ಡಿ.ವಿ, ಶೋಭಾ ಸ್ಪರ್ಧೆ ಬಗ್ಗೆಯೂ ಚರ್ಚೆ ನಡೆಯಲಿ

ಭಾನುವಾರ, ಮಾರ್ಚ್ 24, 2019
32 °C
ಮಂಡ್ಯದಲ್ಲಿ ನಿಖಿಲ್‌ ಸ್ಪರ್ಧೆಗೆ ಸಿ.ಎಂ ಸಮರ್ಥನೆ

ಡಿ.ವಿ, ಶೋಭಾ ಸ್ಪರ್ಧೆ ಬಗ್ಗೆಯೂ ಚರ್ಚೆ ನಡೆಯಲಿ

Published:
Updated:
Prajavani

ಬೆಂಗಳೂರು: ‘ಡಿ.ವಿ.ಸದಾನಂದ ಗೌಡ ಮಂಗಳೂರಿನಲ್ಲಿ ಹುಟ್ಟಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸಂಸದರಾಗಿಲ್ಲವೇ. ಬಿ.ಎಸ್.ಯಡಿಯೂರಪ್ಪ ಮಂಡ್ಯದಲ್ಲಿ ಹುಟ್ಟಿ ಶಿವಮೊಗ್ಗದಲ್ಲಿ ರಾಜಕೀಯ ಮಾಡುತ್ತಿಲ್ಲವೇ. ನಾನು ಹಾಸನದಲ್ಲಿ ಹುಟ್ಟಿ ರಾಮನಗರದಲ್ಲಿ ರಾಜಕೀಯ ಮಾಡುತ್ತಿಲ್ಲವೇ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಮಂಡ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಮಂಗಳವಾರ ಇಲ್ಲಿ ಪ್ರತಿಕ್ರಿಯಿಸಿದ ಅವರು, ‘ಎಲ್ಲ ಕಡೆ ಪರ ವಿರೋಧ ಇರುತ್ತದೆ. ಎಲ್ಲೊ ಹುಟ್ಟಿದವರು ಮತ್ತೆಲ್ಲೋ ಸಂಸದರು ಹಾಗೂ ಶಾಸಕರಾಗಿದ್ದಾರೆ. ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು’ ಎಂದರು.

‘ಮಂಡ್ಯ ಜಿಲ್ಲೆಯ ಪ್ರೀತಿ ಅಭಿಮಾನವನ್ನು ದುರುಪಯೋಗಪಡಿಸಿಕೊಳ್ಳುವ ಕುಟುಂಬ ನಮ್ಮದಲ್ಲ. ಮಂಡ್ಯ ಜಿಲ್ಲೆಗೂ ನಮ್ಮ ಕುಟುಂಬಕ್ಕೆ ಹಲವು ವರ್ಷಗಳ ಸಂಬಂಧ ಇದೆ. ಆ ಜಿಲ್ಲೆಯ ಜನರು ತೀರ್ಮಾನ ಮಾಡುತ್ತಾರೆ. ಯಾವುದೋ ಪಕ್ಷದ ಮುಖಂಡರು ಇದನ್ನು ತೀರ್ಮಾನ ಮಾಡುವುದಲ್ಲ’ ಎಂದು ತಿರುಗೇಟು ನೀಡಿದರು.

‘ಸದಾನಂದ ಗೌಡ ಹಾಗೂ ಶೋಭಾ ಕರಂದ್ಲಾಜೆ ಬೇರೆ ಕಡೆಗಳಿಂದ ಬಂದು ಸಂಸದರಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಏಕೆ ಚರ್ಚೆ ಮಾಡುತ್ತಿಲ್ಲ’ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ‘ಫೇಸ್‌ ಬುಕ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡುವವರು ಮತದಾರರಲ್ಲ, ಹಳ್ಳಿಯಲ್ಲಿರುವವರು ಮತದಾರರು’ ಎಂದರು.

‘ಸೀಟು ಹಂಚಿಕೆ ಬಗ್ಗೆ ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ. 3–4 ದಿನಗಳಲ್ಲಿ ಸೀಟು ಹಂಚಿಕೆ ಅಂತಿಮವಾಗಲಿದೆ. ಮೈಸೂರು ಕ್ಷೇತ್ರದಲ್ಲಿ ಉಂಟಾಗಿರುವ ಪೈಪೋಟಿ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 17

  Happy
 • 1

  Amused
 • 0

  Sad
 • 1

  Frustrated
 • 22

  Angry

Comments:

0 comments

Write the first review for this !