ಶನಿವಾರ, ಡಿಸೆಂಬರ್ 7, 2019
18 °C
ಮಾನವೀಯತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ

ಅಭಯಾರಣ್ಯದಲ್ಲಿ ಅಪರಾತ್ರಿ ಸಿಕ್ಕ ಅಪರಿಚಿತ ಮಹಿಳೆ, ಮುಂದೇನಾಯ್ತು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅದು ಆಗಸ್ಟ್ 26ರ ಮಧ್ಯರಾತ್ರಿ. ಬೆಂಗಳೂರು–ಮುನ್ನಾರ್ ನಡುವೆ ಸಂಚರಿಸುವ ‘ಕೆಎ-57–ಎಫ್-3779’ ನೋಂದಣಿ ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್ಸು ಚಿನ್ನರ್ ಅಭಯಾರಣ್ಯ ಮಾರ್ಗವಾಗಿ ಸಂಚರಿಸುತ್ತಿತ್ತು. ಏಕಾಏಕಿ ಅಪರಿಚಿತ ಪುರುಷನೊಬ್ಬ ಕೈ ಸನ್ನೆ ಮೂಲಕ ಬಸ್ಸು ನಿಲ್ಲಿಸುವಂತೆ ಮನವಿ ಮಾಡಿದ್ದು ಕಾಣಿಸಿತು. ಜತೆಗೊಬ್ಬರು ಮಹಿಳೆಯೂ ಇದ್ದರು.

ಮಧ್ಯರಾತ್ರಿ ಹೊತ್ತು. ಕ್ಷಣ ಕಾಲ ಯೋಚಿಸಿದ ಚಾಲಕ ಪವನಕುಮಾರ್ ಟಿ.ಎಸ್. ಅವರು ಕೊನೆಗೂ ಬಸ್ಸು ನಿಲ್ಲಿಸಿದರು. ಈ ವೇಳೆ ಮಹಿಳೆಯನ್ನು ಬಸ್ಸಿಗೆ ಹತ್ತಿಸಿದ ಅಪರಿಚಿತ ವ್ಯಕ್ತಿಯು ಆಕೆಯನ್ನು ಜನಸಂದಣಿ ಇರುವ ಪ್ರದೇಶ ತಲುಪಿಸುವಂತೆ ಕೋರಿ ಅಲ್ಲಿಂದ ನಿರ್ಗಮಿಸಿದ್ದಾರೆ.

ಇದನ್ನೂ ಓದಿ: ನೀರಿನಲ್ಲಿ ಬಸ್‌; ಕಾನನದಲ್ಲಿ ಕಳೆದ ಕರಾಳ ರಾತ್ರಿ

ಬಳಿಕ ಚಾಲಕ/ನಿರ್ವಾಹಕ ಕೆ.ಎ.ಶೇಖರ ಗೌಡ ಟಿಕೆಟ್ ಪಡೆಯುವಂತೆ ಮಹಿಳೆಗೆ ಸೂಚಿಸಿದಾಗ ಆಕೆಯ ಬಳಿ ಹಣ ಇಲ್ಲದಿರುವುದೂ ಗಮನಕ್ಕೆ ಬಂದಿದೆ. ವಿಚಾರಿಸಿದಾಗ ಆಕೆ ರಾಯಚೂರಿನ ಮಹಿಳೆ ಎಂಬುದು ತಿಳಿಯುತ್ತದೆ. ಈ ವೇಳೆ ಸ್ವಂತ ಹಣದಿಂದ ಟಿಕೆಟ್‌ ನೀಡಿ, ಊಟದ ವ್ಯವಸ್ಥೆಯನ್ನೂ ಮಾಡಿಸಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮಹಿಳೆಯನ್ನು ಬೆಂಗಳೂರಿನವರೆಗೂ ಕರೆತಂದಿದ್ದಾರೆ.

ಇದನ್ನೂ ಓದಿ: ಗಣೇಶ ಹಬ್ಬಕ್ಕೆ 1,800 ವಿಶೇಷ ಬಸ್

ನಗರಕ್ಕೆ ಬಂದ ಬಳಿಕ, ತನ್ನ ಹೆಸರು ಜಯಶ್ರೀ ಎಂದು ತಿಳಿಸಿದ ಮಹಿಳೆಯು ತಂದೆಯ ದೂರವಾಣಿ ಸಂಖ್ಯೆಯನ್ನೂ ಸಿಬ್ಬಂದಿಗೆ ನೀಡಿದ್ದಾರೆ. ಕೂಡಲೇ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆಕೆಯ ತಂದೆಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ವೇಳೆ, ಆಕೆ ಖಿನ್ನತೆಯಿಂದ ಬಳಲುತ್ತಿರುವ ವಿಚಾರ ತಿಳಿದುಬಂದು ಆಕೆಯನ್ನು ವಿಲ್ಸನ್ ಗಾರ್ಡನ್ ಪೋಲಿಸ್ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಪೊಲೀಸರ ಸಮ್ಮುಖದಲ್ಲಿ ಮಹಿಳೆಯನ್ನು ಅವರ ತಂದೆಯ ಸುಪರ್ದಿಗೆ ಒಪ್ಪಿಸಲಾಗಿದೆ.

ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಮಾನವೀಯತೆಗೆ ಈಗ ಮೆಚ್ಚುಗೆಯ ಮಹಾಪೂರವೇ ವ್ಯಕ್ತವಾಗಿದೆ.

ಇದನ್ನೂ ಓದಿ: ಚೌತಿಗೆ ಬಸ್ ಪ್ರಯಾಣ ದರ ದುಬಾರಿಯ ಬರೆ

ಪವನಕುಮಾರ್ ಮತ್ತು ಶೇಖರ ಗೌಡ ಅವರ ಸಮಯೋಚಿತ ಸಹಾಯ ಇತರ ಸಿಬ್ಬಂದಿಗೆ ಮಾದರಿ ಎಂದು ಪ್ರಶಂಸಿಸಿರುವ ಕೆಸ್‌ಆರ್‌ಟಿಸಿ, ಇಬ್ಬರಿಗೂ ಅಭಿನಂದನಾ ಪತ್ರ ನೀಡಿ ಗೌರವಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು