ಕಣ್ಣು ಕಾಣದಿದ್ದರೂ ಶೇ 86 ಅಂಕ ಪಡೆದ ಕುಮಾರ

ಭಾನುವಾರ, ಮೇ 26, 2019
27 °C
ಸಾಧನೆಗೆ ಅಡ್ಡಿಯಾಗ ಕುರುಡುತನ, ಬಡತನ

ಕಣ್ಣು ಕಾಣದಿದ್ದರೂ ಶೇ 86 ಅಂಕ ಪಡೆದ ಕುಮಾರ

Published:
Updated:
Prajavani

ದಾವಣಗೆರೆ: ಓದುವ ಛಲಕ್ಕೆ ಕುರುಡುತನ, ಮನೆಯ ಬಡತನ ಅಡ್ಡಿಯಾಗದು ಎಂಬುದನ್ನು ಕನಗೊಂಡನಹಳ್ಳಿಯ ಎ.ಕೆ. ಕುಮಾರ ಸಾಧಿಸಿ ತೋರಿಸಿದ್ದಾನೆ. ಈ ಬಾರಿಯ ಪಿಯು ಪರೀಕ್ಷೆಯಲ್ಲಿ ಶೇ 86 ಅಂಕ ಪಡೆದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾನೆ.

ಇಲ್ಲಿನ ಬೀರಲಿಂಗೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ಈತ ಕನ್ನಡದಲ್ಲಿ 97, ಇತಿಹಾಸದಲ್ಲಿ 93, ಸಮಾಜ ವಿಜ್ಞಾನದಲ್ಲಿ 93 ಹಾಗೂ ರಾಜ್ಯಶಾಸ್ತ್ರದಲ್ಲಿ 96 ಅಂಕ ಗಳಿಸಿದ್ದ. ಅರ್ಥಶಾಸ್ತ್ರ (66) ಮತ್ತು ಇಂಗ್ಲಿಷ್‌ನಲ್ಲಿ (71) ಮಾತ್ರ ಸ್ವಲ್ಪ ಅಂಕ ಕಡಿಮೆಯಾಗಿತ್ತು. ‘ಇವೆರಡು ಪರೀಕ್ಷೆಗಳು ಕಠಿಣವಾಗಿದ್ದವು. ಇಲ್ಲದೇ ಇದ್ದಿದ್ದರೆ ಎಲ್ಲದರಲ್ಲೂ 90ರ ಮೇಲೆ ಅಂಕ ಸಿಗುತ್ತಿತ್ತು’ ಎಂದು ಕುಮಾರ ಪ್ರಜಾವಾಣಿಗೆ ತಿಳಿಸಿದ್ದಾರೆ.

ಕುಮಾರನ ತಂದೆ ತಾಲ್ಲೂಕಿನ ಕನಗೊಂಡನಹಳ್ಳಿಯ ನಿವಾಸಿ ಹಂಚಿನಮನೆ ಕಲ್ಲಪ್ಪ3ನೇ ತರಗತಿ ಓದಿದವರು. ತಾಯಿ ಸೌಭಾಗ್ಯಮ್ಮ ಶಾಲೆಯ ಮೆಟ್ಟಿಲೇ ಏರಿಲ್ಲ. ಈ ದಂಪತಿಗೆ ಮೂವರು ಮಕ್ಕಳು. ಸಣ್ಣಮಗ ತೇಜು ಪಿಯು ಓದುತ್ತಿದ್ದಾನೆ. ಮಗಳು ದೇವಿಕಾ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾಳೆ. ಈ ದಂಪತಿಗೆ ಸ್ವಲ್ಪ ಜಮೀನು ಇದ್ದು ಭತ್ತ ಬೇಸಾಯ ಮಾಡುತ್ತಿದ್ದಾರೆ. ಬೇಸಾಯ ಇಲ್ಲದ ಸಂದರ್ಭದಲ್ಲಿ ಕೂಲಿ ಕೆಲಸ ಮಾಡುತ್ತಾರೆ.

ಕುಮಾರ ಹುಟ್ಟುಕುರುಡನಾಗಿದ್ದರೂ ಆತನ ಆಸೆಗೆ ಎಲ್ಲೂ ತಣ್ಣೀರೆರಚೆ ಶಾಲೆಗೆ ಕಳುಹಿಸಿದ್ದಾರೆ. ಗೆರೆಕಟ್ಟೆಯ ವಡ್ಡರಹಳ್ಳಿ, ಮುದದಡಿ, ಕನಗನಹಳ್ಳಿ ಹಾಗೂ ನಾಗರಸನಹಳ್ಳಿ ಶಾಲೆಗಳಲ್ಲಿ 1ರಿಂದ 9ನೇ ತರಗತಿವರೆಗೆ ಓದಿದ್ದ. ಅಲ್ಲಿಯವರೆಗೆ ತಿಪ್ಪೇಸ್ವಾಮಿ ಎಂಬ ಶಿಕ್ಷಕ ಬಂದು ಕುಮಾರನಿಗೆ ಬ್ರೈಲ್‌ಲಿಪಿ ಹೇಳಿಕೊಟ್ಟಿದ್ದರು. ಬಳಿಕ ಕಲಬುರ್ಗಿಯ ಅಪ್ಜಲ್‌ಪುರದಲ್ಲಿ ವಸತಿ ನಿಲಯದಲ್ಲಿದ್ದುಕೊಂಡು ವಿಕೆಜಿ ಬ್ಲೈಂಡ್‌ ಹೈಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಮಾಡಿದ್ದ. ಶೇ 71ರಷ್ಟು ಅಂಕ ಗಳಿಸಿದ್ದ. ಇನ್ನು ವಿದ್ಯೆ ಸಾಕು ಎಂದು ಹೆತ್ತವರು ಹೇಳಿದರೂ ಇನ್ನಷ್ಟು ಓದುವುದಾಗಿ ತಿಳಿಸಿ ಪಿಯು ಕಲಿಯಲು ದಾವಣಗೆರೆಗೆ ಬಂದಿದ್ದು ಈಗ ಅತ್ಯುತ್ತಮ ಅಂಕದೊಂದಿಗೆ ಉತ್ತೀರ್ಣನಾಗಿದ್ದಾನೆ.

‘ನನ್ನ ಕಲಿಕೆಗೆ ಎಲ್ಲ ಅಧ್ಯಾಪಕರು, ಹೆತ್ತವರು, ಗೆಳೆಯರು ಪ್ರೋತ್ಸಾಹ ನೀಡಿದ್ದಾರೆ. ಶಿಕ್ಷಕರು ಪಾಠ ಮಾಡಿದ್ದನ್ನು ರೆಕಾರ್ಡ್‌ ಮಾಡಿಕೊಂಡು ಗೆಳೆಯರ ಜತೆಗೆ ಚರ್ಚಿಸುತ್ತಿದ್ದೆ. ಗೊತ್ತಾಗದ್ದನ್ನು ಪ್ರಾಧ್ಯಾಪಕರಲ್ಲಿ ಕೇಳುತ್ತಿದ್ದೆ. ಏನೂ ಬೇಸರ ಮಾಡಿಕೊಳ್ಳದೇ ಹೇಳಿಕೊಡುತ್ತಿದ್ದರು’ ಎನ್ನುತ್ತಾನೆ ಎ.ಕೆ. ಕುಮಾರ.

‘ಎಸ್‌ಎಸ್‌ಎಲ್‌ಸಿ ಮತ್ತು ಆನಂತರ ಬ್ರೈಲ್‌ ಲಿಪಿಯಲ್ಲಿ ಓದಿದ್ದು, ರೈಟರ್‌ ಇಟ್ಟುಕೊಂಡು ಪರೀಕ್ಷೆ ಬರೆದೆ. ಕಾಲೇಜು ಪ್ರಾಂಶುಪಾಲರೇ ರೈಟರನ್ನು ಒದಗಿಸಿದ್ದಾರೆ. ನಾನು ಹೇಳಿದ್ದನ್ನು ಆತ ಬರೆದಿದ್ದಾನೆ. ಪರೀಕ್ಷೆಗೆ ಅರ್ಧಗಂಟೆ ಹೆಚ್ಚುವರಿಯಾಗಿ ನೀಡಿದ್ದಾರೆ. ಇದರಿಂದ ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು. ಮುಂದೆ ಒಂದು ಉದ್ಯೋಗ ಕಂಡುಕೊಳ್ಳಬೇಕು. ಅದಕ್ಕಾಗಿ ಪ್ರಯತ್ನಿಸುತ್ತೇನೆ. ಉದ್ಯೋಗ ಸಿಗವವರೆಗೆ ಪದವಿ ವಿದ್ಯಾಭ್ಯಾಸ ಮುಂದುವರಿಸುತ್ತೇನೆ’ ಎಂದು ಅವನ ಮುಂದಿನ ದಾರಿ ತಿಳಿಸಿದ್ದಾನೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !