‘ಐಕ್ಯಮಂಟಪ’ದ ಗೋಡೆಗಳಲ್ಲಿ ಬಿರುಕು

ಬುಧವಾರ, ಜೂನ್ 19, 2019
23 °C
ಕೂಡಲಸಂಗಮ: ದುರಸ್ತಿಗೆ ತಜ್ಞರ ಅಭಿಪ್ರಾಯ ಪಡೆಯಲು ಮುಂದಾದ ಮಂಡಳಿ

‘ಐಕ್ಯಮಂಟಪ’ದ ಗೋಡೆಗಳಲ್ಲಿ ಬಿರುಕು

Published:
Updated:
Prajavani

ಬಾಗಲಕೋಟೆ: ಕೂಡಲಸಂಗಮದ ಬಸವಣ್ಣನ ಐಕ್ಯಮಂಟಪದ ಸುತ್ತಲಿನ ಬಾವಿ ಆಕಾರದ ರಕ್ಷಣಾ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಪಿಲ್ಲರ್‌ಗಳ ಜೋಡಣೆಯ ಭಾಗದಲ್ಲಿ ಸಿಮೆಂಟ್ ಪ್ಲಾಸ್ಟರ್ ಕಳಚಿ ಬಿದ್ದಿದ್ದು, ದುರಸ್ತಿಗೆ ತಾಂತ್ರಿಕ ನೆರವು ಕೋರಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ತಜ್ಞರ ಮೊರೆ ಹೋಗಿದೆ.

ವರ್ಷದ ಎಂಟು ತಿಂಗಳು ನಾರಾಯಣಪುರ ಜಲಾಶಯದ ಕೃಷ್ಣೆಯ ಹಿನ್ನೀರು ಐಕ್ಯಮಂಟಪದ ಸುತ್ತಲೂ ವ್ಯಾಪಿಸುತ್ತದೆ. ಹೆಚ್ಚಿನ ಅವಧಿ ನೀರಿನಲ್ಲಿಯೇ ಇರುತ್ತದೆ. ಹಾಗಾಗಿ ಅದರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ದುರಸ್ತಿ ಕಾರ್ಯಕ್ಕೆ ನೆರವಾಗಲು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಈ ಮೊದಲು ಕೃಷ್ಣಾ ಭಾಗ್ಯ ಜಲನಿಗಮದ (ಕೆಬಿಜೆಎನ್‌ಎಲ್) ತಾಂತ್ರಿಕ ವಿಭಾಗದ ಮೊರೆ ಹೋಗಿತ್ತು. ಕೆಬಿಜೆಎನ್‌ಎಲ್ ತಜ್ಞರು ಪರಿಶೀಲಿಸಿ ವರದಿ ನೀಡಿದ್ದಾರೆ. ಕೂಡಲೇ ದುರಸ್ತಿ ಕಾರ್ಯ ಆರಂಭಿಸಿ ಐಕ್ಯಮಂಟಪಕ್ಕೆ ಭೇಟಿ ನೀಡುವವರ ಸುರಕ್ಷತೆಗೆ ಒತ್ತು ನೀಡಲು ಸೂಚಿಸಿದ್ದಾರೆ. ಈಗ ಬೆಂಗಳೂರಿನ ಎನ್‌ಟ್ರಸ್ಟ್ ಕನ್ಸಲ್ಟೆನ್ಸಿ ಹೆಸರಿನ ಖಾಸಗಿ ಸಂಸ್ಥೆಯಿಂದ ಮಂಡಳಿ ಎರಡನೇ ಅಭಿಪ್ರಾಯ ಪಡೆದಿದೆ.

ಬಾವಿಯ ಬಿರುಕು ಮುಚ್ಚುವ ಕಾಮಗಾರಿಗೆ 15ರಿಂದ 20 ದಿನ ತಗುಲಲಿದೆ. ಈ ವೇಳೆ ಐಕ್ಯಮಂಟಪಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಬಹುದು. ಇಲ್ಲವೇ ರಾತ್ರಿ ವೇಳೆ ಕೆಲಸ ಮಾಡಿ ಹಗಲು ಹೊತ್ತು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಕಾಮಗಾರಿ ವೇಳೆ ಐಕ್ಯಮಂಟಪದ ಮೇಲೆ ನೈಲಾನ್ ಇಲ್ಲವೇ ಮೆಟಲ್‌ನ ಮೆಶ್ ಹಾಕಿ ರಕ್ಷಣೆ ನೀಡಬಹುದು ಎಂದು ಹೇಳಿದ್ದಾರೆ.

ಮೇಲಧಿಕಾರಿಗಳಿಗೆ ಮಾಹಿತಿ: ‘ಭಕ್ತರ ಭಾವನೆಗಳಿಗೆ ಧಕ್ಕೆ ಆಗದಂತೆ ಐಕ್ಯಮಂಟಪದ ದುರಸ್ತಿಗೆ ಒತ್ತು ನೀಡಲಾಗುವುದು. ಆ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮನ್ನಣೆ ಹೊಂದಿರುವ ಬೆಂಗಳೂರಿನ ಮತ್ತೊಂದು ಕನ್ಸಲ್ಟೆನ್ಸಿ ಸಂಸ್ಥೆಯಿಂದ ಅಭಿಪ್ರಾಯ ಪಡೆಯಲಾಗುವುದು’ ಎಂದು ಮಂಡಳಿ ಆಯುಕ್ತೆ ರಾಜಶ್ರೀ ಅಗಸರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಮಗಾರಿ ವೇಳೆ ಪ್ರವಾಸಿಗರ ಭೇಟಿ ನಿಷೇಧದ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಆ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

22 ವರ್ಷಗಳ ನಂತರ ದುರಸ್ತಿ

1963ರಲ್ಲಿ ನಾರಾಯಣಪುರ ಜಲಾಶಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ವೇಳೆ ಕೂಡಲಸಂಗಮದ ಐಕ್ಯಸ್ಥಳ ಮುಳುಗಡೆ ಆಗಲಿದೆ ಎಂಬ ವಿಚಾರ ಮುನ್ನೆಲೆಗೆ ಬಂದಿತ್ತು. ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ವೇಳೆ ಐಕ್ಯಸ್ಥಳದ ಸುತ್ತಲೂ ಮಂಟಪ ನಿರ್ಮಿಸಿ ಸಂರಕ್ಷಣೆಗೆ ₹2.2 ಲಕ್ಷ ವೆಚ್ಚದಲ್ಲಿ ಸುತ್ತಲೂ 18 ಮೀಟರ್ ವ್ಯಾಸದ ದುಂಡಾಕಾರದ ಬಾವಿ ನಿರ್ಮಿಸಿದ್ದರು. 
1997ರಲ್ಲಿ ಜೆ.ಎಚ್.ಪಟೇಲ್ ಮುಖ್ಯಮಂತ್ರಿ ಆಗಿದ್ದ ವೇಳೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ ರಚಿಸಿ ₹36 ಕೋಟಿ ಅನುದಾನ ನೀಡಿದ್ದರು. ಮಂಡಳಿಯ ಅಂದಿನ ಆಯುಕ್ತ ಎಸ್.ಎಂ.ಜಾಮದಾರ ನೇತೃತ್ವದಲ್ಲಿ ಐಕ್ಯಮಂಟಪದ ನವೀಕರಣ ಕಾರ್ಯ ನಡೆದಿತ್ತು.


ಐಕ್ಯಮಂಟಪದ ಪಿಲ್ಲರ್‌ನ ಸಿಮೆಂಟ್ ಪ್ಲಾಸ್ಟರ್ ಉದುರಿದೆ - ಪ್ರಜಾವಾಣಿ ಚಿತ್ರ: ಶ್ರೀಧರ ಗೌಡರ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !