ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜೆ 7ರ ನಂತರವೂ ಬಸ್ ಸಂಚಾರ; 81,593 ಜನ ಪ್ರಯಾಣ

2,633 ಬಸ್‌ಗಳ ಕಾರ್ಯಾಚರಣೆ
Last Updated 20 ಮೇ 2020, 22:11 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳ ಕಾರ್ಯಾಚರಣೆ ಸಮಯವನ್ನು ಸಂಜೆ 7ರ ತನಕ ವಿಸ್ತರಣೆ ಮಾಡಲಾಗಿದ್ದು, ಬುಧವಾರ 2,633 ಬಸ್‌ಗಳಲ್ಲಿ 81,593 ಜನ ಪ್ರಯಾಣ ಮಾಡಿದರು.

ಈ ಹಿಂದಿನ ನಿಯಮದಂತೆಸಂಜೆ 7 ಗಂಟೆಯೊಳಗೆ ಬಸ್‌ಗಳು ತಲುಪಬೇಕಿತ್ತು. ಈಗ ಸಂಜೆ 7 ಗಂಟೆ ತನಕ ಬೆಂಗಳೂರು ಹಾಗೂ ಇತರೆ ನಗರಗಳಿಂದ ಬಸ್‌ಗಳು ಸಂಚಾರ ಆರಂಭಿಸಬಹುದು. ಕಾರ್ಯಾಚರಣೆ ಮುಕ್ತಾಯದ ಸಮಯ ನಿಗದಿ ಮಾಡಿಲ್ಲ.

ಬುಧವಾರ 2 ಸಾವಿರ ಬಸ್‌ಗಳ ಕಾರ್ಯಾಚರಣೆ ಗುರಿಯನ್ನು ಕೆಎಸ್ಆರ್‌ಟಿಸಿ ಹೊಂದಿದ್ದರೂ, ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ 633 ಬಸ್‌ಗಳನ್ನು ಹೆಚ್ಚುವರಿಯಾಗಿ ಕಾರ್ಯಾಚರಣೆ ಮಾಡಿತು.

ಬುಧವಾರ ಬೆಳಿಗ್ಗೆಯಿಂದಲೇ ಬೇರೆ ಊರುಗಳಿಗೆ ಪ್ರಯಾಣ ಮಾಡಲು ನಗರದ ಮೆಜೆಸ್ಟಿಕ್ ನಿಲ್ದಾಣದಲ್ಲಿ ಜನ ಜಮಾಯಿಸಿದ್ದರು. ಸರತಿ ಸಾಲಿನಲ್ಲಿ ನಿಂತು ಬಸ್‌ ಮುಂಗಡ ಟಿಕೆಟ್ ಖರೀದಿಸಿ ಪ್ರಯಾಣ ಮಾಡಿದರು.

ಲಾಕ್‌ಡೌನ್ ನಂತರ ದುಡಿಮೆಯೇ ಇಲ್ಲದ ಕಾರ್ಮಿಕರು ಬಸ್ ಟಿಕೆಟ್ ಖರೀದಿಗೂ ಹಣ ಇಲ್ಲದೆ ಪರದಾಡಿದರು. ‘ಊರಿಗೆ ತಲುಪಲು ಅವಕಾಶ ಮಾಡಿಕೊಡಿ’ ಎಂದು ಕಣ್ಣೀರಿಟ್ಟರು.

ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ

ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಗೆ ಕೆಎಸ್‌ಆರ್‌ಟಿಸಿ ಅವಕಾಶ ಮಾಡಿಕೊಟ್ಟಿದೆ. ಬಸ್‌ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಗೆ ಜನ ಅಲೆದಾಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಗುರುವಾರ ಪ್ರಯಾಣಕ್ಕೆ 5,626 ಮಂದಿ ಆಸನಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ ಎಂದು ನಿಗಮ ತಿಳಿಸಿದೆ.

www.ksrtc.inನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಬಹುದು. ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬಳ್ಳಾರಿ, ಕುಂದಾಪುರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಕಲಬುರ್ಗಿ, ಹುಬ್ಬಳ್ಳಿ, ಹೊಸಪೇಟೆ, ಹಾವೇರಿ, ಹರಪ್ಪನಹಳ್ಳಿ, ಕೊಪ್ಪಳ, ಕಾರವಾರ, ಮಂಗಳೂರು, ಮಡಿಕೇರಿ, ಮೈಸೂರು, ರಾಯಚೂರು, ಶಿವಮೊಗ್ಗ, ಶಿರಸಿ, ವಿಜಯಪುರ, ಉಡುಪಿ,
ಯಾದಗಿರಿಗೆ ಪ್ರಯಾಣ ಮಾಡುವವರು ಈ ಆನ್‌ಲೈನ್ ವ್ಯವಸ್ಥೆ ಬಳಸಿಕೊಳ್ಳಬಹುದು.

ಬೆಂಗಳೂರಿಗೆ ಹಿಂದಿರುಗಲು ಬೆಳಗಾವಿ, ಬಳ್ಳಾರಿ, ಕುಂದಾಪುರ, ಚಿಕ್ಕಮಗಳೂರು, ದಾವಣಗೆರೆ,
ಕಲಬುರ್ಗಿ, ಗಂಗಾವತಿ, ಹುಬ್ಬಳ್ಳಿ, ಹಡಗಲಿ, ಹರಿಹರ, ಹೊಸಪೇಟೆ, ಕಂಪ್ಲಿ, ಕುಂದಾಪುರ, ಕುಮಟಾ,
ಕೊಪ್ಪಳ, ಕುಷ್ಠಗಿ, ಮಂಗಳೂರು, ಮಡಿಕೇರಿ, ಮೈಸೂರು, ವಿಜಯಪುರ, ಸಂಡೂರು, ಶಿವಮೊಗ್ಗ, ಶಿರಗುಪ್ಪ,
ಶಿರಸಿ, ಉಡುಪಿ, ಯಾದಗಿರಿ, ಯಲಬುರ್ಗ, ಯಲ್ಲಾಪುರ ಹಾಗೂ ಇನ್ನಿತರ ನಗರಗಳಿಂದ ಕಾಯ್ದಿರಿಸಬಹುದು ಎಂದು ನಿಗಮ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT