಧ ಟಿಕೆಟ್‌ ಪಡೆಯಬೇಕು ಎನ್ನುವ ನಿಯಮ ಇದೆ. ರಂಗಮ್ಮ ಅವರ ಕರ್ತವ್ಯ ಪ್ರಜ್ಞೆಯನ್ನು ಗೌರವಿಸುತ್ತೇವೆ’ ಎಂದು ಕೆಎಸ್‌ಆರ್‌ಟಿಸಿ ಗೌರಿಬಿದನೂರು ಘಟಕ ವ್ಯವಸ್ಥಾಪಕ ಷರೀಫ್‌ ತಿಳಿಸಿದರು.
 

ಬರಹ ಇಷ್ಟವಾಯಿತೆ?

 • 17

  Happy
 • 7

  Amused
 • 1

  Sad
 • 2

  Frustrated
 • 1

  Angry

Comments:

0 comments

Write the first review for this !